ತಡವಾಗಿ ಬಂದ ವಿದ್ಯಾರ್ಥಿನಿಗೆ ನೀಟ್ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟ ಉಡುಪಿ ಶಾಸಕ: ಹಾಗಿದ್ರೆ ಬೆಂಗಳೂರಿನಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ನೆಟ್ಟಿಗರು

0
522

ಸನ್ಮಾರ್ಗ ವಾರ್ತೆ

ಪರೀಕ್ಷಾ ಕೇಂದ್ರಕ್ಕೆ ಎರಡು ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗೆ ನೀಟ್ ಪರೀಕ್ಷೆ ಬರೆಯಲು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವಕಾಶ ಮಾಡಿಕೊಟ್ಟ ಘಟನೆ ಬೆಳಕಿಗೆ ಬಂದಿದೆ. ಕಾರ್ಕಳದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಉಡುಪಿಯ ಎಂಜಿಎಂ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಪ್ರವೇಶ ಸಮಯ ಒಂದು ಗಂಟೆ 30 ನಿಮಿಷಕ್ಕಿಂತ ಎರಡು ನಿಮಿಷ ತಡವಾಗಿ ಬಂದಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸಲು ನಿರಾಕರಿಸಿದ್ದರು.

ಅಕ್ಷತಾ ಮತ್ತು ಆಕೆಯ ಪೋಷಕರು ಕಾರ್ಕಳದ ಗ್ರಾಮೀಣ ಪ್ರದೇಶದಿಂದ ಪ್ರಯಾಣಿಸುತ್ತಿದ್ದಾಗ ಮಾರ್ಗ ಮಧ್ಯೆ ಅವರ ವಾಹನ ಕೆಟ್ಟು ಹೋಯಿತು. ಅವರು ಪರ್ಯಾಯ ವಾಹನವನ್ನು ವ್ಯವಸ್ಥೆ ಮಾಡಿ ಕೇಂದ್ರಕ್ಕೆ ಧಾವಿಸಿದ್ದರು. ಆದರೆ ತಡವಾಯಿತು. ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಬಿಡಲಿಲ್ಲ. ಪೋಷಕರು ಶಾಸಕ ಯಶ್ ಪಾಲ್ ಸುವರ್ಣ ಅವರನ್ನು ಸಂಪರ್ಕಿಸಿದರು. ಇದರ ನಂತರ ಜಿಲ್ಲಾಡಳಿತದ ಮೂಲಕ ವಿಶೇಷ ಅನುಮತಿಯೊಂದಿಗೆ ಅಕ್ಷತಾ ಅವರಿಗೆ ಮಧ್ಯಾಹ್ನ 2 ಗಂಟೆ 45ರ ಸುಮಾರಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು ಮತ್ತು ನೀಟ್ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು ಎಂದು ದಾಯಿಜಿ ವರ್ಲ್ಡ್ ಮಾಧ್ಯಮ ವರದಿ ತಿಳಿಸಿದೆ.

ನನಗೆ ಮಾಹಿತಿ ಬಂದ ತಕ್ಷಣ ನಾನು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಟ ಅಧಿಕಾರಿಗಳೊಂದಿಗೆ ಸಹಕರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ವಿದ್ಯಾರ್ಥಿನಿಯ ಶೈಕ್ಷಣಿಕ ಭವಿಷ್ಯಕ್ಕೆ ಯಾವುದೇ ತೊಂದರೆ ಆಗದಂತೆ, ತಕ್ಷಣ ಬೆಂಬಲ ನೀಡಿದ ಜಿಲ್ಲಾಡಳಿತ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೃತಜ್ಞ ನಾಗಿದ್ದೇನೆ ಎಂದು ಹೇಳಿದ್ದಾರೆ.

ಇದೀಗ ಈ ಬೆಳವಣಿಗೆ ರಾಜ್ಯಮಟ್ಟದಲ್ಲಿ ಚರ್ಚೆಗೆ ಒಳಗಾಗಿದ್ದು ಉಡುಪಿಯಲ್ಲಿ ತಡವಾಗಿ ಬಂದ ವಿದ್ಯಾರ್ಥಿನಿಗೆ ನೀಟ್ ಪರೀಕ್ಷೆಗೆ ಅನುಮತಿ ಸಿಗುತ್ತದೆ ಎಂದಾದರೆ ಬೆಂಗಳೂರು ಮತ್ತು ಇತರ ಕಡೆ ಯಾಕೆ ಸಿಗಲ್ಲ ಎಂಬ ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಎತ್ತಲಾಗಿದೆ.