ಪ್ರತಿವರ್ಷ ಮದುವೆ ಊಟಕ್ಕೆ 4,000 ಕೋಟಿ ರೂ. ಖರ್ಚು ಮಾಡುತ್ತಿರುವ ದಕ್ಷಿಣ ಕನ್ನಡಿಗರು!

0
1081

ವಾರ್ಷಿಕ 500 ಕೋಟಿ ರೂ. ಮದುವೆ ಆಹಾರ ಗಟಾರಕ್ಕೆ!

🖋-ರಶೀದ್ ವಿಟ್ಲ

ಒಂದು ಅನ್ನದ ಅಗುಳಿನ ಬೆಲೆ ಮೈಬಗ್ಗಿಸಿ ಶ್ರಮಪಟ್ಟು ಅದನ್ನು ಬೆಳೆದ ರೈತನಿಗೆ ಹಾಗೂ ಅನ್ನಕ್ಕೆ ಗತಿಯಿಲ್ಲದೇ ಹಸಿದು ಹೈರಾಣಾದವನಿಗೆ ಮಾತ್ರ ಗೊತ್ತು. ಆದರೆ ಇದರ ಪರಿವೆಯೇ ಇಲ್ಲದ ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತಿರುವ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ “ಪ್ರಜ್ಞಾ..?”ವಂತರು ವಾರ್ಷಿಕ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಮದುವೆ ಸಮಾರಂಭದ ಆಹಾರವನ್ನು ಕಸದ ತಿಪ್ಪೆಗೆ ಎಸೆಯುತ್ತಿದ್ದಾರೆ. ಇದು ಕೇವಲ ಮದುವೆಯೊಂದರ ಅಂಕಿ ಅಂಶವಾದರೆ ಉಳಿದ ಶುಭ ಸಮಾರಂಭ, ಸಭೆ ಸಮಾರಂಭಗಳ ಆಹಾರದ ಲೆಕ್ಕವನ್ನು ಹಾಕತೊಡಗಿದರೆ ತಲೆ ಗಿರ್ರನೆ ತಿರುಗಬಹುದು.

ಎಂತಹಾ ದುರವಸ್ಥೆ. ಅದೆಂತಹಾ ಬೇಜವಾಬ್ದಾರಿ ಅಂದರೆ ವಾರ್ಷಿಕವಾಗಿ ನಮ್ಮ ಜಿಲ್ಲೆಯವರು ಕೇವಲ ಮದುವೆ, ಮೆಹಂದಿ ಮತ್ತು ಬೀಗರ ಪಾರ್ಟಿಗಾಗಿಯೇ ವಾರ್ಷಿಕ ಸರಾಸರಿ 4,000 ಕೋಟಿ ರೂ.ಗಳನ್ನು ಖರ್ಚು ಮಾಡಿ ಕೈ ತೊಳೆಯುತ್ತೇವೆ. ಇನ್ನು ಚಿನ್ನಾಭರಣ, ವಸ್ತ್ರ, ವಾಹನ, ಶಾಮಿಯಾನದ ವಿಚಾರಗಳು ಬೇರೆ ಬಿಡಿ. ಕೇವಲ ಮದುವೆ ಎಂಬ ಕಾರ್ಯಕ್ರಮಕ್ಕಾಗಿ ನಾವು ಸಹಸ್ರ ಸಹಸ್ರ ಕೋಟಿಯಲ್ಲಿ ಖರ್ಚು ಮಾಡುವ ಜೊತೆಗೆ ಟನ್ ಗಟ್ಟಲೆ ಆಹಾರವನ್ನೂ ಕಸದ ತೊಟ್ಟಿಗೆಸೆಯುತ್ತಿದ್ದೇವೆ ಎಂಬ ಹೃದಯ ವಿದ್ರಾವಕ ಅಂಕಿ ಅಂಶಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ.

ಮದುವೆಯ ಹೆಸರಲ್ಲಿ ನಡೆಯುವ ಡಂಬಾಚಾರದಲ್ಲಿ ಬಫೆಟ್ ಸಿಸ್ಟಮ್ ಹಾಗೂ ವಿಧವಿಧದ ತಿಂಡಿತಿನಿಸು ತಯಾರಿಸಿ ಬೇಕಾಬಿಟ್ಟಿ ಪ್ಲೇಟಿಗೆ ಹಾಕಿಸಿಕೊಂಡು ಅರ್ಧದಲ್ಲೇ ಕೈಬಿಡುವ, ಕೋಳಿ, ಮಾಂಸ, ಮೀನನ್ನು ಅರ್ಧಂಬರ್ಧ ತಿಂದು ತೇಗಿ ಬಿಸಾಡುವ ಸನ್ನಿವೇಶ ಸಾಮಾನ್ಯವಾಗಿಬಿಟ್ಟಿದೆ.

ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 20,80,000 ಜನರಿದ್ದರು. ಅದು ಇಂದು 22 ರಿಂದ 23 ಲಕ್ಷಕ್ಕೆ ಏರಿಕೆಯಾಗಿದೆ. ನಮ್ಮ ಜಿಲ್ಲೆಯಲ್ಲಿ ನೂರಾರು ಮದುವೆ ಹಾಲ್‌ಗಳು, ಧಾರ್ಮಿಕ ಸಮುದಾಯ ಭವನಗಳು, ಗಾರ್ಡನ್ ಗಳು, ದೇವಸ್ಥಾನದ ಛತ್ರಗಳು, ಕಲ್ಯಾಣ ಮಂಟಪ, ಮದ್ರಸ ಹಾಲ್, ಚರ್ಚ್ ಹಾಲ್, ಹೋಟೆಲ್ ಹಾಲ್ ಗಳು ಇವೆ. ಇವಲ್ಲೆಲ್ಲಾ ವಾರಕ್ಕೆ 3 ರಿಂದ 4 ಮದುವೆಗಳು ನಡೆಯುತ್ತಿರುತ್ತವೆ. ಮನೆಗಳಲ್ಲಿ ಕೂಡಾ ದೊಡ್ಡ ದೊಡ್ಡ ಚಪ್ಪರ ಹಾಕಿ ವಿವಾಹ ಏರ್ಪಡಿಸಲಾಗುತ್ತದೆ. ಜಿಲ್ಲೆಯ ಎಲ್ಲಾ ಜಾತಿ ಧರ್ಮಗಳನ್ನು ಸೇರಿಸಿದರೆ ವಾರ್ಷಿಕ ಸುಮಾರು 1,05,000 ದಷ್ಟು ಮದುವೆ ಸಮಾರಂಭಗಳು ನಡೆಯುತ್ತಿವೆ. ಅಂದರೆ 2,10,000 ಗಂಡು ಮತ್ತು ಹೆಣ್ಮಕ್ಕಳು ವಿವಾಹಿತರಾಗುತ್ತಾರೆ. ಇದರಲ್ಲಿ ಮದುವೆಯ ಆಹಾರಕ್ಕಾಗಿಯೇ ಒಂದು ಮದುವೆಗೆ 50 ಸಾವಿರದಿಂದ (ಬಡವರು) ಹಿಡಿದು ಹತ್ತದಿನೈದು ಲಕ್ಷ (ಶ್ರೀಮಂತರು) ಖರ್ಚು ಮಾಡುವವರಿದ್ದಾರೆ. ಈ ಲೆಕ್ಕಾಚಾರ ತೆಗೆದಾಗ ದ.ಕ. ಜಿಲ್ಲೆಯಲ್ಲಿ ಮದುವೆ ಫುಡ್‌ಗಾಗಿ ವಾರ್ಷಿಕ 40,000 ಕೋಟಿ ರೂ. ಖರ್ಚಾಗುತ್ತಿರುವ ದುರಂತ ಸತ್ಯ ಬಯಲಾಗುತ್ತದೆ. ಈ ಖರ್ಚಿನ 10 ರಿಂದ 15 ಶೇಕಡಾ ಆಹಾರಗಳು ವೇಸ್ಟ್ ಆಗುತ್ತಿದ್ದು, 500 ಕೋಟಿ ರೂ.ಗಳ ಅನ್ನವನ್ನು ಚೆಲ್ಲಲಾಗುತ್ತಿದೆ. ಮದುವೆಗೇ ಇಷ್ಟು ದುಂದುವೆಚ್ಚವಾದರೆ ಹಾಗೂ ದುರ್ಬಳಕೆಯಾದರೆ ಉಳಿದ ಸಮಾರಂಭಗಳಲ್ಲಿ, ಹೋಟೆಲ್ ಮತ್ತು ಮನೆಗಳಲ್ಲಿ ದಿನನಿತ್ಯ ಎಷ್ಟು ಅನ್ನ ತೊಟ್ಟಿಗೆ ಸೇರಬಹುದೆಂದು ನೀವೇ ಊಹಿಸಿ.

ನಮ್ಮ ಜಿಲ್ಲೆಯಲ್ಲಿ 90 ಶೇಕಡಾ ಶಿಕ್ಷಿತರಿದ್ದರೂ, ಆಹಾರದ ಬಗ್ಗೆ ಜನಜಾಗೃತಿ ಮೂಡಿಸಿದರೂ, ಉಳಿದ ಆಹಾರವನ್ನು ಕೆಲವೆಡೆ ಆಶ್ರಮ ಮತ್ತಿತರೆಡೆ ಕೊಂಡೋಗಿ ಕೊಟ್ಟರೂ ಕೂಡಾ ಶೇಕಡಾ 10 ರಿಂದ 15 ರಷ್ಟು ಆಹಾರೋತ್ಪನ್ನಗಳು ಕಸದ ಗಟಾರ, ಹೊಂಡ ಗುಂಡಿಗಳಲ್ಲಿ ತುಂಬುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆಲ್ಲಾ ಸೃಷ್ಟಿಕರ್ತನ ಬಳಿ ಉತ್ತರಿಸಲೇಬೇಕು. ಒಂದು ಅಗುಳು ಅನ್ನಕ್ಕಾಗಿ ತತ್ವಾರ ಪಡುವ ಅದೆಷ್ಟೋ ಅಶಕ್ತ ಕುಟುಂಬಗಳು ನಮ್ಮದೇ ಜಿಲ್ಲೆಯ ಮೂಲೆ ಮೂಲೆಯಲ್ಲಿದ್ದಾರೆ. ನಾವು ಶೋಕಿಯಲ್ಲಿ ಮೈಮರೆತಿರುವಾಗ ಈ ಬಗ್ಗೆ ಯಾರೂ ಚಿಂತಿಸುವುದೇ ಇಲ್ಲ. ಇವೆಲ್ಲದರ ಕುರಿತು ತಳಮಟ್ಟದಿಂದ ಜಾಗೃತಿ ನಡೆಯಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಅಂತಹ ಸುಂದರ ನಾಳೆಗಳು ಬರಲಿ ಎಂಬ ಆಶಯ ನನ್ನದು.

ವಾರ್ಷಿಕ 500 ಕೋಟಿಯ ಅನ್ನವನ್ನು ಕಸದ ಬುಟ್ಟಿಗೆಸೆಯುವಾಗ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹಸಿದು ಒಂದೊತ್ತಿನ ಉಪಹಾರಕ್ಕಾಗಿ ಕ್ಯೂ ನಿಲ್ಲುವ ನಮ್ಮ ಸಹೋದರ ಸಹೋದರಿಯರನ್ನು ದಯವಿಟ್ಟು ಒಮ್ಮೆ ನೆನಪಿಸಿ. ಅವರಿಗಾಗಿ ಪ್ರಾರ್ಥಿಸಿ. ಅವರ ಬಡತನ ಸೃಷ್ಟಿಕರ್ತನ ಪರೀಕ್ಷೆ. ನಮಗೆ ಒಂದಷ್ಟು ಹಣ ಅಂತಸ್ತು ನೀಡಿದ್ದೂ ಸೃಷ್ಟಿಕರ್ತನ ಪರೀಕ್ಷೆ ಮತ್ತು ವರ. ನಾಳೆ ಬಡವ ಶ್ರೀಮಂತನಾಗಬಹುದು. ಶ್ರೀಮಂತ ಬೇಡಿ ತಿನ್ನುವ ಪರಿಸ್ಥಿತಿಗೂ ತಲುಪಬಹುದು. ಇಂತಹ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳ ಜೊತೆಗಾರರು ಒಂದೊತ್ತಿನ ಅನ್ನಕ್ಕಾಗಿ ಕೈಚಾಚುವ ಪರಿಸ್ಥಿತಿ ಅಲ್ಲಿದೆ. ನಿಜವಾದ ಹಸಿವು ಇರುವವರು, ಹೊಟ್ಟೆ ಚುರುಗುಟ್ಟಿದವರನ್ನು ವೆನ್ಲಾಕ್ ಗೆ ಬಂದು ನೋಡಬಹುದು. ಅಲ್ಲಿ ದಿನನಿತ್ಯ ಸಂಜೆ 05:45ರಿಂದ 06:30ರ ತನಕ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಕಾರುಣ್ಯ ಯೋಜನೆಯಲ್ಲಿ ಉಚಿತ ರಾತ್ರಿಯ ಉಪಹಾರ ನೀಡಲಾಗುತ್ತಿದೆ. ಹಸಿದವರ ಹೊಟ್ಟೆ ತಣಿಸುವ ಮಹತ್ಕಾರ್ಯವನ್ನು ಕಳೆದ 2 ವರ್ಷಗಳಿಂದ ದಾನಿಗಳ ಸಹಕಾರದಿಂದ ಮಾಡಲಾಗುತ್ತಿದೆ. ಈ ಪುಣ್ಯ ಕಾರ್ಯಕ್ಕೆ ಮಾಸಿಕ 500 ರಂತೆ ನೀಡುವ 200 ಸಹೃದಯ ಸದಸ್ಯರಿದ್ದಾರೆ. ಆದರೆ ಇದು ಸಾಲುತ್ತಿಲ್ಲ. ವರ್ಷಕ್ಕೆ 6,000/- ರೂ. ನೀಡುವ ಇನ್ನೂ 250 ಸದಸ್ಯರು ಸಿಕ್ಕರೆ ವೆನ್ಲಾಕ್ ನಲ್ಲಿರುವ ಸುಮಾರು 500 ರಷ್ಟು ಬಡ/ಅಶಕ್ತರು ದಿನನಿತ್ಯ ನಿಮಗೆ ಒಳಿತಾಗಲೆಂದು ಪ್ರಾರ್ಥಿಸಿ ಹೊಟ್ಟೆ ತುಂಬಿಸಬಹುದು. ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ +91 9741993313 ನಂಬ್ರಕ್ಕೆ ವಾಟ್ಸಪ್ ಮಾಡಬಹುದು. ಪವಿತ್ರವಾದ ಕೆಲಸದಲ್ಲಿ ನೀವೂ ಭಾಗಿಯಾಗಲು ಆಸಕ್ತಿ ಇದ್ದರೆ ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆಯ ಸದಸ್ಯತನ ಪಡೆಯಬಹುದು. ಮದುವೆಯೊಂದರಲ್ಲೇ ವಾರ್ಷಿಕ 500 ಕೋಟಿ ರೂ. ಫುಡ್’ನ್ನು ಕಸದ ಗಟಾರಕ್ಕೆ ಎಸೆಯುವ ಜಿಲ್ಲೆಯಲ್ಲಿರುವ ನಾವು ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಶಕ್ತರಿಗೆ ಇಷ್ಟಾದರೂ ಮಾಡಬಲ್ಲರೇ?