ಬಿಜೆಪಿ ವಶಪಡಿಸಿಕೊಂಡ ಕಚೇರಿಯ ಬಾಗಿಲು ಒಡೆದು ಒಳಪ್ರವೇಶಿಸಿದ ಮಮತಾ ಬ್ಯಾನರ್ಜಿ

0
911

ಕೊಲ್ಕತಾ,ಮೇ 3: ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಪಕ್ಷಾಂತರದ ಬೆನ್ನಿಗೆ ಕಚೇರಿಗಳನ್ನು ವಶಪಡಿಸಿಕೊಳ್ಳಲು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಸ್ಪರ್ಧೆಗೆ ಬಿದ್ದಿತ್ತು. ಉತ್ತರ 24 ಪರಗಣಜಿಲ್ಲೆಯಲ್ಲಿ ಬಿಜೆಪಿ ಕಚೇರಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವಯಂ ವಶಪಡಿಸಿಕೊಂಡು ಗೋಡೆಯಲ್ಲಿ ತೃಣಮೂಲ ಕಾಂಗ್ರೆಸ್‍ನ ಚಿಹ್ನೆಯನ್ನು ಬರೆದಿದ್ದಾರೆ.

ಹೊಸದಾಗಿ ಚುನಾಯಿತರಾದ ಬಿಜೆಪಿ ಸಂಸದ ಅರ್ಜುನ್ ಸಿಂಗ್‍ರ ನೇತೃತ್ವದಲ್ಲಿ ವಶಪಡಿಸಿಕೊಂಡ ಕಚೇರಿಯನ್ನು ನಾವು ಮರು ವಶಪಡಿಸಿಕೊಂಡಿದ್ದೇವೆ ಎಂದು ಕಾರ್ಯಕರ್ತರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಈ ಘಟನೆ ನಡೆದಿತ್ತು. ಉತ್ತರ ಪರಗಣದ ಪರನಗಸ್‌ನ ನೈಹಿತಿಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮಮತಾ ಬ್ಯಾನರ್ಜಿ ಕಚೇರಿಗೆ ಬಂದಿದ್ದಾರೆ. ಕಚೇರಿಯ ಬಾಗಿಲು ಒಡೆದು ಒಳಪ್ರವೇಶಿಸಿದ ಬಳಿಕ ಗೋಡೆಯಲ್ಲಿ ತೃಣಮೂಲ ಕಾಂಗ್ರೆಸ್ ಎಂದು ಬರೆದು ಪಾರ್ಟಿಯ ಚಿಹ್ನೆಯನ್ನು ಬರೆದರು.

ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕರಾಗಿದ್ದ ಅರ್ಜುನ್ ಸಿಂಗ್ ಪಕ್ಷವನ್ನು ತೊರೆದಾಗ ಕಚೇರಿಯನ್ನು ವಶಪಡಿಸಿಕೊಂಡಿದ್ದರು ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಬಾರಕಪುರ ಲೋಕಸಭಾ ಕ್ಷೇತ್ರದಿಂದ ದಿನೇಶ್ ತ್ರಿವೇದಿಯವರನ್ನು ಸೋಲಿಸಿದ ಬಳಿಕ ಅರ್ಜುನ್ ಸಿಂಗ್ ಲೋಕಸಭೆಗೆ ಆಯ್ಕೆ ಆಗಿದ್ದರು. ಲೋಕಸಭಾ ಚುನಾವಣೆಯ ಮೊದಲು ಮತ್ತು ನಂತರ ಕೆಲವು ಶಾಸಕರ ಸಹಿತ ಹಲವು ತೃಣಮೂಲ ಕಾಂಗ್ರೆಸ್ ಜನಪ್ರತಿನಿಧಿಗಳು ಬಿಜೆಪಿ ಸೇರಿದ್ದರು. ಈ ನಾಯಕರ ನೇತೃತ್ವದಲ್ಲಿ ಹಲವು ಕಡೆ ತೃಣಮೂಲ ಕಚೇರಿಯನ್ನು ಬಿಜೆಪಿ ವಶಪಡಿಸಿಕೊಂಡಿತ್ತು.