ದೇಶ, ಭಾಷೆ, ಗಡಿಯನ್ನು ಮರೆತು ಈಶಿ ಬಿಲಾದಿ ಹಾಡುವ ಮಕ್ಕಳು

0
253

✒ ಸ್ವಾಲಿಹಾ ಸಾದಿ

ಯು.ಎ.ಇ,ಯಲ್ಲಿರುವ ಅನೇಕ ಶಾಲಾ ಕಾಲೇಜುಗಳನ್ನು ಒಳಗೊಂಡಂತೆ ಇಲ್ಲಿರುವ ಅನೇಕ ಭಾರತೀಯ ಶಾಲಾ ಕಾಲೇಜುಗಳಿಗೂ ವಾರ್ಷಿಕ ರಜೆ ಜುಲೈ ಆಗಸ್ಟ್ ತಿಂಗಳುಗಳಲ್ಲಾದುದರಿಂದ ಇಲ್ಲಿರುವ ಮಕ್ಕಳಿಗೆ ಶಾಲೆಗಳಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಅವಕಾಶ ಸಿಗುವುದಿಲ್ಲ. ಸೆಕೆಯ ಕಠಿಣತೆಯ ಈ ಎರಡು ತಿಂಗಳುಗಳಲ್ಲಿ ಇಲ್ಲಿ ರಜೆ ಘೋಷಿಸಲಾಗುತ್ತ ದೆ.ಆದರೆ ಇಲ್ಲಿನ ಅನೇಕ ಭಾರತೀಯ ಸಂಘ ಸಂಸ್ಥೆಗಳಲ್ಲಿ ,ಕಚೇರಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿನ ಶಾಲಾ ಮಕ್ಕಳಿಗೆ ಆಗಸ್ಟ್ ತಿಂಗಳ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವು ಇಲ್ಲವಾಗುತ್ತದೆಯೇ ಹೊರತು ಅದರ ನಂತರ ಬರುವ ಎಲ್ಲಾ ಕಾರ್ಯಕ್ರಮಗಳನ್ನು ಇಲ್ಲಿನ ಶಾಲೆಗಳಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಭಾರತೀಯ ಶಾಲೆಯಲ್ಲ ವೇ, ಆಚರಿಸಲೇ ಬೇಕಲ್ಲವೇ, ಎಲ್ಲಾ ಶಾಲೆಯಲ್ಲಿ ಆಚರಿಸುತ್ತಾರೆ ಅದರಲ್ಲೇನು ಮಹಾ ?ಎಂದು ಖಂಡಿತವಾಗಿಯೂ ತೋಚಬಹುದು ಆದರೆ ಇಲ್ಲಿ ವಿಶೇಷವಾಗಿ ಕಾಣುವುದು ಭಾರತೀಯರಲ್ಲದ ಬೇರೆ ಬೇರೆ ದೇಶದ ಮಕ್ಕಳು, ಬೇರೆ ಬೇರೆ ದೇಶದ ಅಧ್ಯಾಪಕರು, ಭಾರತದ ಉತ್ಸವಗಳನ್ನು ಅತ್ಯಂತ ಪ್ರೀತಿಯಿಂದ ಸಂತೋಷದಿಂದ ಆಚರಿಸುವಾಗ ,ಅದನ್ನು ಅನುಭವಿಸುವಾಗ ,ಅದಕ್ಕಾಗಿ ನಡೆಸುವ ಪೂರ್ವ ಸಿದ್ಧತೆಗಳಲ್ಲಿ ಉತ್ಸಾಹ ಪೂರ್ವಕವಾಗಿ ಕೈಜೋಡಿಸುವಾಗ ಅದನ್ನು ನೋಡುವುದೇ ಒಂದು ಸೊಗಸು.

ಕಳೆದ ಒಂದು ವಾರದಲ್ಲಿ ಎರಡನೇ ತರಗತಿಯಲ್ಲಿ ಕಲಿಯುವ ಮಗಳು ಗಣರಾಜ್ಯೋತ್ಸವದ ಪ್ರಯುಕ್ತ ಶಾಲೆಯಲ್ಲಿ ಕೊಟ್ಟಂತಹ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಳು. ಚಿತ್ರ ರಚಿಸುವುದು ಬಣ್ಣ ಹಚ್ಚುವುದು ಮೊದಲೇ ಇಷ್ಟ ಕಾಯಕ ವಾದುದರಿಂದ ಶಾಲೆಯಿಂದ ಬಂದ ಕೂಡಲೇ ಹೇಳದೇ ಅವಳ ಕೆಲಸದಲ್ಲಿ ತಲ್ಲೀನಳಾಗಿದ್ದಳು. ನಾನು ಕೂಡ ತ್ರಿವರ್ಣ ಬಣ್ಣದ ಕಾಗದಗಳಿಂದ ಹೂವುಗಳನ್ನು ಚಿಟ್ಟೆಯನ್ನು ತಯಾರಿಸಿ ಕೊಟ್ಟಿದ್ದೆ. ಯಾವ ತರಗತಿಯು ಎಷ್ಟು ಚೆನ್ನಾಗಿ ತನ್ನ ಕಲೆಯನ್ನು ಪ್ರದರ್ಶಿಸುವುದೋ, ಆ ತರಗತಿಗೆ ಬಹುಮಾನ ವಾದ್ದರಿಂದ ತರಗತಿಯ ಮಕ್ಕಳು, ಹೆತ್ತವರು, ಅಧ್ಯಾಪಕರು ಒಗ್ಗಟ್ಟಾಗಿದ್ದರು. ಮಗಳ ಸಹಪಾಠಿಗಳಲ್ಲಿ ಹೆಚ್ಚಿನ ಮಕ್ಕಳು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ,ನೇಪಾಳ ,ಶ್ರೀಲಂಕಾ ದೇಶದ ಮಕ್ಕಳನ್ನು ಒಳಗೊಂಡಂತೆ ಭಾರತದ ವಿವಿಧ ರಾಜ್ಯಗಳ ಮಕ್ಕಳು ಇದ್ದಾರೆ .ಆದರೆ ಭಾರತೀಯರಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಕೇರಳದವರು ಎಂದು ಹೇಳಬಹುದು.

ಈ ಎಲ್ಲಾ ಬೇರೆ ಬೇರೆ ದೇಶದ ಮಕ್ಕಳು ಅವರವರ ದೇಶದ ರಾಷ್ಟ್ರಗೀತೆಯನ್ನು ಎಷ್ಟು ಚೆನ್ನಾಗಿ ಹಾಡುತ್ತಾರೆ ಎಂದು ಗೊತ್ತಿಲ್ಲ ,ಆದರೆ ಎಲ್ಲಾ ಮಕ್ಕಳು “ ಈಶೀ.. ಬಿಲಾದಿ”… ಎಂದು ಪ್ರಾರಂಭವಾಗುವ ಯು.ಎ.ಇ,ಯ ರಾಷ್ಟ್ರಗೀತೆಯನ್ನು ಬಹಳ ಚೆನ್ನಾಗಿ ಹಾಡುತ್ತಾರೆ . ಅದೇ ರೀತಿ ಜನಗಣಮನ ಎಲ್ಲಾ ಮಕ್ಕಳಿಗೂ ಬಾಯಿಪಾಠ. ಮಗಳ ಪಾಕಿಸ್ತಾನಿ ಗೆಳತಿ ಜನಗಣಮನ ಹಾಡುವುದನ್ನು, ಕೇರಳದ ಮಕ್ಕಳೊಂದಿಗೆ ಕಲಿತ ಮಲಯಾಳಂ ವಾಕ್ಯಗಳನ್ನು ಮಾತನಾಡುವ ಶೈಲಿಯನ್ನು ,ಮಗಳೊಂದಿಗೆ ಕಲಿತ ಬ್ಯಾರಿ ಕನ್ನಡ ಪದಗಳನ್ನು ನೆನೆದು ಅದನ್ನು ಮನೆಯಲ್ಲಿ ನನ್ನ ಮುಂದೆ ನಟಿಸಿ ತೋರಿಸುವುದು ಇದೆ.

ಬೇರೆ ಬೇರೆ ದೇಶದ ಮಕ್ಕಳು ರಚಿಸಿದ ತ್ರಿವರ್ಣ ಧ್ವಜ ,ಅಶೋಕ ಚಕ್ರ ,ಕೋಲು ಹಿಡಿದ ಬಾಪು, ಸೆಲ್ಯೂಟ್ ಹೊಡೆದು ನಿಂತ ಸುಭಾಷ್ ಚಂದ್ರ ಬೋಸ್ .ಎಲ್ಲ ಚಿತ್ರವನ್ನು ವಾಟ್ಸ್ ಅಪ್ ಮೂಲಕ ಟೀಚರ್ ಕಳುಹಿಸಿಕೊಟ್ಟಿದ್ದರು. ನನಗೆ ಎಲ್ಲಾ ಚಿತ್ರಗಳನ್ನು ನೋಡುವುದಕ್ಕಿಂತಲೂ ಅದನ್ನು ರಚಿಸುವ ಬೇರೆ ಬೇರೆ ದೇಶದ ಮಕ್ಕಳನ್ನು, ಅವರೊಂದಿಗೆ ಕುಳಿತು ಬೆರೆಯುವ, ಸಲಹೆ ಸೂಚನೆಗಳನ್ನು ಹೇಳುವ ,ಮಗಳ ಸುಡಾನ್ ದೇಶದ ಅರೇಬಿಕ್ ಟೀಚರನ್ನು, ಬಹಳ ಚೆನ್ನಾಗಿ ಪಾಠ ಮಾಡುವ ಬಾಂಗ್ಲಾದೇಶದ ವಿಜ್ಞಾನ ಅಧ್ಯಾಪಕಿ ಯನ್ನು, ಭಾರತದ ವಿವಿಧ ರಾಜ್ಯಗಳನ್ನು ಪ್ರತಿಬಿಂಬಿಸುವ ಉಡುಪುಗಳನ್ನು ಧರಿಸಿ ದ ಬೇರೆ ಬೇರೆ ದೇಶದ ಮುದ್ದು ಮಕ್ಕಳನ್ನು ನೋಡುವುದೇ ಬಹಳ ಸಂತೋಷವಾಗಿತ್ತದೆ.

ಬಹಳ ಚೆನ್ನಾಗಿ ರಚಿಸಿದ ಒಂದು ಚಿತ್ರವಿತ್ತು. ಪರಸ್ಪರ ಹಸ್ತಲಾಘವ ಮಾಡುವ ಎರಡು ಕೈಗಳು. ಒಂದು ಕೈಯ ಬಣ್ಣ ತ್ರಿವರ್ಣ ಧ್ವಜದ್ದು,ಮತ್ತೊಂದು ಕೈಯ ಬಣ್ಣ ಯು.ಎ.ಇ,ಯ ಪತಾಕೆ ಯದು. ಎರಡು ಕೈಗಳ ಸುತ್ತಲೂ ಕಳೆದ ನೆರೆಗೆ ಜಲಾವೃತಗೊಂಡ ಕೇರಳದ ಚಿತ್ರ. ಕೇವಲ ಒಂದು ಚಿತ್ರದಲ್ಲಿ ಸ್ಪಷ್ಟ ಸಂದೇಶ. ಹೌದು ಯು.ಎ.ಇ ಯಿಂದ ಸಹಾಯ ಸಾಂತ್ವನ ಕೇರಳಕ್ಕೆ ಸಿಕ್ಕಿತ್ತು.ಸಂಯುಕ್ತ ರಾಷ್ಟ್ರ ಹಸ್ತಲಾಘವ ಮಾಡಿದ್ದು ಕೇವಲ ಭಾರತಕ್ಕೆ ಮಾತ್ರವಲ್ಲ. ಅದು ಇನ್ನೂರಕ್ಕೂ ಹೆಚ್ಚು ದೇಶದ ಜನರ ಕೈಯನ್ನು ಮೇಲೆತ್ತಿದೆ,ಉದ್ಯೋಗ ನೀಡಿದೆ ,ಸಂಸಾರ ಸಮೇತ ಇಲ್ಲಿ ನೆಲೆ ನಿಲ್ಲುವ ಅವಕಾಶವನ್ನು ಕಲ್ಪಿಸಿದೆ.

ಯು.ಎ. ಇ, ಯು ಕಳೆದ ಕೆಲವು ವರ್ಷಗಳಿಂದ ಒಂದೊಂದು ವರ್ಷಕ್ಕೆ ಒಂದು ಹೆಸರನ್ನು ನೀಡುತ್ತಾ ,ಅದರಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. 2017 ಕೊಡುವ ವರ್ಷ ಎಂದಾಗಿತ್ತು. ಆ ವರ್ಷದಿಂದ ದಾನ ನೀಡುವುದನ್ನು ಮತ್ತಷ್ಟು ಪ್ರೇರೇಪಿಸಿತು. ಕಳೆದ ವರ್ಷ ಶೈಕ್ ಝಾಹಿದ್ ರ ವರ್ಷವಾಗಿತ್ತು. ಇದೀಗ 2019 ನ್ನು” ಇಯರ್ ಆಫ್ ಟಾಲರೆನ್ಸ್ “ನ್ನಾಗಿ ಘೋಷಿಸಲಾಗಿದೆ. ಜಾತಿ ಭೇದ ಪಂಗಡಗಳನ್ನು ಬಿಟ್ಟು ಪರಸ್ಪರ ಪ್ರೀತಿಸಲು ,ಸೌಹಾರ್ದತೆಯಿಂದ ಬಾಳಲು, ದೇಶದ ಗಡಿ ದಾಟಿ ಇನ್ನೊಂದು ದೇಶವನ್ನು ಪ್ರೀತಿಸಲು ಕಲಿಸುವ ಯು.ಎ.ಇ, ಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಈ ವರ್ಷವನ್ನು ಸಹಿಷ್ಣುತೆಯ ವರ್ಷವನ್ನಾಗಿ ಆಚರಿಸಲು ಹೊರಟ ಈ ದೇಶಕ್ಕೆ ಶುಭ ಹಾರೈಕೆಗಳು..