ವಕ್ಫ್ ಬೋರ್ಡ್, ಉರ್ದು ಅಕಾಡೆಮಿ, ಮದ್ರಸಾ ಬೋರ್ಡ್ ಇಲ್ಲದ ಜಾರ್ಖಂಡ್: ಇದು ಬಿಜೆಪಿಯ ಸಬ್ ಕಾ ವಿಕಾಸ್

0
904

ಆಂಗ್ಲ ಮೂಲ: ಘಝನ್ಫರ್ ಅಬ್ಬಾಸ್
ಕನ್ನಡಕ್ಕೆ: ಆಯಿಷತುಲ್ ಅಫೀಫಾ

ಕಾರವಾನ್ ಡೈಲಿ

ರಾಂಚಿ / ಹೊಸದಿಲ್ಲಿ: ಮುಂಬರುವ ನವೆಂಬರ್ ನಲ್ಲಿ ಜಾರ್ಖಂಡ್ ರಚನೆಯಾಗಿ 18ಕ್ಕೆ ಪಾದಾರ್ಪಣೆಗೈಯ್ಯುತ್ತಿದೆ. ಕಳೆದ 17 ವರ್ಷಗಳಲ್ಲಿ, ವಕ್ಫ್ ಬೋರ್ಡ್, ಮದ್ರಸಾ ಬೋರ್ಡ್ ಮತ್ತು ಉರ್ದು ಅಕಾಡೆಮಿ ಮುಂತಾದ ಅಲ್ಪಸಂಖ್ಯಾತ ಸರಕಾರಿ ಸಂಸ್ಥೆಗಳ ಕುರಿತು ಸರಕಾರಗಳು ಹೆಚ್ಚಿನದ್ದೇನೂ ಮಾಡಿಲ್ಲ. ಕಳೆದ ವರ್ಷ ಮಾರ್ಚ್ ನಲ್ಲಿ ಅಲ್ಪಸಂಖ್ಯಾತ ಮಂಡಳಿ ರಚನೆಯಾಯಿತಲ್ಲದೆ, ಕೇವಲ ಎರಡು ತಿಂಗಳ ಹಿಂದೆ ಹಜ್ ಸಮಿತಿ ರಚನೆಯಾಯಿತು.

ಜಾರ್ಖಂಡ್ ನಲ್ಲಿ ಬಹುಪಾಲು ಭಾರತೀಯ ಜನತಾ ಪಕ್ಷವು ಬಹು ಪಕ್ಷ ಅಥವಾ ಸಮ್ಮಿಶ್ರ ಪಾಲುದಾರರಾಗಿ ಆಳ್ವಿಕೆ ನಡೆಸಿದೆ ಎಂಬುದು ಗಮನಾರ್ಹ.

ಸಮುದಾಯವು ಈ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿಲ್ಲವೆಂದಲ್ಲ. ಮುಸ್ಲಿಮರು ಈ ವಿಷಯದಲ್ಲಿ ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಆದರೆ ಅವರು ಲಕ್ಶ್ಯ ಕೊಡಲಿಲ್ಲ .

“ನಾವು ಹಲವಾರು ಬಾರಿ ರಾಜ್ಯಪಾಲರಿಗೆ ಲಿಖಿತ ದಾಖಲೆಗಳನ್ನು ನೀಡಿದ್ದೇವೆ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ಆದರೆ ಯಾರೂ ನಮ್ಮ ಕಡೆ ಗಮನ ಕೊಡಲಿಲ್ಲ . ಉರ್ದು ಅಕಾಡೆಮಿ ಇಲ್ಲ. ವಕ್ಫ್ ಬೋರ್ಡ್ ನಿಷ್ಕ್ರಿಯವಾಗಿದೆ. ರಾಜ್ಯಪಾಲರಾಗಿದ್ದ ಸೈಯದ್ ಸಿಬ್ಟಿ ರಝಿಯಾಗಲಿ ಅಥವಾ ಸೈಯದ್ ಅಹ್ಮದ್ ರವರಾಗಲಿ ತಮ್ಮ ಅಧಿಕಾರಾವಧಿಯಲ್ಲಿ ಏನನ್ನೂ ಮಾಡಿಲ್ಲ” ಎಂದು ರಾಂಚಿ ವಿಶ್ವವಿದ್ಯಾನಿಲಯದ ಉರ್ದು ಮತ್ತು ಮಾನವೀಯತೆಯ ವಿಭಾಗದ ಮಾಜಿ ಮುಖ್ಯಸ್ಥ ಪ್ರೊ. ಅಹ್ಮದ್ ಸಜ್ಜದ್ ಕಾರವಾನ್ ಡೈಲಿಗೆ ತಿಳಿಸಿದರು.

ಕಳೆದ 17 ವರ್ಷಗಳಲ್ಲಿ ರಾಜ್ಯಕ್ಕೆ 10 ಮುಖ್ಯಮಂತ್ರಿಗಳು ದೊರೆತಿದ್ದಾರೆ-ಅವರಲ್ಲಿ ನಾಲ್ವರು ಜಾರ್ಖಂಡ್ ಮುಕ್ತಿ ಮೋರ್ಚಾದಿಂದ ಮತ್ತು 2019 ರಲ್ಲಿ ತಮ್ಮ 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಿರುವ ರಘುಬರ್ ದಾಸ್ ಸೇರಿದಂತೆ ಬಿಜೆಪಿಯಿಂದ ಐದು ಮಂದಿ.

ಅಂಜುಮಾನ್ ತರ್ಖಿ-ಇ ಉರ್ದುನ ಕಾರ್ಯನಿರ್ವಾಹಕ ಅಂಗಸಂಸ್ಥೆಯ ಸದಸ್ಯರೂ ಆಗಿರುವ ಪ್ರೊ. ಸಜ್ಜದ್ ಹೇಳುತ್ತಾರೆ, ಜಾರ್ಖಂಡ್ ಬಿಹಾರದ ಭಾಗವಾಗಿದ್ದಾಗ, ಉರ್ದು ರಾಜ್ಯದ ಅಧಿಕೃತ ಭಾಷೆಯಾಗಿತ್ತು. ಆದರೆ ವಿಂಗಡಣೆಯ ನಂತರ ಯಾವುದೇ ಉರ್ದು ಅಕಾಡೆಮಿಯು ರಚನೆಯಾಗಿಲ್ಲ.

ಉರ್ದು ಶಿಕ್ಷಕರ ಹುದ್ದೆಗಳು ವರ್ಷಗಳಿಂದ ಖಾಲಿ ಬಿದ್ದಿವೆ

ರಾಜ್ಯ ಸರ್ಕಾರವು ಶಾಲೆಗಳಲ್ಲಿ ಉರ್ದು ಶಿಕ್ಷಕರಿಗೆ ಯಾವುದೇ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ,
2016 ರಲ್ಲಿ ಅಂಜುಮಾನ್ ತಾರಾಕಿ-ಇ ಉರ್ದು ಉಚ್ಛ ನ್ಯಾಯಾಲಯದಲ್ಲಿ ಈ ಬಗ್ಗೆ ಅರ್ಜಿಯನ್ನು ಸಲ್ಲಿಸಿದ್ದರು. ಉರ್ದು ಶಿಕ್ಷಕರ ಹುದ್ದೆಯನ್ನು ತುಂಬಲು ನಿರ್ದೇಶನ ನೀಡುವಂತೆ ಕೋರಿದ್ದರು. ಆದರೆ ಕೋರ್ಟ್ ನ ಆದೇಶದ ಹೊರತಾಗಿಯೂ ಸರ್ಕಾರ ಏನನ್ನೂ ಮಾಡಿಲ್ಲ.

ಜಾರ್ಖಂಡ್ ಅನ್ನು ಬಿಹಾರದಿಂದ ಬೇರ್ಪಡಿಸಿದ ನಂತರ 4000 ಕ್ಕಿಂತ ಹೆಚ್ಚು ಉರ್ದು ಶಿಕ್ಷಕ ಹುದ್ದೆಗಳು ಖಾಲಿಯಾಗಿವೆ. ಹೈಕೋರ್ಟ್ ಆದೇಶದ ಹೊರತಾಗಿಯೂ ಸರ್ಕಾರ ಇದನ್ನು ಜಾರಿಗೊಳಿಸಿಲ್ಲ ಎಂದು ಪ್ರೊಫೆಸರ್ ಸಜ್ಜದ್ ಹೇಳಿದರು.

ಸರಕಾರವು ಇತರ ವಿಷಯಗಳ ಶಿಕ್ಷಕರನ್ನು ನೇಮಕ ಮಾಡಿದ್ದಾರೆ. ಆದರೆ ಉರ್ದು ಶಿಕ್ಷಕರನ್ನಲ್ಲ. ಈ ಕಾರಣದಿಂದಾಗಿ, ವಿದ್ಯಾರ್ಥಿಗಳು ಬಹಳಷ್ಟು ಬಳಲುತ್ತಿದ್ದಾರೆ.

2000 ರಿಂದಲೂ ಜಾರ್ಖಂಡ್ ಆಡಳಿತ ನಡೆಸಿದ ಪಕ್ಷಗಳು ಮತ್ತು ಮುಖ್ಯಮಂತ್ರಿಗಳು

ಭಾರತೀಯ ಜನತಾ ಪಕ್ಷ ಬಾಬುಲಾಲ್ ಮರಾಂಡಿ 15 ನವೆಂಬರ್ 2000 – 17 ಮಾರ್ಚ್ 2003 ಭಾರತೀಯ ಜನತಾ ಪಕ್ಷ

ಭಾರತೀಯ ಜನತಾ ಪಕ್ಷ ಅರ್ಜುನ್ ಮುಂಡಾ 18 ಮಾರ್ಚ್ 2003 – 2 ಮಾರ್ಚ್ 2005

ಜಾರ್ಖಂಡ್ ಮುಕ್ತಿ ಮೋರ್ಚಾ ಶಿಬು ಸೊರೆನ್ 2 ಮಾರ್ಚ್ 2005 – 12 ಮಾರ್ಚ್ 2005

ಭಾರತೀಯ ಜನತಾ ಪಕ್ಷ ಅರ್ಜುನ್ ಮುಂಡಾ 12 ಮಾರ್ಚ್ 2005 – 14 ಸೆಪ್ಟೆಂಬರ್ 2006

ಸ್ವತಂತ್ರ ಮಧು ಕೋಡಾ 14 ಸೆಪ್ಟೆಂಬರ್ 2006 – 23 ಆಗಸ್ಟ್ 2008

ಜಾರ್ಖಂಡ್ ಮುಕ್ತಿ ಮೋರ್ಚಾ ಶಿಬು ಸೊರೆನ್ 27 ಆಗಸ್ಟ್ 2008 – 18 ಜನವರಿ 2009

ರಾಷ್ಟ್ರಪತಿ ಆಳ್ವಿಕೆ 19 ಜನವರಿ 2009 – 29 ಡಿಸೆಂಬರ್ 2009

ಜಾರ್ಖಂಡ್ ಮುಕ್ತಿ ಮೋರ್ಚಾ ಶಿಬು ಸೊರೆನ್ 30 ಡಿಸೆಂಬರ್ 2009 – 31 ಮೇ 2010

ರಾಷ್ಟ್ರಪತಿ ಆಳ್ವಿಕೆ 1 ಜೂನ್ 2010 – 11 ಸೆಪ್ಟೆಂಬರ್ 2010

ಭಾರತೀಯ ಜನತಾ ಪಕ್ಷ ಅರ್ಜುನ್ ಮುಂಡಾ 11 ಸೆಪ್ಟೆಂಬರ್ 2010 – 18 ಜನವರಿ 2013

ರಾಷ್ಟ್ರಪತಿ ಆಳ್ವಿಕೆ 18 ಜನವರಿ 2013 – 12 ಜುಲೈ 2013

ಜಾರ್ಖಂಡ್ ಮುಕ್ತಿ ಮೋರ್ಚಾ ಹೇಮಂತ್ ಸೋರೆನ್ 13 ಜುಲೈ 2013 – 28 ಡಿಸೆಂಬರ್ 2014

ಭಾರತೀಯ ಜನತಾ ಪಕ್ಷ ರಘುಬರ್ ದಾಸ್ 28 ಡಿಸೆಂಬರ್ 2014 ರಿಂದ ಇಲ್ಲಿಯವರೆಗೂ

ಉನ್ನತ ಶಿಕ್ಷಣದ ಕುರಿತು ಅವರು ಮಾತನಾಡುತ್ತಾ,”ಹತ್ತು ವರ್ಷಗಳ ಕಾಲ ರಾಂಚಿ ವಿಶ್ವವಿದ್ಯಾನಿಲಯದಲ್ಲಿ ಗುತ್ತಿಗೆ ಶಿಕ್ಷಕರನ್ನು ಹೊರತುಪಡಿಸಿ ಉರ್ದುವಿಗೆ ಯಾವುದೇ ಶಿಕ್ಷಕರನ್ನು ನೇಮಕ ಮಾಡಲಾಗಿಲ್ಲ ಮತ್ತು ಈ ಗುತ್ತಿಗೆ ಶಿಕ್ಷಕರು ಕೂಡ ಸಂಜೆ ಪಾಳಿಗಳಿಗೆ ನೇಮಕವಾಗಿದ್ದಾರೆ. “

ಬಿಹಾರದ 18 ಜಿಲ್ಲೆಗಳನ್ನು ಬೇರ್ಪಡಿಸುವ ಮಸೂದೆಯನ್ನು ಭಾರತದ ಸಂಸತ್ತು ಅಂಗೀಕರಿಸುವ ಮೂಲಕ ಜಾರ್ಖಂಡ್ 15 ನವೆಂಬರ್ 2000 ರಂದು ರಚನೆಯಾಯಿತು. . ಜನಗಣತಿ 2011 ರ ಪ್ರಕಾರ, ಜಾರ್ಖಂಡನ ಒಟ್ಟು ಜನಸಂಖ್ಯೆಯಲ್ಲಿ 14.53% ರಷ್ಟು ಮುಸ್ಲಿಮರಿದ್ದಾರೆ.

ಇನ್ನೂ ಮದ್ರಸಾ ಸಮಿತಿಯಿಲ್ಲ

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮದ್ರಸಾ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿರುವ ಅಂಜುಮಾನ್ ಇಸ್ಲಾಮಿಯಾ ಸಂಸ್ಥೆ ಅಧ್ಯಕ್ಷ ಅಬ್ರಾರ್ ಅಹ್ಮದ್ ಹೇಳುತ್ತಾರೆ- ಯಾವುದೇ ಶೈಕ್ಷಣಿಕ ಕೆಲಸಕ್ಕಾಗಿ ಅವರು ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (ಜೆಎಸಿ) ಅನ್ನು ಸಂಪರ್ಕಿಸಬೇಕಾಗಿದೆ, ಏಕೆಂದರೆ ಯಾವುದೇ ಮದ್ರಾಸ ಮಂಡಳಿಯಿಲ್ಲ, ಮತ್ತು ಇದು ದೀರ್ಘಕಾಲದವರೆಗೆ ಬಗೆಹರಿಸಲಾಗದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

“ಜಾರ್ಖಂಡ್ ನಲ್ಲಿ ‘ಅಲ್ಪಸಂಖ್ಯಾತರ ಕಲ್ಯಾಣ’ ಎಂಬ ಹೆಸರಿನಿಂದ ಯಾವ ಸಂಸ್ಥೆಯು ಇಲ್ಲ . ವಕ್ಫ್ ಮಂಡಳಿಗೆ ಅಧ್ಯಕ್ಷರಿಲ್ಲ, ಅದು ನಿಷ್ಕ್ರಿಯವಾಗಿದೆ. ಮದ್ರಸಾ ಬೋರ್ಡ್ ಇಲ್ಲ. ಈಗ ಯಾವುದೇ ಶೈಕ್ಷಣಿಕ ಕೆಲಸಕ್ಕಾಗಿ ನಾವು ಜೆಎಸಿ ಸಮೀಪಿಸಬೇಕಾಗಿದೆ ಎಂದು ಅಬ್ರಾರ್ ಅಹ್ಮದ್ ಕಾರವಾನ್ ಡೈಲಿಗೆ ತಿಳಿಸಿದರು.

ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಮ್ ಆಜಾದ್ ಸ್ಥಾಪಿಸಿದ 100 ವರ್ಷ ಹಳೆಯ ರಾಂಚಿಯ ಇಸ್ಲಾಮಿಯಾ ಮದ್ರಸಾದ ಬಗ್ಗೆ ಸಹ ಸರ್ಕಾರದ ಗಮನದ ಅಗತ್ಯವಿದೆ.

ಮಾರ್ಚ್ 2017 ರವರೆಗೆ , ರಾಜ್ಯದ ಅಲ್ಪಸಂಖ್ಯಾತ ಆಯೋಗವೂ ನಿಷ್ಕ್ರಿಯವಾಗಿತ್ತು . ಈಗ ಬಿಜೆಪಿಯ ಮಾಜಿ ವಕ್ತಾರರಾದ ಮುಹಮ್ಮದ್ ಕಾಮಾಲ್ ಖಾನ್ ಇದರ ನೇತೃತ್ವ ವಹಿಸಿದ್ದಾರೆ. ತಿಂಗಳುಗಳ ಹಿಂದೆ, ಹಜ್ ಸಮಿತಿ ರಚನೆಯಾಯಿತು.

ಎಲ್ಲಾ ಐದು ಸಂಸ್ಥೆಗಳು ಬಿಹಾರದಲ್ಲಿದ್ದ ಸಮಯದಲ್ಲಿ ಅಸ್ತಿತ್ವದಲ್ಲಿದ್ದವು ಮತ್ತು ಅವು ಕಾರ್ಯ ನಿರ್ವಹಿಸುತ್ತಿದ್ದವು .