ಸನ್ಮಾರ್ಗ ವಾರ್ತೆ
ಅಂಕಾರಾ: ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಟರ್ಕಿ-ಸಿರಿಯಾ ನಲುಗಿ ಹೋಗಿವೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ ಇದುವರೆಗೆ ಉಭಯ ದೇಶಗಳಲ್ಲಿ ಒಟ್ಟು 15,383 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಭೂಕಂಪದಿಂದ ಅತೀ ಹೆಚ್ಚು ಸಾವು-ನೋವುಗಳು ಟರ್ಕಿಯಿಂದ ವರದಿಯಾಗುತ್ತಿದ್ದು ಇದುವರೆಗೆ ಒಟ್ಟು 12,391 ಜನರು ಸಾವನ್ನಪ್ಪಿದ್ದಾರೆ ಹಾಗೂ 62,914 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆ(AFAD) ಹೇಳಿರುವುದಾಗಿ ಅನಾಡೋಲು ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಿರಿಯಾದಲ್ಲಿ 2,992 ದುರಂತ ಸಾವುಗಳು ಸಂಭವಿಸಿವೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಭೀತಿ ಇದೆ.
ಟರ್ಕಿಯ ಗಡಿ ಪ್ರದೇಶದಲ್ಲಿ ಸುಮಾರು 6 ಸಾವಿರ ಕಟ್ಟಡಗಳು ನೆಲಸಮವಾಗಿವೆ. ಟರ್ಕಿಯ ಆಗ್ನೇಯದ ಹತ್ತು ಪ್ರಾಂತ್ಯಗಳಲ್ಲಿ ಮೂರು ತಿಂಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಟರ್ಕಿಯ ಒಟ್ಟು 8.5 ಕೋಟಿ ಜನಸಂಖ್ಯೆಯಲ್ಲಿ 1.3 ಕೋಟಿ ಜನರು ಭೂಕಂಪದಿಂದ ಬಾಧಿತರಾಗಿದ್ದು, ಇದರಲ್ಲಿ 3.8 ಲಕ್ಷ ಜನರಿಗೆ ಸರ್ಕಾರಿ ನಿರಾಶ್ರಿತ ಕೇಂದ್ರಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂಬುದಾಗಿ ವರದಿಯಾಗಿದೆ.












