ಉಡುಪಿಯಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಜಾಮೀಯಾ ಮಸೀದಿ: “ಸಾರ್ವಜನಿಕ ಮಸೀದಿ ಸಂದರ್ಶನ” ಕಾರ್ಯಕ್ರಮಕ್ಕೆ ಭಾರೀ ಮೆಚ್ಚುಗೆ

0
360

ಸನ್ಮಾರ್ಗ ವಾರ್ತೆ

ಉಡುಪಿ: ಧರ್ಮ- ಧರ್ಮಗಳ ನಡುವೆ ವೈಷಮ್ಯವನ್ನು ಸೃಷ್ಟಿಸಿ ಪರಸ್ಪರ ಕಚ್ಚಾಡಿಸುವವರ ನಡುವೆ ಕೋಮು ವಿರೋಧಿ ಭಾವನೆಗಳನ್ನು ಹೋಗಲಾಡಿಸಲು ಮತ್ತು ಧಾರ್ಮಿಕ ಸಂಶಯಗಳು, ಅಪನಂಬಿಕೆಗಳನ್ನು ನಿವಾರಿಸಲು ಉಡುಪಿಯಲ್ಲಿ ಮಸೀದಿಯೊಂದು ಮುಂದಡಿ ಇಟ್ಟಿರುವುದು ಗಮನಾರ್ಹ. ಧಾರ್ಮಿಕ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಹಾಗೂ ಮಸೀದಿ ಸಂದರ್ಶನ ಸ್ವಾಗತ ಸಮಿತಿಯ ಸಹಯೋಗದೊಂದಿಗೆ ಉಡುಪಿಯ ಜಾಮೀಯಾ ಮಸೀದಿಯಲ್ಲಿ “ಸರ್ವ ಧರ್ಮೀಯರಿಗೆ ಮಸೀದಿ ಸಂದರ್ಶನ ಕಾರ್ಯಕ್ರಮ” ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ಮನೋ ವೈದ್ಯ ಪಿ.ವಿ ಭಂಡಾರಿ, “ಉಡುಪಿ ಎಂದ ತಕ್ಷಣ ನೆನಪಾಗುವುದು ಹಾಜಿ ಅಬ್ದುಲ್ಲಾ ಸಾಹೇಬರು, ಸೌಹಾರ್ದತೆಗೆ ಅವರ ಕೊಡುಗೆ ಅಪಾರವಾಗಿದೆ. ಅವರು ಕೇವಲ ಕಾರ್ಪೊರೇಷನ್‌’ನ ಸಂಸ್ಥಾಪಕರು ಮಾತ್ರವಲ್ಲ. ಈ ನೆಲದ ಸೌಹಾರ್ದಕ್ಕಾಗಿ ದುಡಿದವರು. ಶ್ರೀ ಕೃಷ್ಣ ಮಠಕ್ಕೆ ದೀಪದ ಎಣ್ಣೆ ಕಡಿಮೆಯಾದಾಗ ಅವರು ಎಣ್ಣೆ ಪೂರೈಸುತ್ತಿದ್ದುದ್ದರ ಕುರಿತು ಉಲ್ಲೇಖವಿದೆ. ಇಂತಹ ಕಾರ್ಯಕ್ರಮಗಳು ವ್ಯಾಪಕವಾಗಬೇಕು” ಎಂದರು‌.

ಮಸೀದಿ ಎಂದರೇನು, ಅಂಗಸ್ನಾನ ಮಾಡುವ ವಿಧಾನ, ಆಝಾನ್‌ನ ಅರ್ಥ, ಮಸೀದಿ ಒಳಗಿನ ಮಿಂಬರ್, ಮೆಹ್ರಾಬ್, ಕುರ್‌ಆನ್, ನಮಾಝ್ ಮಾಡುವ ವಿಧಾನ, ಮಹಿಳೆಯರಿಗೆ ಮಸೀದಿಯಲ್ಲಿರುವ ವ್ಯವಸ್ಥೆಗಳು, ಶುಕ್ರವಾರದ ನಮಾಝ್‌ನ ಪ್ರಾಮುಖ್ಯತೆಗಳ ಬಗ್ಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲದಾಸ್ ಬನ್ನಂಜೆ ಮಾತನಾಡಿ, ನಮ್ಮ ದೇಶದಲ್ಲಿನ ವಿವಿಧತೆಯೊಳಗಿನ ಏಕತೆಯನ್ನು ಮುಂದುವರೆಸಿಕೊಂಡು ಸಹೋದರತ್ವದ ಭಾವನೆಯೊಂದಿಗೆ ಸಾಮರಸ್ಯದ ಬದುಕು ನಡೆಸಬೇಕು. ಎಲ್ಲ ಧರ್ಮದಲ್ಲಿನ ಉತ್ತಮ ಸಂದೇಶವನ್ನು ಮುಂದಿನ ಜನಾಂಗಕ್ಕೆ ಕೊಡುವ ಕಾರ್ಯ ಮಾಡಬೇಕು. ದ್ವೇಷ ಪ್ರೇಮ ಬಿಟ್ಟು ನಾವೆಲ್ಲ ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಿತಿ ಸದಸ್ಯ ಇದ್ರೀಸ್ ಹೂಡೆ ಮಾತನಾಡಿ, ಮಸೀದಿ ಕೇವಲ ಪ್ರಾರ್ಥನೆಗೆ ಸೀಮಿತವಾಗಿಲ್ಲ. ಇದು ಎಲ್ಲರೊಂದಿಗೆ
ತೆರೆದುಕೊಳ್ಳುವ ಕೇಂದ್ರವಾಗಿದೆ. ಇಸ್ಲಾಮ್ ಭಾರತದಲ್ಲಿ 1400 ವರ್ಷಗಳಿಂದ ಇಲ್ಲಿನ ಜನಜೀವನ ಭಾಗವಾಗಿರುವುದರಿಂದ ಆಝಾನ್, ನಮಾಝ್, ಉಪವಾಸ ವ್ರತ ಹಾಗೂ ಇತರ ನಂಬಿಕೆಗಳು ಕೂಡ ಭಾರತೀಯ ಬಹುಸಂಸ್ಕೃತಿಯ ಭಾಗವಾಗಿದೆ ಎಂದು ಹೇಳಿದರು.

ಮಸೀದಿ ಸಂದರ್ಶನದಲ್ಲಿ ಏರ್ಪಡಿಸಲಾದ ಸಾಂಸ್ಕೃತಿಕ ಪ್ರತೀಕಗಳಾದ ಮೆಹೆಂದಿ ಮತ್ತು ಕ್ಯಾಲಿಗ್ರಫಿ ಕೌಂಟರ್‌ಗಳು ಈ ಸಂದರ್ಭದಲ್ಲಿ ನೆರೆದವರ ಗಮನ ಸೆಳೆದವು.

ಹಿರಿಯ ಚಿಂತಕ ಪ್ರೊ.ಫಣಿರಾಜ್, ಉಡುಪಿ ಜಂಗಮ ಮಠದ ಯು.ಸಿ. ನಿರಂಜನ್, ಜಮಾಅತೆ ಇಸ್ಲಾಮೀ ಹಿಂದ್‌ನ ಅಬ್ದುಸ್ಸಲಾಂ ಉಪ್ಪಿನಂಗಡಿ, ಸಮಿತಿ ಉಪಾಧ್ಯಕ್ಷರಾದ ಯು.ಎಸ್.ವಾಹಿದ್, ವಿ.ಎಸ್.ಉಮರ್‌, ನಗರಸಭೆ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಮಾಜಿ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ, ಮಸೀದಿ ಅಧ್ಯಕ್ಷ ಅರ್ಷದ್ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ಬೆಳಗಿನಿಂದ ಸಂಜೆಯ ತನಕ ನಡೆದ ಕಾರ್ಯಕ್ರಮದಲ್ಲಿ ಸರ್ವ ಧರ್ಮೀಯ ಮಹಿಳೆಯರು, ಮಕ್ಕಳು, ವೃದ್ಧರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಉಪನ್ಯಾಸಕರು, ಪತ್ರಕರ್ತರು ಆಗಮಿಸಿ ಮಸೀದಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಅರಿತು ಕೊಂಡರು.