ಅಂಧ ಅಭಿಮಾನಿಗಳನ್ನು ಯಾಮಾರಿಸುವ ವಾಜಪೇಯಿ ಮತ್ತು ಮೋದಿ

0
835
Indian Prime Minister Atal Bihari Vajpayee, right, shares a joke with Gujarat's chief Minister Narendra Modi during a public meeting in Vadodara, 125 km (75 miles) south of Ahmadabad, India, Saturday, Dec. 7, 2002. Vajpayee is in Gujarat to campaign forthe rulling Bhartiya Janta Party for elections next week. (AP/ Siddharth Darshan Kumar)

ಏ. ಕೆ. ಕುಕ್ಕಿಲ

ಪ್ರಧಾನಿ ಮೋದಿಯವರ ಸ್ಥಿರ ವ್ಯಕ್ತಿತ್ವಕ್ಕೆ ಹೋಲಿಸಿದರೆ ವಾಜಪೇಯಿ ಸಾಕಷ್ಟು ಭಿನ್ನವಾಗಿದ್ದರು. ಮೋದಿಯವರಂತೆ ನಿರ್ದಿಷ್ಟವಾದ ಮತ್ತು ನಿಷ್ಠುರವಾದ ವ್ಯಕ್ತಿಚಿತ್ರವೊಂದು ಅವರಿಗಿರಲಿಲ್ಲ. ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಯು ನಿಗದಿಪಡಿಸಿದ ಬೇಲಿಯಿಂದ ಆಗಾಗ ಹೊರಜಿಗಿದು ತನಗಿಷ್ಟವಾದುದನ್ನು ಹೇಳಿ ಮತ್ತೆ ಬೇಲಿಯೊಳಗೆ ತೂರಿಕೊಳ್ಳುವುದು ಅವರ ಸ್ವಭಾವವಾಗಿತ್ತು. ಅವರ ಮಾಂಸಾಹಾರ ಪ್ರೇಮ, ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯ, ವಿಧವೆಯಾದ ತನ್ನ ಸಹಪಾಠಿಯೊಂದಿಗೆ ಕೊನೆಗಾಲದವರೆಗೂ ಜೀವನ ನಡೆಸಿದ್ದು, “ತಾನು ಮದುವೆಯಾಗಿಲ್ಲ, ಆದರೆ ಬ್ರಹ್ಮಚಾರಿಯಲ್ಲ” ಎಂದು ಬಹಿರಂಗವಾಗಿಯೇ ಹೇಳಿಕೊಂಡದ್ದು, ಬಾಬರಿ ಧ್ವಂಸಕ್ಕೆ ವ್ಯಕ್ತಪಡಿಸಿದ ಶೋಕ… ಎಲ್ಲವೂ ಬೇಲಿಯನ್ನು ಮೀರಿದ ನಿಲುವುಗಳಾಗಿತ್ತು. ಆದ್ದರಿಂದಲೇ

ಮೋದಿಯವರಿಗೆ ಹೋಲಿಸಿದರೆ ವಾಜಪೇಯಿಯವರಿಗೆ ಅಂಧ ಅಭಿಮಾನಿಗಳ ಸಂಖ್ಯೆ ಕಡಿಮೆಯಿತ್ತು. ಅಭಿಮಾನಿಗಳ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಳ್ಳುವ ಸಾಧ್ಯತೆ ಮತ್ತು ಸ್ವಾತಂತ್ರ್ಯವನ್ನು ಅವರು ಮುಕ್ತವಾಗಿರಿಸಿಕೊಂಡಿದ್ದರು. ಆದರೆ ಮೋದಿ ಹಾಗಲ್ಲ. ಅವರು ಬೇಲಿಯಿಂದ ಹೊರಜಿಗಿಯುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇಂದಿರಾಗಾಂಧಿಯವರನ್ನು ದುರ್ಗೆ ಎಂದು ಕರೆದು ಮೆಚ್ಚಿಕೊಳ್ಳಲು ವಾಜಪೇಯಿಯವರಿಂದ ಸಾಧ್ಯವೇ ಹೊರತು ಮೋದಿಯವರಿಂದಲ್ಲ. ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳ ದೇಗುಲ ಪ್ರವೇಶಿಸಿದರು ಎಂಬ ಪುಕಾರಿಗೆ ವಿರುದ್ಧವಾಗಿ ಮೋದಿಯವರು ಉಪವಾಸವಿದ್ದು ದೇಗುಲ

ಪ್ರವೇಶಿಸುತ್ತಾರೆ. ಮುಸ್ಲಿಮರ ಸ್ಕಲ್ ಟೋಪಿ ಧರಿಸಲು ನಿರಾಕರಿಸುತ್ತಾರೆ. ಅಪ್ಪಿತಪ್ಪಿಯೂ ಗುಜರಾತ್ ಹತ್ಯಾಕಾಂಡಕ್ಕೆ ವಿಷಾದ ಸೂಚಿಸುವುದಿಲ್ಲ. ಹಮ್ ಪಾಂಚ್ ಹಮಾರೆ ಪಚ್ಚಿಸ್ ಎಂದು ತಮಾಷೆ ಮಾಡುತ್ತಾರೆ. ಅವರಿಗೊಂದು ನಿಷ್ಠುರವಾದ ಮುಖವಿದೆ. ಹೀಗೆಯೇ ಎಂದು ಪಂಥ ಕಟ್ಟಬಹುದಾದ ವ್ಯಕ್ತಿಚಿತ್ರ. ಅಭಿಮಾನಿಗಳನ್ನು ಅಂಧರಾಗಿಸುವುದು ಇಂಥ ವ್ಯಕ್ತಿತ್ವವೇ. ಇಲ್ಲಿ ಅಭಿಮಾನಿಗಳು ಯಾಮಾರುವ ಭಯವೇ ಇರುವುದಿಲ್ಲ.

ವಾಜಪೇಯಿಯವರದು ಕವಿ ಹೃದಯ. ಮೋದಿಯವರದು ಒಣ ಹೃದಯ. ಕವಿ ಹೃದಯ ಯಾವಾಗಲೂ ಒಂದು ಸಾಧ್ಯತೆಯನ್ನು ತೆರೆದಿಟ್ಟೇ ಬದುಕುತ್ತಿರುತ್ತದೆ. ಬೇಲಿಯನ್ನು ಜಿಗಿದು ಅನಿಸಿದ ಕೆಲವು ಸತ್ಯಗಳನ್ನು ಸ್ವಚ್ಛ೦ದವಾಗಿ ಉಸುರಿ ಮತ್ತೆ ಬೇಲಿ ಸೇರಿಕೊಳ್ಳುವ ಸಾಧ್ಯತೆ. ಒಣ ಹೃದಯದಿಂದ ಇಂಥದ್ದೊಂದು ನಿರೀಕ್ಷೆಯೇ ಅಸಾಧ್ಯ.

ವಾಜಪೇಯಿಯವರಿಗೆ ಒಳಿತಾಗಲಿ.