ಸನ್ಮಾರ್ಗ ವಾರ್ತೆ–
ಮಂಗಳೂರು:ಆ. 18- ಈ ಬಾರಿಯ ಮಳೆಯಿಂದ ಅತ್ಯಂತ ಹೆಚ್ಚು ಹಾನಿ ಸಂಭವಿಸಿದ ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದು. ಕಳೆದ ವರ್ಷ ಭೂಕುಸಿತವನ್ನು ಕಂಡು ಪ್ರಕೃತಿ ಶಕ್ತಿಯ ಅಗಾಧತೆಯನ್ನು ಕಂಡಿದ್ದ ಕೊಡಗು ಜನತೆ ಈ ಬಾರಿಯೂ ಮತ್ತೆ ತೀವ್ರ ತೊಂದರೆಗೆ ಗುರಿಯಾದರು. ಭೂಕುಸಿತದಿಂದ ತೊಡಗಿ ನೆರೆ ನೀರು ನುಗ್ಗಿ ಬಂದವರೆಗೆ ಕೊಡಗಿನ ಜನರು ವಿಧವಿಧವಾಗಿ ಸಂಕಷ್ಟಕ್ಕೊಳಗಾದರು. ಈ ಹಿನ್ನೆಲೆಯಲ್ಲಿ ಅನೇಕರು ಕೊಡಗಿನ ಪೀಡಿತರ ನೆರವಿಗೆ ಧಾವಿಸಿದ್ದಾರೆ. ಇದೀಗ ವೆಲ್ಫೇರ್ ಪಾರ್ಟಿಯ ಮಂಗಳೂರು ಮತ್ತು ಪುತ್ತೂರು ವಲಯವು ಜಂಟಿಯಾಗಿ ಕೊಡಗಿನ ಸಂತ್ರಸ್ತರಿಗಾಗಿ 1 ಲಕ್ಷ 25 ಸಾವಿರ ರೂಪಾಯಿಯ ಆಹಾರ ವಸ್ತುಗಳನ್ನು ನೀಡುವ ಮೂಲಕ ರಾಜಕೀಯವೆಂದರೆ ಜನಸೇವೆ ಅನ್ನುವ ಮಾತಿಗೆ ಅನ್ವರ್ಥವಾಗಿ ನಡೆದುಕೊಂಡಿದೆ. ಅಲ್ಲದೇ,
ಕೊಡಗಿನಲ್ಲಿ HRS ರಿಲೀಫ್ ಸಂಸ್ಥೆಯೊಂದಿಗೆ ಸೇರಿಕೊಂಡು ವೆಲ್ಫೇರ್ ಪಾರ್ಟಿಯೂ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈ ಆಹಾರ ವಸ್ತುಗಳನ್ನು ಅಲ್ಲಿನ ಕಾರ್ಯಕರ್ತರಿಗೆ ಹಸ್ತಾ0ತರಿಸಲಾಯಿತು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಸಾಲಿಯಾನ್, ಪಕ್ಷದ ಕರಾವಳಿ ವಲಯದ ಕಾರ್ಯದರ್ಶಿ ಸುಲೈಮಾನ್ ಕಲ್ಲರ್ಪೆ, ಉಳ್ಳಾಲ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ಜಲೀಲ್, ಸದಸ್ಯ ಸಿ ಹೆಚ್ ಸಲಾಂ, ಹನೀಫ್ ತಲಪಾಡಿ, ಶ್ರೀಕಾಂತ್ ಕಕ್ಕಿಂಜೆ, ಅಶ್ರಫ್ ಸಿದ್ಧಾಪುರ, ಹನೀಫ್ ಸಿದ್ಧಾಪುರ, ಬಷೀರ್ ಸಿದ್ಧಾಪುರ ಮತ್ತು ಅನ್ಸಾರಿ ವಿರಾಜಪೇಟೆ ಮುಂತಾದವರಿದ್ದರು.












