ಸನ್ಮಾರ್ಗ ವಾರ್ತೆ
ಟೆಹ್ರಾನ್: ಮಧ್ಯಸ್ಥಿಕೆ ಪ್ರಯತ್ನಗಳಿಂದ ಮೂಡಿದ ಆಸೆಗಳ ನಡುವೆಯೂ, ಅಮೆರಿಕ ಮತ್ತು ಇರಾನ್ ತಮ್ಮ ನಿಲುವನ್ನು ಕಠಿಣಗೊಳಿಸಿವೆ. ಇರಾನ್ ಜೊತೆ ಯಾವುದೇ ಮಾತುಕತೆ ಇಲ್ಲ ಎಂಬುದನ್ನು ಅಮೆರಿಕ ಸ್ಪಷ್ಟಪಡಿಸಿದೆ. ಇರಾನ್ ಮೇಲಿನ ನಿರ್ಬಂಧಗಳಿಂದ ಹಿಂದೆ ಸರಿಯುವುದಿಲ್ಲ ಮತ್ತು ಉಳಿದಿರುವ ಎಲ್ಲಾ ಆರ್ಥಿಕ ಸಂಪನ್ಮೂಲಗಳನ್ನು ಕಡಿತಗೊಳಿಸುವ ಮೂಲಕ ಇರಾನ್ ಸರ್ಕಾರದ ಬೆದರಿಕೆಯನ್ನು ದಮನ ಮಾಡುವುದಾಗಿ ಅದು ಎಚ್ಚರಿಸಿದೆ.
ಈ ಮಧ್ಯೆ, ಹಾರ್ಮುಝ್ ಜಲಸಂಧಿಯ ಮೂಲಕ ತನ್ನ ಅನುಮತಿಯಿಲ್ಲದೆ ಯಾವುದೇ ಹಡಗು ಹಾದುಹೋಗುವುದಿಲ್ಲ ಎಂದು ಐಆರ್ಜಿಸಿ ಎಚ್ಚರಿಕೆ ನೀಡಿದೆ. ಇರಾನ್ನಿನ ಬ್ಯಾಂಕ್ ಮೆಲ್ಲಿಯೊಂದಿಗೆ ನಂಟಿದೆ ಎಂದು ಆರೋಪಿಸಿ ಒಬ್ಬ ವ್ಯಕ್ತಿ ಮತ್ತು ಹಾಂಕಾಂಗ್ ಮೂಲದ ಕಂಪನಿಯ ಮೇಲೆ ಅಮೆರಿಕ ಹೊಸ ನಿರ್ಬಂಧಗಳನ್ನು ವಿಧಿಸಿದೆ. ಅಮೆರಿಕದ ನಿರ್ಬಂಧಗಳೊಂದಿಗೆ ಸಹಕರಿಸಿದರೆ ನೆರೆಯ ದೇಶಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ. ಶಾಂತಿ ಪ್ರಕ್ರಿಯೆಗೆ ಭಂಗ ತರಲು ಇಸ್ರೇಲ್ ದಕ್ಷಿಣ ಲೆಬನಾನ್ನಲ್ಲಿ ತನ್ನ ದಾಳಿಯನ್ನು ಮುಂದುವರೆಸಿದೆ.
ಇರಾನ್ ವಿರುದ್ಧದ ಯುದ್ಧವು ಮುಂದುವರೆದಂತೆ, ಮಧ್ಯಪ್ರಾಚ್ಯದಾದ್ಯಂತ ಅಮೆರಿಕದ ಸೇನಾ ಉಪಸ್ಥಿತಿಯು ಗಣನೀಯವಾಗಿ ಹೆಚ್ಚಿಸಲ್ಪಟ್ಟಿದೆ. ಪ್ರಸ್ತುತ ಈ ಪ್ರದೇಶದಲ್ಲಿ ಸುಮಾರು ಐದು ಲಕ್ಷ ಸೈನಿಕರನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ, ಪೆಸಿಫಿಕ್ನಲ್ಲಿ ಲಭ್ಯವಿದ್ದ ಅಮೆರಿಕದ ಮೂರು ಪ್ರಮುಖ ವಿಮಾನವಾಹಕ ನೌಕೆಗಳಲ್ಲಿ ಎರಡನ್ನು ಸ್ಥಳಾಂತರಿಸಲಾಗಿದೆ.
280 ದಿನಗಳಿಗೂ ಹೆಚ್ಚು ಕಾಲ ನಿಯೋಜಿಸಲಾಗಿದ್ದ ಯುಎಸ್ಎಸ್ ಅಬ್ರಹಾಂ ಲಿಂಕನ್ ಅನ್ನು ಮನೆಗೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಏತನ್ಮಧ್ಯೆ, ಆಹಾರದ ಕೊರತೆ ಹಾಗೂ ಅಸಮರ್ಪಕ ಶೌಚಾಲಯಗಳು ಮತ್ತು ಸ್ನಾನಗೃಹಗಳು ಸೇರಿದಂತೆ ನೌಕೆಯಲ್ಲಿ ಸಿಬ್ಬಂದಿಗಳು ಪ್ರಮುಖ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬ ವರದಿಗಳಿವೆ. ತನ್ನ ಶತ್ರುಗಳಿಗೆ ಸಾಕಷ್ಟು ‘ಅಚ್ಚರಿಗಳನ್ನು’ ಹೊಂದಿದೆ ಎಂದು ಇರಾನ್ನ ಹಂಗಾಮಿ ರಕ್ಷಣಾ ಸಚಿವ ಮಜೀದ್ ಇಬ್ನ್ ಅಲ್-ರೆಜಾ ಶುಕ್ರವಾರ ತಸ್ನಿಮ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.












