ಮೇಲ್ಜಾತಿಯ ಮಹಿಳೆ ತಯಾರಿಸಿದ ಆಹಾರ ಸೇವಿಸುವುದಿಲ್ಲ ಎಂದ ದಲಿತ ವಿದ್ಯಾರ್ಥಿಗಳು: ಚಂಪಾವತ್‌ನ ಅಸ್ಪೃಶ್ಯತಾ ವಿವಾದಕ್ಕೆ ಮತ್ತೊಂದು ತಿರುವು

0
477

ಸನ್ಮಾರ್ಗ ವಾರ್ತೆ

ಚಂಪಾವತ್: ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಸುಖಿಧಾಂಗ್ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಲ್ಲಿ ಅಸ್ಪೃಶ್ಯತೆಯ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶಾಲೆಯ ಮೇಲ್ಜಾತಿ ವಿದ್ಯಾರ್ಥಿಗಳು ದಲಿತ ಅಡುಗೆಯವರು ತಯಾರಿಸಿದ ಆಹಾರವನ್ನು ತಿನ್ನಲು ನಿರಾಕರಿಸಿದ್ದ ಘಟನೆ ನಡೆದ ಬೆನ್ನಲ್ಲೇ, ಶಾಲೆಯ ದಲಿತ ವಿದ್ಯಾರ್ಥಿಗಳು ಮೇಲ್ಜಾತಿಯ ಅಡುಗೆಯವರು ತಯಾರಿಸಿದ ಆಹಾರವನ್ನು ತಿನ್ನಲು ನಿರಾಕರಿಸಿದ್ದಾರೆ. ಶಾಲೆಯ ಪ್ರಾಂಶುಪಾಲ ಪ್ರೇಮ್ ಸಿಂಗ್ ಶಿಕ್ಷಣ ಇಲಾಖೆಗೆ ಬರೆದಿರುವ ಪತ್ರದಲ್ಲಿ ಈ ವಿಷಯ ಬಹಿರಂಗ ಪಡಿಸಿದ್ದಾರೆ.

ದಲಿತ ಅಡುಗೆಯವರು ಮಾಡುವ ಅಡುಗೆಯನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ದ್ವೇಷಿಸಿದರೆ ಅವರೂ ಸಾಮಾನ್ಯ ವರ್ಗದ ಅಡುಗೆಯವರು ಮಾಡಿದ ಅಡುಗೆಯನ್ನು ತಿನ್ನುವುದಿಲ್ಲ ಎಂಬಂತಹ ಚರ್ಚೆ ಮಕ್ಕಳಲ್ಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಇದೀಗ ದಲಿತ ವಿದ್ಯಾರ್ಥಿಗಳು ಊಟಕ್ಕೆ ತಮ್ಮ ಮನೆಯಿಂದ ಊಟ ತರುತ್ತಾರೆ. ಈ ವಿಷಯ ಬೆಳಕಿಗೆ ಬಂದ ನಂತರ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕುಮಾವೂನ್ ಡಿಐಜಿ ನೀಲೇಶ್ ಆನಂದ್ ಭರನ್ ಅವರನ್ನು ಶಾಲೆಗೆ ಭೇಟಿ ನೀಡಿ ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.