ಪಶ್ಚಿಮ ಬೆಂಗಾಲ | ಮಾಲ್ಡಾ ಮೆಡಿಕಲ್ ಕಾಲೇಜಿನಲ್ಲಿ ಒಂದು ದಿನದಲ್ಲಿ 10 ನವಜಾತ ಶಿಶುಗಳು ಸಾವು, ಮೂರು ವಾರಗಳಲ್ಲಿ 60 ಸಾವು

0
172

ಸನ್ಮಾರ್ಗ ವಾರ್ತೆ

ಪಶ್ಚಿಮ ಬಂಗಾಳ ಸರ್ಕಾರದ ಮಾಲ್ಡಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸೋಮವಾರದವರೆಗೆ ಕನಿಷ್ಠ 60 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಶುಕ್ರವಾರ ವರದಿ ಮಾಡಿದೆ. ಈ ಸಾವುಗಳಲ್ಲಿ 10 ಸಾವುಗಳು ಸೋಮವಾರ ಒಂದೇ ದಿನ ವರದಿಯಾಗಿವೆ.

ಶಿಶುಗಳ ಸಾವಿಗೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ ವರದಿಯನ್ನು ರಾಜ್ಯ ಸರ್ಕಾರ ಕೋರಿದೆ.

ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಮೊದಲು ಚಿಕಿತ್ಸೆ ನೀಡಿದ್ದ ಜಿಲ್ಲೆಯ ಇತರ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸೋಮವಾರ ಸಾವನ್ನಪ್ಪಿದ 10 ನವಜಾತ ಶಿಶುಗಳಲ್ಲಿ ಎಂಟು ಮಕ್ಕಳು ಜಿಲ್ಲೆಯ ಇತರೆ ಆಸ್ಪತ್ರೆಗಳು ಅಥವಾ ನರ್ಸಿಂಗ್ ಹೋಮ್‌ಗಳಲ್ಲಿ ಜನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿತ್ತು ಎಂದು ಆಸ್ಪತ್ರೆಯ ಅಧೀಕ್ಷಕ ಪ್ರೊಸೆನ್‌ಜಿತ್ ಬಾರ್ ಅವರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸೋಮವಾರದವರೆಗೆ ವರದಿಯಾದ 60 ಸಾವುಗಳಲ್ಲಿ 44 ಮಕ್ಕಳು ಬೇರೆಡೆ ಜನಿಸಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದವು ಎಂದು ಗುರುತಿಸಲಾಗದ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಉಲ್ಲೇಖಿಸಿ ಪತ್ರಿಕೆ ತಿಳಿಸಿದೆ.

ಕೆಲವು ಶಿಶುಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ, ಇನ್ನುಳಿದವು ಕಾಮಾಲೆ ಅಥವಾ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿದ್ದವು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಬುಧವಾರ, ರಾಜ್ಯ ಆರೋಗ್ಯ ಸಚಿವ ಶರ್ದ್ವತ್ ಮುಖೋಪಾಧ್ಯಾಯ ಅವರು ಮಾಲ್ಡಾ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇದು ಏಕೆ ಮತ್ತು ಹೇಗೆ ಸಂಭವಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿವರವಾದ ವರದಿಯನ್ನು ಕೋರಿದ್ದೇವೆ ಎಂದು ಮುಖೋಪಾಧ್ಯಾಯ ಅವರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.