ಹರ್ಯಾಣ ಚುನಾವಣೆಯ ಸಮಯದಲ್ಲೇ ಕೇಜ್ರಿವಾಲ್ ಯಾಕೆ ಬಿಡುಗಡೆಯಾದರು?

0
108

ಸನ್ಮಾರ್ಗ ವಾರ್ತೆ

✍️ ಅರಫಾ ಮಂಚಿ

ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆರು ತಿಂಗಳ ನಂತರ ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದನ್ನು ಮುಸ್ಲಿಮರನ್ನು ಸದೆ ಬಡಿಯುವ ನೀತಿಯ ಭಾಗ ಎಂದರೆ ತಪ್ಪಾದೀತು. ಆದರೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದು ಹರಿಯಾಣ-ದಿಲ್ಲಿ-ಮಹಾರಾಷ್ಟ್ರದ ಚುನಾವಣೆಗಳು ಇರುವುದರಿಂದ ಕೇಜ್ರಿವಾಲ್‌ರ ಬಿಡುಗಡೆ ಆಗಿದೆ, ಮುಖ್ಯವಾಗಿ ಹರಿಯಾಣದಲ್ಲಿ ಆಮ್‌ಆದ್ಮಿ ಪಾರ್ಟಿಯ ಸ್ಟಾರ್ ಪ್ರಚಾರಕನಾಗಿ ಕೇಜ್ರಿವಾಲ್‌ರ ಬಂದರೆ ಬಿಜೆಪಿಗೆ ಲಾಭವಾಗಬಹುದು. ಕಾಂಗ್ರೆಸ್‌ಗೆ ಸೋಲಾಗಬಹುದು. ಹೇಗೂ ಬಿಜೆಪಿ ಕಾಂಗ್ರೆಸ್ ಅನ್ನು ಮುಸ್ಲಿಮರ ಪಾರ್ಟಿ ಎಂದೇ ಚಿತ್ರಿಸುತ್ತಿದೆ ಕೂಡ. ಹೀಗಾಗಿ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ ಎಂದಾಗಿದೆ. ಹರ್ಯಾಣದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂಬ ಸ್ಥಿತಿಯಿಂದ ಆಮ್ ಆದ್ಮಿ ಪಾರ್ಟಿ ಅಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಚೇತರಿಸಿಕೊಳ್ಳಬಹುದಾ? ಬಹುತಕ್ಕೆ ಬರದಿದ್ದರೂ ಸನಿಹಕ್ಕೆ ತಲುಪಬಹುದಾ? ಇವತ್ತು ಹರಿಯಾಣದಲ್ಲಿ ಎಂತಹ ಸ್ಥಿತಿ ಇದೆ ಎಂದರೆ ಬಿಜೆಪಿಯನ್ನು ಹರ್ಯಾಣದ ರೈತರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಫಸಲಿಗೆ ಕನಿಷ್ಠ ಬೆಂಬಲ ಬೆಲೆ ಕೊಡುತ್ತೇವೆ ಎಂದು ಮೋದಿ ಸರಕಾರ ವಂಚಿಸಿದೆ ಎಂದು ಅವರಲ್ಲಿ ಭಾರೀ ತಗಾದೆ ಇದೆ. ಇಲ್ಲಿ ಆಗಬಹುದಾದ ಇಂತಹ ನಷ್ಟಗಳೆಲ್ಲ ಆಮ್ ಆದ್ಮಿಯ ಸ್ವತಂತ್ರ ಸ್ಪರ್ಧೆಯ ಮೂಲಕ ಬ್ಯಾಲೆನ್ಸ್ ಆಗಬಹುದಾ? ಯಾಕೆ ಪ್ರಯತ್ನಿಸಿ ನೋಡಬಾರದು ಎಂದು ಆರೆಸ್ಸೆಸ್ ಯೋಚಿಸಿರಬಹುದು. ಇರಲಿ,

ಇನ್ನೊಂದು ಕಡೆ ಚೀಫ್ ಜಸ್ಟೀಸ್ ಚಂದ್ರಚೂಡರ ಮನೆಯ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು, ಆನಂತರ ಕೇಜ್ರಿವಾಲ್ ಬಿಡುಗಡೆಯಾಗಿರುವುದನ್ನು ಕೆಲವು ಪತ್ರಕರ್ತರು ಆಕಸ್ಮಿಕ ಎಂದು ಒಪ್ಪುವುದಿಲ್ಲ. ರಾಜಕೀಯ ಬಲ್ಲವರ ಮಾತುಗಳನ್ನು ತಿರಸ್ಕರಿಸುವುದಕ್ಕೂ ಆಗುವುದಿಲ್ಲ. ಇದರ ಹಿಂದೆ ಒಂದು ಅಜೆಂಡಾ ಇದೆಯೇ? ಯಾಕೆಂದರೆ ಒಬ್ಬ ಪ್ರಧಾನಿ ದೇಶದ ಮುಖ್ಯ ಜಡ್ಜ್ ನ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹಿಂದೆಂದೂ ನಡೆದಿಲ್ಲ. ರಾಜಕೀಯ ಲಾಭವಿಲ್ಲದೆ ಮೋದಿ ಹಾಗೆ ಮಾಡುವವರಲ್ಲ ಎಂದು ಕೂಡ ಚರ್ಚೆ ನಡೆಯುತ್ತಿದೆ.

ಏನೇ ಇರಲಿ, ಅಂತೂ ಈಗ ಕೇಜ್ರಿವಾಲ್ ಜೈಲಿನಿಂದ ಹೊರಗೆ ಬಂದಿದ್ದಾರೆ. ಮೋದಿ ಮತ್ತು ಕೇಜ್ರಿವಾಲ್‌ರ ನಡುವೆ ಒಳಗೊಳಗಿಂದ ರಾಜಿ ಏರ್ಪಟ್ಟಿದೆ ಎಂದು ಕೂಡಾ ಸಾಮಾಜಿಕ ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ಈ ಅಭಿಪ್ರಾಯವೇ ಸರಿಯಾದರೆ ಇವರಿಬ್ಬರ ನಡುವೆ ಈ ಸಂಧಿ ಸಂಜೋತಾ ಮಾಡಿಸಿದವರು ಯಾರು? ಅಣ್ಣಾ ಹಝಾರೆಯನ್ನು ಮನ್‌ಮೋಹನ್ ಸರಕಾರದ ವಿರುದ್ಧ ಫೀಲ್ಡ್ ಗೆ ಇಳಿಸಿದವರೇ ರಾಜೀಯನ್ನು ಮಾಡಿಸಿರಬಹದು. ಇವರೇ ದೇಶದ ಮುಖ್ಯ ನ್ಯಾಯಾಧೀಶರ ಮನೆಗೆ ದೇಶದ ಪ್ರಧಾನಿಯನ್ನು ಕಳುಹಿಸಿರಬಹುದೇ? ಇದನ್ನು ತಪ್ಪೆನ್ನುವುದಕ್ಕೂ ಆಗುವುದಿಲ್ಲ. ಮೋದಿ ಒಬ್ಬ ಆರೆಸ್ಸೆಸ್ ಸ್ವಯಂ ಸೇವಕ ಮತ್ತು
ಪ್ರಚಾರಕ್ ಆಗಿದ್ದವರು.

ಹರ್ಯಾಣದ ಚುನಾವಣೆಯಲ್ಲಿ ಇಂಡಿಯ ಕೂಟದ ಭಾಗ ವಾಗಿಯೂ ಕಾಂಗ್ರೆಸ್‌ನೊಂದಿಗೆ ಸಖ್ಯವಿಲ್ಲದೆ ಕೇಜ್ರಿವಾಲ್ ಪಾರ್ಟಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಒಂದು ವೇಳೆ ಕೇಜ್ರಿವಾಲ್‌ಗೆ ಮೋದಿ ಅಗದು ಅಂತ ಇಟ್ಟುಕೊಳ್ಳಿ. ಆದರೆ ಆರೆಸ್ಸೆಸ್‌ಗೆ ಕೇಜ್ರಿವಾಲ್ ಆಗದೆಂದಿಲ್ಲವಲ್ಲ. ಆರೆಸ್ಸೆಸ್ ವಿರುದ್ಧವಾಗಿ ಕೇಜ್ರಿವಾಲ್ ಎಂದಾದರೂ ನಡೆದು ಕೊಂಡಿದ್ದಾರಾ? ಇಲ್ಲ. ಅದರಂತೆ ಆಮ್‌ಆದ್ಮಿ ಪಾರ್ಟಿ ಮುಖ್ಯ ನಾಯಕರು ಎಲ್ಲಿಯೂ ಆರೆಸ್ಸೆಸ್ ವಿರುದ್ಧ ಚಕಾರ ಎತ್ತಿದ್ದೂ ಇಲ್ಲ. ಬಿಜೆಪಿಯನ್ನು ತೀವ್ರವಾಗಿ ವಿಮರ್ಶಿಸುವ ನಾಯಕರಲ್ಲಿ ಆಮ್‌ಆದ್ಮಿಯ ಸಂಜಯ್ ಸಿಂಗ್ ಇದ್ದಾರೆ. ಕೇಜ್ರಿವಾಲ್ ಸಹಿತ ಇವರೆಲ್ಲರೂ ಮೋದಿ ಮತ್ತು ಬಿಜೆಪಿಯನ್ನು ಕಟುವಾಗಿ ವಿರೋಧಿಸುವುದು ಮಾತ್ರ ಕಂಡು ಬರುತ್ತಿದೆ. ಈಗ ಬಿಜೆಪಿ ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಕೇಜ್ರಿವಾಲ್ ವಿರುದ್ಧ ಬಿಜೆಪಿ ಹಿಂದಿನಷ್ಟು ತೀವ್ರತೆ ವ್ಯಕ್ತಪಡಿಸುತ್ತಿಲ್ಲ ಎಂಬ ವಿಚಾರವೂ ಇದೆ.

ಹರ್ಯಾಣದಲ್ಲಿ ಆರೆಸ್ಸೆಸ್‌ಗೆ ಬಿಜೆಪಿ ಗೆಲ್ಲಬೇಕಾಗಿದೆ. ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಗೆಲ್ಲಬೇಕಾಗಿದೆ. ಯಾಕೆಂದರೆ ದೇಶದಲ್ಲಿ ಆರೆಸ್ಸೆಸ್ ಅಜೆಂಡ ಜಾರಿಗೊಳಿಸುವುದು ಅದಕ್ಕೆ ಪ್ರಾಮುಖ್ಯದ್ದು. ಅಲ್ಲಿ ಅದು ಮೋದಿ-ಕೇಜ್ರಿವಾಲ್ ಎಲ್ಲರನ್ನೂ ಬಳಸಬಹುದು.

ಮೋದಿಗೆ ಮೋದಿತ್ವ ವಿಜೃಂಭಿಸಬೇಕು ಎಂಬ ಕಾರಣದಿಂದ ಕೇಜ್ರಿವಾಲ್ ಜೈಲಿಗೆ ಹೋದರು. ಆದರೆ ಆರೆಸ್ಸೆಸ್‌ಗೆ ತನ್ನ ತತ್ವ ವಿಜೃಂಭಿಸುವುದರೊಂದಿಗೆ ಕಾಂಗ್ರೆಸ್ಸಿನ ತತ್ವ ಅಂದರೆ ಜಾತ್ಯತೀತತೆ ವಿರೋಧಿಗಳು ಹೇಳುವ ರೀತಿಯಲ್ಲಿ ಹೇಳಿದರೆ ಕಾಂಗ್ರೆಸ್ಸಿನ ಮೃದು ಹಿಂದುತ್ವದ ಪತನ ಆಗಬೇಕು. ಭಾರತ ಹಿಂದೂ ರಾಜ್ ಆಗಬೇಕು ಎಂಬುದು ಇಂದು ಗುಟ್ಟಾಗಿಲ್ಲ. ಇದನ್ನೇ ರಾಹುಲ್ ಗಾಂಧಿ ಪದೇ ಪದೇ ಹೇಳುವುದು ಕೂಡಾ. ಸಂವಿಧಾನ ಬದಲಿಸುವುದು ಆರೆಸ್ಸೆಸ್ ಮತ್ತು ಬಿಜೆಪಿಯ ಟಾರ್ಗೆಟ್ ಆಗಿದೆ. ಒಂದು ವೇಳೆ ಇದಕ್ಕೆ ಪೂರಕವಾಗಿ ಕೇಜ್ರಿವಾಲ್ ಕೆಲಸ ಮಾಡುವುದಾದರೆ ಅವರ ಬಿಡುಗಡೆ ಯಾಕಾಗಬಾರದು? ಮೋದಿ ಜೈಲಿಗೆ ಹಾಕಿಸಿದ ದಿಲ್ಲಿ ಸರಕಾರದ ಮದ್ಯ ನೀತಿ ಭ್ರಷ್ಟಾಚಾರ ಅದರ ಮುಂದೆ ಏನೇನೂ ಅಲ್ಲ.

ಇನ್ನು ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ಚಂದ್ರಚೂಡರ ಮನೆಯ ಪೂಜೆಯಲ್ಲಿ ಪ್ರಧಾನಿ ಭಾಗವಹಿಸಿದ್ದು ಮತ್ತು ಅದರ ನಂತರ ಕೇಜ್ರಿವಾಲ್ ಬಿಡುಗಡೆ ಹೊಂದಿದ್ದು ಇವತ್ತು ಬಲವಾದ ತರ್ಕಗಳಿಗೆ ಕಾರನವಾಗಿದ್ದು ಹೌದು. ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾದ ನಂತರ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅತಿಷಿ ಮರ್ಲಾನ ಮುಖ್ಯಮಂತ್ರಿಯಾದರು. ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯ ಮತ್ತು ತಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಕೇಜ್ರಿವಾಲ್ ಹೇಳಿಕೆ ನೀಡಿದರು. ಈಗ ಕಾಂಗ್ರೆಸ್‌ನೊಂದಿಗೆ ಸಖ್ಯ ಇಲ್ಲದೆ ಅಂದರೆ ಪ್ರತಿಪಕ್ಷಗಳ ಇಂಡಿಯಾ ಕೂಟದೊಂದಿಗೆ ಸಖ್ಯ ಇಲ್ಲದೆ ಸ್ವತಂತ್ರವಾಗಿ ಹರ್ಯಾಣ ಚುನಾವಣೆಯಲ್ಲಿ ಸ್ಪರ್ಧಿಸುವ ಆಮ್ ಆದ್ಮಿ ಪಾರ್ಟಿಗಾಗಿ ಅವರು ಪ್ರಚಾರ ಮಾಡಲು ಅವಕಾಶ ಮಾಡಿಕೊಂಡದ್ದು ಎಲ್ಲವೂ ಒಂದು ಅಜೆಂಡದ ಹಿಂದಿದೆ ಅನಿಸುವುದಿಲ್ಲವಾ? ಇದಕ್ಕಾಗಿ ಕೇಜ್ರಿವಾಲ್ ಜೈಲಿನಿಂದ ಹೊರಬಂದದ್ದು ಎಂದು ಬಹಳಷ್ಟು ಪತ್ರಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಈಗಲೂ ಚರ್ಚಿಸುತ್ತಿದ್ದಾರೆ.
ಹಾಗಿದ್ದರೆ ಅರೆಸ್ಸೆಸ್ ಕೇಜ್ರಿವಾಲ್ ಮೂಲಕವೂ ತನ್ನ ತತ್ವವನ್ನು ಮೇಲೆ ತಂದು ನಿಲ್ಲಿಸಬಹುದು ಎಂದಾಯಿತು. ಇಂದು ಆರೆಸ್ಸೆಸ್ ನ ವಿಚಾರಧಾರೆ ಗಟ್ಟಿಯಾಗಿ ದೇಶದಲ್ಲಿ ತಳವೂರಿದೆ. ಕೆಲವರ ಪ್ರಕಾರ ಹಾಗೇನಿಲ್ಲ, ಒಂದು ಚಿಕ್ಕ ವಿಭಾಗ ಮಾತ್ರ ಆರೆಸ್ಸೆಸ್ ವಿಚಾರಧಾರೆಯನ್ನು ಹೊಂದಿದೆ ಎಂದು ವಾದಿಸುವವರಿದ್ದಾರೆ. ನಿಜ ಹಾಗಲ್ಲ. ಈ ಸಲದ ಪಾರ್ಲಿಮೆಂಟು ಚುನಾವಣೆಯಲ್ಲಿ ಮೋದಿತ್ವ ಯಶಸ್ವಿಯಾಗಿಲ್ಲ. ಅದರರ್ಥ ಆರೆಸ್ಸೆಸ್ ವಿಚಾರಧಾರೆ ವಿಫಲವಾಗಿದೆ ಎಂದು ಒಪ್ಪುವುದಕ್ಕೆ ಕಾರಣಗಳಿಲ್ಲ.

ಎಲ್ಲೆಲ್ಲ ಇಂಡಿಯಾ ಕೂಟದವರೇ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟುತ್ತಾ ನಿಲ್ಲುತ್ತಾರೆ ಬಹುತೇಕ ಅಲ್ಲೆಲ್ಲ ಅವರು ಬಿಜೆಪಿಯನ್ನು ಗೆಲ್ಲಿಸುತ್ತಾರೆ. ಅಥವಾ ಇನ್ನೊಂದು ಅರ್ಥದಲ್ಲಿ ಆರೆಸ್ಸೆಸ್ ವಿಚಾರಧಾರೆ ಮೋಹನ್ ಭಾಗವತ್ ಹೇಳಿದಂತೆ ಹೆಚ್ಚು ಆಕ್ರಮಣಶೀಲವಾಗಲು ಅವಕಾಶ ಮಾಡಿ ಕೊಡುತ್ತಾರೆ.
ನಂತರ ಇಂಡಿಯ ಕೂಟದಲ್ಲಿ ಕೂತು ಮೋದಿಯನ್ನೋ ಬಿಜೆಪಿಯನ್ನೋ ತೀವ್ರವಾಗಿ ತರಾಟೆಗೆತ್ತಿಕೊಳ್ಳುವುದರಿಂದ ಏನು ಪ್ರಯೋಜನ? ಬಿಜೆಪಿಯನ್ನು ವಿರೋಧಿಸಿ ಜೈಲಿಗೆ ಹೋದವರು ಅವರ ಸ್ವಾರ್ಥದ ಕೆಲವು ಕಾರಣಗಳಿಗಾಗಿ ಹೋಗಿರಬಹುದು.

ಭ್ರಷ್ಟಾ ಚಾರದ ವಿಚಾರವೇ ಎತ್ತಿಕೊಳ್ಳಿ. ಅದಿಲ್ಲದ ಜಾಗ ಎಲ್ಲಿದೆ? ಮೋದಿಯನ್ನು ಎದುರು ಹಾಕಿದರೆ ಜೈಲಿಗೆ ಹೋಗಬೇಕು. ಪರ ನಿಂತರೆ ಅಧಿಕಾರ ಅನುಭವಿಸಬಹುದು. ನೀವು ಪುರಾವೆಗಳನ್ನು ಕೇಳಲ್ಲ ಅಂತ ಗೊತ್ತಿದೆ. ಮಹಾರಾಷ್ಟ್ರದಲ್ಲಿ ಅಸ್ಸಾಂನಲ್ಲಿ ಹೀಗೆ ದೇಶದ ನಾನಾಕಡೆ ಭ್ರಷ್ಟಾಚಾರದ ಹೆಸರಿನಲ್ಲಿ ಇಡಿ ಐಟಿ ಬೆಂಬತ್ತಿದ ರಾಜಕಾರಣಿಗಳು ಒಂದೊ ಮುಖ್ಯಮಂತ್ರಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸುತ್ತಿಲ್ವಾ? ಇಲ್ಲಿ ಭ್ರಷ್ಟಾಚಾರ ಬಿಜೆಪಿಗೆ ಮುಖ್ಯ ಅಲ್ಲ, ಬಿಜೆಪಿಗೆ ಮುಸ್ಲಿಮರನ್ನು ಸದೆ ಬಡಿಯುವ ಆಕ್ರಮಣ ಶೀಲತೆ ಬೇಕು. ಅದರ ಮೂಲಕ ವೋಟು ಗಳಿಸಬೇಕು. ಇವೆಲ್ಲ ನೂರಾರು ವರ್ಷಗಳಿಂದ ಈ ಸಮಾಜದಲ್ಲಿ ಕಟ್ಟಿಕೊಟ್ಟದ್ದರ ಫಲಿತಾಂಶವೂ ಹೌದು. ಪತ್ರಕರ್ತ ಅಮರೇಶ್ ಮಿಶ್ರಾ
ಅವರು ದೇಶದ ಮಿಡ್ಲ್ ಕ್ಲಾಸ್ ಹಿಂದೂಗಳಲ್ಲಿ ಹೆಚ್ಚಿನವರು ಸಂಘಪರಿವಾರದ ಮೆಂಟಾಲಿಟಿಯವರು ಎಂದು ಹೇಳುತ್ತಾರೆ.
ಹಾಗಿರುವುದರಿಂದ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುವುದು ಮತ್ತು ದೌರ್ಜನ್ಯ ಆಗುವುದನ್ನು ಸಂಭ್ರಮಿಸುವ ಮಾನಸಿಕತೆ ಈ ವರ್ಗದಲ್ಲಿ ಹುಟ್ಟಿಕೊಂಡಿತು. ಅಂದರೆ ಮುಸ್ಲಿಮರು ಎರಡನೇ ದರ್ಜೆಯ ಪ್ರಜೆಗಳಂತೆ ಪರಿಗಣಿಸಬೇಕಾದವರು, ದೇಶ ವಿರೋಧಿಗಳು ಇತ್ಯಾದಿ ಇತ್ಯಾದಿ ಎಂದು ಅವರು ನಂಬಿದ್ದಾರೆ ಎಂದೇ ಅಮರೇಶ್ ಮಿಶ್ರಾ ಹೇಳುತ್ತಿದ್ದಾರೆ. ನಿಜವೂ ಹೌದು. ಇಂತಹ ಮಾನಸಿಕತೆ ಇರುವುದರಿಂದ ರೈಲಿನಲ್ಲಿ ಪ್ರಯಾಣಿಸುವ ಮುಸ್ಲಿಂ ಮುದುಕನನ್ನು ಹಿಂದುತ್ವ ಗೂಂಡಾಗಳು ತದಕುವುದು ನಡೆಯುತ್ತಿದೆ. ಗೋ ಸಾಗಾಟದ ಹೆಸರಿನಲ್ಲಿ ಗುಂಪು ಸೇರಿ ಕೊಲ್ಲುವುದು, ಮಸೀದಿಗೆ ನುಗ್ಗಿ ದಾಂಧಲೆ ಮಾಡುವುದು, ಮಿಲಾದ್ ಮೆರವಣಿಗೆ ವಿರೋಧಿಸಿ ಬೆದರಿಕೆ ಹಾಕುವುದು ಇವೆಲ್ಲವೂ ನಡೆಯುತ್ತಿದೆ.

ವಿಷಯ ಬದಲಿಸೋಣ:
ಇವತ್ತು ಆರೆಸ್ಸೆಸ್ ವಿಚಾರಧಾರೆಗೆ ದೊಡ್ಡ ಸವಾಲು ಯಾರು? ಮುಸ್ಲಿಮರಾ? ಅಲ್ಲ. ಕಾಂಗ್ರೆಸ್ಸಾ? ಅಲ್ಲ. ಏಕೈಕ ವ್ಯಕ್ತಿಯಂತೆ ಕಂಡುಬರುತ್ತಿರುವುದು ರಾಹುಲ್ ಗಾಂಧಿ ಮಾತ್ರ. ಆದುದರಿಂದ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಸೆಳೆದ ರಾಜಕಾರಣಿಗಳಿಂದ ಮೊತ್ತ ಮೊದಲು ಬೈಸುವುದೇ ರಾಹುಲ್ ಗಾಂಧಿಗೆ. ಆನಂತರ ಮುಸ್ಲಿಮರಿಗೆ. ಇತ್ತೀಚೆಗಿನ ಉದಾಹರಣೆ ನೋಡಿ, ರಾಹುಲ್ ಗಾಂಧಿಗೆ ಕೊಲೆ ಬೆದರಿಕೆ ಒಡ್ಡಿದ್ದು ಯಾರು? ಯಾಕೆ? ಮೂರು ನಾಲ್ಕು ಬಾರಿ ಕಾಂಗ್ರೆಸ್ಸಿನಿಂದ ಗೆದ್ದು ಬಿಜೆಪಿ ಸೇರಿದ ಪಂಜಾಬಿನ ಬಿಟ್ಟು. ಅತ್ತ ಮಹಾರಾಷ್ಟ್ರದ ಬಿಜೆಪಿ ಶಾಸಕನೊಬ್ಬ ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿ ತಂದವರಿಗೆ ಬಹುಮಾನ ಘೋಷಿಸಿದರು. ಅಸ್ಸಾಮ್‌ನ ಮುಖ್ಯಮಂತ್ರಿ ರಾಹುಲ್ ಗಾಂಧಿಯ ಜನ್ಮವನ್ನೇ ಜಾಲಾಡಿದರು. ಇವರು ಮುಸ್ಲಿಮರನ್ನು ಬೈಯುತ್ತಾ ತಿರುಗುತ್ತಾರೆ. ರಾಹುಲ್ ಗಾಂಧಿ ಬಹಿರಂಗವಾಗಿ ಆರೆಸ್ಸೆಸ್ ವಿಚಾರಧಾರೆಯನ್ನು ಖಂಡಿಸುತ್ತಿದ್ದಾರೆ. ಸಂಸತ್ತಿನ ಒಳಗೂ ಹೊರಗೂ. ಅಮೆರಿಕಕ್ಕೆ ಹೋಗಿ ಅಲ್ಲಿಯೂ ಆರೆಸ್ಸೆಸ್ ನಾಗರಿಕರಿಗೆ ಸಮಾನ ಹಕ್ಕು ಕೊಡಲು ಬಯಸುವುದಿಲ್ಲ ಎಂದು ಹೇಳಿದರು. ಆರೆಸ್ಸೆಸ್ ಈ ದೇಶದ ಸಂವಿಧಾನವನ್ನು ಈ ದೇಶದಲ್ಲಿ ಇರುವ ಮೀಸಲಾತಿಯನ್ನು ಕಿತ್ತು ಹಾಕಲು ನೋಡುತ್ತಿದೆ ಎಂದು ಬಹಿರಂಗವಾಗಿ ಹೇಳಿದರು.

ವಾಸ್ತವದಲ್ಲಿ ರಾಹುಲ್‌ರನ್ನು ಬಿಟ್ಟರೆ ಇಂತಹ ದಿಟ್ಟತನ ಕಾಂಗ್ರೆಸ್ಸಿನ ಇತರ ಯಾರಲ್ಲೂ ಇಲ್ಲ. ಮೊತ್ತಮೊದಲು ಸಂಸತ್ತಿನಲ್ಲಿ ಮುಸ್ಲಿಮರ ಮೇಲೆ ಆದ ದೌರ್ಜನ್ಯಗಳನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದು. ಆನಂತರ ಅಖಿಲೇಶ್ ಯಾದವ್, ಪಪ್ಪೂ ಯಾದವ್ ತರದ ಇತರರು ಪ್ರಶ್ನಿಸಿದರು. ಇದು ಈಗಿನ ಚಿತ್ರಣ. ಕಾಂಗ್ರೆಸ್‌ನವರು ಸಂಸತ್ತಿನಲ್ಲಿ ಬಿಜೆಪಿಗೆ 240 ಸೀಟೇ ಇರುವುದು ಎಂಬ ಧೈರ್ಯದಿಂದ ಈಗ ಸ್ವಲ್ಪ ಮಾತಾಡುತ್ತಿದ್ದಾರೆ. ಮುಸ್ಲಿಮರ ಮೇಲೆ ದಾಳಿ ನಡೆಯುತ್ತಿದ್ದಾಗಲೂ ಕಾಂಗ್ರೆಸ್ ನವರು ಬಿಜೆಪಿಯ ಹಿಂದುತ್ವಕ್ಕೆ ಹೆದರಿ ಚುನಾವಣೆಯಲ್ಲಿ ಗೆಲ್ಲುವ ಭರವಸೆಯನ್ನೇ ಕಳಕೊಂಡು ಮೌನವಾಗಿದ್ದರು. ಆದರೆ ರಾಹುಲ್ ಗಾಂಧಿ ಕಾಂಗ್ರೆಸ್‌ನಲ್ಲಿ ಪುಟಿದೇಳದಿರುತ್ತಿದ್ದರೆ ಸಂಸತ್ತಿನಲ್ಲಿ ನೂರು ಸೀಟನ್ನು ಗೆಲ್ಲುವುದಕ್ಕೆ ಕಾಂಗ್ರೆಸ್‌ಗೆ ಸಾಧ್ಯವಿರಲಿಲ್ಲ ಎನ್ನುವವರಿದ್ದಾರೆ. ಇವತ್ತು ಕಾಂಗ್ರೆಸ್ ಚೇತರಿಸಿದ್ದರೆ ಅದಕ್ಕೊಬ್ಬ ರಾಹುಲ್ ಗಾಂಧಿಯೇ ಕಾರಣ. ಅವರು ಮೋದಿ ಸರಕಾರ ಬೆರಳೆಣಿಕೆಯ ಉದ್ಯಮಿಗಳಿಗೆ ಮಣೆ ಹಾಕುವುದನ್ನು ಪ್ರಶ್ನಿಸಿದರು. ಯುವಕರ ನಿರುದ್ಯೋಗದ ವಿಷಯವನ್ನು ಎತ್ತಿದರು. ಖಾಸಗಿಗಳಿಗೆ ದೇಶದ ಸಾರ್ವಜನಿಕ ಆಸ್ತಿ ಪರಭಾರೆ ಮಾಡುವುದನ್ನು ಪ್ರಶ್ನಿಸಿದರು.

ಹೀಗೆ ಬಿಜೆಪಿಗೂ ಸಂಘಪರಿವಾರಕ್ಕೂ ದೊಡ್ಡ ಎದುರಾಳಿಯಾಗಿ ರಾಹುಲ್ ಗಾಂಧಿಯಿದ್ದಾರೆ. ಮುಸ್ಲಿಮರಲ್ಲ. ಮುಸ್ಲಿಮರ ವಿಷಯದಲ್ಲಿ ಮೋದಿತ್ವ ಬಹಳಷ್ಟು ಸಾಧನೆಯನ್ನು ಅವರ ಲೆಕ್ಕಕ್ಕೆ ಮಾಡಿಯಾಯಿತು. ಸುಪ್ರೀಂಕೋರ್ಟಿನ ಮೂಲಕ ಮುಸ್ಲಿಮರು ಬಾಬರಿ ಮಸೀದಿ ಕಳಕೊಂಡರು. ಗ್ಯಾನ್‌ವ್ಯಾಪಿ ಮಸೀದಿ, ಮಥುರಾದ ಈದ್‌ಗಾಹದ ಪರಿಸ್ಥಿತಿಯೂ ಭಿನ್ನವಲ್ಲ. ನರಸಿಂಹರಾವ್ ಸರಕಾರ ಧಾರ್ಮಿಕ ಯಥಾ ಸ್ಥಿತಿ ಕಾನೂನು ತಂದದ್ದಕ್ಕೆ ಕೋರ್ಟಿನಲ್ಲಿಯೂ ಮನ್ನಣೆ ಸಿಗುತ್ತಿಲ್ಲ ಎಂದು ಮುಸ್ಲಿಮರಿಗೆ ಅನಿಸುತ್ತಿದೆ. ಯಾರೊ ಒಬ್ಬರು ಮುಸ್ಲಿಮರ ಪ್ರಾಚೀನ ಮಸೀದಿ ತಮ್ಮದೆಂದು ದೂರು ಕೊಡುತ್ತಾರೆ. ಜಡ್ಜ್ ಗಳು ವಿಚಾರಣೆಗೆತ್ತಿಕೊಳ್ಳುತ್ತಿದ್ದಾರೆ. ಬಹುಶ ಮೋದಿ ಭಾರತದಲ್ಲಿ ಮುಸ್ಲಿಮರು ಅನುಭವಿಸಿದಷ್ಟು ಈ ಹಿಂದೆ ವಾಜಪೇಯಿಯ ಬಿಜೆಪಿ ಸರಕಾರ ಇದ್ದಾಗಲೂ ಅನುಭವಿಸಿಲ್ಲ ಎಂದರೆ ಸರಿಯಾದೀತು. ಅಂದರೆ ಇವೆಲ್ಲದ್ದರ ನಡುವೆ ಆರೆಸ್ಸೆಸ್ ವಿಚಾರಧಾರೆಗೆ ಇವತ್ತು ಒಡ್ಡುತ್ತಿರುವ ಸವಾಲು ಚಿಕ್ಕದಲ್ಲ. ಅದನ್ನು ಹಿಂದುಳಿದ ವರ್ಗ ಒಬಿಸಿಗಳು ದಲಿತರು ಅರ್ಥ ಮಾಡಿಕೊಂಡದ್ದರಿಂದ ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಗಳಿಸಲು ಕಷ್ಟವಾಯಿತು. ಮುಸ್ಲಿಮರು ತಮ್ಮ ಅಸ್ತಿತ್ವಕ್ಕೆ ಆರೆಸ್ಸೆಸ್ ವಿಚಾರಧಾರೆ ಎಷ್ಟೇ ದೊಡ್ಡ ಸವಾಲು ಎಸೆದರೂ ಅವರ ಮಸೀದಿಗಳನ್ನು ಕಿತ್ತುಕೊಂಡರೂ ಅವರ ಮೋಬ್ ಲಿಂಚಿಂಗ್ ನಡೆದಾಗಲೂ ಈಗ ಅವರ ವಕ್ಫ್ ಆಸ್ತಿಗೆ ಕೈ ಹಾಕಿದಾಗಲೂ ಕಾನೂನಾತ್ಮಕವಾಗಿಯೇ ಎದುರಿಸಿದ್ದಾರೆ. ಕೋರ್ಟಿನ ಕಟ್ಟೆ ಹತ್ತಿದ್ದಾರೆ. ಬಹುಶಃ ತಮ್ಮ ಅಸ್ತಿತ್ವವನ್ನು ಎಂತಹ ಶಕ್ತಿಯಿಂದಲೂ ಇಲ್ಲದಂತೆ ಮಾಡಲು ಸಾಧ್ಯವಿಲ್ಲ ಎಂಬ ವಿಶ್ವಾಸ ಅದಕ್ಕೆ ಕಾರಣವಾಗಿದೆ. ಅವರಿಗೆ ಸಿಗುವ ಧಾರ್ಮಿಕ ಶಿಕ್ಷಣವೂ ಅಂತಹದ್ದೇ. ಒಂದು ವೇಳೆ ಸಾವು ಸಂಭವಿಸಿದರೂ ಸೋತರೂ ಅದು ದೇವ ವಿಧಿ ಎಂದು ನಂಬುತ್ತಾರೆ. ಢರೋ ಮತ್ ಢರಾವೋ ಮತ್ ಎಂದು ಹೇಳುವ ರಾಹುಲ್ ಗಾಂಧಿ ಕೂಡ ಸಾವನ್ನು ಮೀರಿ ನಿಂತವರಂತೆ ಅಂದರೆ ಸಾಯುವುದಕ್ಕೆ ಹೆದರದವರಂತೆ ಆರೆಸ್ಸೆಸ್ ವಿಚಾರಗಳೊಂದಿಗೆ ಹೋರಾಡುತ್ತಿದ್ದಾರೆ. ಕೇಜ್ರಿವಾಲ್‌ರ ಆಮ್‌ ಆದ್ಮಿ ಪಾರ್ಟಿಯೇ ಇರಲಿ, ಬಿಜೆಪಿಯೊಂದಿಗೆ ಸಖ್ಯ ಮಾಡಿ ನಂತರ ಕಡಿದುಕೊಂಡ ಇತರ ಪಾರ್ಟಿಯಾಗಲಿ ಆರೆಸ್ಸೆಸ್ ವಿರುದ್ಧ ಧ್ವನಿಯೆತ್ತುವ ಧೈರ್ಯ ಹೊಂದಿಲ್ಲ ಎಂಬುದಂತೂ ಸತ್ಯ. ಆದರೆ ಇವೆಲ್ಲವನ್ನೂ ಈಗ ಜನ ಅರ್ಥಮಾಡಿಕೊಂಡಿದ್ದಾರೆ ಮತ್ತು ಒಂದಿಲ್ಲ ಒಂದು ರೀತಿಯಲ್ಲಿ ಧ್ವನಿಯೆತ್ತದವರೆಲ್ಲ ಅದರದ್ದೇ ಭಾಗವಾಗಿದ್ದಾರೆ ಎಂದು ಜನ ಈಗ ತಿಳಿದುಕೊಂಡಿದ್ದಾರೆ.

ವಿಷಯಕ್ಕೆ ಬರೋಣ:
ದೇಶದ ರಾಜಕೀಯದಲ್ಲಿ ಕೇಜ್ರಿವಾಲ್‌ರ ಮೂಲಕ ಯಾವುದೋ ದೊಡ್ಡ ಸಾಧನೆ ಮಾಡುವ ಪ್ರಯತ್ನವಂತೂ ನಡೆಯುತ್ತಿದೆ. ಮುಖ್ಯಮಂತ್ರಿ ಗಾದಿಯನ್ನು ಇಟ್ಟುಕೊಂಡೇ ಜೈಲಿಗೆ ಹೋದ ಕೇಜ್ರಿವಾಲ್ ಮೋದಿಗೆ ಮಣಿಯಲಾರೆ ಎಂದು ಸಾಬೀತು ಪಡಿಸಿದರು. ಸಂಘೀ ವಿಚಾರಗಳಿಗೆ ಮಣಿಯುತ್ತಾರೆ ಎನ್ನುವುದು ಬರೇ ಆರೋಪವಾಗದು. ರೈತರ ಚಳವಳಿಯ ಸಂದರ್ಭದಲ್ಲಿ ಕೇಜ್ರಿವಾಲ್ ದೊಡ್ಡ ಮಾತಾಡಿದ್ದಿದೆ ನಿಮಗೂ ಗೊತ್ತು. ಅದೇ ವೇಳೆ ಸಿಎಎ ಸಂದರ್ಭದಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆ ಕೂತ ಮಹಿಳೆಯರ ವಿರುದ್ಧ ಸಂಘಿಗಳು ಎಗರಾಡಿದಾಗ ಈ ಕೇಜ್ರಿವಾಲ್ ಎಷ್ಟು ಮಾತಾಡಿದ್ದರು? ಒಂದು ವೇಳೆ ಮಾತಾಡಿದ್ದರೆ ಆಮ್ ಆದ್ಮಿಪಾರ್ಟಿ ದಿಲ್ಲಿಯಲ್ಲಿ ಗೆಲ್ಲುತ್ತಿರಲೂ ಇಲ್ಲ. ಯಾರೇ ಹೇಳಿದರೂ ಅವರು ಮಾತಾಡುವವರಲ್ಲ ಎನ್ನುವುದು ಇನ್ನೊಂದು ಮಾತು. ಈಗ ಕೇಜ್ರಿವಾಲ್ ಮನೀಷ್ ಸಿಸೋಡಿಯ ಹೊರ ಬಂದರು. ಹೀಗೆ ಇನ್ನೂ ಕೆಲವರು ಹೊರ ಬರಬಹುದು. ಸಿಎಎ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ಬಂಧಿಸಲಾದ ಉಮರ್ ಖಾಲಿದ್ ನಾಲ್ಕು ವರ್ಷಗಳಿಂದ ಬಿಡುಗಡೆಯಿಲ್ಲದೆ ಜೈಲಿನಲ್ಲಿದ್ದಾರೆ. ಕೇಜ್ರಿವಾಲ್‌ಗೆ ಜಾಮೀನುಕೊಟ್ಟ ಕೋರ್ಟಿಗೆ ಉಮರ್ ಖಾಲಿದ್‌ಗೆ ಜಾಮೀನು ಕೊಡಲು ಯಾಕೆ ಕಷ್ಟವಾಗುತ್ತಿದೆ. ಅವರ ಪ್ರಕರಣ ವಿಚಾರಣೆಯ ಟೇಬಲ್ಲಿಗೆ ಯಾಕೆ ಬಂದಿಲ್ಲ? ಸ್ವರ ಭಾಸ್ಕರ್ ಹೇಳಿದಂತೆ ಮುಸ್ಲಿಮರನ್ನು ದೇಶದ್ರೋಹಿ, ಭಯೋತ್ಪಾದಕ ಮಾಡುವುದು ಬಹಳ ಸುಲಭ ಇದೆ. ಬೆಂಗಳೂರಿನ ಹೈಕೋರ್ಟು ಜಡ್ಜ್ ಒಬ್ಬರು ಮುಸ್ಲಿಮರು ಹೆಚ್ಚಿರುವ ಜಾಗವನ್ನೇ ಪಾಕಿಸ್ತಾನ ಕರೆಯುವ ಮಟ್ಟಕ್ಕೂ ಹೋದರು. ಸುಪ್ರೀಂಕೋರ್ಟು ಈ ಘಟನೆಯ ವರದಿ ಕೇಳಿದೆ ಎಂಬುದು ಇನ್ನೊಂದು ವಿಚಾರ. ಆದರೆ ಕೋರ್ಟಿನ ಬಾಯಿಂದ ಇಂತಹ ಮಾತುಗಳು ಬರುತ್ತಿವೆ. ಮೋದಿ ಭಾರತದ ವಿಶೇಷ ಇದು. ಈ ವಿಶೇಷದ ನಡುವೆ ಅದೇ ಕೋರ್ಟಿನಲ್ಲಿ ಮುಸ್ಲಿಮರು ನ್ಯಾಯಕ್ಕಾಗಿ ಗೋಗರೆಯುತ್ತಿದ್ದಾರೆ.

ಮುಸ್ಲಿಮರನ್ನು ದಮನಿಸಬೇಕೆಂಬುದು ಈ ಹಿಂದೆ ಹೇಳಿದಂತೆ ಈ ದೇಶದ ಬಹುತೇಕ ದೊಡ್ಡದಾದ ಒಂದು ವರ್ಗದ ನರನಾಡಿಗಳಲ್ಲಿ ರಕ್ತದಂತೆ ಹರಿದಾಡುತ್ತಿದೆ. ಹರಿಯಾಣದ ಫರೀದ್ ಪುರದಲ್ಲಿ ಆರ್ಯನ್ ಎಂಬ ಚಿಕ್ಕ ಪ್ರಾಯದ ಯುವಕ ನನ್ನು ಗೋರಕ್ಷಕರು ಕೊಂದದ್ದು ಮುಸ್ಲಿಮ್ ಎಂದಾಗಿತ್ತು. ಅಂದರೆ ಕೊಲ್ಲಬೇಕಾದವರು ಮುಸ್ಲಿಮರು ಎಂದು ಇಲ್ಲಿ ಒಂದು ಗೂಂಡಾ ಪಡೆಯನ್ನೇ ಕಟ್ಟಿಡಲಾಗಿದೆ. ಇದಕ್ಕಾಗಿ ವಿವಿಧ ಹೆಸರಿನಲ್ಲಿ ಹಲವು ಸಂಘಟನೆಗಳನ್ನು ಕಟ್ಟಿ ಒಂದು ಸಂಘ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಕಾಂಗ್ರೆಸ್‌ನ ತತ್ವ ಮೂಲೆಗುಂಪಾಗಿ ಆರೆಸ್ಸೆಸ್‌ನ ಹಿಂದುತ್ವ ವಿಜೃಂಭಿಸುತ್ತಿದೆ. ಆದುದರಿಂದ ಆರೆಸ್ಸೆಸ್ಸ್ ವಿಚಾರಧಾರೆಯನ್ನು ವಿರೋಧಿಸುತ್ತಿರುವ ರಾಹುಲ್ ಗಾಂಧಿಯನ್ನು ಕೂಡ ಬಹಿರಂಗವಾಗಿ ಕೊಲೆ ಮಾಡಲು ಎಗ್ಗಿಲ್ಲದೆ ಕರೆ ನೀಡಲಾಗುತ್ತಿದೆ. ಹರ್ಯಾಣದ ಫರೀದ್‌ಪುರದಲ್ಲಿ ಆರ್ಯನ್ ಹತ್ಯೆ ಮಾಡಿದ ಬಜರಂಗ ದಳ ನಾಯಕ ಕೌಶಿಕ್‌ನು ಆರ್ಯನ್ ತಂದೆಯಲ್ಲಿ ತಾನು ಗೊತ್ತಿಲ್ಲದೆ ಬ್ರಾಹ್ಮಣನ ಹತ್ಯೆ ಮಾಡಿದ್ದು ಎಂದು ಹೇಳಿಕೊಂಡ. ಅಂದರೆ ಸಂಘಪರಿವಾರ ಇಂತಹವರಲ್ಲಿ ಎಷ್ಟು ಕ್ರೂರವಾದ ಮಾನಸಿಕತೆಯನ್ನು ಕಟ್ಟಿ ಕೊಡುತ್ತದೆ ಎಂದು ಅರ್ಥವಾಗುತ್ತದೆ.

ನೋಡಿ, ಹರ್ಯಾಣದಲ್ಲಿ ಕೇಜ್ರಿವಾಲ್ ಸ್ವತಂತ್ರವಾಗಿ ಸ್ಪರ್ಧಿಸುವುದರಿಂದ ಕಾಂಗ್ರೆಸ್ಸಿಗೆ ಹಾನಿಯಾಗುವುದು. ಈ ಹಾನಿ ಇನ್ನಷ್ಟು ಹೆಚ್ಚು ಆಗಬೇಕೆಂಬ ಕಾರಣಕ್ಕಾಗಿ ಕೇಜ್ರಿವಾಲ್‌ರ ಬಿಡುಗಡೆಯಾಗಿದೆ ಎನ್ನುವ ಚರ್ಚೆಗಳನ್ನು ನಿರಾಕರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ವಿಚಾರಧಾರೆಗೆ ಕೇಜ್ರಿವಾಲ್ ರಿಂದ ಹಾನಿಯಾಗಲಿ, ಆರೆಸ್ಸೆಸ್ ನಿಂದಲೇ ಆಗಲಿ. ಸೋಲುವುದು ಜಾತ್ಯತೀತವಾದಿಗಳು, ಸಂವಿಧಾನದ ಮೌಲ್ಯಗಳು ಎನ್ನುವುದಕ್ಕೆ ಎರಡು ಮಾತಿಲ್ಲ. ಹಲವು ಮುಸ್ಲಿಮರ ಹತ್ಯೆಗಳು ನಡೆಯುತ್ತವೆ. ಅದನ್ನು ಶೌರ್ಯದಂತೆ ತಿಳಿದುಕೊಳ್ಳುವವರು ಇನ್ನಷ್ಟು ಹತ್ಯೆ ಕೊಲೆಗಳನ್ನು ಮಾಡುತ್ತಾರೆ. ಇದೇ ವೇಳೆ ಮತ್ತು ಆರೆಸ್ಸೆಸ್ ವಿಚಾರಧಾರೆಯನ್ನು ವಿಫಲಗೊಳಿಸಿದರೆ ಇಂತಹ ಹಾನಿಗಳ ಪ್ರಮಾಣ ಕಡಿಮೆಯಾಗುತ್ತದೆ. ಮುಸ್ಲಿಮರ ರಕ್ಷಣೆಯ ಬಗ್ಗೆ ಯಾರಿಗೂ ಮಾತಾಡಲು ಮನಸ್ಸಿಲ್ಲದ ಇಂದಿನ ಸ್ಥಿತಿಯಲ್ಲಿ ಸಂವಿಧಾನ ಪ್ರತಿಪಾದಿಸುವ ಮೌಲ್ಯಗಳ ಸಾರಾಸಗಟು ಉಲ್ಲಂಘನೆ ನಡೆಯುತ್ತಿದೆ.

ಇತಿಹಾಸವನ್ನು ತೆರೆದು ನೋಡುವಾಗ ಮುಸ್ಲಿಮರನ್ನು ಎರಡನೆಯ ದರ್ಜೆ ನಾಗರಿಕರನ್ನಾಗಿ ಮಾಡಲು ಕಾಂಗ್ರೆಸ್ಸಿನ ಹಿಂದುತ್ವ ತೀವ್ರವಾದಿಗಳು ಮತ್ತು ಉದಾರವಾದಿಗಳು ಸಮಸಮ ಕೆಲಸ ಮಾಡಿದ್ದಾರೆ. ಪಂಡಿತ್ ನೆಹರೂರಿಗೂ ಮುಸ್ಲಿಮರು ಮುಖ್ಯವಾಹಿನಿಯಿಂದ ದೂರವಿದ್ದಾರೆ ಎಂಬ ಅಭಿಪ್ರಾಯವೇ ಇದ್ದುದು.. ಆದುದರಿಂದ 1923ರಲ್ಲಿ ಹಿಂದುತ್ವ ಪ್ರಾಬಲ್ಯದ ರಾಷ್ಟ್ರೀಯತೆಯ ಬಗ್ಗೆ ವರದಿ ಮಂಡಿಸಿ ಅವರು ಕಾಂಗ್ರೆಸ್ ಸಮ್ಮೇಳನದಲ್ಲಿ ಜಾರಿಗೊಳಿಸುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್ಸಿನ ಮೃದು ಹಿಂದುತ್ವದಲ್ಲಿ ಮುಸ್ಲಿಮರನ್ನು ಬಡಿ ಹೊಡಿ ಕೊಲ್ಲುವುದು ಸಹಿಸುವುದಾಗಿರಲಿಲ್ಲ. ಅಥವಾ ಸಹಿಸುವುದಿಲ್ಲ ಎಂದು ತೋರಿಸಿಕೊಳ್ಳುತ್ತಿದ್ದರು. ಬಿಜೆಪಿಯ ತೀವ್ರ ಆಕ್ರಮಣಕಾರಿ ಹಿಂದುತ್ವದಲ್ಲಿ ಮುಸ್ಲಿಮರ ಹತ್ಯೆ ಕನಿಷ್ಠ ವಿಷಾದದ ವಿಷಯವೂ ಅಲ್ಲ. ಹರ್ಯಾಣದ ಫರೀದಾಬಾದ್‌ನಲ್ಲಿ ಹತ್ಯೆಯಾದ ಆರ್ಯನ್‌ನ ತಾಯಿ ಎತ್ತಿದ ಪ್ರಶ್ನೆ ಮುಸ್ಲಿಮರು ನಮ್ಮಂತಹವರೇ ಅಲ್ವ. ಅವರು ಕೊಲ್ಲಬೇಕಾದವರಾ ಎಂದಾಗಿದೆ. ಅವರು ಎತ್ತಿದ ಈ ಪ್ರಶ್ನೆಯನ್ನು ಪ್ರತಿಯೊಬ್ಬ ಭಾರತೀಯನು ತಮ್ಮ ಆತ್ಮದೊಂದಿಗೆ ಕೇಳಬೇಕಾಗಿದೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಮೂವತ್ತಕ್ಕೂ ಹೆಚ್ಚು ಮುಸ್ಲಿಂ ಯುವಕರನ್ನು ಹತ್ಯೆ ಮಾಡಲಾಗಿದೆ. ಏಳು ದಲಿತ ಸಹಿತ ಇತರ ಸಮುದಾಯದ ಜನರನ್ನು ಕೊಲೆ ಮಾಡಲಾಗಿದೆ.