ಯುಎಪಿಎ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಪಾಸ್

0
382

ಹೊಸದಿಲ್ಲಿ, ಆ. 2: ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ನಿಶ್ಚಯಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡುವ ಯುಎಪಿಎ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕೃತವಾಗಿದೆ. 147 ಪರ ಮತ್ತು ವಿರುದ್ಧ 42 ಮತಗಳ ಅಂತರದಿಂದ ಮಸೂದೆ ಪಾಸಾಗಿದ್ದು ಈ ಹಿಂದೆ ಇದು ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತ್ತು.

ಈಗಾಗಲೇ ದುರ್ಬಳಕೆಗೊಳ್ಳುತ್ತಿರುವ ಯುಎಪಿಎ ಕಾನೂನು ಹೆಚ್ಚು ಕಠಿಣವಾಗಿಸಲಾಗಿದ್ದು ಮುಸ್ಲಿಂ, ದಲಿತ ವಿಭಾಗಗಳ ವಿರುದ್ಧ ಅಸ್ತ್ರವಾಗಿ ಬಳಸಲ್ಪಡಬಹುದು ಎಂದು ಪ್ರತಿಪಕ್ಷಗಳು ಬೆಟ್ಟು ಮಾಡಿದ್ದವು. ಆದರೆ ಪ್ರತಿಪಕ್ಷದ ವಿರೋಧವನ್ನು ಮೀರಿ ಮಸೂದೆಯನ್ನು ಕೇಂದ್ರ ಸರಕಾರ ಮಂಡಿಸಿತ್ತು. ಈಗಿನ ಕಾನೂನಿನಲ್ಲಿ ತಿದ್ದುಪಡಿಯನ್ನು ಮಾತ್ರ ಮಾಡಲಾಗುತ್ತಿದೆ ಎಂದು ಅಮಿತ್ ಶಾ ರಾಜ್ಯಸಭೆಗೆ ತಿಳಿಸಿದರು. ಹೊಸ ಕಾನೂನು ಎನ್‍ಡಿಎ ಸರಕಾರ ತಂದಿಲ್ಲ. ಭಯೋತ್ಪಾದಕರಿಂದ ಒಂದು ಹೆಜ್ಜೆ ಮುಂದಿಡಲು ಸರಕಾರ ತೀರ್ಮಾನಿಸಿದೆ. ಯುಎಪಿಎ ಕಾನೂನಲ್ಲಿ ತಿದ್ದುಪಡಿ ತಂದುದು ಕಾಂಗ್ರೆಸ್ ಸರಕಾರವಾಗಿತ್ತು. ಇಂದು ಅವರು ವಿರುದ್ಧ ಪಾಳಯದಲ್ಲಿದ್ದಾರೆ. ಈಗ ಕಾಂಗ್ರೆಸ್ ಕಾನೂನನ್ನು ಯಾಕೆ ವಿರೋಧಿಸುತ್ತಿದ್ದಾರೆ ಎಂದು ಅರ್ಥವಾಗುವುದಿಲ್ಲ ಎಂದು ಅಮಿತ್ ಶಾ ಹೇಳಿದರು.