ವಖ್ಫ್ ಮಸೂದೆ: ತಮಿಳುನಾಡಿನಲ್ಲಿ ಬೃಹತ್ ಪ್ರತಿಭಟನೆ

0
72

ಸನ್ಮಾರ್ಗ ವಾರ್ತೆ

ವಖ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ತಮಿಳುನಾಡಿನ ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಬೃಹತ್ ಪ್ರತಿಭಟನೆ ನಡೆಸಿವೆ. ಚೆನ್ನೈಯ ರಾಜರತ್ನಂ ಸ್ಟೇಡಿಯಂನಲ್ಲಿ ಈ ಪ್ರತಿಭಟನೆ ನಡೆದಿದೆ.

ಮನಿದನೆಯೆ ಮಕ್ಕಳ ಕಚ್ಚಿ ಪಕ್ಷದ ಅಧ್ಯಕ್ಷ ಮತ್ತು ಶಾಸಕ ಜವಾಹಿರುಲ್ಲಾ ಈ ಕುರಿತಂತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವಖ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ದೇಶಾದ್ಯಂತ ಪ್ರತಿಕ್ರಿಯೆಯನ್ನು ಕೇಳಿರುವ ಕೇಂದ್ರ ಸರಕಾರದ ನಿರ್ಧಾರವೇ ಅತ್ಯಂತ ಅಸಮರ್ಪಕ ಎಂದವರು ಹೇಳಿದ್ದಾರೆ. ಇದು ಜನರ ತೆರಿಗೆಯ ಲೂಟಿಯಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.

ವಖ್ಫ್ ತಿದ್ದುಪಡಿ ಮಸೂದೆಯೇ ಆ ವಾಸ್ತವಿಕ ಮತ್ತು ಅನಗತ್ಯವಾಗಿರುವಾಗ ಅದರ ಹೆಸರಲ್ಲಿ ಜೆಪಿಸಿಯನ್ನು ರಚಿಸಿರುವುದು ಮತ್ತು ದೇಶದಾದ್ಯಂತ ಜನರಿಂದ ಪ್ರತಿಕ್ರಿಯೆಯನ್ನು ಕೇಳಿರುವುದೇ ಅಸಮರ್ಪಕ ಮತ್ತು ಅತಿರೇಕ ಎಂದವರು ಹೇಳಿದ್ದಾರೆ.

ವಖ್ಫ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುವುದಕ್ಕಾಗಿ ಕೇಂದ್ರ ಸರಕಾರ 31 ಮಂದಿಯ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿಯನ್ನು ರಚಿಸಿದ್ದು ಇದರಲ್ಲಿ 21 ಮಂದಿ ಲೋಕಸಭಾ ಸದಸ್ಯರು ಮತ್ತು 10 ಮಂದಿ ರಾಜ್ಯಸಭಾ ಸದಸ್ಯರು ಇದ್ದಾರೆ.

ಈ ಪ್ರತಿಭಟನಾ ಸಭೆಯಲ್ಲಿ ಮುಸ್ಲಿಂ ಪರ್ಸನಲ್ ಬೋರ್ಡ್ ನ ಅಧ್ಯಕ್ಷ ಖಾಲಿದ್ ಸೈಫುಲ್ಲಾ ರಹಮನಿ, ಡಿಎಂಕೆ ಸಂಸದೆ ಕನಿಮೋಳಿ, ಕಾಂಗ್ರೆಸ್ ಎಂಪಿ ಶಶಿಕಾಂತ್ ಸೆಂಥಿಲ್, ವಿಸಿಕೆ ಅಧ್ಯಕ್ಷ ತಿರುಮಲವನ್ ಮತ್ತು ಇನ್ನಿತರ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ.