ತಲೆತಗ್ಗಿಸಿ ಎಲ್ಲವನ್ನೂ ಸಹಿಸಿಕೊಳ್ಳುವ ಕಾಲ ಇದಲ್ಲ…

0
79

ಸನ್ಮಾರ್ಗ ವಾರ್ತೆ

✍️ ಶಹನಾಝ್ ಎಂ.

ಇಂದಿನ ವಿವಾಹಿತರನ್ನು ನೋಡುವಾಗ ನಮ್ಮ ಕಾಲದ ಪತಿ-ಪತ್ನಿಯ ನಡುವೆ ಇದ್ದಂತಹ ಕೆಲವು ಶಿಷ್ಟಾಚಾರ, ಗೌರವ ಕಾಣಲು ಸಿಗದು. ಮೊದಲಿನ ನಮ್ಮ ದಾಂಪತ್ಯ ಜೀವನದಲ್ಲಿ ಪತಿಯ ಮೇಲೆ ಪ್ರೀತಿಗಿಂತಲೂ ಭೀತಿಯೇ ಜಾಸ್ತಿ. ‘ಗಂಡ’ ಎಂದರೆ ‘ಪರಮೇಶ್ವರ’ ಎಂದು ಹಿಂದೂ ಮಹಿಳೆಯರು ಗೌರವಿಸುತ್ತಿದ್ದರು. ಗಂಡನಿಗೆ ಕೋಪ, ಬೇಸರ ಬಾರದಂತೆ ಆತ ಹೇಳಿದಂತೆ ಕೇಳಬೇಕು, ಅವನು ಕರೆದಾಗಲೆಲ್ಲ ಹೋಗಬೇಕು, ಆತನನ್ನು ಯಾವುದರಲ್ಲೂ ನಿರಾಶೆ ಪಡಿಸಬಾರದು, ಅವನು ಪತ್ನಿಯ ಮುಖ ನೋಡಿದರೆ ಖುಷಿ ಅನಿಸಬೇಕು… ಈ ರೀತಿ ಮುಸ್ಲಿಮ್ ವಿವಾಹಿತೆಗೆ ಉಪದೇಶಿಸಲಾಗುತ್ತಿತ್ತು.

ಆದ್ದರಿಂದಲೋ ಏನೋ ಅಂದು ಪತ್ನಿ ಸಹನಾಮಯಿಯಾಗಿ ತಗ್ಗಿ, ಬಗ್ಗಿ ನಡೆಯುವುದರಿಂದ ವಿವಾಹ ವಿಚ್ಛೇದನಗಳೂ ಕಡಿಮೆಯಾಗಿತ್ತು. ಹೆಣ್ಣಿನ ಒಡಲ ಮೂಕ ರೋದನ ಹೊರಗೆ ಬಾರದೇ ಅವಳು ಮೌನಕ್ಕೆ ಶರಣಾಗುತ್ತಿದ್ದಳು. ಮಕ್ಕಳನ್ನು ಹೆರುವುದು, ಸಾಕುವುದು, ಅಡುಗೆ ಕೆಲಸ ಮತ್ತು ಮನೆ ಮಂದಿಯ ಸೇವೆ ಇಷ್ಟೇ ಆಕೆಯ ಬದುಕು. ಪತಿ ಊಟ ಮಾಡಿದ ನಂತರವೇ ನೀನು ಉಣ್ಣಬೇಕು, ಆತನು ಮಲಗದೇ ನೀನು ನಿದ್ರಿಸಬಾರದು ಎಂಬ ಎಚ್ಚರಿಕೆ ಮನೆಯ ಹಿರಿಯರಿಂದ ಕೇಳುತ್ತಿತ್ತು.

ಕೆಲವು ಬುದ್ಧಿವಂತರು ಇಂದು ಹೆಣ್ಣು ಮಕ್ಕಳಿಗೆ (ವಿವಾಹಿತೆ) ಹೀಗೆ ಹೇಳುತ್ತಾರೆ, “ಪತಿಯ ಹೆಸರು ಹಿಡಿದು ಕರೆಯಬಾರದು, ಸ್ವಲ್ಪ ಇಂಗ್ಲಿಷ್ ಕಲಿತರೆ ಸಾಕು ಪತಿಯನ್ನು ಹೆಸರಿಡಿದು ಕರೆಯುತ್ತಾರೆ” ಎಂದು ಆಕ್ಷೇಪಿಸುತ್ತಾರೆ. ಈ ಬಗ್ಗೆ ಓರ್ವ ವಿವಾಹಿತ ಯುವತಿ ಹೀಗೆ ಹೇಳಿದಳು, “ನಾವು ಇರುವ ಕಾಲ ಜ್ಞಾನದ ಕಾಲ. ಪತಿಯ ದಾಸಿ ಅಲ್ಲ ಪತ್ನಿ. ನಾವು ‘ಫ್ರೆಂಡ್ಸ್’ ತರಹ ಸಲಿಗೆ ವಹಿಸುತ್ತೇವೆ. ಪರಸ್ಪರ ಒಟ್ಟಿಗೆ ಸೇರಿ ಮಕ್ಕಳ ಆರೈಕೆ, ಸೇವೆ ಮಾಡುತ್ತೇವೆ. ಆರ್ಥಿಕವಾಗಿಯೂ ಇಬ್ಬರೂ ಒಟ್ಟಿಗೆಯೇ ಸಂಸಾರದ ಖರ್ಚು ವಹಿಸುತ್ತೇವೆ. ಪತಿಯನ್ನು ಹೆಸರು ಹಿಡಿದು ಕರೆಯಬಾರದೆಂದು ನಮ್ಮ ಧಾರ್ಮಿಕ ಗ್ರಂಥದಲ್ಲಿ ಇದ್ದರೆ ನಾನು ಖಂಡಿತಾ ಕರೆಯಬಾರದು. ನನ್ನ ಪತಿಗೆ ಆತನನ್ನು ಹೆಸರಲ್ಲಿ ಕರೆಯುವುದು ಅಗೌರವ, ಮುಜುಗರ ಎಂದು ಆತನು ಹೇಳಿದ್ದರೆ ನಾನು ಖಂಡಿತ ಕರೆಯಬಾರದು. ಪತಿಗೆ ಯಾವುದೇ ಆಕ್ಷೇಪ ಇಲ್ಲದಿದ್ದರೆ ನಾನು ಕರೆಯುವುದರಲ್ಲಿ ತಪ್ಪೇನು!?

ಪ್ರವಾದಿ(ಸ)ರ ಪತ್ನಿಯರು ಪತಿಯನ್ನು ಹೆಸರು ಹಿಡಿದು ಕರೆಯಲಿಲ್ಲ…” ಎನ್ನುವ ಬಗ್ಗೆ ಆಕೆ ಹೇಳುತ್ತಾಳೆ, ಪ್ರವಾದಿ(ಸ)ರನ್ನು ಪತ್ನಿಯರು ಮಾತ್ರವಲ್ಲ, ಯಾವ ಸಹಾಬಿಗಳೂ ಹೆಸರು ಹಿಡಿದು ಕರೆದಿರಲಿಲ್ಲ. ಏಕೆಂದರೆ ಅವರು ನಮ್ಮ ರಸೂಲ್, ನಮ್ಮ ಸಂದೇಶವಾಹಕರು. ಅವರ ಹೆಸರನ್ನು ಹೇಳುವಾಗ ನಾವು ಗೌರವದಿಂದ ‘ಸಲಾಮ್’ ಹೇಳುತ್ತೇವೆ. ನಮ್ಮ ಪತಿ ಸಾಮಾನ್ಯ ವ್ಯಕ್ತಿ. ಪ್ರವಾದಿವರ್ಯರ(ಸ) ಪತ್ನಿಯಂದಿರಿಗೆ ಅವರನ್ನು ಹೆಸರಿಡಿದು ಕರೆಯುವ ಅಧಿಕಾರವೂ ಇರಲಿಲ್ಲ.

“ಮಹಿಳೆಯರು ಕುರ್‌ಆನ್ ಕಲಿತು ಇತರ ಸ್ತ್ರೀಯರಿಗೆ ಕಲಿಸುವುದು ಸರಿಯಲ್ಲ” ಎನ್ನುವ ಆಕ್ಷೇಪವನ್ನೂ ಓರ್ವರು ವ್ಯಕ್ತಪಡಿಸಿದ್ದರು. ಅವರ ಪ್ರಕಾರ ಧಾರ್ಮಿಕ ಜ್ಞಾನವನ್ನು ಪುರುಷರೇ ನೀಡಬೇಕು, ಮಹಿಳೆಯರಿಗೆ ಅದು ಶೋಭಿತವಲ್ಲ. ಇಂದು ಮಹಿಳೆಯರೇ ಕುರ್‌ಆನ್ ಕಲಿಕೆಯ ನೇತೃತ್ವ ವಹಿಸಿ ಕಲಿಸುವುದು ಅಧಿಕವಾಗಿದೆ ಎಂಬ ಆಕ್ಷೇಪ ಅವರದ್ದು.

ನಮ್ಮ ಮಾತೆ ಆಯಿಶಾ(ರ)ರವರು ಪುರುಷ (ಸಹಾಬಿಗಳಿಗೆ) ರಿಗೂ ಧಾರ್ಮಿಕ ಉಪದೇಶ ನೀಡುತ್ತಿದ್ದರು. ಪ್ರವಾದಿ(ಸ)ರ ಕಾಲಾನಂತರ ಹೆಚ್ಚಿನ ಹದೀಸ್(ವಚನ)ಗಳನ್ನು ಆಯಿಶಾ(ರ)ರಿಂದ ಸಂಗ್ರಹಿಸಲಾಗಿದೆ. ಮಹಿಳೆಯರೂ ಕುರ್‌ಆನ್ ಕಂಠ ಪಾಠ ಮಾಡುತ್ತಿದ್ದರು. ಹೆಣ್ಣು ಮಕ್ಕಳು ಇಂದು ಇಸ್ಲಾಮೀ ಶಿಕ್ಷಣವನ್ನು ಪಡೆದು ಶಿಕ್ಷಕಿಯರಾಗಿ ಶಾಲಾ ಕಾಲೇಜು, ಮದ್ರಸಾಗಳಲ್ಲಿ ಇತರರಿಗೆ ಕಲಿಸುತ್ತಿದ್ದಾರೆ.

ಮಹಿಳೆಯರಿಗೆ ವಿದ್ವಾಂಸ ಪುರುಷರಿಂದಲೇ ಕುರ್‌ಆನ್ ಕಲಿಕೆ ಆಗಬೇಕು ಎಂಬ ಈ ಮನಸ್ಥಿತಿ ಪುರುಷ ಪ್ರಧಾನತೆಯ ಅಹಂಕಾರ ಮಾತ್ರವಾಗಿದೆ. ಮಹಿಳೆಯರಿಗೆ ಮಹಿಳೆಯರೇ ಧಾರ್ಮಿಕ ಶಿಕ್ಷಣದ ಜ್ಞಾನ ನೀಡುವುದರಲ್ಲಿ ಒಳಿತೂ ಇದೆ. ಹೆಣ್ಣು ಮಕ್ಕಳಿಗೆ ಕೆಲವು ಖಾಸಗಿ ವಿಷಯದ ಜ್ಞಾನವೂ ಇಸ್ಲಾಮೀ ಶಿಕ್ಷಣದಲ್ಲಿ ಲಭ್ಯವಾಗುತ್ತದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್ ಕ್ಲಾಸ್‌ನ ಮೂಲಕ ಮಹಿಳಾ ವಿದ್ವಾಂಸರು ಹೆಣ್ಣು ಮಕ್ಕಳಿಗೆ ಕುರ್‌ಆನನ್ನು ಸರಿಯಾಗಿ ಓದಲೂ ಅದರ ಅರ್ಥವನ್ನೂ ಉಚ್ಛಾರವನ್ನೂ ಮಹತ್ವವನ್ನೂ ಕಲಿಸುತ್ತಿರುವುದರಿಂದ ನಮ್ಮ ಸಮುದಾಯದಲ್ಲಿ ಲೌಕಿಕ ಜ್ಞಾನದೊಂದಿಗೆ ಧಾರ್ಮಿಕ ಜ್ಞಾನವೂ ಸಮಾನವಾಗಿ ಪ್ರಾಪ್ತವಾಗುತ್ತದೆ. ಗಂಡು ಮಕ್ಕಳೇ ಇಂದು ಧಾರ್ಮಿಕ ಜ್ಞಾನದಿಂದ ದೂರವಿದ್ದಾರೆ.

ಮೊದಲಿನ ನಮ್ಮ ಹಿರಿಯ ಮಹಿಳೆಯರಿಗೆ ಧಾರ್ಮಿಕ ಗ್ರಂಥದಲ್ಲಿ ಏನು ಸಂದೇಶ ಇದೆ ಎಂದೂ ತಿಳಿದಿರಲಿಲ್ಲ. ಯಾಕೆಂದರೆ, ಅಂದು ಅರಬಿ ಪದಗಳ ಅರ್ಥವನ್ನು ತಿಳಿಸುವ, ಅರಿಯುವ ಸೌಲಭ್ಯಗಳು ಇರಲಿಲ್ಲ. ಇಂದು ಸ್ತ್ರೀಯರ ಬಗ್ಗೆ, ಕುಟುಂಬದ ಬಗ್ಗೆ, ಹಕ್ಕು ಅಧಿಕಾರ, ನೀತಿ-ನಿಯಮ, ಶರಿಯಾ (ಕಾನೂನು), ವಿವಾಹ, ಮಹರ್, ಝಕಾತ್, ಉಪವಾಸ ಎಲ್ಲದರ ಅರಿವೂ ಕುರ್‌ಆನ್‌ನ ಮೂಲಕ ಮಹಿಳೆಯರು ತಿಳಿಯುವ ಅವಕಾಶವಿದೆ.

ತಾಯಿಯ ಮಡಿಲೇ ಮಗುವಿನ ಮದ್ರಸಾ ಎನ್ನಲಾಗುತ್ತದೆ. ಹೆಣ್ಣಿಗೆ ಧಾರ್ಮಿಕ ಜ್ಞಾನ ಇಲ್ಲದೇ ಹೋದಾಗ ಆಕೆಯ ಸಂತಾನವೂ ಅಜ್ಞಾನದಲ್ಲಿ, ಮೂಢನಂಬಿಕೆಯಲ್ಲಿ ಬೆಳೆಯುತ್ತದೆ. ಮಕ್ಕಳಿಗೆ ಕುರ್‌ಆನಿನ ಬೇಸಿಕ್‌ಅನ್ನು ಆರಂಭದಲ್ಲಿ ತಾಯಿಯೇ ಕಲಿಸುತ್ತಾಳೆ. ನಮಾಝ್ ನ ಶೈಲಿಯನ್ನು ಅವಳೇ ಕಲಿಸುತ್ತಾಳೆ. ಆದ್ದರಿಂದಲೇ ಪ್ರವಾದಿ(ಸ)ರು ಹೇಳಿದ್ದು, “ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ” ಎಂದು.

ಇಂದು ಅಧಿಕ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಪರ್ದಾ, ಹಿಜಾಬ್ ಧರಿಸಲು ಕಾರಣ ಅವರಿಗೆ ತಮ್ಮ ಧಾರ್ಮಿಕ ಗ್ರಂಥದಲ್ಲಿ ಹಿಜಾಬ್, ಪರ್ದಾದ ಬಗ್ಗೆ ಅಲ್ಲಾಹನಿಂದ ಏನು ಆದೇಶ ಬಂದಿದೆ ಎಂದು ತಿಳಿದಿದೆ. ಹೆಣ್ಣು ಮಕ್ಕಳಿಗೆ ಪುರುಷರು ಒತ್ತಾಯ ಮಾಡಿ, ಬೆದರಿಸಿ ಹಿಜಾಬ್ ಹಾಕಿಸುವುದಿಲ್ಲ. ಅವರೇ ಸ್ವಯಂ ಧಾರ್ಮಿಕ ಜ್ಞಾನ ಹೊಂದಿ ಈ ವಸ್ತ್ರವನ್ನು ಗೌರವದಿಂದಲೇ ಹಾಕಿಕೊಳ್ಳುತ್ತಾರೆ. ಶರಿಯಾದಲ್ಲಿ ಮಹಿಳೆಯರ ಬಗ್ಗೆ ಏನೆಲ್ಲ ಇದೆ- ತಲಾಕ್, ಖುಲಾ, ವಿವಾಹ, ಮಹರ್… ಎಲ್ಲವನ್ನೂ ನಮ್ಮ ಸ್ತ್ರೀಯರು ಪುರುಷರಂತೆಯೇ ಹೆಚ್ಚು ತಿಳಿದುಕೊಳ್ಳಲು ಈ ಕಾಲದಲ್ಲಿ ಸಾಧ್ಯವಾಗಿದೆ.

ಆದ್ದರಿಂದ ಇಂದು ಸಮುದಾಯದಲ್ಲಿ ನಮ್ಮ ಸಹೋದರಿಯರು ಇತರ ಸಹೋದರಿಯರಿಗೆ ಇಸ್ಲಾಮೀ ಜ್ಞಾನ, ಕುರ್‌ಆನ್ ಕಲಿಕೆ ನೀಡುವುದನ್ನು ನಾವು ಗೌರವದಿಂದಲೇ ಕಾಣಬೇಕು. ಮನಸ್ಸಿನ ಸಂಕುಚಿತದಿಂದ ನಾವು ಹೊರಬರಬೇಕು.

ನಾವಿಂದು ಪ್ರವಾದಿವರ್ಯರ(ಸ) ಕಾಲದ ಕೆಲವು ವಿಷಯಗಳ ಉದಾಹರಣೆ ನೀಡುವುದಾದರೆ… ಅಂದು ಸಹಾಬಿಗಳು ‘ಒಂಟೆ’ಯ ಮೇಲೆ ಸಂಚರಿಸುತ್ತಿದ್ದರು, ಚಾಪೆಯ ಮೇಲೆ ಮಲಗುತ್ತಿದ್ದರು. ಇಂದು ನಾವು ಕಾರಿನಲ್ಲಿ ಸಂಚರಿಸುತ್ತೇವೆ, ಎ.ಸಿ. ರೂಮ್ ನಲ್ಲಿ ಮೆತ್ತನೆಯ ಬೆಡ್‌ನಲ್ಲಿ ಮಲಗುತ್ತೇವೆ… ಅಲ್ಲವೇ? ಸ್ತ್ರೀ -ಪುರುಷರನ್ನು ಅಲ್ಲಾಹನು ಪ್ರಾಕೃತಿಕ ವ್ಯತ್ಯಾಸಗಳ ಹೊರತಾಗಿ ಎಲ್ಲ ವಿಷಯಗಳಲ್ಲಿ ಅನುಗ್ರಹಿಸಿದ್ದಾನೆ. ದೈಹಿಕವಾದ ಶಕ್ತಿಯಿಂದ ಪುರುಷ ಸ್ತ್ರೀಯರಿಗಿಂತ ಹೆಚ್ಚು ಶಕ್ತಿಶಾಲಿ ಆಗಿರಬಹುದು. ಆದರೆ ಬುದ್ಧಿ ಸಾಮರ್ಥ್ಯದಲ್ಲಿ ಇಬ್ಬರಲ್ಲೂ ಪ್ರತಿಭೆಗಳಿವೆ. ಪ್ರವಾದಿ(ಸ)ರು ಎಂದಿಗೂ ಮಹಿಳೆಯರನ್ನು ತುಚ್ಛವಾಗಿ ಕಾಣಲಿಲ್ಲ. ಶಾರೀರಿಕವಾಗಿ ಆಕೆಯನ್ನು ದುರ್ಬಲಳು ಎಂದು ಪ್ರವಾದಿ(ಸ)ರು ಹೇಳಿದ್ದರು. ಆದರೆ ಬೇರೆ ಯಾವುದರಲ್ಲೂ ಹೆಣ್ಣನ್ನು ಅವರು ಕಡೆಗಣಿಸಲಿಲ್ಲ.