ರೂಮ್‌ನಲ್ಲಿ ನಮಾಝ್ ಮಾಡಿ ಉಮ್ರಾ ನಿರ್ವಹಿಸುವ ಮಹಿಳೆಯರು

0
646

ಸನ್ಮಾರ್ಗ ವಾರ್ತೆ

✍️ ಡಾ| ಸಿ.ಕೆ. ಅಬ್ದುಲ್ಲಾ

ಹಜ್ಜ್ ಕರ್ಮ ನಿರ್ವಹಿಸಲು ಬಂದ ಸ್ನೇಹಿತನೊಬ್ಬ ಇತ್ತೀಚೆಗೆ ನನ್ನೊಂದಿಗೆ ತನ್ನ ಅಳಲನ್ನು ತೋಡಿಕೊಂಡ. ಅವರು ಮಸ್ಜಿದುಲ್ ಹರಮ್‌ನಲ್ಲಿ ನಮಾಝ್ ಮುಗಿಸಿ ಹೊರಬಂದು ನಾವು ತಂಗಿರುವ ಹೊಟೇಲನ್ನು ಪ್ರವೇಶಿಸುತ್ತಿರುವಾಗ ಲಿಫ್ಟ್ ನಲ್ಲಿ ಮಹಿಳೆಯರ ಒಂದು ತಂಡವು ಹೊರ ಬಂತು.

ಯಾವುದೋ ಒಂದು ತಂಡದ ಗುರುತಿಗಾಗಿ ಅವರು ಕೆಂಪು ಶಾಲನ್ನು ಧರಿಸಿದ್ದರು. ಅವರು ಊರಿನವರಾಗಿದ್ದರು. ಅಮೀರ್‌ರನ್ನು ಕಾದು ನಿಂತಿದ್ದ ಅವರಲ್ಲಿ ಓರ್ವರೊಂದಿಗೆ ಪರಿಚಯವಾಗಿ ನೀವು ಇಷ್ಟು ಬೇಗ ನಮಾಝ್ ನಿರ್ವಹಿಸಿ ಬಂದಿರಾ? ಎಂದು ಕೇಳಿದೆ. ನಾವು ರೂಮ್‌ನಲ್ಲಿ ನಮಾಝ್ ನಿರ್ವಹಿಸಿ ಬಂದೆವು ಎಂದು ಹೇಳಿದರು. ಇನ್ನು ತವಾಫ್ ನಿರ್ವಹಣೆಗೆ ಹೋಗುತ್ತಿದ್ದೇವೆ. ಮಹಿಳೆಯರು ಮಸೀದಿಯಲ್ಲಿ ನಮಾಝ್ ನಿರ್ವಹಿಸಬಾರದೆಂದು ಪ್ರವಾದಿವರ್ಯರು(ಸ) ಹೇಳಿರುತ್ತಾರೆ. ಅದಕ್ಕಾಗಿ ನಾವು ಕೋಣೆಯಲ್ಲಿ ನಮಾಝ್ ನಿರ್ವಹಿಸಬೇಕೆಂದು ಅಮೀರ್ ಉಸ್ತಾದ್ ನಮಗೆ ಉಪದೇಶಿಸಿದ್ದಾರೆ ಎಂಬ ಉತ್ತರ ಅವರಿಂದ ಬಂತು.

ಹರಮ್‌ನ ಬಳಿಯಲ್ಲಿರುವ ಸಫ್ವಾ ಟವರ್(ಕ್ಲಾಕ್ ಟವರ್)ನ ಯಾವುದೋ ಒಂದು ಹೋಟೇಲಲ್ಲಿ ಅವರು ತಂಗಿದ್ದರು. ಹರಮ್‌ನ ಪಕ್ಕದಲ್ಲಿಯೇ ತಂಗಿದ್ದು ಕೂಡಾ ನಮಾಝ್ ನಿರ್ವಹಿಸಲಾಗದ ಆ ಮಹಿಳೆಯರ ಬಗ್ಗೆ ಚಿಂತಿಸಿದ ಆ ವ್ಯಕ್ತಿ ನೋವನ್ನು ಹೇಳಿಕೊಂಡರು. ಊರಿನ ಕೆಲವು ಗ್ರೂಪಿಸಮ್‌ಗಳು ಕೆಲ ಕಾಲಗಳಿಂದ ಇದೇ ನಿಲುವನ್ನು ತಳೆಯುತ್ತಿವೆ ಎಂದು ಅವರು ಹೇಳಿದರು.

ಹಜ್ಜ್ ಉಮ್ರ ಮುಂತಾದ ಪವಿತ್ರ ಯಾತ್ರೆಗೆ ಕರೆದುಕೊಂಡು ಹೋಗಿ ಕನಿಷ್ಟ ಒಂದು ವಕ್ತ್(ಸಮಯ) ಕೂಡಾ ಮಸ್ಜಿದುಲ್ ಹರಮ್‌ನಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಕೊಡದವರು. ಮಸ್ಜಿದುಲ್ ಹರಮ್‌ನಲ್ಲಿ ಒಂದು ಹೊತ್ತಿನ ನಮಾಝ್ ನಿರ್ವಹಿಸಿದರೆ ಮತ್ತಿತರ ಕಡೆ ನಿರ್ವಹಿಸುವುದಕ್ಕಿಂತ ಎಷ್ಟೋ ಸಾವಿರ ಹೆಚ್ಚು ಪ್ರತಿಫಲವಿರುವ ಹಾಗೆಯೇ ಮಸ್ಜಿದುನ್ನಬವಿಯಲ್ಲಿ ಒಂದು ಹೊತ್ತಿನ ನಮಾಝ್ ನಿರ್ವಹಿಸಿದರೆ ಸಾವಿರ ಪಟ್ಟು ಅಧಿಕ ಪುಣ್ಯವಿದೆ ಎಂದು ಪ್ರವಾದಿ ವಚನಗಳು ಹೇಳುತ್ತವೆ. ಇಂತಹ ಸುವರ್ಣ ಅವಕಾಶಗಳಿಂದ ಮಹಿಳೆಯರನ್ನು ವಂಚಿಸುವ, ಊರಿನ ಮಹಿಳೆಯರ ಮಸೀದಿ ಪ್ರವೇಶವನ್ನು ತಡೆಯುವ ಸಂಘಟನಾ ಹಠವಾದಿಗಳಿಂದ ಮಾತ್ರ ಇದು ಸಂಭವಿಸುತ್ತದೆ.

ಆದರೆ ಮಹಿಳೆಯರ ಮಸೀದಿ ಪ್ರವೇಶವನ್ನು ತಡೆಯುವ ಎಲ್ಲರೂ ಹೀಗಿಲ್ಲ. ಹರಮ್‌ಗಳಲ್ಲಿ ಮಹಿಳೆಯರ ನಮಾಝ್‌ಗೆ ವಿಶೇಷ ಅನುಮತಿಯಿದೆ ಎಂದು ಹೇಳುವ ವಿಶಾಲ ಮನೋಭಾವದವರೂ ಇದ್ದಾರೆ.

ಹಜ್ಜ್ ಪ್ರಯಾಣದಲ್ಲಿದ್ದ ಮತ್ತೊಬ್ಬ ಮಿತ್ರ ತನ್ನ ಅಳಲನ್ನು ವಿವರಿಸಿದ್ದು ಹೀಗೆ. ಊರಿನಿಂದ ಬಂದವರು ಪ್ರತೀ ದಿನ ಉಮ್ರ ನಿರ್ವಹಿಸುತ್ತಾರೆ. ನಾನು ತಿಳಿದುಕೊಂಡ ಪ್ರಕಾರ ಉಮ್ರ ಒಮ್ಮೆ ನಿರ್ವಹಿಸಿದರೆ ಸಾಕೆಂದಾಗಿದೆ. ನಿರಂತರ ಒಂದರ ಹಿಂದೆ ಒಂದರಂತೆ ಉಮ್ರಾ ನಿರ್ವಹಿಸುವವರನ್ನು ನೋಡುವಾಗ ಒಂದು ಸಂಶಯ ಮೂಡುತ್ತದೆ.

ವಿಷಯ ಏನೆಂದರೆ ಊರಿನಿಂದ ಬರುವ ಏಜೆಂಟರ ತಂಡಗಳು ಹೆಚ್ಚು ಹೆಚ್ಚು ಉಮ್ರಾ ನಿರ್ವಹಿಸುವ ಅವಕಾಶವಿದೆ ಎಂಬ ಆಫರ್ ಗಳನ್ನು ನೀಡುತ್ತದೆ. ಎರಡು ಉಮ್ರಾದ ಮಧ್ಯೆ ಇಷ್ಟು ದಿವಸ ಬಿಡುವು ಇದೆ ಎಂಬ ಕರ್ಮಶಾಸ್ತ್ರದ ನಿಯಮವೂ ಇಲ್ಲ. ಹಜ್ಜತುಲ್ ವಿದಾದ ಸಂದರ್ಭದಲ್ಲಿ ಪ್ರವಾದಿವರ್ಯರ(ಸ) ಜೊತೆಯಿದ್ದ ಆಯಿಶಾ(ರ) ಹಿಂದಿರುಗಿ ಹೋಗುವುದಕ್ಕಿಂತ ಮುಂಚೆ ಉಮ್ರಾ ನಿರ್ವಹಿಸಲು ಹರಮ್‌ನ ವ್ಯಾಪ್ತಿಯ ಹೊರಗೆ ಇಂದು ಇರುವ ತನ್‌ಈಮ್ ಮಸೀದಿಯ ಒಳಗೆ ಹೋಗಿ ಇಹ್ರಾಮ್ ಧರಿಸಿ ಬಂದರು. ಆಗ ಅವರ ಎರಡು ಉಮ್ರಾಗಳ ನಡುವೆ ಹತ್ತು ದಿವಸಗಳ ಅಂತರವಿತ್ತು. ಇದರ ಪ್ರಕಾರ ಎರಡು ಉಮ್ರಾಗಳ ನಡುವೆ ಹತ್ತು ದಿನಗಳು ಅಥವಾ ಕೂದಲು ತೆಗೆದು ಚಿಗುರುವ ವರೆಗಿನ ಸಮಯದ ಅಂತರವಿರಬೇಕೆಂಬುದು ಕರ್ಮಶಾಸ್ತ್ರ ವಿದ್ವಾಂಸರ ಅಭಿಪ್ರಾಯವಾಗಿದೆ.

ಇಂದು ನಡೆಯುವ ರೀತಿ ತನ್‌ಈಮ್ ಮಸೀದಿಯಲ್ಲಿ ಹೋಗಿ ಎರಡು ರಿಯಾಲ್ ವಾಹನಗಳಿಗೆ ನೀಡಿ ಮತ್ತೆ ಮತ್ತೆ ಉಮ್ರಾ ನಿರ್ವಹಿಸಿ ಬರುವ ಸಂಪ್ರದಾಯವನ್ನುಂಟು ಮಾಡಿರುವುದು ಈ ಯಾತ್ರೆಯ ಏಜೆಂಟರ ವ್ಯಾಪಾರೀಕರಣದ ತಂತ್ರವಾಗಿದೆ. ಹಜ್ಜ್ ನಿರ್ವಹಿಸುವ ವೇಳೆಯಲ್ಲಿ ಹೆಚ್ಚು ಹೆಚ್ಚು ಯಾತ್ರಾರ್ಥಿಗಳು ಸೇರಿಕೊಂಡಿರುವಾಗ ಉಮ್ರಾ ನಿರ್ವಹಿಸಿದವರು ಮತ್ತೆ ಮತ್ತೆ ಉಮ್ರಾ ನಿರ್ವಹಿಸುವಾಗ ಅಲ್ಲಿ ಹರಮ್ ನಲ್ಲಿ ಹೆಚ್ಚು ನೂಕು ನುಗ್ಗಲುಗಳಿಗೆ ಕಾರಣವಾಗುತ್ತದೆ. ಅನೇಕರು ಹಲವು ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯೂ ಇವೆ.

ಮದೀನಾದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿರುವ ಮತ್ತೋರ್ವ ಗೆಳೆಯ ಕೆಲವು ತಿಂಗಳುಗಳ ಹಿಂದೆ ತನ್ನ ಅನುಭವವನ್ನು ವಿವರಿಸಿದ್ದ. ಒಂದು ಟ್ರಿಪ್‌ನಲ್ಲಿ ಐದಾರು ಉಮ್ರಾ ನಿರ್ವಹಿಸಲು ಅವಕಾಶವಿದೆಯೆಂದು ವಾಗ್ದಾನ ನೀಡಿ ಹಣ ದೋಚುವ ಮತ್ತೊಂದು ಪ್ಯಾಕೇಜ್ ಇವೆ. ಊರಿನಿಂದ ಹೀಗೆ ಭರವಸೆ ನೀಡಿ ಕರೆದುಕೊಂಡು ಬಂದ ಯಾತ್ರಾರ್ಥಿಗಳನ್ನು ತುರ್ತಾಗಿ ಮೂರು ದಿನಗಳೊಳಗೆ ಗಡಿಬಿಡಿಯಲ್ಲಿ ಐದಾರು ಉಮ್ರಾ ನಿರ್ವಹಿಸುವಂತೆ ಮಾಡುವ ಅಮೀರ್‌ಗಳು, ಟ್ರಾವೆಲ್ಸ್ ವ್ಯಾಪಾರಿಗಳು ಜನರನ್ನು ಸಂಕಷ್ಟಕ್ಕೊಳಪಡಿಸುತ್ತಾರೆ.

ಸರಿಯಾದ ಆರೋಗ್ಯವಂತರಿಗೆ ದಿನದಲ್ಲಿ ಒಮ್ಮೆ ಮಾತ್ರ ಸಾವಕಾಶದಿಂದ ಉಮ್ರಾ ನಿರ್ವಹಿಸಬಹುದು. ಅವರ ಪ್ರಾಯ, ರೋಗದ ಬಗ್ಗೆ ಗಮನಹರಿಸದೆ ಓಡುತ್ತಾ ಗಡಿ ಬಿಡಿಯಲ್ಲಿ ಮಾಡುವ ಉಮ್ರಾ ಮಾಡಿಸಿದ್ದರಿಂದ ದಣಿದು ಬಳಲಿ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳುವ ಮುನ್ನವೇ ಮದೀನಕ್ಕೆ ಕಳುಹಿಸುವವರೂ (ಓಡಿಸುವವರು) ಇದ್ದಾರೆ. ಇದರ ನಡುವೆ ರೋಗ ಉಲ್ಬಣಗೊಂಡು ಹಠಾತ್ತಾಗಿ ಕುಸಿದು ಬಿದ್ದು ಮರಣ ಹೊಂದಿದವರು ಧಾರಾಳ ಮಂದಿ ಇದ್ದಾರೆ. ಹಾಗೆಯೇ ನಿಧನರಾದವರ ಅಂತ್ಯ ಕರ್ಮಗಳನ್ನು ನಿರ್ವಹಿಸುವುದು ಬಹಳ ತ್ರಾಸದಾಯಕ ಎಂದು ಅಲ್ಲಿನ ಸ್ವಯಂ ಸೇವಕರು ಹೇಳುತ್ತಾರೆ.

ಈ ಬೃಹತ್ ಆಫರ್‌ಗಳನ್ನು ನೀಡಿ ಜನರ ಭಯ ಭಕ್ತಿಯ ಲಾಭ ಪಡೆಯುವ ಉಮ್ರಾ ಟ್ರಾವೆಲ್ ಏಜೆಂಟರುಗಳು, ಮಹಿಳೆಯರ ಮಸೀದಿ ಪ್ರವೇಶದ ಬಗ್ಗೆ ಸಂಕುಚಿತ ಮನೋಭಾವದ ಅಮೀರ್, ಹಾಗೂ ಅಜ್ಞಾನಿಗಳು ಅವರು ಗಳಿಸುವ ಹರಾಮ್‌ನ ಗಳಿಕೆಗೆ ಉತ್ತರ ಕೊಡಬೇಕಾಗುತ್ತದೆ. ಪಾವನವಾದ ಕರ್ಮಗಳ ಮರೆಯಲ್ಲಿ ಇಂತಹ ಅನ್ಯಾಯ ಅಕ್ರಮಗಳಿಗೂ ಉತ್ತರ ನೀಡಬೇಕಾಗುತ್ತದೆ.