ಸಹಾಯ ಮಾಡಲು ನಾಳೆ ಎಂಬ ದಿನ ಬರುವುದೇ ಇಲ್ಲ…

0
722

ಬರಹ: ಕಾವ್ಯ ಶ್ರೀ.ಬಿ

ಒಂದು ಮುಂಜಾನೆ, ಎಲ್ಲರ ಮನೆಗಳಲ್ಲಿ ನಡೆಯುವಂತೆ ನಮ್ಮ ಮನೆಯಲ್ಲಿಯೂ ಅವಸರ. ನನಗಂತು ಬೆಳಗ್ಗಿನ 6.35ರ ಬಸ್ಸಿನಲ್ಲಿ ಹೊರಟು 8.45ರ ಹೊತ್ತಿಗೆ ಮಂಗಳೂರಿನ ನನ್ನ ಕಾಲೇಜು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗೆ ತಲುಪಬೇಕು, ಹಾಗಾಗಿ ಅಮ್ಮ ಬಡಿಸಿದಂತ ದೋಸೆಗೆ ಕೊಂಕು ಹೇಳಿ ತಿನ್ನುವುದನ್ನು ಅರ್ಧಕ್ಕೆ ನಿಲ್ಲಿಸಿದೆ. ಇದನ್ನು ನೋಡಿದ ನನ್ನ ಅಮ್ಮ ಗೊಣಗಲು ಶುರುಮಾಡಿದರು. ನಮ್ಮ ಮನೆಯಲ್ಲಿ ನಾನು ತಿಂಡಿಯನ್ನು ತಿನ್ನದೆ ಅರ್ಥಕ್ಕೆ ನಿಲ್ಲಿಸುವುದು ಮತ್ತು ತಿಂಡಿಯನ್ನು ಹಾಳು ಮಾಡಳು ಒಲ್ಲದ ಮನಸ್ಸಿನ ನನ್ನ ಅಮ್ಮ ಗೊಣಗುವುದು ಇದೆಲ್ಲಾ ದಿನಾಲೂ ಇದ್ದದ್ದೆ. ಹಾಗೂ ಹೀಗೋ ಬೆಳಗ್ಗೆ 6.35ರ ಬಸ್ಸಿಗೆ ನನ್ನ ಪುಟ್ಟ ಊರಿನಿಂದ ಮಂಗಳೂರಿಗೆ ಹೊರಟೆ.

ಪ್ರಯಾಣವನ್ನೆ ಇಷ್ಟಪಡದ ನಾನು ದಿನಾಲೂ ಕಾಲೇಜಿಗೆ ಬಸ್ಸಿನಲ್ಲೆ ಹೋಗಿ ಬರಬೇಕಾದ ಅನಿವಾರ್ಯ ಸ್ಥಿತಿ ನನ್ನದು. ಎಂದಿನಂತೆ ಕುಳಿತ ನಾನು ಕಣ್ಣು ಮುಚ್ಚಿ ನಿದ್ರೆಗೆ ಜಾರಿದೆ, ಚಿಂತೆಯಿಲ್ಲದವನಿಗೆ ಸಂತೆಯಲ್ಲು ನಿದ್ದೆಯಂತೆ ಹಾಗಂತ ನನಗೆ ಚಿಂತೆಗಳಿಲ್ಲ ಎನ್ನುವ ಹಾಗಿಲ್ಲ. ನನ್ನ ಬಿ.ಎಡ್ ಎಲ್ಲಾ ಚಟುವಟಿಕೆಗಳನ್ನು ಬೇಗನೆ ಅಚ್ಚುಕಟ್ಟಾಗಿ ಮುಗಿಸಬೇಕು ಎಂಬ ಚಿಂತೆಯಲ್ಲೆ ನಿದ್ರೆಗೆ ಜಾರಿದ್ದು. ಕೆಲನಿಮಿಷದಲ್ಲೆ ಕಂಡೆಕ್ಟರ್ ಜ್ಯೋತಿ, ಜ್ಯೋತಿ ಎಂದು ಕೋಗುವುದು ಕೇಳಿಸಿತು, ಎದ್ದು ನಿಂತುಕೊಂಡೆ ಅದಾಗಲೇ ನನ್ನ ಕಾಲುಗಳು ನನಗೆ ಭಾರವಾಯಿತು. ತುಂಬಾ ಸುಸ್ತು ನನ್ನನ್ನು ಅವರಿಸಿತ್ತು. ನಿಧಾನವಾಗಿ ಬಸ್ಸಿನಿಂದ ಇಳಿದು ಕಾಲುದಾರಿಯಲ್ಲಿ ಆಮೆಯಂತೆ ಹೆಜ್ಜೆ ಹಾಕುತ್ತಾ ಮುಂದೆ ನಡೆದೆ. ನನ್ನ ಮುಂದಿನಿಂದ ಸುಮಾರು ಮಕ್ಕಳು ಬಹಳ ಅವಸರದಿಂದ ಹೆಜ್ಜೆ ಇಡುತ್ತಿದ್ದರು. ಆ ಮಕ್ಕಳಲ್ಲಿ ಹೆಚ್ಚಿನವರು ಸಂತ ಅಲೋಶಿಯಸ್ ಸಂಸ್ಥೆಗೆ ಸೇರಿದ ಮಕ್ಕಳು. ನಾನು ಅವರನ್ನು ಹಿಂಬಾಲಿಸಿದೆ ಯಾಕೆಂದರೆ ನನಗೆ ರಸ್ತೆ ದಾಟುವುದು ಒಂದು ತಲೆನೋವಿನ ವಿಷಯ. ಆ ಮಕ್ಕಳ ಜೊತೆ ಹೋದರೆ ಗುಂಪಿನಲ್ಲಿ ಗೋವಿಂದ ಎನ್ನುವ ಹಾಗೆ ಎಲ್ಲರ ಜೊತೆ ಸೇರಿ ಬಹಳ ಸುಲಭವಾಗಿ ರಸ್ತೆ ದಾಟಬಹುದು ಎಂಬುದು ನನ್ನ ಯೋಚನೆ.

ಅಷ್ಟರಲ್ಲೇ ಕಣ್ಣಿಗೆ ಒಂದು ಅದ್ಭುತವಾದ ದೃಶ್ಯ ಕಾಣಸಿಕ್ಕಿತು. ಪಕ್ಕದ ಕಾಲುದಾರಿಯಲ್ಲಿ ಕುಳಿತಿದ್ದ ಒಬ್ಬ ವಯಸ್ಸಾದ ಅಸಹಾಯಕನಿಗೆ ಒಬ್ಬ ಕಾಲೇಜಿನ ಹುಡುಗ ಸರಕನೆ ತನ್ನ ಬ್ಯಾಗಿನಿಂದ ಪಾರ್ಲೆಜಿ ಬಿಸ್ಕೆಟ್ ಪ್ಯಾಕೆಟ್‌ನ್ನು ತೆಗೆದು ಆ ವ್ಯಕ್ತಿಯ ಕೈಯಲ್ಲಿಟ್ಟು ಹಿಂತಿರುಗಿದ. ನನ್ನ ಕಣ್ಣುಗಳು ಅಸಾಹಾಯಕ ವ್ಯಕ್ತಿಯ ಮೇಲೆ ಬಿತ್ತು. ಆತ ಬಿಸ್ಕೆಟ್ ಪ್ಯಾಕೆಟ್‌ನ್ನು ತೆಗೆದುಕೊಂಡು ತನ್ನ ಚಿಕ್ಕದಾದ ಬಟ್ಟೆಯ ಚೀಲವೊಂದರಲ್ಲಿ ಹಾಕಿಕೊಂಡ. ಬಹಳ ಸಂತೋಷದಿಂದ ನಗು ಮುಖದಿಂದ ಆ ಹುಡುಗನಿಗೆ ಆರ್ಶಿವಾದ ಮಾಡಿದ ದೃಶ್ಯ ನನ್ನ ಕಣ್ಣುಗಳಲ್ಲಿ ಇನ್ನೂ ಅಚ್ಚಳಿಯದೆ ಹಾಗೆ ಉಳಿದಿದೆ. ಆತನ ಸಂತೋಷ ಆತನ ನಗುವಿನಲ್ಲಿ ಕಾಣುತ್ತಿತ್ತು, ನನಗೆ ಆವ್ಯಕ್ತಿಯು ಆ ಹುಡುಗನಿಗಾಗಿ ಕಾಯುತ್ತಿದ್ದತೆ ಕಾಣಿಸಿತು. ತಡ ಮಾಡದೇ ಆ ಹುಡುಗನ ಮುಖ ನೋಡಲೆ ಬೇಕು ಎಂದು ಬಹಳ ವೇಗದಿಂದ ಸಾಗಿದೆ. ನನ್ನ ಕಾಲುಗಳು ಆತನ ಹೆಜ್ಜೆಯನ್ನು ಹಿಂಬಾಲಿಸಲು ಕೊನೆಗೂ ಸೋತಿತು.

ಬಹಳ ಸಂತೋಷದಿಂದ ತರಗತಿಯ ಒಳಗೆ ಕಾಲಿಟ್ಟೆ. ಮೊದಲಿಗೆ ನಾನು ನನ್ನ ಮೊಬೈಲ್ ತೆಗೆದು “my eyes are blessed” ಎಂಬ ಸ್ಟೇಟಸ್ ಹಾಕಿದೆ. ಆ ದಿನ ಪೂರ್ತಿ ನಾನು ಅದೇ ವಿಷಯದ ಬಗ್ಗೆ ಯೋಚಿಸುತ್ತಿದ್ದೆ. ಹಸಿವಿನ ಸಂಕಟ ಅರ್ಥವಾಯಿತು. ಅನ್ನದ ಬೆಲೆಯೂ ತಿಳಿಯಿತು. ಮನೆಗೆ ಹೋಗಿ ಅಮ್ಮನಲ್ಲಿ ಆ ವಿಷಯದ ಬಗ್ಗೆ ಹೇಳಲು ನನ್ನ ಮನಸ್ಸು ಕಾತರದಿಂದ ಕಾಯುತ್ತಿತ್ತು. ಸಂಜೆ ನಾಲ್ಕು ಗಂಟೆಯವರೆಗೆ ಕಾಯುತ್ತಿದ್ದೆ. ಕಾಲೇಜು ಬಿಟ್ಟ ತಕ್ಷಣ ಮನೆಗೆ ಹೋದೆ ಸಂಜೆ 6.30ರ ಹೊತ್ತಿಗೆ ಮನೆಗೆ ತಲುಪಿದೆ. ನನ್ನ ಅಮ್ಮ ನನ್ನ ಮುಖದಲ್ಲಿರುವ ಸಂತೋಷವನ್ನು ನೋಡಿ ಇವತ್ತೇನು ವಿಶೇಷ ಮುಖ ಅರಳಿದೆ ಎಂದು ಕೇಳಿದರು. ಬೆಳಗ್ಗೆ ನಡೆದ ವಿಷಯವನ್ನು ವಿವರಿಸಿದೆ. ನಾನು ಕೂಡಾ ನಾಳೆ ಆತನಿಗೆ ಸಹಾಯ ಮಾಡುತ್ತೆನೆ ಅಂದಾಗ, ನನ್ನ ಅಮ್ಮ ಮುಗುಳುನಗುತ್ತಾ ನಾವೇ ಇನ್ನೋಬ್ಬರ ಸಹಾಯದ ನಿರೀಕ್ಷೆಯಲ್ಲಿರುವವರು ನಾವೇನು ಸಹಾಯ ಮಾಡಬಹುದು, ನಾವೇನು ಶ್ರೀಮಂತರೆ, ಎಂದು ಕೇಳಿದರು, ಈ ವಿಷಯವಾಗಿಯೇ ಕೆಲವು ಕಲ್ಪನೆಗಳನ್ನು ಮಾಡುತ್ತಾ ಅಮ್ಮನಲ್ಲಿ ಚರ್ಚಿಸತೊಡಗಿದೆ. ತಾಯಿ ಹೃದಯ ಅಲ್ಲವೇ ನನ್ನ ಅಮ್ಮನ ಕಾಳಜಿ ನನ್ನ ಹೊಟ್ಟೆಯ ಹಸಿವಿನ ಬಗ್ಗೆಯಾಗಿತ್ತು. ಹೋಗು ತಿಂಡಿ ತಿನ್ನು ಎಂದರು. ಆದರೆ ನನಗೆ ಆ ವ್ಯಕ್ತಿಯ ಚಿಂತೆಯಾಗಿತ್ತು.
ಮರುದಿವಸ ಎಂದಿನಂತೆ ಕಾಲೇಜಿಗೆ ಹೊರಡುವ ಅವಸರದಲ್ಲಿ ಅಮ್ಮನಲ್ಲಿ ಕೇಳಿದೆ ನಾನು ಬೆಳಗ್ಗಿನ ಉಪಹಾರವನ್ನು ಆತನಿಗೆ ತೆಗೆದುಕೊಳ್ಳಲೇ ಎಂದು ಅಮ್ಮ ಒಪ್ಪಿಗೆಯನ್ನು ಸೂಚಿಸಿದರು. ನಾನು ಖುಷಿಯಿಂದ ಟಿಫಿನ್ ಬ್ಯಾಗ್‌ಗೆ ತುಂಬಿಸಿ ಕಾಲೇಜಿಗೆ ಹೊರಟೆ. ಎಂದಿನಂತೆ ಜ್ಯೋತಿಯಲ್ಲಿ ಇಳಿದು ಆ ವ್ಯಕ್ತಿಯನ್ನು ಹುಡುಕಿದೆ, ಆದರೆ ಆ ವ್ಯಕ್ತಿ ಅಲ್ಲಿ ಇರಲೇ ಇಲ್ಲ, ಆಗ ನನಗನಿಸಿತು ಸಹಾಯ ಮಾಡುವುದಾದರೆ ಆ ಕ್ಷಣ ಅಲ್ಲೇ ಮಾಡಬೇಕು, ನಾಳೆ ಮಾಡುತ್ತೆನೆ ಎಂದರೆ ಆ ವ್ಯಕ್ತಿ, ಆ ಅವಕಾಶ ಮತ್ತೆ ಸಿಗಲಾರದು. ಸಹಾಯ ಮಾಡುವುದು ಎಲ್ಲರಿಗೂ ಸಿಗದ ಒಂದು ಒಳ್ಳೆಯ ಅವಕಾಶ. ನಾಳೆ ಎಂಬುದು ಬರುವುದೇ ಇಲ್ಲ ಎಂದು ಯಾರೋ ಭಾಷಣ ಮಾಡುವಾಗ ಹೇಳಿದ ಮುತ್ತಿನಂತಹ ಮಾತು ಆಗ ನನಗರ್ಥವಾಯಿತು. ಇಂದಿಗೂ ನಾನು ಆ ಸ್ಥಳವನ್ನು ತಲುಪುವಾಗ ನನ್ನ ಕಣ್ಣುಗಳು ಆ ವ್ಯಕ್ತಿಯನ್ನು ಹುಡುಕುತ್ತವೆ.

ಕಾವ್ಯ ಶ್ರೀ.ಬಿ
B.Ed ವಿದ್ಯಾರ್ಥಿನಿ
ಸಂತ ಅಲೋಶಿಯಸ್
ಶಿಕ್ಷಣ ಸಂಸ್ಥೆ, ಮಂಗಳೂರು