ಈ ಗಾಯಗಳು ನಿಮ್ಮನ್ನು ಬೆನ್ನಟ್ಟಲಿವೆ: ಇಸ್ರೇಲ್‌ಗೆ ನೆನಪಿಸಿದ ಫೆಲೆಸ್ತೀನ್ ಲೇಖಕ

0
615

ಸನ್ಮಾರ್ಗ ವಾರ್ತೆ

ಫೆಲೆಸ್ತೀನಿ ಲೇಖಕ ಮತ್ತು ಪುಲಿಟ್ಝರ್ ಪ್ರಶಸ್ತಿ ವಿಜೇತ ಬರಹಗಾರ ಮುಸ್ಅಬ್ ಅಬೂ ತುಹ ಫೇಸ್ಬುಕ್‌ನಲ್ಲಿ ಹಂಚಿಕೊಂಡಿರುವ ಗಾಝಾ ಮಕ್ಕಳ ಚಿತ್ರಗಳು ತೀವ್ರ ಸಂಚಲನ ಸೃಷ್ಟಿಸಿವೆ. ಗಾಝಾದಲ್ಲಿ ಅಂಗವಿಕಲ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುತ್ತ ಅವರು ಇಸ್ರೇಲ್ ನರಮೇಧದಿಂದ ಮಕ್ಕಳ ಮೇಲೆ ಉಂಟಾದ ಆಳವಾದ ಗಾಯದ ಬಗ್ಗೆ ಬರೆದಿದ್ದಾರೆ. 2023 ಅಕ್ಟೋಬರ್ ಬಳಿಕ ಇಸ್ರೇಲ್ ಗಾಝಾದ ಮೇಲೆ ನಡೆಸಿದ ದಾಳಿಯಲ್ಲಿ 1500ಕ್ಕೂ ಹೆಚ್ಚು ಮಕ್ಕಳು ಅಂಗವಿಕಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ನಾನು ಎರಡು ವರ್ಷಗಳ ಹಿಂದೆ ಹೇಳಿದಂತೆ ನಮ್ಮ ಮಕ್ಕಳ ಮುಖದಲ್ಲಿನ ಗಾಯದ ಗುರುತುಗಳು ನಿಮ್ಮನ್ನು ಹಿಂಬಾಲಿಸುತ್ತವೆ ಅವರ ಕತ್ತರಿಸಿದ ಕಾಲುಗಳು ನಿಮ್ಮನ್ನು ಹಿಂಬಾಲಿಸುತ್ತವೆ ಎಂದು ಮುಸ್ ಅಬ್ ಬರೆದಿದ್ದಾರೆ

ಇವರು ಗಾಝಾದಲ್ಲಿರುವ ಎಡ್ವರ್ಡ್ ಸೈದ್ ಗ್ರಂಥಾಲಯದ ಸ್ಥಾಪಕರೂ ಆಗಿದ್ದಾರೆ. ಗಾಝಾದ ಯುದ್ಧದ ಕುರಿತು ಅವರ ಲೇಖನಗಳು 2025 ರಲ್ಲಿ ಪುಲಿಟ್ಝರ್ ಪ್ರಶಸ್ತಿಗೆ ಆಯ್ಕೆಯಾಗಿತ್ತು

2023 ನವೆಂಬರ್‌ನಲ್ಲಿ ತನ್ನ ಕುಟುಂಬದೊಂದಿಗೆ ಈಜಿಪ್ಟ್‌ಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಇವರನ್ನು ಇಸ್ರೇಲ್ ಪಡೆಗಳು ಬಂಧಿಸಿದ್ದವು. ವಿಚಾರಣೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಮತ್ತು ನಂತರ ಗಾಝಾದಲ್ಲಿರುವ ಯಾತನೆಯನ್ನು ಅವರು ಜಗತ್ತಿಗೆ ತಿಳಿಸಿದರು.

ಯುದ್ಧದಲ್ಲಿ 1500ಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಗಾಯಗೊಂಡು ಅಂಗವಿಕಲರಾಗಿದ್ದಾರೆ. ಈ ಮಕ್ಕಳು ಅಗತ್ಯ ಚಿಕಿತ್ಸೆ ಅಥವಾ ಕೃತಕ ಅಂಗ ಸೌಲಭ್ಯಗಳಿಲ್ಲದೆ ಶೋಚನೀಯ ಜೀವನವನ್ನು ನಡೆಸುತ್ತಿದ್ದಾರೆ. ಇಸ್ರೇಲಿನ ಈ ಕ್ರಮಗಳು ನರಮೇಧ ಮತ್ತು ಯುದ್ಧ ಅಪರಾಧಗಳಿಗೆ ಸಮ ಎಂದು ವಿಶ್ವ ಸಂಸ್ಥೆಯ ಆಯೋಗ ಪದೇ ಪದೇ ಹೇಳುತ್ತಾ ಬಂದಿದೆ.