ಬಾಲಕಿಯ ಹೊಟ್ಟೆಯಿಂದ 2 ಕೆಜಿ ಕೂದಲಿನ ಗಡ್ಡೆ ಹೊರತೆಗೆದ ವೈದ್ಯರು

0
649

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಪ್ರದೇಶದಲ್ಲಿ ಬಾಲಕಿಯೊಬ್ಬಳ ಹೊಟ್ಟೆಯಿಂದ ವೈದ್ಯರು ಶಸ್ತ್ರಕ್ರಿಯೆ ನಡೆಸಿ ಎರಡು ಕೆಜಿಗಿಂತಲೂ ಹೆಚ್ಚು ತೂಕದ ಕೂದಲನ್ನು ಹೊರತೆಗೆದಿದ್ದಾರೆ. ಲಕ್ನೊದ ಬಲರಾಮಪುರದಲ್ಲಿ ಘಟನೆ ನಡೆದಿದೆ. ಎರಡು ವರ್ಷದಿಂದ ಬಾಲಕಿ ಆಯಾಸ ಮತ್ತು ನಿತ್ರಾಣಗೊಂಡಿದ್ದಳು. ಅಲ್ಲದೆ ದೇಹ ಭಾರವು ಕ್ರಮಾತೀವಾಗಿ ಕಡಿಮೆಯಾಗಿತ್ತು ಆಹಾರ ಸೇವಿಸಲು ಕಷ್ಟಪಡುತ್ತಿದ್ದಳು. ಜೊತೆಗೆ ಕೂದಲು ಉದುರುವ ಸಮಸ್ಯೆಯಿಂದಲು ಬಳಲುತ್ತಿದ್ದಳು.

ಹತ್ತು ದಿವಸದ ಹಿಂದೆ ಬಾಲಕಿಗೆ ಹೊಟ್ಟೆನೋವು, ವಾಂತಿ ಆರಂಭವಾಯಿತು. ಇದರೊಂದಿಗೆ ಬಲರಾಮಪುರದ ಆಸ್ಪತ್ರೆಗೆ ಕರೆತರಲಾಯಿತು. ಸರ್ಜನ್ ಡಾ.ಎಸ್‌.ಆರ್.ಸಂದಾರ್ ನೇತೃತ್ವದಲ್ಲಿ ಬಾಲಕಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ಆಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಬಾಲಕಿಯ ಹೊಟ್ಟೆಯೊಳಗೆ ಕೂದಲು ಇರುವುದು ಕಂಡು ಬಂದಿದ್ದು, ನಂತರ ಸಿಟಿ ಸ್ಕ್ಯಾನಿಂಗ್‌ನಲ್ಲಿ ಕೂದಲಿನ ಗಡ್ಡೆ ಇರುವುದು ಸ್ಪಷ್ಟವಾಗಿತ್ತು.

ಶಸ್ತ್ರಚಿಕಿತ್ಸೆಗೊಳಗಾದ 17 ವರ್ಷದ ಬಾಲಕಿಯು ಅಪರೂಪದ ಟ್ರೈಕೊಬೆಜೋವರ್ ಕಾಯಿಲೆಯಿಂದ ಬಳಲುತ್ತಿದ್ದಳು, ಇದರಲ್ಲಿ ರೋಗಿಯು ತಮ್ಮ ಕೂದಲನ್ನು ತಾವೇ ಕಿತ್ತು ತಿನ್ನುತ್ತಾರೆ.

ರೋಗಿಯ ಹೊಟ್ಟೆಯಲ್ಲಿ ಕೂದಲಿನ ಗಡ್ಡೆಯಿತ್ತು. ಮಾನವನ ಜೀರ್ಣಾಂಗ ವ್ಯವಸ್ಥೆಯಿಂದಾಗಿ, ಕೂದಲು ಜೀರ್ಣವಾಗುವುದಿಲ್ಲ, ಇದರಿಂದಾಗಿ ಹೊಟ್ಟೆಯಲ್ಲಿ ಶೇಖರಣೆಯಾಗಲು ಪ್ರಾರಂಭವಾಗಿ ಗಡ್ಡೆಯ ರೂಪತಾಳುತ್ತದೆ. ಇದಕ್ಕೆ ಚಿಕಿತ್ಸೆ ನೀಡುವ ಏಕೈಕ ಮಾರ್ಗವೆಂದರೆ ಶಸ್ತ್ರಚಿಕಿತ್ಸೆ ಎಂಬುದಾಗಿ ವೈದ್ಯರು ಹೇಳುತ್ತಾರೆ.