ಸನ್ಮಾರ್ಗ ವಾರ್ತೆ
ಅಂಕಾರಾ: ಮೆಕ್ಕಾ ಒಪ್ಪಂದದ ಕುರಿತು ಟರ್ಕಿ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಉಂಟಾದರೆ ಟರ್ಕಿ ಯುದ್ಧಕ್ಕೆ ಧುಮುಕುವುದು ಅನಿವಾರ್ಯವೇ ಎಂಬ ಪ್ರಶ್ನೆ ಎದ್ದಿದೆ. ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ಸಹಿ ಹಾಕಿದ ಜಂಟಿ ರಕ್ಷಣಾ ಒಪ್ಪಂದದ ಅನುಮೋದನೆ ಕುರಿತು ನಡೆದ ಚರ್ಚೆಯ ವೇಳೆ ಟರ್ಕಿ ಸಂಸತ್ತಿನಲ್ಲಿ ಈ ನಿರ್ಣಾಯಕ ಪ್ರಶ್ನೆ ಹೊರಹೊಮ್ಮಿದೆ. ಪಾಕಿಸ್ತಾನದ ಮೇಲಿನ ದಾಳಿಯನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುವುದು ಎಂಬ ಒಪ್ಪಂದದ ಷರತ್ತಿನಿಂದಾಗಿ ಈ ಪ್ರಶ್ನೆ ಮೂಡಿದೆ.
ಈ ಮಧ್ಯೆ, ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ನಡುವಿನ ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಂಸತ್ತು ಅನುಮೋದನೆ ನೀಡಿದೆ. ಗುರುವಾರ ನಡೆದ ಮತದಾನದಲ್ಲಿ 279 ಜನರು ಒಪ್ಪಂದವನ್ನು ಬೆಂಬಲಿಸಿದರು ಮತ್ತು 119 ಜನರು ವಿರೋಧಿಸಿದರು. ಒಪ್ಪಂದವನ್ನು ಅನುಮೋದಿಸಿದ ತಕ್ಷಣವೇ ಟರ್ಕಿ ಸೇನೆಯನ್ನು ಯುದ್ಧಕ್ಕೆ ಕಳುಹಿಸಲು ಸಾಧ್ಯವಿಲ್ಲ ಮತ್ತು ಸೈನ್ಯವನ್ನು ನಿಯೋಜಿಸಲು ಸಂಸತ್ತಿನ ವಿಶೇಷ ಅನುಮೋದನೆಯ ಅಗತ್ಯವಿದೆ ಎಂದು ಟರ್ಕಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಒಪ್ಪಂದದ ಕುರಿತು ನಡೆದ ಚರ್ಚೆಯ ಸಮಯದಲ್ಲಿ, ಡೆಮಾಕ್ರಟ್ ಪಾರ್ಟಿಯ ವಿರೋಧ ಪಕ್ಷದ ನಾಯಕಿ ಮತ್ತು ಸಂಸದೀಯ ಗುಂಪಿನ ಉಪನಾಯಕಿ ಗುಲಿಸ್ತಾನ್ ಕಿಲಿಚ್ ಈ ನಿರ್ಣಾಯಕ ಪ್ರಶ್ನೆಯನ್ನು ಎತ್ತಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಾಗಿ, ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಅದನ್ನು ಟರ್ಕಿಯ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆಯೇ? ಎಂಬುದು ಅವರ ಪ್ರಶ್ನೆಯಾಗಿತ್ತು.
ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲದ ಸಂಘರ್ಷ ಮತ್ತು ಎರಡೂ ದೇಶಗಳ ಪರಮಾಣು ಸಾಮರ್ಥ್ಯಗಳನ್ನು ಬೆಟ್ಟು ಮಾಡಿದ ಅವರು, ಪಾಕಿಸ್ತಾನವು ಸಹಾಯ ಕೋರಿದರೆ ಟರ್ಕಿಯ ಪ್ರತಿಕ್ರಿಯೆಯನ್ನು ಯಾರು ನಿರ್ಧರಿಸುತ್ತಾರೆ ಎಂದು ಪ್ರಶ್ನಿಸಿದರು.
ನಂತರ ಟರ್ಕಿ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯ ಫುವಾಟ್ ಒಕ್ತಾಯ್ ಮಾತನಾಡಿ, ಟರ್ಕಿಯು ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಅಥವಾ ನಿಯಂತ್ರಣವಿಲ್ಲದ ರೀತಿಯಲ್ಲಿ ಯಾವುದೇ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ವಿದೇಶದಲ್ಲಿ ಪಡೆಗಳನ್ನು ನಿಯೋಜಿಸಲು ಸಂಸತ್ತಿನ ವಿಶೇಷ ಅನುಮೋದನೆಯ ಅಗತ್ಯವಿದೆ ಎಂದೂ ಅವರು ಹೇಳಿದರು.
ಪ್ರದೇಶದ ಭದ್ರತಾ ಪರಿಸ್ಥಿತಿ ಮತ್ತು ಇರಾನ್ನೊಂದಿಗಿನ ಸಂಘರ್ಷದ ಸಾಧ್ಯತೆಯು ಈ ಹಿಂದೆ ಒಪ್ಪಂದದ ಕುರಿತು ಅನೇಕ ಪ್ರಶ್ನೆಗಳನ್ನು ಎತ್ತಿತ್ತು. ಆದಾಗ್ಯೂ, ಈ ಒಪ್ಪಂದವು ಇರಾನ್ ಅಥವಾ ಇನ್ನಾವುದೇ ದೇಶವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಟರ್ಕಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಯೆಮೆನ್ನ ಹೂತಿ ಬಂಡುಕೋರರ ದಾಳಿಯ ವಿರುದ್ಧ ಹೆಚ್ಚಿನ ಪ್ರಾದೇಶಿಕ ಬೆಂಬಲವನ್ನು ಪಡೆಯುವುದು ಮತ್ತು ಕೇವಲ ಯುನೈಟೆಡ್ ಸ್ಟೇಟ್ಸ್ ಅನ್ನು ನೆಚ್ಚಿಕೊಳ್ಳದೆ ಹೆಚ್ಚಿನ ದೇಶಗಳೊಂದಿಗೆ ಭದ್ರತಾ ಸಹಕಾರವನ್ನು ಬಲಪಡಿಸುವುದು ಸೌದಿ ಒಪ್ಪಂದದ ಗುರಿಯಾಗಿದೆ ಎಂದು ನಂಬಲಾಗಿದೆ.












