ಗೋರಖ್ ಪುರ ಶಿಶು ದುರಂತ: ಡಾ ಕಫೀಲ್ ಖಾನ್ ರನ್ನು ಜೈಲಿಗಟ್ಟಿರುವುದರಲ್ಲಿ ಸಂಚು ನಡೆದಿದೆಯೇ??

0
1156

ಸಿದ್ಧಾಂತ್ ಮೋಹನ್
ಅನುವಾದ: ಆಯಿಷಾ ಅಫೀಫಾ
ಮೂಲ: ಟು ಸರ್ಕಲ್ ಡಾಟ್ ನೆಟ್

ಕಳೆದ ವರ್ಷ ಆಗಸ್ಟ್ ನಲ್ಲಿ ಸುಮಾರು 300 ಶಿಶುಗಳ ಸಾವಿಗೆ ಸಂಬಂಧಿಸಿದಂತೆ ಬಿ ಆರ್ ಡಿ ಮೆಡಿಕಲ್ ಕಾಲೇಜಿನ ವೈದ್ಯರು ಮತ್ತು ಇತರ ಸಿಬ್ಬಂದಿಗಳ ಬಂಧನದ ಎಂಟು ತಿಂಗಳ ನಂತರ, ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಬಂಧನಕ್ಕೊಳಗಾದ ವೈದ್ಯರ ಕುರಿತು ತಮ್ಮ ಐಕ್ಯತೆಯನ್ನು ಪ್ರದರ್ಶಿಸಿದೆ ಮತ್ತು ಅವರ ಬಿಡುಗಡೆಗೆ ಒತ್ತಾಯಿಸಿದೆ. ಐಎಂಎ ಸದಸ್ಯರು ಪತ್ರಿಕಾಗೋಷ್ಠಿ ಸೆರೆವಾಸದಲ್ಲಿರುವ ವೈದ್ಯರ ಆರೋಗ್ಯದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿ ವೈದ್ಯರಿಗೆ ನೀಡುವ ಚಿಕಿತ್ಸೆಯ ಬಗ್ಗೆ ಐಎಂಎ ಅತೃಪ್ತಿ ವ್ಯಕ್ತಪಡಿಸಿದೆ ಮತ್ತು ಇದರ ಹಿಂದೆ ಆಡಳಿತಾತ್ಮಕ ಪಿತೂರಿ ಇದೆ ಎಂದು ಆರೋಪಿಸಿದೆ. “2017 ರ ಆಗಸ್ಟ್ ನಲ್ಲಿ ಸಂಭವಿಸಿದ ಆಮ್ಲಜನಕ ಕೊರತೆ ಹಗರಣದ ನಂತರ, ವೈದ್ಯರಾದ ರಾಜೀವ್ ಮಿಶ್ರಾ, ಸತೀಶ್ ಕುಮಾರ್ ಮತ್ತು ಕಾಫೀಲ್ ಅಹ್ಮದ್ ಖಾನ್ ಅವರ ಮೇಲೆ ಕಠಿಣ ಕಾಯ್ದೆಗಳನ್ನು ಹೇರಿ ಜೈಲಿನಲ್ಲಿ ಇರಿಸಲಾಗಿತ್ತು. ನಮಗೆ ಇದರಲ್ಲಿ ಅನುಮಾನ ಇದೆ. ಅವರು ಚಿತ್ರಹಿಂಸೆಗೊಳಗಾಗುತ್ತಿದ್ದಾರೆ , ಅವರ ಜಾಮೀನು ಅರ್ಜಿಗಳನ್ನು ನಿರಾಕರಿಸಲಾಗುತ್ತಿದೆ ಮತ್ತು ಅವರಿಗೆ ಸರಿಯಾದ ವೈದ್ಯಕೀಯ ಸೇವೆ ಒದಗಿಸಲಾಗುತ್ತಿಲ್ಲವೆಂಬ ಸುದ್ದಿಗಳನ್ನು ನಾವು ಕೇಳುತ್ತಿದ್ದೇವೆ . ಇದರ ಹಿಂದೆ ಯೋಜಿತ ಪಿತೂರಿ ಇದೆ ” ಎಂದು ಐಎಂಎ ಕಾರ್ಯದರ್ಶಿ ಡಾ. ಆರ್.ಪಿ. ಶುಕ್ಲಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಐಎಂಎ ವೈದ್ಯರ ಪತ್ರಿಕಾಗೋಷ್ಠಿ (ಫೋಟೋ: ಗೋರಖ್ಪುರ್ ನ್ಯೂಸ್ ಲೈನ್)

ಆಮ್ಲಜನಕದ ಕೊರತೆಯ ಕಾರಣದಿಂದಾಗಿ ಶಿಶು ಮರಣ ಸಂಭವಿಸಿದೆ ಎಂದು ರಾಜ್ಯ ಸರ್ಕಾರವು ಹೇಳುತ್ತಿರುವ ಹೊರತಾಗಿಯೂ ವೈದ್ಯರು ಇನ್ನೂ ಯಾಕೆ ಕಂಬಿಗಳ ಹಿಂದಿದ್ದಾರೆ? ಬಂಧಿತರು ಬಹಳ ಸೀಮಿತ ಅಧಿಕಾರವನ್ನು ಹೊಂದಿರುವ ವೈದ್ಯರು. ಇಂತಹ ಘಟನೆಗಳಿಗೆ ಕಾರಣವಾದ ನೈಜ ಭ್ರಷ್ಟರನ್ನು ಉಳಿಸುವ ಸಲುವಾಗಿ ಅವರನ್ನು ಕೇವಲ ಬಲಿಪಶುಗಳಾಗಿ ಬಳಸಲಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಐಎಂಎ ಅಧ್ಯಕ್ಷ ಜೆಪಿ ಜೈಸ್ವಾಲ್ ಅವರು, “ಕಳೆದ ಎಂಟು ತಿಂಗಳಲ್ಲಿ, ಶಿಶುಗಳ ಸಾವಿನ ಮೂಲ ಕಾರಣವನ್ನು ಕಂಡುಕೊಳ್ಳಲು ಸರ್ಕಾರವು ಪ್ರಯತ್ನಿಸಿಲ್ಲ. ನೈಜ ಕಾರಣವನ್ನು ಪತ್ತೆ ಹಚ್ಚದೆ ಇಂತಹ ಘಟನೆಗಳು ಮರು ಸಂಭವಿಸುವುದನ್ನು ತಡೆಯಲು ಸಾಧ್ಯವಿಲ್ಲ “ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಆಮ್ಲಜನಕದ ಕೊರತೆಯಿಂದಾಗಿ ಗೊರಖಪುರ ಮೂಲದ ಬಾಬಾ ರಾಘವದಾಸ್ ಮೆಡಿಕಲ್ ಕಾಲೇಜಿನ ಶಿಶುವಿಹಾರದ ಶಿಶುಗಳು ಸಾಯುತ್ತಿವೆ ಎಂದು ವರದಿಯಾದ ಹಿನ್ನಲೆಯಲ್ಲಿ ಈ ವಿವಾದವು ಹುಟ್ಟಿಕೊಂಡಿತ್ತು. ಕೆಲವು ದಿನಗಳ ನಂತರ ಯುಪಿ ಸರಕಾರದ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಆಮ್ಲಜನಕ ಕೊರತೆ ಆರೋಪವನ್ನು ನಿರಾಕರಿಸಿದರು ಮತ್ತು ಇದು ನೈಸರ್ಗಿಕ ಸಾವೆಂದು ಘೋಷಿಸಿದರು .
ಆದಾಗ್ಯೂ, ವೈದ್ಯರು, ಸಿಬ್ಬಂದಿ ಸದಸ್ಯರು ಮತ್ತು ಆಮ್ಲಜನಕದ ಸರಬರಾಜು ಸಂಸ್ಥೆಯ ಮುಖ್ಯಸ್ಥರನ್ನು ಕಂಬಿಗಳ ಹಿಂದೆ ಹಿಡಿದಿಡಲಾಯಿತು .ಸೋಮವಾರ, ಬಿ.ಆರ್.ಡಿ ವೈದ್ಯಕೀಯ ಕಾಲೇಜಿಗೆ ಆಮ್ಲಜನಕವನ್ನು ಪೂರೈಸುವ ಸಂಸ್ಥೆಯ ಮನೀಶ್ ಭಂಡಾರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ಡಾ.ಕಫೀಲ್ ಖಾನ್ ಅವರ ಪತ್ನಿ ಡಾ. ಶಾಬಿಸ್ತಾ ಖಾನ್ ಉಪಸ್ಥಿತರಿದ್ದರು. “ನನ್ನ ಪತಿ ಆ ರಾತ್ರಿ ಆಸ್ಪತ್ರೆಯಲ್ಲಿ ಮಕ್ಕಳ ಜೀವಗಳನ್ನು ಉಳಿಸಲು ಪ್ರಯತ್ನಿಸಿದರು. ಅವರು ಎಲ್ಲಿಂದಲಾದರೂ ಆಮ್ಲಜನಕವನ್ನು ಪೂರೈಸಲು ಪ್ರಯತ್ನಿಸಿದರು ,ಆದರೆ ಅವರನ್ನೇ ಈ ಸಾವಿಗೆ ಜವಾಬ್ದಾರಿಯಾಗಿ ಬಿಂಬಿಸಲಾಗುತ್ತಿದೆ. ನನ್ನ ಪತಿಯ ಬಿಡುಗಡೆಗಾಗಿ ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಭೇಟಿಯಾಗಿದ್ದೇನೆ, ಆದರೆ ಆಡಳಿತವು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ” ಎಂದು ಖಾನ್ ಹೇಳಿದರು.