✍️ ಅಬ್ದುಲ್ ಅಝೀಝ್ ಉದ್ಯಾವರ
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಗುರುತಿಸಿಕೊಂಡಿರುವ ಅಮೆರಿಕದ ಇತ್ತೀಚಿನ ಚುನಾವಣಾ ಫಲಿತಾಂಶಗಳು ಹಲವು ರಾಜಕೀಯ ಪಾಠಗಳನ್ನು ನೀಡಿವೆ. ಅದರಲ್ಲೂ ವಿಶೇಷವಾಗಿ, ಧಾರ್ಮಿಕ ದ್ವೇಷ ಮತ್ತು ಇಸ್ಲಾಮೋಫೋಬಿಯಾಗಳು ರಾಜಕೀಯ ಪ್ರಚಾರದ ಪ್ರಮುಖ ಅಸ್ತ್ರಗಳಾಗಿದ್ದ ಸಂದರ್ಭದಲ್ಲಿಯೇ ಮುಸ್ಲಿಂ ಅಭ್ಯರ್ಥಿಯೊಬ್ಬರು ಐತಿಹಾಸಿಕ ಗೆಲುವು ಸಾಧಿಸಿರುವುದು ಜಗತ್ತಿನಾದ್ಯಂತ ಇರುವ ಅಲ್ಪಸಂಖ್ಯಾತರು, ದಲಿತರು ಮತ್ತು ಮುಸ್ಲಿಮರು ಮಾತ್ರವಲ್ಲದೆ, ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆಯಿಟ್ಟಿರುವ ಎಲ್ಲರೂ ಗಮನಿಸಬೇಕಾದ ಪ್ರಮುಖ ಸಂಗತಿಯಾಗಿದೆ.
ಮಿಷಿಗನ್ನ ಅಬ್ದುಲ್ ಎಲ್-ಸಯ್ಯದ್ ಅವರು ಸೆನೆಟ್ಗೆ ಆಯ್ಕೆಯಾದ ಅಮೆರಿಕದ ಮೊದಲ ಮುಸ್ಲಿಂ ನಾಯಕರಾಗಿದ್ದಾರೆ. ಅವರ ಧಾರ್ಮಿಕ ಗುರುತನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು, ಅವರನ್ನು ಭಯೋತ್ಪಾದನೆಯೊಂದಿಗೆ ತಳುಕು ಹಾಕುವ ವ್ಯವಸ್ಥಿತ ಪ್ರಯತ್ನಗಳು ನಡೆದಿದ್ದವು. ಆದರೆ ಮತದಾರರು ಧಾರ್ಮಿಕ ದ್ವೇಷದ ರಾಜಕಾರಣಕ್ಕಿಂತ ಜನಜೀವನದ ನೈಜ ಸಮಸ್ಯೆಗಳಾದ ಆರೋಗ್ಯ, ಆರ್ಥಿಕತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಮುಸ್ಲಿಂ ನಾಯಕರು ಅಮೆರಿಕ ಕಾಂಗ್ರೆಸ್ಗೆ ಆಯ್ಕೆಯಾಗುತ್ತಿರುವುದು ಕೇವಲ ಒಂದು ಸಮುದಾಯದ ಅಭ್ಯರ್ಥಿಯ ಗೆಲುವಲ್ಲ; ಆ ಗೆಲುವಿನ ಹಿಂದಿರುವ ರಾಜಕೀಯ ಪ್ರಜ್ಞೆ, ಸಂಘಟನಾ ಶಕ್ತಿ, ಜನಸಂಪರ್ಕ ಹಾಗೂ ವಿವಿಧ ಸಮುದಾಯಗಳ ಬೆಂಬಲವನ್ನು ಗಳಿಸುವ ಸಾಮರ್ಥ್ಯದ ಪ್ರತೀಕವಾಗಿದೆ. ಭಾರತದಲ್ಲಿ ಅಲ್ಪಸಂಖ್ಯಾತರು, ದಲಿತರು, ಮುಸ್ಲಿಮರು ಮತ್ತು ದಮನಿತ ಸಮುದಾಯಗಳು ಹಲವು ದಶಕಗಳಿಂದ ವಿವಿಧ ರೀತಿಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ. ಕೋಮುವಾದಿ ಪ್ರಚಾರ, ಧಾರ್ಮಿಕ ಧ್ರುವೀಕರಣ, ದ್ವೇಷ ಭಾಷಣ, ತಾರತಮ್ಯ ಮತ್ತು ನಾಗರಿಕ ಹಕ್ಕುಗಳ ಕುರಿತ ಆತಂಕಗಳು ಸಮುದಾಯಗಳ ಮುಂದಿರುವ ಗಂಭೀರ ಪ್ರಶ್ನೆಗಳಾಗಿವೆ.
ಆದರೆ ಇಂತಹ ಸವಾಲುಗಳನ್ನು ಎದುರಿಸಲು ಕೇವಲ ಸಮುದಾಯದ ನೋವು, ಆಕ್ರೋಶ ಮತ್ತು ಪ್ರತಿಭಟನೆಗಳಷ್ಟೇ ಸಾಕಾಗುವುದಿಲ್ಲ. ಹೋರಾಟಕ್ಕೆ ಸಮಾಜದ ವಿವಿಧ ಸಮುದಾಯಗಳ ವಿಶ್ವಾಸ ಹಾಗೂ ಬೆಂಬಲವೂ ಅತ್ಯಗತ್ಯ. ಸ್ವ-ಸಮುದಾಯದ ಮೇಲೆ ದೌರ್ಜನ್ಯ ಮತ್ತು ಅನ್ಯಾಯ ನಡೆದಾಗ ಪ್ರತಿಭಟಿಸುವಷ್ಟೇ ಪ್ರಾಮಾಣಿಕತೆಯಿಂದ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಕಾರ್ಮಿಕರು, ಮಹಿಳೆಯರು ಹಾಗೂ ಇತರ ಅಂಚಿನಲ್ಲಿರುವ ಸಮುದಾಯಗಳ ಮೇಲೆ ಅನ್ಯಾಯ ನಡೆದಾಗಲೂ ಅವರ ಪರವಾಗಿ ನಿಲ್ಲಬೇಕಿದೆ. ಇಲ್ಲವಾದಲ್ಲಿ, ಆ ಹೋರಾಟವು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತಗೊಂಡು, ಅದಕ್ಕೆ ಸಿಗುವ ಬೆಂಬಲವೂ ಕಡಿಮೆಯಾಗುತ್ತದೆ. ಅದೇ ಹೋರಾಟವು ಸಂವಿಧಾನ, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಮಾನವ ಘನತೆಯ ರಕ್ಷಣೆಯ ಹೋರಾಟವಾದರೆ, ಧರ್ಮ, ಜಾತಿ ಮತ್ತು ಭಾಷೆಯ ಗಡಿಗಳನ್ನು ಮೀರಿ ದೊಡ್ಡಮಟ್ಟದ ಸಾರ್ವಜನಿಕ ಬೆಂಬಲ ದೊರೆಯುತ್ತದೆ. ಇದಕ್ಕೆ ಅಮೆರಿಕದಲ್ಲಿ ನಡೆದ ಚುನಾವಣೆಯೇ ಅತ್ಯುತ್ತಮ ಉದಾಹರಣೆ.
ಸಮುದಾಯಗಳ ಒಳಗೆ ರಾಜಕೀಯ, ಧಾರ್ಮಿಕ, ಸಂಘಟನಾತ್ಮಕ ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ಸಾಂವಿಧಾನಿಕ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು ಎದುರಾದಾಗ ಕನಿಷ್ಠ ಸಾಮಾನ್ಯ ವಿಚಾರಗಳಲ್ಲಿ ಒಗ್ಗಟ್ಟಿನಿಂದ ನಿಲ್ಲುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಹೋರಾಟಗಳು ನ್ಯಾಯಕ್ಕಾಗಿ ಹೋರಾಡುವ ಎಲ್ಲರನ್ನೂ ಬೆಸೆಯುವ ಸೇತುವೆಯಾಗಬೇಕು. ಇದಕ್ಕಾಗಿ ಸಂಘಟನಾ ಶಕ್ತಿ, ರಾಜಕೀಯ ಪ್ರಜ್ಞೆ, ಶಿಕ್ಷಣ, ಆರ್ಥಿಕ ಸಬಲೀಕರಣ, ಸಾಮಾಜಿಕ ಸೇವೆ ಮತ್ತು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ. ನಮ್ಮ ರಾಜಕೀಯ ನಾಯಕತ್ವವು ಜನರ ದೈನಂದಿನ ಸಮಸ್ಯೆಗಳೊಂದಿಗೆ ನಿರಂತರವಾಗಿ ಬೆಸೆದುಕೊಂಡಿರಬೇಕು.
ನ್ಯಾಯ ಮತ್ತು ಬಹುತ್ವದ ಪರವಾಗಿ ವಿಶಾಲವಾದ ಸಾಮಾಜಿಕ ಒಕ್ಕೂಟವನ್ನು ನಿರ್ಮಿಸುವುದೇ ಇಂದಿನ ಕೋಮುವಾದಿ ರಾಜಕಾರಣವನ್ನು ಎದುರಿಸುವ ಅತ್ಯಂತ ಪರಿಣಾಮಕಾರಿ ಮಾರ್ಗ. ಒಂದು ಸಮುದಾಯದ ಹಕ್ಕುಗಳಿಗಾಗಿ ಮತ್ತೊಂದು ಸಮುದಾಯದ ಜನರು ಧ್ವನಿ ಎತ್ತುವಂತಹ ಸೌಹಾರ್ದಯುತ ವಾತಾವರಣವನ್ನು ನಾವು ಸೃಷ್ಟಿಸಬೇಕು.
ನಮ್ಮ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಮತ್ತು ರಾಜಕೀಯ ವೇದಿಕೆಗಳು ಕೇವಲ ಆಂತರಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಸುತ್ತಮುತ್ತಲಿನ ಸಮಾಜದ ನೈಜ ಸಮಸ್ಯೆಗಳಿಗೂ ಸ್ಪಂದಿಸುವ ಕೇಂದ್ರಗಳಾಗಬೇಕು.
ಅಮೆರಿಕದ ಚುನಾವಣೆಯ ಮತ್ತೊಂದು ಪ್ರಮುಖ ಸಂದೇಶವೆಂದರೆ, ಧಾರ್ಮಿಕ ಗುರುತನ್ನು ಗುರಿಯಾಗಿಸಿಕೊಂಡು ನಡೆಸುವ ದ್ವೇಷದ ಪ್ರಚಾರವನ್ನು ಎದುರಿಸಲು ಬರಿ ಭಾವನಾತ್ಮಕ ಪ್ರತಿಕ್ರಿಯೆ ಸಾಲದು. ಜನರ ನೈಜ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಪರಿಹಾರ ಸೂಚಿಸುವ ಪ್ರಬುದ್ಧ ರಾಜಕೀಯ ಮತ್ತು ಸಾಮಾಜಿಕ ನಾಯಕತ್ವ ಅತ್ಯಗತ್ಯ. ಸಮುದಾಯಗಳು ಸದಾ ತಮ್ಮನ್ನು ‘ಅನ್ಯಾಯಕ್ಕೆ ಒಳಗಾದ ಸಮುದಾಯ’ ಎಂದು ಮಾತ್ರ ಗುರುತಿಸಿಕೊಳ್ಳುವ ಮನಸ್ಥಿತಿಯಿಂದ ಹೊರಬಂದು, ತಮ್ಮ ಹಕ್ಕುಗಳಿಗಾಗಿ ಹೋರಾಡುವಷ್ಟೇ ಬದ್ಧತೆಯಿಂದ ಇತರರ ಹಕ್ಕುಗಳ ರಕ್ಷಣೆಯಲ್ಲಿಯೂ ಪಾಲ್ಗೊಳ್ಳಬೇಕು.
ಅಮೆರಿಕದ ಚುನಾವಣಾ ಫಲಿತಾಂಶವನ್ನು ಭಾರತೀಯರು ಕೇವಲ ಸಂಭ್ರಮದ ಸುದ್ದಿಯಾಗಿ ನೋಡದೆ, ತಮ್ಮ ರಾಜಕೀಯ ಮತ್ತು ಸಾಮಾಜಿಕ ಭವಿಷ್ಯದ ಕುರಿತು ಗಂಭೀರವಾಗಿ ಚಿಂತಿಸಲು ದೊರೆತ ಒಂದು ಅವಕಾಶವಾಗಿ ಸ್ವೀಕರಿಸಬೇಕು. ಅಂತಹ ವಿಶಾಲ ಮನೋಭಾವವೇ ನಮ್ಮ ನಿಜವಾದ ಶಕ್ತಿ ಮತ್ತು ಭವಿಷ್ಯದ ರಾಜಕೀಯಕ್ಕೆ ದಾರಿದೀಪ!












