ಸಹ- ಶಿಕ್ಷಕರನ್ನು ನಿಯಂತ್ರಿಸಲು ತಲವಾರಿ‌ನೊಂದಿಗೆ ಶಾಲೆಗೆ ಬಂದ ಹೆಡ್‍ಮಾಸ್ಟರ್: ವಿಡಿಯೋ ವೈರಲ್

0
293

ಸನ್ಮಾರ್ಗ ವಾರ್ತೆ

ಅಸ್ಸಾಂ: ಶಾಲಾ ಮಕ್ಕಳನ್ನು ಬೆದರಿಸಲು ಬೆತ್ತ ಹಿಡಿದು ಅಧ್ಯಾಪಕರು ತರಗತಿ ಕೋಣೆಗೆ ಬರುವುದು ಮಾಮುಲು. ಆದರೆ, ಶಿಕ್ಷಕರನ್ನು ನಿಯಂತ್ರಿಸುವ ಸಲುವಾಗಿ ಹೆಡ್‍ಮಾಸ್ಟರ್ ಒಬ್ಬರು ರೌಡಿಗಳಂತೆ ಕುತ್ತಿಗೆಯಲ್ಲಿ ಚೈನ್ ಧರಿಸಿ,  ತಲವಾರು ಹಿಡಿದು ಕೊಂಡು ಶಾಲೆಗೆ ಬಂದಿರುವ ವಿಚಿತ್ರ ಘಟನೆ ಅಸ್ಸಾಮಿನ ಕಚರ್ ಜಿಲ್ಲೆಯಲ್ಲಿ ನಡೆದಿದೆ. ಸಿಲ್ಚಾರ್‌ ಪ್ರದೇಶದ ತಾರಾಪುರ ನಿವಾಸಿಯಾದ 38ವರ್ಷದ ಧೃತಿ ಮೇಧ ದಾಸ್ ತಲವಾರು ಹಿಡಿದುಕೊಂಡು ಶಾಲೆಗೆ ಬಂದವರು. ರಾಧಾಮಾಧಾಮ್ ಬುನಿಯಾಡಿ ಶಾಲೆಯಲ್ಲಿ ಹನ್ನೊಂದು ವರ್ಷಗಳಿಂದ ದಾಸ್ ಮುಖ್ಯ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಧೃತಿ ಮೇಧ ದಾಸ್ ತಲವಾರಿನೊಂದಿಗೆ ಬಂದಿದ್ದಾರೆ ಎಂದು ಪೊಲೀಸರಿಗೆ ಯಾರೋ ಫೋನ್ ಮಾಡಿಸಿದ್ದರಿಂದ ಅಲ್ಲಿಗೆ ಪೊಲೀಸರು ಆಗಮಿಸಿದ್ದರು. ಸಹ-ಶಿಕ್ಷಕರ ಅನುಚಿತ ವರ್ತನೆಯು ಕೋಪ ಹಾಗೂ ಹತಾಷೆಗೆ ಕಾರಣವಾಯಿತು. ಆದುದರಿಂದ ಅವರನ್ನು ಹೆದರಿಸಿ ನಿಯಂತ್ರಿಸಲಿಕ್ಕಾಗಿ ತಲುವಾರು ತಂದಿದ್ದೆ ಎಂದು ಧೃತಿ ಮೇಧ ದಾಸ್ ಪೊಲೀಸರಿಗೆ ತಿಳಿಸಿದ್ದಾರೆ.

ತಲವಾರು ಹಿಡಿದು ಶಾಲೆಯ ವರಾಂಡದಲ್ಲಿ ನಡೆದಾಡುವ ಹೆಡ್‍ಮಾಸ್ಟರ್‌ರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು ಶಿಕ್ಷಣ ಇಲಾಖೆ ಹೆಡ್‍ಮಾಸ್ಟರ್‌ರನ್ನು ಅಮಾನುತುಗೊಳಿಸಿದೆ. ಅಮಾನತುಗೊಳಿಸಿದ್ದರೂ ಅವರ ವಿರುದ್ಧ ಸಹ -ಶಿಕ್ಷಕರಾಗಲಿ, ಶಾಲಾ ಆಡಳಿತಾಧಿಕಾರಿಗಳಾಗಲಿ ದೂರು ನೀಡದ ಕಾರಣದಿಂದಾಗಿ ಪೊಲೀಸರು ಅವರನ್ನು ಬಂಧಿಸಿಲ್ಲ.