“ಸಮಾಜದ ಬದಲಾವಣೆಯಲ್ಲಿ ಧರ್ಮದ ಆದೇಶಗಳು ಮಹತ್ವದ ಪಾತ್ರ ವಹಿಸುತ್ತವೆ”: ಡಾ|ಜೆ.ಸೋಮಣ್ಣ

0
48

ಸನ್ಮಾರ್ಗ ವಾರ್ತೆ

ವಿರಾಜಪೇಟೆ: “ಸಮಾಜದಲ್ಲಿ ಬದಲಾವಣೆ ತರುವಲ್ಲಿ ಸರಕಾರದ ಕಾನೂನುಗಳಿಗಿಂತ ಧರ್ಮದ ಅದೇಶಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ” ಎಂದು ಹಿರಿಯ ಚಿಂತಕರೂ ನಿವೃತ್ತ ಪ್ರಾಂಶುಪಾಲರೂ ಡಾ||.ಜೆ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.

ಅವರು ಜಮಾಅತೆ ಇಸ್ಲಾಮೀ ಹಿಂದ್ ವಿರಾಜಪೇಟೆ ಸ್ಥಾನೀಯ ಶಾಖೆ ಸೀರತುನ್ನಬಿ ಪ್ರಯುಕ್ತ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ” ಎಂಬ ವಿಷಯದಲ್ಲಿ ಏರ್ಪಡಿಸಿದ್ದ ಗಣ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

“ಆಧ್ಯಾತ್ಮಿಕತೆಯ ಮೂಲಕ ಲೌಕಿಕ ಬದುಕನ್ನು ಸಂಸ್ಕರಿಸುವ ವಿಧಾನವನ್ನು ಪ್ರವಾದಿ ಮುಹಮ್ಮದ್(ಸ)ರವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು . ಇತರ ಹಲವು ಧಾರ್ಮಿಕ ಸುಧಾರಕರುಗಳಿಗೆ ಹೋಲಿಸಿದಲ್ಲಿ ಅವರು ಓರ್ವ ಸಂಸಾರಸ್ಥರಾಗಿದ್ದುಕೊಂಡೇ ಸಮಾಜಕ್ಕೆ ಮಾದರಿಯೋಗ್ಯ ಶಿಕ್ಷಣವನ್ನು ನೀಡಿದರು ಎಂದರು.

ಪ್ರವಾದಿ ಮುಹಮ್ಮದ್(ಸ)ರವರ ಬದುಕು ತೆರೆದಿಟ್ಟ ಪುಸ್ತಕವಾಗಿತ್ತು. ಮಾತ್ರವಲ್ಲ, ಅವರ ಬದುಕಿನ ಎಲ್ಲಾ ಮಜಲುಗಳೂ ಇಂದು ದಾಖಲಿಸಲ್ಪಟ್ಟಿರುವುದು ವಿಶೇಷವಾಗಿದೆ. ಇತರ ಮಹಾಪುರುಷರು ಹಾಗೂ ಸುಧಾರಕರಂತೆ ಅವರು ಬದುಕಿನ ಕೆಲವೇ ಕ್ಷೇತ್ರಗಳನ್ನು ಮಾತ್ರ ಕೈಯಾಡಿಸಲಿಲ್ಲ. ಅವರು ಪ್ರಚಾರಪಡಿಸಿದ ಸಿದ್ದಾಂತಗಳು ಮತ್ತು ಆಶಯಗಳು ಸಮಾಜವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಾಗುವಂತಹದ್ದಾಗಿದೆ. ಬದುಕಿನ ಸಕಲ ಕ್ಷೇತ್ರಗಳಲ್ಲೂ ದೇವನನ್ನು ಪಾಲಕ ಮತ್ತು ಪ್ರಭುವನ್ನಾಗಿ ಅಂಗೀಕರಿಸುವ ಒಂದು ಸಮಾಜವನ್ನು ಅವರು ನಿರ್ಮಿಸಿದರು.” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಜತೆ ಕಾರ್ಯದರ್ಶಿ ರಿಯಾಝ್ ಅಹ್ಮದ್ ರವರು ಮಾತನಾಡುತ್ತಾ-“ಧರ್ಮಗಳ ಮಧ್ಯೆ ಇರುವ ನಿಗೂಢತೆಗಳು ಹೋಗಲಾಡಿಸಬೇಕಾಗಿದೆ. ವಿವಿಧ ಧರ್ಮಗಳ ಮಧ್ಯೆ ಸಮಾಜದಲ್ಲಿ ಸೌಹಾರ್ದ ಸಂವಾದಗಳು ಹೆಚ್ಚಾಗಿ ನಡೆಸುವುದರಿಂದ ಪರಸ್ಪರ ಅರಿವಿನ ವಾತಾವರಣ ನಿರ್ಮಾಗೊಳ್ಳುತ್ತದೆ ಎಂದವರು ಹೇಳಿದರು.

ಇಂದು ಸಮಾಜವೂ ಎದುರಿಸುತ್ತಿರುವ ದ್ವೇಷ, ಹಗೆತನ, ವಿದ್ವೇಷ, ಕೋಮುವಾದಗಳೆಂಬ ರೋಗಗಳಿಗೆ ಇದುವೇ ಪರಿಹಾರ. ಪ್ರವಾದಿ ಮುಹಮ್ಮದರನ್ನು ಮುಸ್ಲಿಮ್ ಸಮಾಜವೂ ಸೇರಿದಂತೆ ಒಟ್ಟು ಸಮಾಜವು ಹೇಗೆ ಅರಿಯಬೇಕೋ ಹಾಗೇ ಅರಿತಿಲ್ಲ ಎಂಬುದು ವಿಷಾದನೀಯ. ವಿಶ್ವಾಸ ಮತ್ತು ವಿಜ್ಞಾನ ಅಭಿವೃದ್ಧಿಯ ಮಂತ್ರಗಳೆಂದು ಕಲಿಸಿದವರು ಪ್ರವಾದಿ ಮುಹಮ್ಮದ್(ಸ)”ಎಂದರು.

ತಿತಿಮತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪಿ.ರಾಜೇಶ್ ಪದ್ಮನಾಭ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸ್ಥಾನೀಯ ಅಧ್ಯಕ್ಷ ಅಬ್ದುರ್ರಹ್ಮಾನ್ ಪಿ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲುಖ್‌ಮಾನ್ ಖಿರಾಅತ್ ಪಠಿಸಿದರು. ಕೆ.ಟಿ.ಬಷೀರ್ ಧನ್ಯವಾದವಿತ್ತರು.