ನದಿಗೆ ವಿಷಯುಕ್ತ ತ್ಯಾಜ್ಯ: ಮಲೇಶ್ಯದಲ್ಲಿ ನೂರಕ್ಕೂ ಹೆಚ್ಚು ಶಾಲೆಗಳು ಬಂದ್

0
413

ದಕ್ಷಿಣ ಜೊಹರ್: ವಿಷಯುಕ್ತ ತ್ಯಾಜ್ಯವನ್ನು ನದಿಗೆ ಸುರಿದ ಪರಿಣಾಮ ಮಲೇಶ್ಯದಲ್ಲಿ ನೂರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಸರಕಾರ ಆದೇಶ ನೀಡಿದೆ. ಲಾರಿಯೊಂದು ತಂದು ದಕ್ಷಿಣ ಜೊಹರ್‍ನಲ್ಲಿ ಕಳೆದ ವಾರ ವಿಷಯುಕ್ತ ತ್ಯಾಜ್ಯವನ್ನು ಸುರಿಯಲಾಗಿತ್ತು. ನಂತರ ನದಿ ನೀರನ್ನು ಉಪಯೋಗಿಸಿದ್ದರಿಂದ ನೂರಾರು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇವರಲ್ಲಿ ಹಲವು ಮಕ್ಕಳೂ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

ಐನೂರಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಇವರಲ್ಲಿ ಹೆಚ್ಚಿನವರು ಶಾಲೆಯ ವಿದ್ಯಾರ್ಥಿಗಳಾಗಿದ್ದೂ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. 160ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಬೆರ್ನಾಮ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಹತ್ತಿರದ ಕೈಗಾರಿಕ ನಗರ ಪಾಸಿರ್ ಗುಡಂಗ್‍ನಿಂದ ತ್ಯಾಜವನ್ನು ತಂದು ನದಿಗೆ ಸುರಿಯಲಾಗಿತ್ತು. ಯಾವ ರೀತಿಯ ವಿಷಯುಕ್ತ ಪದಾರ್ಥ ಸುರಿಯಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಬುಧವಾರ ಶಿಕ್ಷಣ ಸಚಿವ ಮಝಲಿ ಮಲಿಕ್ ಸ್ಥಳೀಯ 43 ಶಾಲೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದರು. ನಂತರ ಇನ್ನಷ್ಟು ಶಾಲೆಗಳನ್ನು ಮುಚ್ಚುವಂತೆ ಅವರು ಆದೇಶ ಹೊರಡಿಸಿದರು.

ಪಸಿರ್ ಗುಡಂಗ್ ಪ್ರದೇಶದ 111 ಶಾಲೆಗಳನ್ನು ತಕ್ಷಣದಿಂದ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಇನ್ನೋರ್ವನನ್ನು ಇನ್ನಷ್ಟೇ ಬಂಧಿಸಬೇಕಾಗಿದೆ. ಆರೋಪ ಸಾಬೀತಾದರೆ ಐದು ವರ್ಷ ಜೈಲು ಶಿಕ್ಷೆ ನೀಡಬಹುದಾದ ಅಪರಾಧ ಇದಾಗಿದೆ.