ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ತೈಲ ಖರೀದಿದಾರರನ್ನು ಗುರಿಯಾಗಿಸಿಕೊಂಡು ಹೊಸ ಅಮೆರಿಕ ಕಾನೂನಿನ ಅಡಿಯಲ್ಲಿ ಸುಂಕಗಳನ್ನು (ಟ್ಯಾರಿಫ್) ಜಾರಿಗೆ ತಂದರಾದರೂ, ಅದೇ ಆದೇಶದಲ್ಲಿ ಅವುಗಳಿಗೆ ವಿನಾಯಿತಿಯನ್ನೂ ನೀಡಿದ್ದಾರೆ. ಇದರಿಂದ ಭಾರತ ಮತ್ತು ಚೀನಾದಂತಹ ದೇಶಗಳಿಗೆ ಶೇ. 100ರಷ್ಟು ಸುಂಕ ಬೀಳುವುದರಿಂದ ಬಚಾವಾಗಿವೆ. ಈ ಸುಂಕಗಳು ಜಾರಿಗೆ ಬರುವ ಕೇವಲ ಒಂದು ದಿನ ಮುಂಚಿತವಾಗಿ ಮತ್ತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಭಾರತ ಭೇಟಿಗೆ ತೆರಳುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಹೊರಬಂದಿದೆ.
ಶುಕ್ರವಾರದಂದು ತಡರಾತ್ರಿ ವೈಟ್ ಹೌಸ್ ಬಿಡುಗಡೆ ಮಾಡಿದ ಕಾರ್ಯಕಾರಿ ಆದೇಶದಲ್ಲಿ ‘ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಶನ್ಸ್ ರಷ್ಯಾ ಅಂಡ್ ಇರಾನ್ ಆಕ್ಟ್ 2026’ ಅನ್ನು ಜಾರಿಗೆ ತರಲಾಗಿದೆ. ಟ್ರಂಪ್ ಅವರು ಈ ಕಾನೂನಿಗೆ ಸೆಪ್ಟೆಂಬರ್ 18ರಂದೇ ಸಹಿ ಹಾಕಿದ್ದರು. ಇದರಡಿ ರಷ್ಯಾದ ತೈಲ ಮತ್ತು ನೈಸರ್ಗಿಕ ಅನಿಲದ ಅತಿ ದೊಡ್ಡ ಖರೀದಿದಾರರ ಸರಕುಗಳ ಮೇಲೆ 30 ದಿನಗಳೊಳಗೆ ಶೇ. 100ರಷ್ಟು ಸುಂಕ ವಿಧಿಸುವ ನಿಯಮವಿತ್ತು. ಈ ಗಡುವು ಭಾನುವಾರ ಅಕ್ಟೋಬರ್ 18ಕ್ಕೆ ಕೊನೆಗೊಳ್ಳುತ್ತಿತ್ತು.
ಈ ಆದೇಶವು “ರಷ್ಯಾದ ಒಕ್ಕೂಟದಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವ ಅಗ್ರ 5 ದೇಶಗಳ” ಸರಕುಗಳ ಮೇಲೆ ಶೇ. 100ರಷ್ಟು ಸುಂಕವನ್ನು ಹೆಚ್ಚಿಸುತ್ತದೆ; ಆದರೆ ಆ ದೇಶವು ಅಕ್ಟೋಬರ್ 18, 2026ರಂದು ಅಥವಾ ನಂತರ ಉದ್ದೇಶಪೂರ್ವಕವಾಗಿ ರಷ್ಯಾದಿಂದ ಹೊಸದಾಗಿ ಕಚ್ಚಾ ತೈಲ ಅಥವಾ ಅನಿಲವನ್ನು ಖರೀದಿಸಿದರೆ ಮಾತ್ರ ಇದು ಅನ್ವಯಿಸುತ್ತದೆ. ಈ ಆದೇಶವು ರಷ್ಯಾದ ತೈಲ ನಿರ್ಬಂಧಗಳನ್ನು ಬೈಪಾಸ್ ಮಾಡಲು ಸಹಾಯ ಮಾಡುವ ಅಗ್ರ 5 ದೇಶಗಳ ಸರಕುಗಳ ಮೇಲೆ ಶೇ. 100ರಷ್ಟು ಸುಂಕವನ್ನು ಮತ್ತು ರಷ್ಯಾದಿಂದ ಬರುವ ಸರಕುಗಳ ಮೇಲೆ ಶೇ. 500ರವರೆಗೆ ಸುಂಕವನ್ನು ಹೆಚ್ಚಿಸುತ್ತದೆ.
ಆದೇಶದ ಸೆಕ್ಷನ್ 4 ಈ ಎಲ್ಲಾ ಕ್ರಮಗಳನ್ನು ತಕ್ಷಣವೇ ಅಮಾನತುಗೊಳಿಸುತ್ತದೆ. ಟ್ರಂಪ್ ಅವರು “ನಾನು ಇದರ ಮೂಲಕ ಗ್ರಹಾಂ ಕಾಯ್ದೆಯ ಸೆಕ್ಷನ್ 112 ಮತ್ತು 113 ರ ಅಡಿಯಲ್ಲಿ ಅಥವಾ ಈ ಆದೇಶದಲ್ಲಿ ತಿಳಿಸಲಾದ ಯಾವುದೇ ಸುಂಕಗಳನ್ನು ವಿಧಿಸುವುದರಿಂದ ವಿನಾಯಿತಿ ನೀಡುತ್ತೇನೆ” ಎಂದಿದ್ದಾರೆ. ಈ ಆದೇಶವು ವಿದೇಶಿ ವ್ಯಕ್ತಿಗಳ ಮೇಲೆ ಹೇರಲಾಗಿರುವ ಕಾಯ್ದೆಯ ಬಹುತೇಕ ನಿರ್ಬಂಧಗಳನ್ನು ಸಹ ತೆಗೆದುಹಾಕುತ್ತದೆ. ಆದೇಶದಲ್ಲಿ ನೀಡಲಾಗಿರುವ ಈ ವಿನಾಯಿತಿಗಳು “ಅಧ್ಯಕ್ಷರು ಅಥವಾ ವಿದೇಶಾಂಗ ಕಾರ್ಯದರ್ಶಿಯು, ಖಜಾನೆ ಕಾರ್ಯದರ್ಶಿ ಮತ್ತು ವ್ಯಾಪಾರ ಪ್ರತಿನಿಧಿಯೊಂದಿಗೆ ಸರಿಯಾದ ಸಮಾಲೋಚನೆ ನಡೆಸಿ ಮುಂದಿನ ಯಾವುದೇ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ನಿರ್ಧರಿಸುವವರೆಗೆ ಜಾರಿಯಲ್ಲಿರುತ್ತವೆ” ಎಂದು ತಿಳಿಸಲಾಗಿದೆ.
ಆದಾಗ್ಯೂ, ಈ ಆದೇಶದಲ್ಲಿ ಯಾವುದೇ ನಿರ್ದಿಷ್ಟ ದೇಶದ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ.ಟ್ರಂಪ್ ಅವರು ಕಾಂಗ್ರೆಸ್ಗೆ ಕಾನೂನಿನ ಪ್ರಕಾರ ಅಗತ್ಯವಿರುವ ಲಿಖಿತ ಪ್ರಮಾಣಪತ್ರವನ್ನು ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ “ಈ ರೀತಿಯ ವಿನಾಯಿತಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಒಳಪಟ್ಟಿದೆ” ಎಂದು ಹೇಳಲಾಗಿದೆ. ಆದರೆ ಈ ಪ್ರಮಾಣಪತ್ರ ಅಥವಾ ವರದಿಯನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಅಮೆರಿಕದ ವ್ಯಾಪಾರ ಪ್ರತಿನಿಧಿ, ವಿದೇಶಾಂಗ ಕಾರ್ಯದರ್ಶಿ, ಹಣಕಾಸು ಕಾರ್ಯದರ್ಶಿ ಮತ್ತು ಇಂಧನ ಕಾರ್ಯದರ್ಶಿಗಳು ರಷ್ಯಾದಿಂದ ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲದ ಆಮದು ಮತ್ತು ಖರೀದಿಗೆ ಸಂಬಂಧಿಸಿದ ಪರಿಸ್ಥಿತಿಗಳ ಮೇಲೆ ನಿರಂತರ ಕಣ್ಣಿಡಲಿದ್ದಾರೆ.
ರಷ್ಯಾದ ತೈಲವನ್ನು ಅತಿ ಹೆಚ್ಚು ಖರೀದಿಸುವ ಪ್ರಮುಖ ದೇಶಗಳಲ್ಲಿ ಭಾರತವೂ ಒಂದಾಗಿದೆ. ಕಳೆದ ಫೆಬ್ರವರಿಯಲ್ಲಿ ವಾಷಿಂಗ್ಟನ್ ಭಾರತೀಯ ಸರಕುಗಳ ಮೇಲಿನ ಹೆಚ್ಚುವರಿ ಶೇ. 25ರಷ್ಟು ಸುಂಕವನ್ನು ತೆಗೆದುಹಾಕಿತ್ತು. ಪ್ರಸ್ತುತ ಉಭಯ ದೇಶಗಳು ಮುಕ್ತ ವ್ಯಾಪಾರ ಒಪ್ಪಂದದ ಮೊದಲ ಹಂತವನ್ನು ಅಂತಿಮಗೊಳಿಸುವ ಹಂತದಲ್ಲಿವೆ. ದ್ವಿಪಕ್ಷೀಯ ಪತ್ರವೊಂದರಲ್ಲಿ ರಿಪಬ್ಲಿಕನ್ ಕಾಂಗ್ರೆಸ್ಮನ್ ಮೈಕೆಲ್ ಮೆಕ್ಕಾಲ್ ಮತ್ತು ಡೆಮಾಕ್ರಟಿಕ್ ಕಾಂಗ್ರೆಸ್ಮನ್ ಜಿಮ್ ಕೊಸ್ಟಾ ಅವರು, ನಿಗದಿತ ಗಡುವಿನೊಳಗೆ ಕಾನೂನನ್ನು ಸಂಪೂರ್ಣವಾಗಿ ಜಾರಿಗೆ ತರುವಂತೆ ಟ್ರಂಪ್ ಅವರನ್ನು ಒತ್ತಾಯಿಸಿದ್ದರು. ಅಲ್ಲದೆ ಯಾವುದೇ ವಿನಾಯಿತಿ ನೀಡಿದರೆ ಅದು ಸೀಮಿತ ವ್ಯಾಪ್ತಿಯನ್ನು ಹೊಂದಿರಬೇಕು ಎಂದಿದ್ದರು. ಆದರೆ ಶುಕ್ರವಾರದ ಆದೇಶದಲ್ಲಿ ವಿನಾಯಿತಿಗೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ.
ಮಾರ್ಕೊ ರೂಬಿಯೊ ಅವರು ಅಕ್ಟೋಬರ್ 17ರಿಂದ 22ರವರೆಗೆ ಮುಂಬೈ ಮತ್ತು ಜಾಮ್ನಗರಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 20ರಂದು ಮುಂಬೈನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಚರ್ಚೆ ನಡೆಸುವುದರ ಜೊತೆಗೆ, ವಿಶ್ವದ ಅತಿ ದೊಡ್ಡ ರಿಫೈನರಿ ಕಾಂಪ್ಲೆಕ್ಸ್ ಆಗಿರುವ ಜಾಮ್ನಗರ ರಿಫೈನರಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ.












