ಉತ್ತರ ಪ್ರದೇಶ | ಅಝಾನ್ ಶಬ್ದದ ಪ್ರಮಾಣದ ವಿಚಾರಕ್ಕೆ ಮುಸ್ಲಿಂ ಧರ್ಮಗುರು 14 ದಿನಗಳ ನ್ಯಾಯಾಂಗ ಬಂಧನಕ್ಕೆ; ಲೌಡ್‌ಸ್ಪೀಕರ್ ಜಪ್ತಿ

0
277

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಮಸೀದಿಯಿಂದ ಅಝಾನ್‌ ಶಬ್ದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿತ್ತು ಎಂದು ಆರೋಪಿಸಿ ಪೊಲೀಸರು ಲೌಡ್‌ಸ್ಪೀಕರ್ ಜಪ್ತಿ ಮಾಡಿದ ನಂತರ, ಮುಸ್ಲಿಂ ಧರ್ಮಗುರುವೊಬ್ಬರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ನಜೀಬಾಬಾದ್‌ನ ಮಕ್ಬರಾ ಪ್ರದೇಶದ ಮಸೀದಿಯಲ್ಲಿ ಪ್ರಾರ್ಥನೆಗೆ ಕರೆಯುವ ಮುಅಝಿನ್ ಮೊಹಮ್ಮದ್ ಫೈಜಾನ್ ಅವರನ್ನು ಶನಿವಾರ ಬಂಧಿಸಲಾಗಿದೆ. ಸಾರ್ವಜನಿಕ ಕುಂದುಕೊರತೆ ಪರಿಹಾರ ಕಾರ್ಯಕ್ರಮವಾದ ‘ಸಮಾಧಾನ್ ದಿವಸ್’ಗೆ ಪ್ರಯಾಣಿಸುತ್ತಿದ್ದಾಗ ಪೊಲೀಸ್ ಸೂಪರಿಂಟೆಂಡೆಂಟ್ ಕ್ರಿಷನ್ ಕುಮಾರ್ ಬಿಷ್ಣೋಯ್ ಅವರಿಗೆ ಅಝಾನ್ ಕೇಳಿಸಿದ ನಂತರ ಈ ಬಂಧನ ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆಯು ಮಧ್ಯಾಹ್ನ 12:40 ರ ಸುಮಾರಿಗೆ ನಜೀಬಾಬಾದ್‌ನ ಸರ್ಕಾರಿ ಇಂಟರ್ ಕಾಲೇಜು ಬಳಿಯ ನಜೀಬ್-ಉದ್-ದೌಲಾ ಮಸೀದಿಯಲ್ಲಿ ಝುಹ್ರ್(ಮಧ್ಯಾಹ್ನ) ಅಝಾನ್ ನೀಡುತ್ತಿದ್ದಾಗ ನಡೆದಿದೆ.

ರಸ್ತೆಯಲ್ಲಿ ಹೋಗುತ್ತಿದ್ದಾಗ ಪ್ರಾರ್ಥನೆಯ ಕರೆ ಕೇಳಿಸಿದ ನಂತರ ಬಿಷ್ಣೋಯ್ ಅವರು ಮಸೀದಿಯನ್ನು ಪರಿಶೀಲಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿದರು ಎಂದು ವರದಿಯಾಗಿದೆ.

ಪೊಲೀಸರು ಮಸೀದಿಗೆ ಪ್ರವೇಶಿಸಿ, ಅದರ ಶಬ್ದದ ಪ್ರಮಾಣವು ನಿಗದಿತ ಮಿತಿಗಿಂತ ಹೆಚ್ಚಾಗಿದೆ ಎಂದು ಆರೋಪಿಸಿ ಲೌಡ್‌ಸ್ಪೀಕರ್ ಅನ್ನು ಜಪ್ತಿ ಮಾಡಿದರು.

ಸಬ್‌ಇನ್ಸ್‌ಪೆಕ್ಟರ್ ಸೌರಭ್ ಸಿಂಗ್ ನಂತರ ದೂರು ದಾಖಲಿಸಿದರು. ತದನಂತರ ಪೊಲೀಸರು ಫೈಝಾನ್ ಅವರನ್ನು ಬಂಧಿಸಿ ಸಬ್-ಡಿವಿಷನಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಲೌಡ್‌ಸ್ಪೀಕರ್ ಅನ್ನು ಮಸೀದಿಯ ಒಳಗೆ ಬಚ್ಚಿಡಲಾಗಿತ್ತು ಮತ್ತು ಹೊರಗಿನಿಂದ ಕಾಣಿಸುತ್ತಿರಲಿಲ್ಲ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ ಎಂದು ವರದಿಯಾಗಿದೆ. ಜೋರಾದ ಶಬ್ದವು ವೃದ್ಧರು, ಮಕ್ಕಳು ಮತ್ತು ಅಸ್ವಸ್ಥರಿಗೆ ಅಪಾಯವನ್ನುಂಟುಮಾಡಿದೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪ್ರತಿಪಾದಿಸಿದೆ.

ಲೌಡ್‌ಸ್ಪೀಕರ್ ಜಪ್ತಿ ಮಾಡುವ ಮತ್ತು ಧರ್ಮಗುರುಗಳನ್ನು ಬಂಧಿಸುವ ಮೊದಲು ಮಸೀದಿಯಲ್ಲಿ ದಾಖಲಾದ ಡೆಸಿಬಲ್ ಮಟ್ಟವನ್ನು ಪೊಲೀಸರು ನಿರ್ದಿಷ್ಟಪಡಿಸಿಲ್ಲ ಅಥವಾ ಡೆಸಿಬಲ್ ಮೀಟರ್ ಬಳಸಿ ಪೊಲೀಸರು ಔಪಚಾರಿಕ ಶಬ್ದ ಮಾಪನ ಮಾಡಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವಾಗಿದೆ.

ನಜೀಬಾಬಾದ್‌ನ ನಗರ ಕಾಝಿ ಅಫಾನ್-ಉಲ್-ಹಕ್ ಅವರು ಪೊಲೀಸರ ಕ್ರಮವನ್ನು ಟೀಕಿಸಿದ್ದು, ಫೈಝಾನ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವ ಬದಲು ಎಚ್ಚರಿಕೆ ನೀಡಬೇಕಾಗಿತ್ತು ಎಂದು ಹೇಳಿದ್ದಾರೆ.

ಅಮರ್ ಉಜಾಲಾ ವರದಿಯ ಪ್ರಕಾರ, “ಮಸೀದಿಗಳಲ್ಲಿನ ಮುಅಝಿನ್‌ಗಳು ಧಾರ್ಮಿಕ ವ್ಯಕ್ತಿಗಳು. ಈ ತಪ್ಪನ್ನು ಮತ್ತೆ ಮಾಡದಂತೆ ಎಚ್ಚರಿಕೆ ನೀಡಿ ಪೊಲೀಸರು ಅವರನ್ನು ಬಿಡುಗಡೆ ಮಾಡಬೇಕಿತ್ತು” ಎಂದು ಅಫಾನ್-ಉಲ್-ಹಕ್ ಹೇಳಿದ್ದಾರೆ.

ಘಟನೆಯ ನಂತರ, ಲೌಡ್‌ಸ್ಪೀಕರ್ ಬಳಕೆಯನ್ನು ನಿಯಂತ್ರಿಸುವ ನಿಯಮಗಳನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಉಲ್ಲೇಖಿಸಿ ಬೀಟ್‌ ಆಫೀಸರ್ ಲಲಿತ್ ಕುಮಾರ್ ಅವರನ್ನು ಎಸ್‌ಪಿ ಬಿಷ್ಣೋಯ್ ಅಮಾನತುಗೊಳಿಸಿದ್ದಾರೆ.

ಧಾರ್ಮಿಕ ಸ್ಥಳಗಳಲ್ಲಿನ ಲೌಡ್‌ಸ್ಪೀಕರ್‌ಗಳನ್ನು ನಿಗದಿತ ಮಿತಿಗಿಂತ ಹೆಚ್ಚಾಗಿ ಬಳಸಲು ಅನುಮತಿಸುವುದಿಲ್ಲ ಎಂದು ಬಿಷ್ಣೋಯ್ ಹೇಳಿದ್ದಾರೆ.

ಧಾರ್ಮಿಕ ಮುಖಂಡರಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ತಮ್ಮ ತಮ್ಮ ಪ್ರದೇಶಗಳಲ್ಲಿ ಶಬ್ದ ನಿಯಮಗಳ ಪಾಲನೆಯನ್ನು ಖಚಿತಪಡಿಸುವ ಬೀಟ್ ಕಾನ್‌ಸ್ಟೇಬಲ್‌ಗಳಿಂದ ಅಫಿಡವಿಟ್‌ಗಳನ್ನು ಪಡೆಯುವಂತೆ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ಉಲ್ಲಂಘನೆಗಳು ನಡೆದರೆ ಸಂಬಂಧಪಟ್ಟ ಠಾಣಾಧಿಕಾರಿ ಮತ್ತು ಬೀಟ್ ಕಾನ್‌ಸ್ಟೇಬಲ್ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಕಳೆದ ತಿಂಗಳು, ಬಿಜ್ನೋರ್ ಆಡಳಿತವು ಧಾರ್ಮಿಕ ಸ್ಥಳಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನಲಾದ ಲೌಡ್‌ಸ್ಪೀಕರ್‌ಗಳ ವಿರುದ್ಧ ಅಭಿಯಾನವನ್ನು ನಡೆಸಿತ್ತು. ಆ ಸಂದರ್ಭದಲ್ಲಿ ಮಸೀದಿಗಳು, ದೇವಾಲಯಗಳು ಮತ್ತು ಗುರುದ್ವಾರಗಳಿಂದ ಲೌಡ್‌ಸ್ಪೀಕರ್‌ಗಳನ್ನು ತೆರವುಗೊಳಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಜಾರಿಯ ನಡುವೆ ಈ ಘಟನೆ ನಡೆದಿದ್ದು, ಅಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಲೌಡ್‌ಸ್ಪೀಕರ್‌ಗಳ ಬಳಕೆಯು ಪದೇ ಪದೇ ಆಡಳಿತಾತ್ಮಕ ಪರಿಶೀಲನೆಗೆ ಒಳಪಟ್ಟಿದೆ.

2020 ರ ಮೇ ನಲ್ಲಿ, ಅಝಾನ್ ನೀಡುವುದು ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆಯಾದರೂ, ಲೌಡ್‌ಸ್ಪೀಕರ್‌ಗಳ ಮೂಲಕ ಅದನ್ನು ಪ್ರಸಾರ ಮಾಡುವುದು ಆ ಹಕ್ಕಿನ ಅತ್ಯಗತ್ಯ ಭಾಗವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಲಿಖಿತ ಅನುಮತಿಯಿಲ್ಲದೆ ಧಾರ್ಮಿಕ ಸ್ಥಳಗಳಲ್ಲಿ ಲೌಡ್‌ಸ್ಪೀಕರ್ ಮತ್ತು ಪಬ್ಲಿಕ್ ಅಡ್ರೆಸ್ ಸಿಸ್ಟಮ್‌ಗಳನ್ನು ಬಳಸಲಾಗುವುದಿಲ್ಲ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಮಾವಳಿ) ನಿಯಮಗಳು, 2000 ಮತ್ತು 2005 ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ನಿರ್ದಿಷ್ಟ ವಿನಾಯಿತಿಗಳಿಗೆ ಒಳಪಟ್ಟು, ರಾತ್ರಿ 10 ರಿಂದ ಬೆಳಿಗ್ಗೆ 6 ರ ನಡುವೆ ಲೌಡ್‌ಸ್ಪೀಕರ್‌ಗಳು ಮತ್ತು ಪಬ್ಲಿಕ್ ಅಡ್ರೆಸ್ ಸಿಸ್ಟಮ್‌ಗಳ ಬಳಕೆಯನ್ನು ಸಾಮಾನ್ಯವಾಗಿ ನಿಷೇಧಿಸಲಾಗಿದೆ. ವಸತಿ ಪ್ರದೇಶಗಳಿಗೆ ನಿಗದಿಪಡಿಸಿದ ಶಬ್ದದ ಮಿತಿಯು ಹಗಲಿನಲ್ಲಿ 55 ಡೆಸಿಬಲ್ ಮತ್ತು ರಾತ್ರಿ 45 ಡೆಸಿಬಲ್ ಆಗಿದೆ.

2022 ರಲ್ಲಿ, ಉತ್ತರ ಪ್ರದೇಶ ಪೊಲೀಸರು ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳಿಂದ 53,942 ಅನಧಿಕೃತ ಲೌಡ್‌ಸ್ಪೀಕರ್‌ಗಳನ್ನು ತೆರವುಗೊಳಿಸಲಾಗಿದೆ ಮತ್ತು ಇನ್ನಿತರ 60,200 ಲೌಡ್‌ಸ್ಪೀಕರ್‌ಗಳ ಶಬ್ದದ ಪ್ರಮಾಣವನ್ನು ನಿಗದಿತ ಮಿತಿಗೆ ತರಲು ಹೊಂದಾಣಿಕೆ ಮಾಡಲಾಗಿದೆ ಎಂದು ಹೇಳಿದ್ದರು.