ನಮ್ಮದು ಲಂಚ ಮುಕ್ತ ಕಚೇರಿಗಳಾಗಬೇಕು. “ಲಂಚ ಕೊಡಬೇಡಿ, ನೀವೂ ಸ್ವೀಕರಿಸಬೇಡಿ”; ಅಧಿಕಾರಿಗಳಿಗೆ ಶಾಸಕ ಶಿವಗಂಗಾ ತಾಕೀತು

0
286

ಸನ್ಮಾರ್ಗ ವಾರ್ತೆ

ಚನ್ನಗಿರಿ ಕ್ಷೇತ್ರದಲ್ಲಿ ಇನ್ನು ಮುಂದೆ ಪಾರದರ್ಶಕ ಜನಸ್ನೇಹಿ ಆಡಳಿತ ನೀಡಬೇಕೆಂಬುದು ನನ್ನ ಗುರಿಯಾಗಿದೆ. ಯಾವ ಅಧಿಕಾರಿಗಳೂ ಲಂಚ ಕೊಡಬಾರದು, ನೀವು ಲಂಚ ಪಡೆಯದೆ ಜನರ ಕಷ್ಟಗಳಿಗೆ ನೆರವಾಗಿ ಎಂದು ನೂತನ ಶಾಸಕ ಬಸವರಾಜು ವಿ. ಶಿವಗಂಗಾ ಸೂಚನೆ ನೀಡಿದರು.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕಚೇರಿ ಸಭಾಂಗಣದಲ್ಲಿ ಪ್ರಥಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು “ನಾನು ಶಾಸಕನಾಗಿದ್ದೇನೆ ಎಂಬ ಅಹಂಕಾರ ನನಗೆ ಇಲ್ಲ. ಹಿಂದೆ ನೀವು ಹೇಗೆ ಕೆಲಸ ನಿರ್ವಹಿಸಿದ್ದೀರಿ ಎಂಬ ಬಗ್ಗೆ ಕೇಳಲು ಹೋಗುವುದಿಲ್ಲ. ಆದರೆ, ಇನ್ನು ಮುಂದೆ ನಮ್ಮ ಕ್ಷೇತ್ರದ ಕಚೇರಿಗಳು ಲಂಚ ಮುಕ್ತ ಕಚೇರಿಗಳಾಗಬೇಕು” ಎಂದರು.

“ಕಚೇರಿಗಳು ದೇವಾಲಯಗಳಿದ್ದಂತೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಕ್ಷೇತ್ರದ ಪ್ರಗತಿಗೆ ಸಹಕಾರಿಯಾಗುತ್ತದೆ. ನೌಕರರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು. ಇದರಲ್ಲಿ ಲೋಪಗಳಾದರೆ ನಾನು ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.

“ಮೊದಲು ಜನರನ್ನು ಕಚೇರಿಗಳಿಗೆ ಪದೇಪದೆ ಅಲೆದಾಡಿಸುವುದು ಸಾಮಾನ್ಯವಾಗಿತ್ತು. ಇನ್ನು ಮುಂದೆ ಜನರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ. ಇಲ್ಲಿ ನಿಮಗೆ ಕೆಲಸ ಮಾಡಲು ಕಷ್ಟವಾದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು’ ಎಂದು ಸಲಹೆ ನೀಡಿದರು.

“ತಾಲೂಕಿನ ಪ್ರತಿಯೊಂದು ಇಲಾಖೆಯ ಕಚೇರಿಯಲ್ಲೂ ಲಂಚ ತಾಂಡವವಾಡುತ್ತಿದೆ ಎಂದು ಜನರು ದೂರುತ್ತಿದ್ದಾರೆ. ಹೀಗಾಗಿ ಮೊದಲು ಇದನ್ನು ಸರಿಪಡಿಸಿಕೊಳ್ಳಿ. ಆಹಾರ ಪದಾರ್ಥಗಳ ವಿತರಣೆಯಲ್ಲಿ ಕಡಿಮೆ ಕೊಡುವುದು, ಗ್ರಾಹಕರಿಂದ ಹಣ ವಸೂಲಿ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು.” ಎಂದು ಆದೇಶಿಸಿದರು.