ಹಮಾಸ್ ದಾಳಿಯ ಬಳಿಕದ ಬದಲಾವಣೆಗಳು ಏನೇನು?

0
263

ಸನ್ಮಾರ್ಗ ವಾರ್ತೆ

✍️ ವಾಇಲ್ ಹಲ್ಲಾಖ್
ಕೊಲಂಬಿಯಾ ವಿವಿ ಪ್ರೊಫೆಸರ್

[ಫೆಲಸ್ತೀನ್ `ಮಹಾ ಇಂತಿಫಾದ’ವು ಅದರ ಭೂ-ರಾಜಕೀಯ ಗಡಿಗಳನ್ನು ದಾಟಿ ಒಂದು ಜಾಗತಿಕ ವಿದ್ಯಮಾನವಾಗಿ ಬೆಳೆದಿದೆಯೆಂದು ಕೊಲಂಬಿಯಾ ವಿಶ್ವವಿದ್ಯಾನಿಲಯದ ಇಸ್ಲಾಮೀ ಅಧ್ಯಯನ ವಿಭಾಗದ ಶಿಕ್ಷಕರಾಗಿರುವ ಪ್ರೊ| ವಾಇಲ್ ಹಲ್ಲಾಖ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಿಫಾದ ಎಂಬುದು ಇಸ್ರೇಲ್‌ನ ವಿರುದ್ಧದ ಪ್ರಾದೇಶಿಕ ಹೋರಾಟವಲ್ಲ; ಅದು ಜಾಗತಿಕ ಹೋರಾಟವಾಗಿ ಬಲಗೊಂಡಿದೆ. ವಾಇಲ್ ಹಲ್ಲಾಖ್‌ರೊಂದಿಗೆ ಅಲ್ ಜಝೀರಾ ಡಾಟ್ ನೆಟ್ ನಡೆಸಿದ ಸಂದರ್ಶನದ ಕೆಲವು ಭಾಗಗಳು ಇಲ್ಲಿದೆ-]

ಪ್ರಶ್ನೆ: ಪೆಲೆಸ್ತೀನ್ ಸಮಸ್ಯೆಯು ಒಂದು ಪ್ರಮುಖ ತಿರುವನ್ನು ಪಡಕೊಂಡಿದೆಯೆಂದು ಹಲವರು ನಂಬಿದ್ದಾರೆ. ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ನಿರ್ಮೂಲನದ ವಿರುದ್ಧ ಭುಗಿಲೆದ್ದ ಅನೇಕ ವಿದ್ಯಾರ್ಥಿ ಪ್ರತಿಭಟನೆಗಳು ಅದಕ್ಕೆ ಸಾಕ್ಷಿಯೆಂದೂ ಅವರು ಭಾವಿಸಿದ್ದಾರೆ. ಇದು ಸರಿಯೇ?

ಉತ್ತರ: ತಮ್ಮ ಪ್ರಶ್ನೆಗೆ ಉತ್ತರಿಸುವ ಮೊದಲು, 2023 ಅಕ್ಟೋಬರ್ 7 ರ ನಂತರದ ಬೆಳವಣಿಗೆಗಳನ್ನು ಉಲ್ಲೇಖಿಸಲು ನಾನು ಹೊಸ ಪದ ಪ್ರಯೋಗವನ್ನು ಆರಂಭಿಸಿದ್ದೇನೆ. ಮಹಾ ಇಂತಿಫಾದ’ ಎಂಬುದು ಆ ಪದವಾಗಿದೆ. ಇದು ಒಂದು ಘೋಷಣೆಯಲ್ಲ. ಅಕ್ಟೋಬರ್ 7 ರ ಬಳಿಕದ ಆಲೋಚನೆ ಮತ್ತು ಪ್ರಾಯೋಗಿಕತೆಯನ್ನು ಸೂಚಿಸುವ ಅಭಿವ್ಯಕ್ತಿಯಾಗಿದೆ.

ಮಹಾ ಇಂತಿಫಾದ’ ಕೇವಲ ಫೆಲೆಸ್ತೀನ್ ಮತ್ತು ಇಸ್ರೇಲ್‌ನ ವಿರುದ್ಧ ಮಾತ್ರವಲ್ಲ, ಅದರ ಕೇಂದ್ರ ಗಾಝಾ ಆಗಿದ್ದರೂ ಅದರ ಆಘಾತ ತರಂಗಗಳು ವಿಶ್ವವ್ಯಾಪಕವಾಗಿವೆ. ಆಧುನಿಕ ಜಗತ್ತಿನ ಇತಿಹಾಸದಲ್ಲಿ ವಿಶೇಷವಾದ ಚಿಹ್ನೆಯನ್ನು ಮೂಡಿಸಲು ಅದಕ್ಕೆ ಸಾಧ್ಯವಾಗಿದೆ. ಒಂದನೆಯದಾಗಿ, ಅತಿ ಸಣ್ಣ ಮತ್ತು ದುರ್ಬಲವಾದ ಗಾಝಾ ಪಟ್ಟಿಯು ಇಸ್ರೇಲ್ ಎಷ್ಟು ದುರ್ಬಲ ಮತ್ತು ಶಿಥಿಲವಾಗಿದೆಯೆಂದು ತೋರಿಸಿಕೊಟ್ಟಿತು.

ಇಸ್ರೇಲ್‌ನೊಂದಿಗೆ ನೆರೆಹೊರೆಯ ದೇಶಗಳು ಹಲವು ಬಾರಿ ಸಂಘರ್ಷ ನಡೆಸಿದ್ದರೂ ಅದರಿಂದ ಇಸ್ರೇಲ್‌ನ ದೌರ್ಬಲ್ಯ ಈ ರೀತಿ ಬಹಿರಂಗಗೊಂಡಿರಲಿಲ್ಲ. ಅಮೇರಿಕಾದ ನಿರಂತರ ಬೆಂಬಲ ಮತ್ತು ಸಂರಕ್ಷಣೆ ಇಲ್ಲದಿರುತ್ತಿದ್ದರೆ, ಇಸ್ರೇಲನ್ನು ಸುಲಭದಲ್ಲಿ ಸೋಲಿಸಲು ಸಾಧ್ಯವಾಗುತ್ತಿತ್ತೆಂಬುದನ್ನು ಗಾಝಾ ತೋರಿಸಿಕೊಟ್ಟಿತು. 1973 ಮತ್ತು 2006ರಲ್ಲಿ ಇಸ್ರೇಲಿನ ಅಜೇಯ ಶಕ್ತಿ’ಪ್ರಶ್ನಿಸಲ್ಪಟ್ಟಿದ್ದರೂ ಅದು ಇಷ್ಟು ಪ್ರಬಲವಾಗಿರಲಿಲ್ಲ.

ಅಕ್ಟೋಬರ್ 7ರ ಘಟನೆಯ ಬಳಿಕ ತಿಂಗಳುಗಳೇ ಕಳೆದರೂ, ಅಮೇರಿಕಾದ ಹಡಗುಗಳು ಮೆಡಿಟರೇನಿಯನ್ ಸಮುದ್ರದಲ್ಲಿ ಲಂಗುರ ಹಾಕಿರುವುದೂ ಮತ್ತು ಅಮೇರಿಕಾವು ಬಾಂಬ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ತಲುಪಿಸುತ್ತಿರುವುದೂ ಇದಕ್ಕೆ ಸ್ಪಷ್ಟ ಪುರಾವೆಯಾಗಿದೆ. ಅಮೇರಿಕಾದ ಭಾರೀ ಬೆಂಬಲವಿಲ್ಲದೆ ಇಸ್ರೇಲ್ ಯುದ್ಧವನ್ನು ಮುಂದುವರೆಸಲು ಅಥವಾ ಅಂತ್ಯಗೊಳಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ.

ಎರಡನೆಯದಾಗಿ, ಮಹಾ ಇಂತಿಫಾದವು ಎರಡೂ ಕಡೆಗಳಲ್ಲೂ ಭಾರೀ ಸಾವು ನೋವುಗಳಿಗೆ ಕಾರಣವಾಯಿತು. ನಷ್ಟದ ವಿಷಯದಲ್ಲಿ ಇಬ್ಬರ ನಡುವೆ ದೊಡ್ಡ ಅಂತರವಿದ್ದರೂ ಇಸ್ರೇಲ್‌ಗೆ ತನ್ನ ವಿರುದ್ಧ ಸೈನಿಕ ಕಾರ್ಯಾಚರಣೆಯಲ್ಲಿ ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಜೀವ ಹಾನಿ ಸಂಭವಿಸಿರುವುದು ಇದೇ ಪ್ರಥಮ. ಫೆಲೆಸ್ತೀನ್‌ನಲ್ಲಿ ಒಂದೇ ಯುದ್ಧದಲ್ಲಿ ಇಷ್ಟೊಂದು ಜನರು ಬಲಿಯಾಗುತ್ತಿರುವುದು ಇದೇ ಮೊದಲು.

ಮೂರನೆಯದಾಗಿ, ಮದ್ಯಪ್ರಾಚ್ಯದ ಬೇರೆ ಯಾವುದೇ ಸಂಘರ್ಷಗಳಲ್ಲೂ ಇಂತಹ ಪ್ರಮಾಣದಲ್ಲಿ ದೇಶಗಳು ನೇರವಾಗಿ ಜೊತೆಗೂಡಿರಲಿಲ್ಲ. ಹಮಾಸ್, ಇಸ್ರೇಲ್, ಅಮೇರಿಕಾ, ಲೆಬನಾನ್, ಯಮನ್, ಇರಾನ್, ಸಿರಿಯ, ಇರಾಕ್ ಮತ್ತು ಕೆಲವು ಯುರೋಪಿಯನ್ ದೇಶಗಳೂ ನೇರವಾಗಿ ಭಾಗಿಯಾಗಿವೆ. ಇಸ್ರೇಲ್‌ನೊಂದಿಗೆ ಅತ್ಯಂತ ಹೆಚ್ಚು ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧವನ್ನು ಈ ಸಂದರ್ಭದಲ್ಲೇ ಕಡಿತಗೊಳಿಸಿವೆ. ಬೊಲಿವಿಯಾ, ಚಿಲಿ, ಕೊಲಂಬಿಯಾ, ಜೋರ್ಡಾನ್, ಬಹ್ರೈನ್, ಹೋಂಡುರಾಸ್, ತುರ್ಕಿ, ಚಾಢ್, ಬೆಲಿಝ್, ದಕ್ಷಿಣ ಆಫ್ರಿಕಾ ಮುಂತಾದ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡವು. ದಕ್ಷಿಣ ಆಫ್ರಿಕಾವು ವಿಷಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ದು ನ್ಯಾಯ ಹೋರಾಟಕ್ಕೆ ನೇತೃತ್ವ ನೀಡುತ್ತಿದೆ. ಇದೀಗ ಇದೊಂದು ಮಹಾ ಇಂತಿಫಾದವಾಗುವುದು ಹೇಗೆಂದರೆ ವಿಶ್ವದಾದ್ಯಂತ ಅದಕ್ಕೆ ಲಭಿಸುವ ಅಭೂತಪೂರ್ವ ಬೆಂಬಲದಿಂದಾಗಿದೆ. 1948ರಲ್ಲಿ ಫೆಲೆಸ್ತೀನ್ ವಿಮೋಚನಾ ಹೋರಾಟ ರೂಪುಗೊಂಡ ಬಳಿಕ ಈ ರೀತಿಯ ಜಾಗತಿಕ ಬೆಂಬಲ ಅದಕ್ಕೆ ಲಭಿಸಿರಲಿಲ್ಲ.

ನಾಲ್ಕನೇ ವಿಷಯವು ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇದನ್ನು ನಾವು ಕೇವಲ ಜನರ ರಾಜಕೀಯ ದೃಷ್ಟಿಕೋನದ ಬದಲಾವಣೆಯಾಗಿ ನೋಡಲು ಸಾಧ್ಯವಿಲ್ಲ. ಫೆಲೆಸ್ತೀನಿಯನ್ನರು ಅನುಭವಿಸುತ್ತಿರುವ ನೋವನ್ನು ಕಣ್ಣಾರೆ ಕಂಡು, ಅವರಲ್ಲುಂಟಾದ ಜ್ಞಾನ ಶಾಸ್ತ್ರದ ಮತ್ತು ಅರ್ಥಪೂರ್ಣ ಬದಲಾವಣೆಯಾಗಿ ನಾನು ನೋಡುತ್ತೇನೆ. ಅಂದರೆ, ಹಿಂದಿನ ಆಧುನಿಕತೆಯ ರಚನಾತ್ಮಕ ಸಮಸ್ಯೆಗಳನ್ನು ಅದು ಬಹಿರಂಗಪಡಿಸುತ್ತದೆ. ಅಮೇರಿಕನ್ ಬೀದಿಯ ಪ್ರತಿಭಟನಾಕಾರರು `ನಾವೆಲ್ಲರೂ ಫೆಲೆಸ್ತೀನ್’ ಎಂದು ಕೂಗುವಾಗ ಅದನ್ನು ಕೇವಲ ಒಂದು ರಾಜಕೀಯ ಘೋಷಣೆಯೆಂದು ನಾವು ವ್ಯಾಖ್ಯಾನಿಸಬಾರದು. ಜ್ಞಾನಶಾಸ್ತ್ರದ ದೊಡ್ಡ ಅರ್ಥಗಳನ್ನು ಅದು ಒಳಗೊಂಡಿದೆ.

ಇನ್ನು ನಿಮ್ಮ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸುವೆ. ಕಳೆದ ಏಳು ತಿಂಗಳಲ್ಲಿ ವಿಶ್ವ ಜನತೆಯ ಮನಸಾಕ್ಷಿಯಲ್ಲಿ ಬಹಳ ಮಹತ್ವದ ಬದಲಾವಣೆಯಾಗಿದೆ.

ಪ್ರಶ್ನೆ: `ಜ್ಞಾನ ಶಾಸ್ತ್ರ ಪರವಾದ ಬದಲಾವಣೆ’ ಎಂದು ಹೇಳಿದಿರಲ್ಲವೇ? ಅದರಿಂದ ನೀವು ಏನು ಉದ್ದೇಶಿಸಿರುವಿರಿ? ಇದು ರಾಜಕೀಯಕ್ಕಿಂತ ಜ್ಞಾನ ಶಾಸ್ತ್ರ ಪರವಾಗುವುದು ಹೇಗೆ?

ಉತ್ತರ: ಪ್ರಜ್ಞೆ ಎಂದರೆ ಅರಿವು, ಅಂದರೆ ಜ್ಞಾನ. ಅದು ಮೌಲ್ಯಮಾಪನಕ್ಕೆ ಒಳಪಟ್ಟಿರುತ್ತದೆ. ಕೆಲವೊಮ್ಮೆ ಅರಿವು ಬಾಹ್ಯವಾಗಿರುತ್ತದೆ. ಕೆಲವೊಮ್ಮೆ ಸ್ಪರ್ಶವು ಬಹಳ ಆಳವಾಗಿರುತ್ತದೆ. ಉದಾಹರಣೆಗೆ, ಒಂದು ರಾಷ್ಟ್ರ ಅಥವಾ ಸಮೂಹವು ಇನ್ನೊಂದು ರಾಷ್ಟ್ರ ಅಥವಾ ಸಮೂಹವನ್ನು ಆಕ್ರಮಿಸುತ್ತದೆ. ಅಥವಾ ಬಹುಸಂಖ್ಯಾತ ವಿಭಾಗವು ಅಲ್ಪಸಂಖ್ಯಾತರನ್ನು ದಮನಿಸುತ್ತದೆ. ಜನರಲ್ಲಿ ಈ ಕುರಿತು ಮೇಲ್ನೋಟಕ್ಕೆ ಅರಿವು ಇರುತ್ತದೆ. ಆದರೆ ಅದರಲ್ಲಿ ಅನೇಕ ವಿರೋಧಾಭಾಸಗಳು ಇರುತ್ತವೆ.

ಉದಾಃರಣೆಗೆ ಓರ್ವ ಬಿಳಿಯ ಅಮೇರಿಕನ್ ವ್ಯಕ್ತಿಯು ಇಸ್ರೇಲ್‌ನಲ್ಲಿ ಜಾರಿಗೆ ತರುತ್ತಿರುವ ಹಲವು ಕಾನೂನುಗಳನ್ನು ವಿರೋಧಿಸುತ್ತಾನೆ. ಅವೆಲ್ಲವೂ ಫೆಲೆಸ್ತೀನ್‌ನೊಂದಿಗೆ ಜನಾಂಗೀಯ ದ್ವೇಷವನ್ನು ತೋರ್ಪಡಿಸುವುದಾಗಿದೆ. ಹಾಗಿದ್ದರೂ ಈ ಬಿಳಿಯನು ಇಸ್ರೇಲ್‌ನ ಕಟ್ಟಾ ಬೆಂಬಲಿಗನಾಗಿರುತ್ತಾನೆ. ಇವೆಲ್ಲವನ್ನೂ ಕೇವಲ ರಾಜಕೀಯ ಪ್ರಜ್ಞೆ ಮತ್ತು ಚಿಂತನೆಯಾಗಿ ಮಾತ್ರ ನೋಡಬಹುದು. ಈ ವಿರೋಧಭಾಸವನ್ನು ಸಮನ್ವಯಗೊಳಿಸಲು ಆ ರಾಜಕೀಯ ಜಾಗೃತಿಗೆ ಸಾಧ್ಯವಿದೆ. ನಾನು ಯಾವಾಗಲೂ ಹೇಳುವ ಒಂದು ವಿಷಯವಿದೆ. ಅಂತಹ ರಾಜಕೀಯ ವಿಶ್ಲೇಷಣೆಗಳ ಮೇಲ್ನೋಟಕ್ಕೆ ಮಾತ್ರವಲ್ಲ, ಆಳಕ್ಕೂ ನಾವು ಹೋಗುವುದಿಲ್ಲ.

ಜ್ಞಾನಶಾಸ್ತ್ರವು ಅದರಲ್ಲಿ ಸೇರಿಕೊಂಡಾಗ ಪ್ರಜ್ಞೆಯು ಆಳವಾಗುತ್ತದೆ. ಇದನ್ನು ರಾಜಕೀಯ ವಿದ್ಯಮಾನ ಮತ್ತು ಇತರವುಗಳನ್ನು ಅದರ ಮೂಲ ಸ್ಥಾನದಿಂದ ಹುಡುಕಿಕೊಂಡು ಪ್ರಾರಂಭಿಸಬೇಕು. ನಾವು ಹೇಳಿದ ಆ ಬಿಳಿಯ ಅಮೇರಿಕನ್ ವ್ಯಕ್ತಿಯು ವಿಷಯದ ಆಳಕ್ಕೆ ತಲುಪಬೇಕಾದರೆ ಇಸ್ರೇಲ್‌ನಲ್ಲಿ ಜಾರಿಯಲ್ಲಿರುವ ಐವತ್ತಕ್ಕೂ ಹೆಚ್ಚು ವರ್ಣಭೇದ ಕಾನೂನುಗಳ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಆತ ಸ್ವಯಂ ಕೇಳಿಕೊಳ್ಳಬೇಕಾಗುತ್ತದೆ.

ಇಸ್ರೇಲನ್ನು ಏಕೆ ರಚಿಸಲಾಯಿತು? ಸಾರ್ವಭೌಮ ರಾಷ್ಟ್ರವೆಂದು ಹೇಳಿಕೊಳ್ಳುವ ಇಸ್ರೇಲ್ ತನ್ನ ಸ್ವಂತ ನಾಗರಿಕರ ವಿರುದ್ಧ ಏಕೆ ತಾರತಮ್ಯ ಮಾಡುತ್ತದೆ? ಈ ತಾರತಮ್ಯದ ಇತಿಹಾಸವೇನು? ಒಂದು ರಾಜಕೀಯ ಯೋಜನೆ ಎಂಬ ನೆಲೆಯಲ್ಲಿ ಇಸ್ರೇಲ್ ಆರಂಭದಿಂದಲೇ ಜಾರಿಗೆ ತರುತ್ತಿರುವ ಕಾರ್ಯಗಳು ಮತ್ತು ಈ ಕಾನೂನಿನ ನಡುವಿನ ಸಂಬಂಧವೇನು? ಇದಕ್ಕೆ ಜ್ಞಾನಶಾಸ್ತ್ರದ ದೃಷ್ಟಿಕೋನದ ಆಧಾರವೇನು? ಝಿಯೋನಿಝಮ್‌ನ ಪ್ರತಿಪಾದಕರು ಫೆಲೆಸ್ತೀನ್‌ನ ಸ್ಥಳೀಯ ಅರಬರನ್ನು ಹೇಗೆ ನೋಡುತ್ತಾರೆ? ಝಿಯೋನಿಸ್ಟ್ ಗಳದ್ದು ಒಂದು ವಸಾಹತುಶಾಹಿ ಯೋಜನೆಯೇ? ಫೆಲೆಸ್ತೀನಿಯರ ಉಪಸ್ಥಿತಿಯನ್ನು ಇಲ್ಲವಾಗಿಸುವುದು ಈ ಯೋಜನೆಯ ಗುರಿಯೇ?

ಇಂತಹ ಪ್ರಶ್ನೆಗಳೊಂದಿಗೆ ವಿಷಯದ ಆಳಕ್ಕೆ ಹೋದಾಗ ಹಲವಾರು ವಿಷಯಗಳು ಸ್ಪಷ್ಟವಾಗುತ್ತವೆ. ಫೆಲೆಸ್ತೀನಿಯರನ್ನು ನಿರ್ಮೂಲನಗೊಳಿಸುವುದೇ ಝಿಯೋನಿಸ್ಟ್ ಯೋಜನೆಯ ಗುರಿಯೆಂದು ಮನದಟ್ಟಾಗುತ್ತದೆ. ಗಾಝಾದ ಸಾಮೂಹಿಕ ಹತ್ಯಾಕಾಂಡವನ್ನು ನೋಡುವಾಗ ಅವರಿಗೆ ಆಶ್ಚರ್ಯವಾಗುವುದಿಲ್ಲ. ಇದು ಆಳವಾದ ತಿಳುವಳಿಕೆಯ ಮೊದಲ ಹಂತ ಮಾತ್ರವಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆಯ ಅಂತರ್ಧಾರೆ ಅದೇ ಆಗಿದೆ. ಆಗ `ನಾವೆಲ್ಲರೂ ಫೆಲೆಸ್ತೀನ್’ ಎಂಬ ಘೋಷಣೆಗೆ ಹೊಸ ಅರ್ಥ ಮೂಡುತ್ತದೆ. ವಸಾಹತುಶಾಹಿಯ ಆಧುನಿಕೋತ್ತರ ಪ್ರಪಂಚದ ಕುರಿತು ಹೊಸ ತಿಳುವಳಿಕೆಯಾಗಿ ಇದು ಬದಲಾವಣೆಯಾಯಿತು. ಯುವ ಜನರಿಗೆ ಇರುವಂತೆ ಈ ಅರಿವು ಬೇರಾರಿಗೂ ಇರುವುದಿಲ್ಲ. ಅವರು ಅನುಭವಿಸುವಂತೆ ಇನ್ನಾರಿಗೂ ಅದನ್ನು ಅನುಭವಿಸಲಾಗುವುದಿಲ್ಲ. ಹಳೆಯ ತಲೆಮಾರುಗಳು ಮಾಡಿಟ್ಟಿರುವ ಪಾಪಗಳಿಗೆ ದಂಡ ತೆರಬೇಕಾದದ್ದು ಅವರಲ್ಲವೇ?

ನೀವು ಹದಿನೆಂಟು ಮತ್ತು ಮೂವತ್ತರ ನಡುವಿನ ಓರ್ವ ಅಮೇರಿಕನ್ ಯುವಕನೆಂದು ಊಹಿಸಿಕೊಳ್ಳಿ. ಹೆತ್ತವರು ಶ್ರೀಮಂತರಾದ ಕಾರಣ ನಿಮ್ಮನ್ನು ಉನ್ನತ ವಿಶ್ವವಿದ್ಯಾನಿಲಯಕ್ಕೆ ಕಳುಹಿಸುತ್ತಾರೆ. ನಿಮಗೆ ಫೆಲೆಸ್ತೀನ್ ಕುರಿತು ಮಾತ್ರವಲ್ಲದೆ ಇತರ ವಿಷಯಗಳ ಬಗ್ಗೆಯೂ ಸೀಮಿತ ಜ್ಞಾನವಿದೆ. ಆದರೆ ಸುತ್ತಲೂ ನೋಡುವಾಗ ನಿಮಗೆ ಅಸ್ಪಷ್ಟ ಚಿತ್ರ ಗೋಚರಿಸುತ್ತದೆ. ನೀವು ಅಮೇರಿಕನ್ ಯುವಕನಾಗಿರುವುದರಿಂದ ನಿಮ್ಮ ಸಮಸ್ಯೆಯು ಕುಟುಂಬದಿಂದಲೇ ಆರಂಭವಾಗುತ್ತದೆ. ವಿವಾಹ ವಿಚ್ಛೇದಿತರಾದ ತಂದೆ-ತಾಯಿ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವಂದಿರು, ಇತರ ಕುಟುಂಬದ ಸದಸ್ಯರು, ಎಲ್ಲೆಡೆಯೂ ಮುರಿದ ಕುಟುಂಬಗಳು. ಸಂಬಂಧವನ್ನು ಜೋಡಿಸಲು ಯಾವುದೇ ದಾರಿಯಿಲ್ಲ. ಎಲ್ಲರೂ ಬಿಝಿಯಾಗಿದ್ದಾರೆ. ಸ್ತ್ರೀ-ಪುರುಷರು ಅವರ ಉದ್ಯೋಗ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುವ ಓಟದಲ್ಲಿದ್ದಾರೆ. ವಿವಾಹವು ಹಲವು ರೀತಿಯ ಹೊಂದಾಣಿಕೆಯಿಂದ ಉಳಿಸಿಕೊಳ್ಳಬೇಕಾದ ಸಂಸ್ಥೆಯಾಗಿದೆ. ಆದರೆ ಗಂಡು ಹೆಣ್ಣುಗಳಿಬ್ಬರೂ ಅದಕ್ಕೆ ಸಿದ್ಧರಿಲ್ಲ.

ಇಂದು ಎಲ್ಲೆಡೆಯೂ ಉದ್ಯೋಗವೆಂಬುದು ಇನ್ನೊಂದು ಗುಲಾಮ ಪದ್ಧತಿಯಾಗಿ ಬದಲಾಗಿದೆ. ಜೀವನವಿಡೀ ಕಚೇರಿಯಲ್ಲೇ ಮುಗಿದು ಬಿಡುತ್ತದೆ. ಅದರ ಆಯಾಸ ಪರಿಹರಿಸಲು ಸಾಂದರ್ಭಿಕ ಪ್ರವಾಸ ಕಾರ್ಯಕ್ರಮಗಳಿವೆ. ಒತ್ತಡ ಕಡಿಮೆಗೊಳಿಸಲು ಅವರಿಗಿರುವ ದಾರಿ ಮಾದಕದ್ರವ್ಯವಾಗಿದೆ. ಮಾರುಕಟ್ಟೆಯೇ ಜೀವನವನ್ನು ನಿಯಂತ್ರಿಸುತ್ತದೆ. ಹಣ ಮಾಡುವುದೇ ಅವರ ಗುರಿ. ಸುರಕ್ಷಿತ ಉದ್ಯೋಗ, ವಿಮೆ ಮತ್ತು ಪಿಂಚಣಿಯಂತಹ ಅನೇಕ ಕನಸುಗಳನ್ನು ಬೆನ್ನಟ್ಟುವ ಮನುಷ್ಯನಿಗೆ ಅನೇಕ ವಸ್ತುಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ.

ಪ್ರತಿದಿನವೂ ಯುದ್ಧಗಳು, ನರಮೇಧಗಳು ಮತ್ತು ಪರಿಸರ ನಾಶದ ವಾರ್ತೆಗಳೇ ತುಂಬಿರುತ್ತವೆ. ಕೆಲವೆಡೆ ಭಾರೀ ಮಳೆ ಮತ್ತು ಪ್ರವಾಹದ ವಿಷಯ, ಕೆಲವೆಡೆ ಬಿಸಿಲಿನ ತೀವ್ರತೆ, ವಾಯು, ನೀರು, ಭೂಮಿ ಎಲ್ಲವೂ ಮಲಿನಗೊಂಡಿದೆ. ವಿಷವಿಲ್ಲದ ಆಹಾರ ಸಿಗುವುದಿಲ್ಲ. ಈ ವಿಷಮಯ ಪದಾರ್ಥಗಳನ್ನು ಯಾರು ತಯಾರಿಸುತ್ತಾರೆಂಬ ಬಗ್ಗೆ ಅಮೇರಿಕನ್ ಯುವಕನಿಗೆ ಸಂಶಯವಿಲ್ಲ. ದೊಡ್ಡ ಕಾರ್ಪೊರೇಟ್‌ಗಳು ತಾನೇ. ಆದರೆ ಆ ಕಾಪೋರೇಟರ್‌ಗಳೇ ಈತನ ಉದ್ಯೋಗದಾತರು. ಈ ಕಂಪೆನಿಗಳಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆ ಜನರಿಗಿದೆ. ಲಾಭಕೋರರಾದ ಕಂಪೆನಿಗಳು ಇವರನ್ನು ಮುಂದಿಟ್ಟುಕೊಂಡು ಲಾಭವನ್ನು ಕೊಯ್ಯುತ್ತಿವೆ.

ತಾನು ತನ್ನ ದೇಶದಲ್ಲಿ ಎದುರಿಸುತ್ತಿರುವ ಸಂಕೀರ್ಣ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾರಂಭಿಸಿದ್ದ ಅಮೇರಿಕನ್ ಯುವಕನಿಗೆ ಇದ್ದಕ್ಕಿದ್ದಂತೆ ಒಂದು ದಿನ ಅಥವಾ ಕಳೆದ ಅಕ್ಟೋಬರ್ ಏಳರಂದು ಇಸ್ರೇಲ್‌ನಲ್ಲಿ ಸೈನಿಕ ಕಾರ್ಯಾಚರಣೆ ನಡೆದಿದೆಯೆಂಬ ವಾರ್ತೆ ಕೇಳುತ್ತದೆ. ಇಸ್ಲಾಮಿಕ್ ಭಯೋತ್ಪಾದಕರು ಮಕ್ಕಳನ್ನು ಒಲೆಗಳಲ್ಲಿ ಸುಟ್ಟರೆಂದೂ, ಮಹಿಳೆಯರನ್ನು ಅತ್ಯಾಚಾರ ಮಾಡಿದರೆಂದೂ ಕೇಳುತ್ತದೆ. ನೀವು ಮತ್ತು ಅಮೇರಿಕನ್ ಯುವಕ, ವಾರ್ತೆಯನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಲು ಆರಂಭಿಸುತ್ತೀರಿ. ಈ ಕುರಿತು ಇಸ್ರೇಲ್ ಮತ್ತು ಅಮೇರಿಕಾ ಸರಕಾರಗಳು ಹೇಳಿದ್ದೆಲ್ಲವೂ ಸುಳ್ಳೆಂದು ತಿಳಿದು ಬರುತ್ತದೆ. ಮಕ್ಕಳನ್ನು ಯಾರೂ ಸುಟ್ಟುಕೊಂಡಿರಲ್ಲ, ಯಾರೂ ಅತ್ಯಾಚಾರಕ್ಕೆ ಒಳಗಾಗಿಲ್ಲ. ಆದರೆ ರಾಜಕಾರಿಣಿಗಳು ಸುಳ್ಳು ಹೇಳುವುದನ್ನು ಮುಂದುವರೆಸಿದ್ದಾರೆ. ನಿಮಗೆ ರಾಜಕಾರಣಿಗಳ ಕುರಿತು ಮೊದಲೇ ಒಳ್ಳೆಯ ಅಭಿಪ್ರಾಯವಿಲ್ಲ. ಈಗ ಅವರು ಒಂದು ದೊಡ್ಡ ಸುಳ್ಳುಗಾರರ ಗುಂಪಾಗಿ ನಿಮ್ಮ ಮುಂದೆ ನಿಂತಿದ್ದಾರೆ.

ಬಳಿಕ ಗಾಝಾದಲ್ಲಿ ನಡೆದ ದೌರ್ಜನ್ಯಗಳು ಒಂದೊಂದಾಗಿ ನಿಮ್ಮ ಮುಂದೆ ಬರಲಾರಂಭಿಸಿತು. ಇದು ಎರಡು ಸೇನೆಗಳ ನಡುವೆ ನಡೆಯುತ್ತಿರುವ ಯುದ್ಧವಲ್ಲವೆಂದು ಒಂದೇ ನೋಟಕ್ಕೆ ಅರ್ಥವಾಯಿತು. ಸೂಯೆಜ್ ಕಾಲುವೆಗೆ ಬದಲಿಯಾಗಿ ಇಸ್ರೇಲ್ ಮರುಭೂಮಿಯಲ್ಲಿ ನೆಗವ್ ಕಾಲುವೆ ಅಗೆಯಲು ಹೊರಟಿದೆಯೆಂದು ನೀವು ಕೇಳುತ್ತೀರಿ. ಅವರು ಈಗಾಗಲೇ ಗಾಝಾ ಪಟ್ಟಿಯನ್ನು ದ್ವೀಪವನ್ನಾಗಿ ಮಾಡುವ ಯೋಜನೆಯನ್ನು ಹೊಂದಿದ್ದಾರೆ. ನಂತರ ಅಲ್ಲಿ ಐಶಾರಾಮಿ ರೆಸಾರ್ಟ್ಗಳು ಮತ್ತು ಅಪಾರ್ಟ್ಮೆಂಟ್‌ಗಳನ್ನು ನಿರ್ಮಿಸಲಾಗುತ್ತದೆ. ಇಸ್ರೇಲ್‌ನ ಪ್ರಾಯೋಜಿಕತ್ವದಲ್ಲಿ ಯುರೋಪಿನ ಸಿರಿವಂತರಿಗಾಗಿ ನಿರ್ಮಿಸಲಾಗುತ್ತದೆ.
ನೀವು ಶುದ್ಧ ಬಿಳಿ ಅಮೇರಿಕನ್ ಆಗಿದ್ದರೂ ಸಹ, ಈ ಸಾಮ್ರಾಜ್ಯದ ಕೊಳಕು, ಭಯಾನಕ ಮುಖವನ್ನು ಕಾಣದೆ ಇರಲಾರಿರಿ. ನಿಮ್ಮ ದೇಶವು ಇನ್ನೊಂದು ದೇಶವನ್ನು ಮತ್ತು ಅಲ್ಲಿನ ಜನತೆಯನ್ನು ನಿರ್ಮೂಲನ ಮಾಡಲು ಒಂದು ಆಕ್ರಮಣಕಾರಿ ದೇಶಕ್ಕೆ ಹಣ ಮತ್ತು ಶಸ್ತ್ರಾಸ್ತ್ರವನ್ನು ಒದಗಿಸುತ್ತಿದೆ. ವಂಶಹತ್ಯೆಗಾಗಿ ತನ್ನ ಸರಕಾರವು ನೀಡುತ್ತಿರುವ ಹಣವು ತನ್ನ ಹಣವೆಂದು ನಿಮಗೆ ತಿಳಿಯುತ್ತದೆ. ಪ್ರಜೆಯಾದ ನಿಮ್ಮ ಅನುಮತಿಯಿಲ್ಲದೆಯೇ ಅದನ್ನು ನೀಡಲಾಗುತ್ತಿದೆ. ಆಗ ನಿಮಗೆ ಅನಿಯಂತ್ರಿತವಾದ ಕೋಪ ಬರುತ್ತದೆ. ಸರ್ಕಾರ, ಶಸ್ತ್ರಾಸ್ತ್ರ ತಯಾರಕರು ಮತ್ತು ವಿತರಕರು ಮಾತ್ರವಲ್ಲ ವಾಲ್‌ಮಾರ್ಟ್, ಅಮೆಜಾನ್, ಎಕ್ಸನ್, ಯೂನಿಯನ್ ಕಾರ್ಬೈಡ್‌ನಂತಹ ಬೃಹತ್ ಕಾರ್ಪೊರೇಟರ್‌ಗಳು ಒಟ್ಟು ಸೇರಿ ಮಾಡುತ್ತಿರುವ ಒಂದು ನಾಟಕವೆಂದು ಪ್ರಜ್ಞೆ ನಿಮ್ಮಲ್ಲಿ ಮೂಡುತ್ತದೆ. ಮಿಥ್ಯದ ಶಕ್ತಿಗಳೆಲ್ಲವೂ ಪರಸ್ಪರ ಬೆಸೆದುಕೊಂಡಿದೆಯೆಂಬ ಪ್ರಜ್ಞೆಯೂ ನಿಮ್ಮಲ್ಲಿ ಮೂಡುತ್ತದೆ. ಆ ಅಮೇರಿಕಾದ ಯುವಕ ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಕೇಳುತ್ತಾನೆ, ವಾಸ್ತವದಲ್ಲಿ ನಾನು ಯಾರು? ನಾವು ಎಂತಹ ಮನುಷ್ಯರಾಗಿ ಬದಲಾಗಿದ್ದೇವೆ? ಇಂತಹ ಬದಲಾವಣೆಯನ್ನೇ ಆಳವಾದ ಪ್ರಜ್ಞೆ ಎಂದು ಹೇಳಿರುವೆ. ಇದರ ಬಳಿಕ `ಧಾರ್ಮಿಕ ಬದಲಾವಣೆ’ ಉಂಟಾಗಬೇಕು. ಅದು ಮಾನವ ಪ್ರಜ್ಞೆಯ ಅತ್ಯುನ್ನತ ರೂಪ. ಆ ಕುರಿತು ಹೇಳಲು ಸಮಯವಿಲ್ಲ.

ಪ್ರಶ್ನೆ: ತಾವು ತಮ್ಮ ಕೃತಿಗಳಲ್ಲಿ, ಸರ್ಕಾರವು ವಿಶ್ವವಿದ್ಯಾಲಯಗಳನ್ನು ತಮ್ಮ ಆದರ್ಶಗಳನ್ನು ಪ್ರಚಾರ ಮಾಡುವ ಉಪಕರಣವಾಗಿ ಬಳಸುತ್ತಿರುವುದರ ಕುರಿತು ಹೇಳುವಿರಿ. ಅಂದರೆ ಸರಕಾರವು ವಿಶ್ವವಿದ್ಯಾನಿಲಯಗಳಲ್ಲಿ ತಮ್ಮ ವಿಚಾರಧಾರೆಗಳಿಗೆ ಮಾರ್ಕೆಟ್ ಮಾಡುವ ಒಂದು ವರ್ಗವನ್ನು ಸೃಷ್ಟಿಸುತ್ತಿದೆಯೆಂದೂ ಹೇಳುತ್ತೀರಿ. ಫೆಲೆಸ್ತೀನ್ ವಿಷಯದಲ್ಲಿ ಈಗ ಅಮೇರಿಕಾದ ಯುನಿವರ್ಸಿಟಿಗಳಲ್ಲಿ ಏನು ನಡೆಯುತ್ತಿದೆ?

ಉತ್ತರ: ನಾವು ಸಮಾಜ ಎಂದು ಹೇಳುತ್ತೇವೆ. ವಾಸ್ತವದಲ್ಲಿ ಅದೊಂದು ನೈಸರ್ಗಿಕ ವಿದ್ಯಮಾನವಲ್ಲ. ಒಂದರ್ಥದಲ್ಲಿ ಅದು ಸರ್ಕಾರದ ಒಂದು ರಚನೆಯಾಗಿದೆ. ಸಮಾಜವೆಂದರೆ ಒಂದು ಕುಟುಂಬದ ಮಕ್ಕಳಾಗಿದ್ದಾರೆ. ಮಾತಾಪಿತರು ಮಕ್ಕಳನ್ನು ಬೆಳೆಸುತ್ತಾರೆ. ಅದೇ ರೀತಿ ಸ್ಟೇಟ್ ಸಮಾಜವನ್ನು ಬೆಳೆಸುತ್ತದೆ. ಅದರ ಸದಸ್ಯರನ್ನು ಪ್ರಜೆಗಳು ಎಂದೂ ಕರೆಯುತ್ತದೆ. ಒಂದು ದೇಶದ ಮಗುವಾದ ಪ್ರಜೆಯು ತನ್ನ ದೇಶದ ಆದರ್ಶ, ಸಂಸ್ಕೃತಿಯನ್ನು ಪೂರೈಸಲು ಶಿಕ್ಷಣ ಮತ್ತು ತರಬೇತಿ ಪಡೆಯುತ್ತಾನೆ. ದೇಶದ ಕಾನೂನುಗಳನ್ನು ಪಾಲಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು, ಅಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ದೇಶದ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಉಪಯೋಗಿಸುವ ಪ್ರಜೆಯು ಅದೇ ರೀತಿ ಇರಲು ಸಾಧ್ಯ. ದೇಶವನ್ನು ಪ್ರಶ್ನಿಸುವ ರೀತಿಯ ವಿಮರ್ಶಿಸುವ ಜ್ಞಾನ ಅವನಲ್ಲಿ ಉಂಟಾಗುವುದಿಲ್ಲ. ಕುಟುಂಬದ ಹೆತ್ತವರು ಮತ್ತು ಮಕ್ಕಳು ಹೊಂದಿಕೊಳ್ಳದಿರುವಂತೆ, ದೇಶ ಮತ್ತು ಪ್ರಜೆಗಳು ವಿರುದ್ಧ ದಿಕ್ಕಿನಲ್ಲಿ ನೆಲೆ ಕಂಡುಕೊಳ್ಳುವುದೂ ಕಂಡು ಬರುತ್ತದೆ.

ಈಗ ಅಮೇರಿಕನ್ ಯುನಿವರ್ಸಿಟಿಗಳಲ್ಲಿ ಅದೇ ನಡೆಯುತ್ತಿದೆಯೆಂದು ನಾನು ಭಾವಿಸಿದ್ದೇನೆ. 1960ರಲ್ಲಿ ವಿಯೆಟ್ನಾಂ ಯುದ್ಧದ ಸಂದರ್ಭದಲ್ಲೇ ಈ ಭಿನ್ನತೆ ಆರಂಭವಾಗಿದ್ದರೂ ಈಗ ಪರಿಸ್ಥಿತಿ ಸಂಕೀರ್ಣವಾಗಿದೆ. ಅಂದಿಲ್ಲದಂತಹ ಹಲವು ರೋಗಗಳು ಬಂಡವಾಳ ಶಾಹಿತ್ವವನ್ನು ಆವರಿಸಿಕೊಂಡಿದೆ. ಜನರು ಹಿಂದಿಗಿಂತ ಬಹಳ ನಿರಾಶರಾಗಿದ್ದಾರೆ. ಈ ವ್ಯವಸ್ಥೆಯನ್ನು ಬೀಳಿಸುವಲ್ಲಿ ಮಹಾ ಇಂತಿಫಾದ’ವು ಒಂದು ಪಾತ್ರವನ್ನು ವಹಿಸಿದೆ ಎಂದು ನಾನು ಭಾವಿಸುತ್ತೇನೆ.

ಪ್ರಶ್ನೆ: ತಾವು ಉದ್ಯೋಗದಲ್ಲಿರುವ ಪ್ರಸಿದ್ಧ ಸಂಸ್ಥೆಯಾದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅಧ್ಯಕ್ಷರಾಗಿ ಈಜಿಪ್ಟ್ ವಂಶಜನಾದ ನಿಅï‌ಮತ್ ಶಫೀಕ್ ಹೊಣೆ ವಹಿಸಿಕೊಂಡಾಗ ಅದು ಅರಬ್ ವಂಶಜರಿಗೆ ಆಹ್ಲಾದದ ಕ್ಷಣಗಳಾಗಿದ್ದವು. ಆದರೆ, ಇವರು ಈಗ ಅರಬ್-ಮುಸ್ಲಿಮ್ ವಿರೋಧಿ ನೀತಿಗಳನ್ನು ಯುನಿವರ್ಸಿಟಿಯಲ್ಲಿ ಜಾರಿಗೆ ತರುತ್ತಿದ್ದಾರೆ. ಇದು ವಿರೋಧಾಭಾಸವಲ್ಲವೇ? ಅಥವಾ ಆಧುನಿಕತೆಯ ಪ್ರತಿಪಾದಕರು ತಮ್ಮ ನೀತಿಗಳನ್ನು ಜಾರಿಗೆ ತರಲು ಇವರನ್ನು ಬಳಸುತ್ತಿದ್ದಾರೆಯೇ?

ಉತ್ತರ: ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು ತುಲನಾತ್ಮಕವಾಗಿ ಸುಲಭ. ಆ ಸಮಸ್ಯೆ ಆರಂಭವಾದದ್ದು ಕಳೆದ ಅಕ್ಟೋಬರ್ 7ರ ಬಳಿಕವಲ್ಲ. ಇದು ಕೆಲವು ದಶಕಗಳ ಹಿಂದೆಯೇ ಆರಂಭಗೊಂಡಿದೆ.

ಅಂದರೆ, ವಿಶ್ವವಿದ್ಯಾನಿಲಯಗಳು ಕಾರ್ಪೊರೇಟರ್ ಮಾದರಿಯಲ್ಲಿ ವ್ಯಾಪಾರ ಸಂಸ್ಥೆಗಳಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದಾಗಿನಿಂದ ಆರಂಭಗೊಂಡಿದೆ. ಮೂರು ಶತಮಾನಗಳ ಹಿಂದೆ ಆಧುನಿಕತೆಯ ಯೋಜನೆ ಪ್ರಾರಂಭವಾದಾಗಲೂ ಆರ್ಥಿಕ ಮತ್ತು ಭೌತಿಕ ಲಾಭಗಳೇ ಪ್ರಧಾನವಾಗಿದ್ದವು. ವಿಶ್ವವಿದ್ಯಾನಿಲಯವನ್ನು ಅಂತಹ ಸಂಸ್ಥೆಯಾಗಿ ಪರಿವರ್ತಿಸಿದಾಗ ಅದರೊಳಗೆ ವ್ಯಾಪಾರಿಗಳನ್ನೂ ತರಬೇಕಾಗುತ್ತದೆ. ಆಗ ವಿದ್ಯಾವಂತರು ಮತ್ತು ಬುದ್ದಿಜೀವಿಗಳು ಮುಂಚೂಣಿಯಲ್ಲಿರಲು ಸಾಧ್ಯವಾಗುವುದಿಲ್ಲ. ಎಂಬತ್ತರ ದಶಕದಲ್ಲಿ ಸ್ಥಿತಿ ಹೀಗಿರಲಿಲ್ಲ. ಈಗ ಕೊಲಂಬಿಯಾ ವಿಶ್ವವಿದ್ಯಾನಿಲಯದ ಚುಕ್ಕಾಣಿ ಹಿಡಿದಿರುವ ವ್ಯಕ್ತಿಗಳು ಶೈಕ್ಷಣಿಕವಾಗಿ ಪ್ರತಿಭಾವಂತರಲ್ಲ. ಭೌತಿಕ ಸಂಶೋಧನೆಗಳೊಂದಿಗೆ ಯುನಿವರ್ಸಿಟಿಗಿರುವ ಸಂಬಂಧವು ದುರ್ಬಲವಾಗಿದೆ ಎಂದರ್ಥ. ನಾಯಕತ್ವದ ಮುಖ್ಯ ಪರಿಗಣನೆ ಹಣವಾಗುವುದರೊಂದಿಗೆ ವಿಶ್ವವಿದ್ಯಾನಿಲಯದ ಆಡಳಿತವು ಹೂಡಿಕೆ ನಿಧಿಯೊಂದಿಗೆ ಬಂದವರಿಗೆ ತಲೆಬಾಗುತ್ತದೆ. ಹಣ ನೀಡುವವರು ಯಾರೆಂಬುದರ ಕುರಿತು ಪ್ರಜ್ಞೆಯೇ ಇರುವುದಿಲ್ಲ.
ವಿಶ್ವವಿದ್ಯಾನಿಲಯದ ಆಡಳಿತ ವಿಭಾಗವು ಕೇವಲ ವ್ಯಾಪಾರಿಗಳಾದದ್ದು ಮಾತ್ರವಲ್ಲ, ಅವರು ರಾಜಕೀಯ ನಾಯಕರ ವಿಧೇಯ ಶಿಷ್ಯರಾದರು. ಆದ್ದರಿಂದ ವಿಶ್ವವಿದ್ಯಾನಿಲಯದ ಪ್ರೆಸಿಡೆಂಟ್ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದಮನಿಸಲು ರಯಟ್ ಪೊಲೀಸರನ್ನು ಕರೆದರು. ನಿಅï‌ಮತ್ ಶಫೀಕ್ ಹಣದ ಸುತ್ತಲೂ ತಿರುಗುತ್ತಾರೆ. ಅವರಿಂದ ಯಾವುದೇ ಶೈಕ್ಷಣಿಕ ಆಯಾಮವನ್ನು ನಿರೀಕ್ಷಿಸಬೇಡಿ. ಬ್ಯಾಂಕಿನ ವ್ಯವಸ್ಥಾಪಕರನ್ನಾಗಿ ಮಾಡುವ ಅರ್ಹತೆ ಅವರಲ್ಲಿ ಇದೆ. ಕೊಲಂಬಿಯಾದಂತಹ ಪ್ರಮುಖ ವಿಶ್ವವಿದ್ಯಾನಿಲಯಕ್ಕೆ ಮುಖ್ಯಸ್ಥರಾಗುವ ಯಾವುದೇ ಅರ್ಹತೆ ಇಲ್ಲ. ಶೈಕ್ಷಣಿಕ ಸ್ವಾತಂತ್ರ್ಯಕ್ಕಾಗಿ ಎದ್ದು ನಿಲ್ಲುವ ಧೈರ್ಯ ನಿಅï‌ಮತ್‌ರಿಗಿಲ್ಲ. ಯಾರು ಧನ ಸಹಾಯ ಮಾಡುತ್ತಾರೋ ಅವರು ವಿಶ್ವವಿದ್ಯಾನಿಲಯದ ನೀತಿ ಮತ್ತು ಆದ್ಯತೆಗಳನ್ನು ಅವರ ಇಚ್ಛೆಯಂತೆ ನಿರ್ಧರಿಸುತ್ತಾರೆ. ಎಐಪಿಎಸಿ ನಂತಹ ಇಸ್ರೇಲ್ ಲಾಬಿಗಳ ಜನರು ಹೆಚ್ಚಾಗಿ ಫಂಡ್ ನೀಡುತ್ತಾರೆ. ಅವರು ವಿಶ್ವವಿದ್ಯಾನಿಲಯಗಳ ನೀತಿಯನ್ನು ಮಾತ್ರವಲ್ಲ, ಅಮೇರಿಕಾ ನೀತಿಗಳನ್ನೇ ಬದಲಾಯಿಸುವವರಾಗಿದ್ದಾರೆ. ಇವೆಲ್ಲವೂ ಕಾಲೇಜಿನ ಆಡಳಿತ ರಚನೆಯ ಅನಿವಾರ್ಯ ಭಾಗವಾಗಿದೆ.

ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಪ್ರಮುಖ ರಾಜಕೀಯ ವಾಸ್ತವಿಕತೆಯಿದೆ. ಅಮೇರಿಕಾದ ರಾಜಕೀಯ ವ್ಯವಸ್ಥೆಯು ಸಗಟು ಮಾರಾಟಕ್ಕಿದೆ. ಇನ್ನೊಂದು ದೇಶದ ಆದ್ಯತೆಗಳ ಪ್ರಕಾರ ಈ ರಾಷ್ಟ್ರವನ್ನು ಪಳಗಿಸಲಾಗುತ್ತದೆ. ಜೋನ್ ಮೆಹರ್‌ಸೀಮರ್ ಮತ್ತು ಸ್ಟೇಪಿನ್ ವಾಲ್ಟ್ ಸೇರಿ ಬರೆದ `The Israel Lobby and U.S. Foreign policy’ ಎಂಬ ಗ್ರಂಥದಲ್ಲಿ ಇದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಇಸ್ರೇಲಿಗಾಗಿ ಇರುವ ಅಮೇರಿಕಾದ ನೀತಿಗಳು ಇಸ್ರೇಲ್‌ಗೆ ಮಾತ್ರ ಪ್ರಯೋಜವನ್ನು ನೀಡುತ್ತದೆ ಮತ್ತು ಅದು ಎಂದಿಗೂ ಅಮೇರಿಕಾದ ಹಿತಾಸಕ್ತಿಯನ್ನು ರಕ್ಷಿಸುವುದಿಲ್ಲ ಎಂದು ಗ್ರಂಥಕಾರರು ಸಮರ್ಥಿಸುತ್ತಾರೆ. ಕಾರಣವೇನೆಂದರೆ, ಇಂತಹ ಲಾಬಿಗಳೇ ಇಂದು ಅಮೇರಿಕಾವನ್ನು ನಿಯಂತ್ರಿಸುತ್ತಿದೆ. ಯಾವುದೇ ನೈತಿಕ ಮೌಲ್ಯಗಳನ್ನು ಬಾಕಿ ಉಳಿಸದೆ ಈ ಅಧಿಕಾರ ಶಾಹಿಯ ಒಂದು ಸಣ್ಣ ಮಾದರಿಯನ್ನು ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಕಾಣಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಕೊಲಂಬಿಯಾ ವಿಶ್ವವಿದ್ಯಾನಿಲಯದ ಆಡಳಿತ ವಿಭಾಗವು ಅದರ ಆತ್ಮವನ್ನು ಪಿಶಾಚಿಗೆ ಮಾರಿದೆ.
(ಅನು: ಸಮೀನಾ ಉಪ್ಪಿನಂಗಡಿ)

ವಾಇಲ್ ಹಲ್ಲಾಖ್
ಕೊಲಂಬಿಯಾ ವಿವಿ ಪ್ರೊಫೆಸರ್