ಸನ್ಮಾರ್ಗ ಸಂಪಾದಕೀಯ
ತಲಾಕ್ ವ್ಯವಸ್ಥೆಯ ಮೇಲೆ ಚರ್ಚೆಗೆ ತೆರೆದುಕೊಳ್ಳುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ನಟಿ ಮತ್ತು ಮಾಡೆಲ್ ಆಗಿದ್ದ ತ್ವಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆರು ತಿಂಗಳ ಹಿಂದೆ ಇವರನ್ನು ನೋಯ್ಡಾದ ಸಮರ್ಥ್ ಸಿಂಗ್ ವಿವಾಹವಾಗಿದ್ದರು. ಆ ಬಳಿಕ ಇವರು ಮಧ್ಯಪ್ರದೇಶಕ್ಕೆ ವಾಸ ಬದಲಾಯಿಸಿದರು. ಈ ಸಮರ್ಥ್ ಸಿಂಗ್ ಅವರ ತಾಯಿ ಗಿರಿವಾಲಾ ಸಿಂಗ್ ಅವರು ನಿವೃತ್ತ ನ್ಯಾಯಾಧೀಶೆ. ಪತಿ ಮನೆಯಲ್ಲಿ ನಟಿ ಸುಖವಾಗಿರಲಿಲ್ಲ, ವರದಕ್ಷಿಣೆಗಾಗಿ ಕಿರುಕುಳ ನಡೆಯುತ್ತಿತ್ತು, ತವರು ಮನೆಗೆ ಕರೆಸಿಕೊಳ್ಳುವಂತೆ ತ್ವಿಶಾ ಶರ್ಮಾ ತನ್ನ ತಾಯಿಗೆ ಪದೇ ಪದೇ ಒತ್ತಾಯಿಸುತ್ತಿದ್ದರು.. ಎಂಬ ವರದಿಯಿದೆ. ಇದೇವೇಳೆ,
ಆಕೆ ಮಾದಕ ವ್ಯಸನಿಯಾಗಿದ್ದಳು ಎಂದು ಪತಿ ಕುಟುಂಬ ಹೇಳಿದೆ. ಈ ಘಟನೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೀಡಾಗಿದೆ. ಸುಪ್ರೀಮ್ ಕೋರ್ಟು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಮುಂದಾಗಿದೆ. ಮಧ್ಯಪ್ರದೇಶ ಸರಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ. ಈ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಮ್ ಕೋರ್ಟ್ನಲ್ಲಿ ಭಾವುಕ ಸನ್ನಿವೇಶವೂ ಉಂಟಾಗಿದೆ. ಶವವಾಗಿ ಮಗಳು ತವರು ಮನೆಗೆ ಬರುವುದಕ್ಕಿಂತ ವಿಚ್ಛೇದಿತೆಯಾಗಿ ಮರಳುವುದು ಉತ್ತಮ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದು ರಾಷ್ಟ್ರೀಯ ಸುದ್ದಿಯಾಗಿದೆ. ಅಂದಹಾಗೆ, ಈ ಪ್ರಕರಣದ ಬೆನ್ನು ಬಿದ್ದು ಪರಿಶೀಲಿಸಿದರೆ ಸೂಕ್ಷ್ಮ ಎಳೆಯೊಂದು ಸಿಗುತ್ತದೆ. ಅದುವೇ ಡೈವೋರ್ಸ್ ಅಥವಾ ವಿಚ್ಛೇದನ ಅಥವಾ ತಲಾಕ್.
ಈ ಮದುವೆಯಿಂದ ಬಿಡುಗಡೆಗೊಳ್ಳುವ ಬಯಕೆ ತ್ವಿಶಾ ಶರ್ಮಾ ಅವರಿಗಿತ್ತು. ಬೇಡದ ಮದುವೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ತ್ವಿಶಾರಿಗೆ ಇಷ್ಟವಿರಲಿಲ್ಲ. ಆದರೆ, ಬಿಡುಗಡೆಯ ವಿಷಯದಲ್ಲಿ ತಾಯಿಗೆ ಆಸಕ್ತಿ ಇರಲಿಲ್ಲ. ಸುಧಾರಿಸಿಕೊಂಡು ಹೋದರೆ ಎಲ್ಲವೂ ಸರಿಯಾದೀತು ಎಂಬ ನಿರೀಕ್ಷೆ ಅವರದಾಗಿತ್ತು.
ಇಲ್ಲಿ ಇನ್ನೂ ಒಂದು ಸಂಗತಿಯಿದೆ. ಈ ದೇಶದಲ್ಲಿ ಮದುವೆಯಷ್ಟು ವಿಚ್ಛೇದನ ಸುಲಭ ಅಲ್ಲ. ವಿಚ್ಛೇದನಕ್ಕೆ ಪತಿ ಮತ್ತು ಪತ್ನಿ- ಇಬ್ಬರ ಸಹಮತ ಇದ್ದರೂ ನ್ಯಾಯಾಲಯದಲ್ಲಿ ಅದು ಸುಲಭದಲ್ಲಿ ದಕ್ಕುವುದಿಲ್ಲ. ಅದಕ್ಕಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತದೆ. ನ್ಯಾಯಾಲಯದ ಕಂಭ ಕಂಭ ಅಲೆಯಬೇಕಾಗುತ್ತದೆ. ಹತ್ತು-ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಹಣ ಖರ್ಚು ಮಾಡಬೇಕಾಗುತ್ತದೆ. ವಿಚಾರಣೆಯ ಹೆಸರಲ್ಲಿ ಮತ್ತೆ ಮತ್ತೆ ಗಾಯಗಳನ್ನು ಕೆದಕಲಾಗುತ್ತದೆ. ಹೀಗೆ ಹೋರಾಡಿ ಹೋರಾಡಿ ವಿಚ್ಛೇದನ ಪಡಕೊಳ್ಳುವಾಗ ಹೆಣ್ಣು-ಗಂಡು ಪಡಬಾರದ ಪಾಡು ಪಟ್ಟಿರುತ್ತಾರೆ. ಆದ್ದರಿಂದಲೇ ಸೆಲೆಬ್ರಿಟಿಗಳು ಮತ್ತು ಶ್ರೀಮಂತರು ನ್ಯಾಯಾಲಯದ ಕದ ತಟ್ಟದೇ ಮೌಖಿಕ ವಿಚ್ಛೇದನದ ಮೊರೆ ಹೋಗುತ್ತಿದ್ದಾರೆ. ಪರಸ್ಪರ ಒಮ್ಮತಕ್ಕೆ ಬಂದು ಬಿಡುಗಡೆಗೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಏನೆಂದರೆ,
ನ್ಯಾಯಾಲಯಗಳಲ್ಲಿ ತುಂಬಿ ತುಳುಕುತ್ತಿರುವ ವಿಚ್ಛೇದನ ಪ್ರಕರಣಗಳು. ಕೇವಲ ಕುಟುಂಬ ನ್ಯಾಯಾಲಯಗಳಲ್ಲಿ 7 ಲಕ್ಷಕ್ಕಿಂತಲೂ ಅಧಿಕ ವಿಚ್ಛೇದನ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ ಎಂಬುದು ಅಧಿಕೃತ ವರದಿ. ಬಿಹಾರ ಒಂದರಲ್ಲೇ 70 ಸಾವಿರಕ್ಕಿಂತಲೂ ಅಧಿಕ ಪ್ರಕರಣಗಳು ಇತ್ಯರ್ಥವಾಗದೇ ಉಳಿದುಕೊಂಡಿವೆ. ಕೇರಳದ ಕುಟುಂಬ ನ್ಯಾಯಾಲಯಗಳು ವಿಚ್ಛೇದನ ಅರ್ಜಿಗಳ ಭಾರದಿಂದ ಕುಸಿದು ಹೋಗಿದೆ. ಇಲ್ಲಿ 1,12,000ಕ್ಕಿಂತಲೂ ಅಧಿಕ ಪ್ರಕರಣಗಳು ಇತ್ಯರ್ಥವನ್ನು ಬಯಸುತ್ತಿವೆ. ಕರ್ನಾಟಕದಲ್ಲಿ 40 ಸಾವಿರಕ್ಕಿಂತಲೂ ಅಧಿಕ ಪ್ರಕರಣಗಳು ಕುಟುಂಬ ನ್ಯಾಯಾಲಯಗಳಲ್ಲಿವೆ. ಹಾಗಂತ,
ಇದು ಬರೇ ಕುಟುಂಬ ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ಮಾಹಿತಿ ಮಾತ್ರ. ಆಸ್ತಿ ಇತ್ಯಾದಿ ತಕರಾರುಗಳಿದ್ದಲ್ಲಿ ಅದು ಕುಟುಂಬ ನ್ಯಾಯಾಲಯದಿಂದ ಹೊರಹೋಗಿ ಸಿವಿಲ್ ಪ್ರಕರಣವಾಗಿ ಪರಿವರ್ತನೆಯಾಗುತ್ತದೆ. ಇಂಥ ಸಿವಿಲ್ ಪ್ರಕರಣಗಳು ದೇಶದ ನ್ಯಾಯಾಲಯಗಳಲ್ಲಿ ಒಂದು ಕೋಟಿಗಿಂತಲೂ ಅಧಿಕ ಇದ್ದು, ಇವುಗಳಲ್ಲಿ ವಿಚ್ಛೇದನ ಪ್ರಕರಣಗಳೂ ಇವೆ. ದೇಶದ ನ್ಯಾಯಾಲಯಗಳಲ್ಲಿ ಒಟ್ಟು 5 ಕೋಟಿ 50 ಲಕ್ಷಕ್ಕಿಂತಲೂ ಅಧಿಕ ಪ್ರಕರಣಗಳು ಪರಿಹಾರಕ್ಕಾಗಿ ಕಾದು ಕುಳಿತಿವೆ ಎಂಬ ಮಾಹಿತಿಯನ್ನು ಪರಿಗಣಿಸಿದರೆ ನ್ಯಾಯಾಲಯಗಳ ಮೇಲಿರುವ ಹೊರೆ ಎಷ್ಟು ಅಗಾಧವಾದದ್ದು ಎಂಬುದು ಗೊತ್ತಾಗುತ್ತದೆ. ಹಾಗಂತ,
ಈ ವಿಚ್ಛೇದನ ಪ್ರಕರಣಗಳಲ್ಲೂ ಬೇರೆ ಬೇರೆ ವಿಧಗಳಿವೆ. ಎರಡೂ ಪಕ್ಷಗಳು ಒಪ್ಪಿಕೊಂಡು ವಿಚ್ಛೇದನಕ್ಕೆ ಅರ್ಜಿ ಹಾಕುವುದನ್ನು ಮ್ಯೂಚುವಲ್ ಕನ್ಸೆಂಟ್ ವಿಚ್ಛೇದನ ಎನ್ನಲಾಗುತ್ತದೆ. ಈ ವಿಚ್ಛೇದನ ಸಾಧ್ಯವಾಗಬೇಕಾದರೆ 6ರಿಂದ 18 ತಿಂಗಳ ವರೆಗೆ ಕಾಯಬೇಕಾಗುತ್ತದೆ. ಮೊದಲು ಅರ್ಜಿ ಸಲ್ಲಿಸಿದ ನಂತರ 6 ತಿಂಗಳ ಕಾಲ ಕೂಲಿಂಗ್ ಪಿರಿಯಡ್ ಇರುತ್ತದೆ. ಇನ್ನೊಂದು, ಕಾಂಟ್ಸ್ಟೆಂಟ್ ವಿಚ್ಛೇದನ. ಅಂದರೆ, ಪತಿಗೆ ವಿಚ್ಛೇದನ ಬೇಕು, ಆದರೆ ಪತ್ನಿಗೆ ಬೇಡ ಅಥವಾ ಪತ್ನಿಗೆ ಬೇಕು, ಪತಿಗೆ ಬೇಡ. ಇಂಥ ಪ್ರಕರಣಗಳು ಬೇಗನೇ ಮುಗಿಯು ವುದಿಲ್ಲ. ಇಂಥ ಪ್ರಕರಣಗಳು ಒಂದರಿAದ ಐದು ವರ್ಷಗಳ ವರೆಗೂ ಮುಂದುವರಿಯುತ್ತದೆ. ಪುರಾವೆಗಳು, ಪಾಟಿ ಸವಾಲು ಇರುತ್ತದೆ. ಆಸ್ತಿ ಇತ್ಯಾದಿ ವಿವಾದಗಳು ಇದ್ದಲ್ಲಿ ಸಮಯ ಇನ್ನೂ ಬೇಕಾಗುತ್ತದೆ. ಆದರೆ,
ತಲಾಕ್ ಅಥವಾ ಇಸ್ಲಾಮಿಕ್ ವಿವಾಹ ವಿಚ್ಛೇದನ ವ್ಯವಸ್ಥೆ ಇಷ್ಟು ಕಠಿಣವಾಗಿ ಇಲ್ಲವೇ ಇಲ್ಲ.
ಪತಿ ಮತ್ತು ಪತ್ನಿಯ ನಡುವೆ ಹೊಂದಾಣಿಕೆ ಮೂಡಿ ಬರದಿದ್ದರೆ ಒಂದು ತಲಾಕ್ ಹೇಳಲಾಗುತ್ತದೆ. ಆದರೆ, ಅವರು ಬೇರ್ಪಡುವುದಿಲ್ಲ. ಪತಿ-ಪತ್ನಿಯರಾಗಿ ಒಂದೇ ಮನೆಯಲ್ಲಿ ವಾಸಿಸುತ್ತಾರೆ. ಈ ನಡುವೆ ಕುಟುಂಬಸ್ಥರು ಒಟ್ಟು ಸೇರಿ ಸಮಸ್ಯೆ ಬಗೆಹರಿಸುವುದಕ್ಕೆ ಪ್ರಯತ್ನಿಸುತ್ತಾರೆ. ಈ ಪ್ರಯತ್ನ ಸಫಲಗೊಳ್ಳದಿದ್ದರೆ ಎರಡನೇ ತಲಾಕ್ ಹೇಳಲಾಗುತ್ತದೆ. ಈ ತಲಾಕ್ನ ಬಳಿಕವೂ ಅವರಿಬ್ಬರೂ ಪತಿ-ಪತ್ನಿಯರಾಗಿ ಒಂದೇ ಮನೆಯಲ್ಲೇ ವಾಸಿಸುತ್ತಾರೆ. ಈ ನಡುವೆ ಅವರಿಬ್ಬರ ನಡುವೆ ಅನುರಾಗ ಮೂಡಿದರೆ ಈ ತಲಾಕ್ ರದ್ದುಗೊಳ್ಳುತ್ತದೆ. ಒಂದುವೇಳೆ, ಈ ಎಲ್ಲಾ ಪ್ರಯತ್ನಗಳ ಬಳಿಕವೂ ಅವರಿಬ್ಬರ ನಡುವೆ ಹೊಂದಾಣಿಕೆ ಮೂಡದಿದ್ದರೆ ಮೂರನೇ ಮತ್ತು ಕೊನೆಯ ತಲಾಕ್ ಹೇಳಲಾಗುತ್ತದೆ.
ಅಲ್ಲಿಗೆ ವಿಚ್ಛೇದನ ಪೂರ್ತಿಯಾಗುತ್ತದೆ. ಇಸ್ಲಾಮಿಕ್ ತಲಾಕ್ ವ್ಯವಸ್ಥೆ ಹೇಗೆಂದರೆ, ತಲಾಕ್ನ ಕನಿಷ್ಠ ಅವಧಿ ಮೂರು ತಿಂಗಳಾಗಿದೆ ಮತ್ತು ಗರಿಷ್ಠ ಎಷ್ಟೂ ಆಗಬಹುದು. ಇದೇವೇಳೆ, ಪತಿಯಿಂದ ಪತ್ನಿಗೆ ವಿಚ್ಛೇದನ ಅಥವಾ ತಲಾಕ್ ಬೇಕು ಎಂದಾದರೆ, ಈ ಯಾವ ಕಾಲಮಿತಿಯ ಅಗತ್ಯವೂ ಇಲ್ಲ. ಆಕೆ ಪತಿಯಿಂದ ಸುಲಭವಾಗಿ ಮತ್ತು ದಿನ, ತಿಂಗಳುಗಳ ಮಿತಿಯೇ ಇಲ್ಲದೇ ತಲಾಕ್ ಪಡೆದುಕೊಳ್ಳಬಹುದು. ಇದಕ್ಕೆ ಖುಲಾ ಎಂದು ಹೆಸರು. ಆತ ಖುಲಾ ನೀಡಲು ಒಪ್ಪದಿದ್ದರೆ ಆಕೆ ನೇರ ಇಸ್ಲಾಮಿಕ್ ಪಂಡಿತರ ಬಳಿಗೆ ತೆರಳಿ ಮದುವೆಯನ್ನೇ ರದ್ದುಗೊಳಿಸಬಹುದು. ಇದಕ್ಕೆ ಫಸ್ಕ್ ಎಂದು ಹೇಳಲಾಗುತ್ತದೆ. ವಿಷಾದ ಏನೆಂದರೆ,
ಈ ದೇಶದ ಅಸಂಖ್ಯ ಜನರಿಗೆ ತಲಾಕ್ನ ಅರ್ಥವೇ ಗೊತ್ತಿಲ್ಲ. ಡೈವೋರ್ಸ್ ಬೇಕು, ತಲಾಕ್ ಬೇಡ ಎಂದು ಹೇಳುವವರ ಸಂಖ್ಯೆ ಸಾಕಷ್ಟಿದೆ. ತಲಾಕ್ಗೆ ತಲಾಕ್ ಹೇಳಿ ಎಂದು ಹೇಳುವವರಿದ್ದಾರೆ. ವಿಚ್ಛೇದನ ಕನ್ನಡ ಪದವಾದರೆ, ತಲಾಕ್ ಅರಬಿ ಪದ. ಎರಡರ ಅರ್ಥವೂ ಒಂದೇ. ಆದರೆ, ತಲಾಕನ್ನು ಮಹಿಳಾ ಶೋಷಣೆಯ ಅಸ್ತçವಾಗಿ ಬಿಂಬಿಸಲಾಗಿದೆ. ಮುಸ್ಲಿಮ್ ಮಹಿಳೆಯರು ಈ ತಲಾಕ್ ವ್ಯವಸ್ಥೆಯಿಂದಾಗಿ ಬಳಲಿ ಬೆಂಡಾಗಿದ್ಎಂದಾರೆ ಎಂದು ಹೇಳಲಾಗುತ್ತಿದೆ. ಒಂದೇ ಉಸಿರಿಗೆ ತಲಾಕ್ ತಲಾಕ್ ತಲಾಕ್ ಎಂದು ಹೇಳಿಬಿಟ್ಟರೆ, ವಿಚ್ಛೇದನ ಆಗಿ ಬಿಡುತ್ತದೆ ಎಂದು ಈಗಲೂ ವಾದಿಸುವವರಿದ್ದಾರೆ. ಇದರ ಆಚೆಗೆ, ಈ ತಲಾಕ್ ವ್ಯವಸ್ಥೆಯನ್ನು ಅಧ್ಯಯನ ನಡೆಸಿ ಸತ್ಯಾಸತ್ಯತೆಯನ್ನು ಕಂಡುಕೊಂಡವರು ಕಡಿಮೆ. ಒಂದುಕಡೆ,
ದೇಶದ ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕರಣಗಳು ರಾಶಿ ಬಿದ್ದಿವೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿ ಮತ್ತು ಪತ್ನಿ ಇಬ್ಬರೂ ಇತ್ಯರ್ಥಕ್ಕಾಗಿ ಕಾಯುತ್ತಿದ್ದಾರೆ. ಇನ್ನೊಂದು ಕಡೆ, ಕಾಯುವಿಕೆಯ ಈ ಪ್ರತಿ ಕ್ಷಣವೂ ಇವರ ಯೌವನವನ್ನು ನುಂಗುತ್ತಿದೆ. ಇನ್ನೊಂದು ಮದುವೆ ಆಗಬೇಕೆಂದರೆ, ವಿಚ್ಛೇದನ ಸಿಗಬೇಕು. ವಿಚ್ಛೇದನ ಆಗಬೇಕೆಂದರೆ, ಶೀಘ್ರ ವಿಚಾರಣೆ ನಡೆಯಬೇಕು. ಹೀಗೆ ವಿಚಾರಣೆಗಾಗಿ ಕಾಯುತ್ತಾ ಮತ್ತು ಪ್ರಾಯವನ್ನು ಹೆಚ್ಚಿಸಿಕೊಳ್ಳುತ್ತಾ ದಂಪತಿಗಳು ದಿನದೂಡುತ್ತಿದ್ದಾರೆ. ಈ ನಡುವೆ ಮಾನಸಿಕ ದಣಿವು, ಅತೃಪ್ತಿ ಮತ್ತು ಅವರಿವರ ಕುತೂಹಲದ ಕಣ್ಣುಗಳಿಗೂ ಆಹಾರವಾಗಬೇಕಾಗುತ್ತದೆ. ಒಂದೊಮ್ಮೆ ಪ್ರಕರಣ ಇತ್ಯರ್ಥವಾಗಿಬಿಟ್ಟರೆ ಸಾಕಿತ್ತು ಎಂಬ ಸ್ಥಿತಿಗೆ ಇಂಥವರು ಬಂದುಬಿಡುತ್ತಾರೆ. ಕೆಲವೊಮ್ಮೆ ವ್ಯವಸ್ಥೆಯ ನಿಧಾನ ನೀತಿಯಿಂದ ಬೇಸತ್ತು ಆತ್ಮಹತ್ಯೆಯಂಥ ಅಪಾಯಕಾರಿ ನಿರ್ಧಾರಕ್ಕೂ ಬರುತ್ತಾರೆ. ಆದ್ದರಿಂದ,
ತ್ವಿಶಾ ಶರ್ಮಾ ಪ್ರಕರಣವು ಇಸ್ಲಾಮಿನ ತಲಾಕ್ ವ್ಯವಸ್ಥೆಯನ್ನು ಅಧ್ಯಯನ ನಡೆಸುವುದಕ್ಕೆ ಪ್ರೇರಕವಾಗಲಿ.












