ಮೃತಪಟ್ಟ ಶಿವಂ ಕುಮಾರ್ ಹೆಸರಲ್ಲಿ ಮುಸ್ಲಿಮರ ಕಬರ ಸ್ಥಾನಕ್ಕೆ ಭೂಮಿ ದಾನ ಮಾಡಿದ ಕುಟುಂಬ

0
694

ಸನ್ಮಾರ್ಗ ವಾರ್ತೆ

ಮುಸ್ಲಿಂ ಸಮುದಾಯದ ಕಬರ ಸ್ಥಾನಕ್ಕೆ ಬಿಹಾರದ ಬಕ್ಸಾರ್ ಜಿಲ್ಲೆಯ ಹಿಂದೂ ಕುಟುಂಬ ಒಂದು ಬಿಘಾ ಭೂಮಿಯನ್ನು ದಾನ ಮಾಡಿದ ಹೃದಯಸ್ಪರ್ಶಿ ಘಟನೆ ನಡೆದಿದೆ. ಇಲ್ಲಿಯ ಮುಸ್ಲಿಮರು ಹಲವು ವರ್ಷಗಳಿಂದ ದಫನ ಭೂಮಿ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ನವೆಂಬರ್ 18ರಂದು ಅಪಘಾತದಲ್ಲಿ ಮೃತಪಟ್ಟ ಶಿವಮ್ ಕುಮಾರ್ ಎಂಬ ಯುವಕನ ಹೆಸರಲ್ಲಿ ಅವರ ಕುಟುಂಬಿಕರು ಈ ಭೂಮಿ ದಾನ ಮಾಡಿದ್ದಾರೆ. ಇತರರ ಬಗ್ಗೆ ಶಿವಮ್ ಕುಮಾರ್ ಅವರಲ್ಲಿದ್ದ ಸೌಹಾರ್ದ ಭಾವನೆಯನ್ನು ಈ ಭೂಮಿ ದಾನವು ಪ್ರತಿನಿಧಿಸುತ್ತದೆ ಎಂದು ಕುಟುಂಬ ಹೇಳಿದೆ.

ಶಿವಂ ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ವಾರಣಾಸಿಯಲ್ಲಿ ನಡೆಸುತ್ತಿರುವಾಗ ಆತನ ಕುರಿತಂತೆ ಯಾವುದಾದರೂ ಒಳಿತನ್ನು ಮಾಡಬೇಕು ಎಂಬ ಪ್ರಜ್ಞೆ ನಮ್ಮಲ್ಲಿ ಮೂಡಿತು ಎಂದು ಶಿವಂ ಕುಮಾರ್ ಅವರ ಚಿಕ್ಕಪ್ಪ ಬ್ರಿಜ್ ರಾಜ ಸಿಂಗ್ ಹೇಳಿದ್ರು.

ಈ ಪ್ರದೇಶದಲ್ಲಿ 50 ಮಂದಿ ಮುಸ್ಲಿಂ ಕುಟುಂಬಗಳಿದ್ದು ಹಲವು ವರ್ಷಗಳಿಂದ ಕಬರ ಸ್ಥಾನದ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಹಳೆಯ ಕಬ್ರ ಸ್ಥಾನವಿದ್ದು ಇದೀಗ ಅದರ ಮೇಲೆ ಶಾಲೆಯನ್ನು ಕಟ್ಟಲಾಗಿದೆ. ಇದರಿಂದಾಗಿ ಈ ಪ್ರದೇಶದ ಮುಸ್ಲಿಮರು ಮೃತ ದೇಹವನ್ನು ದಫನ ಮಾಡುವುದಕ್ಕಾಗಿ ಐದು ಕಿಲೋಮೀಟರ್ಗಳಷ್ಟು ದೂರಕ್ಕೆ ಪ್ರಯಾಣಿಸಬೇಕಾಗಿದೆ.

ಇಲ್ಲಿಯ ಮುಸ್ಲಿಮರ ಕಷ್ಟ ನಮಗೆ ಗೊತ್ತಿದೆ ಆದ್ದರಿಂದ ಅವರ ಕಬರ ಸ್ಥಾನದ ನಿರ್ವಹಣೆಗಾಗಿ ಭೂಮಿಯನ್ನು ದಾನ ಮಾಡೋಣ ಎಂದು ನಮಗೆ ಅನಿಸಿತು. ಕಳೆದು ಹೋದ ಮಗನ ಹೆಸರಲ್ಲಿ ಈ ದಾನ ಉಪಯುಕ್ತ ಎಂದು ನಮಗೆ ಅನಿಸಿತು ಎಂದು ಚಿಕ್ಕಪ್ಪ ಹೇಳಿದ್ದಾರೆ.

ಬೈಕ್ ನಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಶಿವಂ ಕುಮಾರ್ ಅವರಿಗೆ ಕಾರೊಂದು ಡಿಕ್ಕಿ ಹೊಡೆಯಿತು. ಸ್ಥಳದಲ್ಲೇ ಅವರು ಸಾವಿಗೀಡಾಗಿದ್ದರು..

ಈ ಕುಟುಂಬದ ನಿರ್ಧಾರಕ್ಕೆ ಸ್ಥಳೀಯ ಮುಸ್ಲಿಮರು ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.