ಸ್ವಂತ ಮಗಳಿಗೆ ಮದುವೆ ಮಾಡಿಸಿ, ಇತರ ಯುವತಿಯರನ್ನು ಸನ್ಯಾಸಿಯಾಗಲು ಏಕೆ ಪ್ರೇರೇಪಿಸುತ್ತೀರಿ? ಜಗ್ಗಿ ವಾಸುದೇವ್ ರನ್ನು ಪ್ರಶ್ನಿಸಿದ ಮದ್ರಾಸ್ ಹೈಕೋರ್ಟ್

0
246

ಸನ್ಮಾರ್ಗ ವಾರ್ತೆ

ನಿಮ್ಮ ಮಗಳನ್ನು ನೀವು ಮದುವೆ ಮಾಡಿಸಿದ್ದೀರಿ. ಹೀಗಿರುತ್ತ ಇತರ ಯುವತಿಯರು ಲೌಕಿಕ ಬದುಕನ್ನು ಉಪೇಕ್ಷಿಸಿ ಸನ್ಯಾಸತ್ವವನ್ನು ಸ್ವೀಕರಿಸಬೇಕು ಎಂದು ಯಾಕೆ ನೀವು ಪ್ರೇರೇಪಿಸುತ್ತೀರಿ ಎಂದು ವಿವಾದಾತ್ಮಕ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ಅವರನ್ನು ಮದ್ರಾಸ್ ಹೈಕೋರ್ಟು ಪ್ರಶ್ನಿಸಿದೆ.

ಉನ್ನತ ಶಿಕ್ಷಣ ಪಡೆದಿರುವ ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ತನ್ನ ಇಶಾ ಯೋಗ ಸೆಂಟರ್ ನಲ್ಲಿ ಸ್ಥಿರವಾಗಿ ವಾಸಿಸಲು ಪ್ರೇರೇಪಿಸಿದ್ದಾರೆ ಎಂದು ಹೇಳಿ ಜಗ್ಗಿ ವಾಸುದೇವ್ ವಿರುದ್ಧ ತಮಿಳುನಾಡಿನ ಕೃಷಿ ವಿಶ್ವವಿದ್ಯಾಲಯದ ಅಧ್ಯಾಪಕ ಎಸ್ ಕಾಮರಾಜ್ ನೀಡಿರುವ ದೂರಿನ ಮೇಲೆ ವಿಚಾರಣೆ ನಡೆಸುತ್ತಾ ಮದ್ರಾಸ್ ಹೈಕೋರ್ಟ್ ಈ ಪ್ರಶ್ನೆ ಎಸೆದಿದೆ.

ತನ್ನಿಬ್ಬರು ಮಕ್ಕಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು ಎಂದು ಈ ಕಾಮರಾಜ್ ಅವರು ನ್ಯಾಯಾಲಯದ ಮುಂದೆ ವಿನಂತಿಸಿದ್ದರು.

ಹಾಗೆಯೇ ನ್ಯಾಯಾಲಯದಲ್ಲಿ ಹಾಜರಾದ ಆ ಇಬ್ಬರು ಹೆಣ್ಣು ಮಕ್ಕಳು ತಾವು ಸ್ವ ಇಚ್ಛೆಯಿಂದ ಇಶಾ ಫೌಂಡೇಶನ್ ನಲ್ಲಿ ವಾಸಿಸುತ್ತಿದ್ದೇವೆ ಮತ್ತು ತಾವು ಬಂದನದಲ್ಲಿಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣದ ಕುರಿತಂತೆ ಕೂಲಂಕುಷ ವರದಿಯನ್ನು ಸಲ್ಲಿಸಬೇಕು ಎಂದು ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.