ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ವತಿಯಿಂದ ಪ್ರತಿಭಟನಾ ಧರಣಿ

0
169

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗ ಸಾಂಘಿಕ ಹೋರಾಟ ನಡೆಸಬೇಕು.

ಬೆಂಗಳೂರು ನಗರದ ಫ್ರೀಡಂ ಪಾರ್ಕ್ ಬಳಿಯಲ್ಲಿ ಒಂದು ದಿನದ ಪ್ರತಿಭಟನಾ ಧರಣಿಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಗಳೂರು ಜಿಲ್ಲಾ ಘಟಕ ವತಿಯಿಂದ ಹಮ್ಮಿಕೊಳ್ಳಲಾಯಿತು.

ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಯಾಗಿದ್ದು, ಜನ ಸಾಮಾನ್ಯರ ಹಿತವನ್ನು ಕಡೆಗಣಿಸಿದೆ. ದುಡಿಯುವ ವರ್ಗ ಬೀದಿಗೆ ಬೀಳುವಂತೆ ಮಾಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸುಬ್ರಹ್ಮಣ್ಯಂ ಅರ್ಮುಗಂ ಹೇಳಿದರು.

ಎಪಿಎಂಸಿ ರದ್ದತಿ ಕಾಯ್ದೆ, ಕಂಪನಿ ಗುತ್ತಿಗೆ ಕೃಷಿ ಕಾಯ್ದೆ, ಆಹಾರ ಸರಕುಗಳ ದಾಸ್ತಾನು ಕಾಯ್ದೆ, ವಿದ್ಯುತ್ ಖಾಸಗೀಕರನ ಕಾಯ್ದೆ, ಉಳ್ಳವರದೇ ಭೂಮಿ ಕಾಯ್ದೆ, ಜಾನುವಾರು ಮಾರಾಟ ನಿಷೇಧ ಕಾಯ್ದೆ ಸಮಾಜದ ದೊಡ್ಡ ದುಡಿಯುವ ವರ್ಗಕ್ಕೆ ಮಾರಕವಾಗಿದೆ.ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುವ ಕಾಯ್ದೆಗಳ ಜಾರಿಯಿಂದ, ಕಾರ್ಮಿಕರ ಬದುಕು ಭಾರವಾಗುತ್ತದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹೀರ್ ಹುಸೇನ್ ನುಡಿದರು.

ಈ ಸಂದರ್ಭದಲ್ಲಿ ರಜಾಕ್ ಪಾಲೆಮಾರ್(ರಾಷ್ಟ್ರೀಯ ಕಾರ್ಯದರ್ಶಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ),
ಹಬೀಬುಲ್ಲಾ ಖಾನ್ (ರಾಜ್ಯ ಪ್ರಧಾನ ಕಾರ್ಯದರ್ಶಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ), ತಲತ್ ಯಾಸ್ಮಿನ್ (ರಾಜ್ಯಾಧ್ಯಕ್ಷರು ಮಹಿಳಾ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ), ಅಜೀಜ್ ಜಾಗಿರ್ದಾರ್ (ರಾಜ್ಯ ಮಾಧ್ಯಮ ಕಾರ್ಯದರ್ಶಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ), ಸುಲೇಮಾನ್ (ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಅಧ್ಯಕ್ಷರು), ಆಸಿಫ್ (ಬೆಂಗಳೂರು ಉತ್ತರ ಘಟಕ ಅಧ್ಯಕ್ಷರು), ಸೈಯದ್ (ಬೆಂಗಳೂರು ದಕ್ಷಿಣ ಘಟಕ ಅಧ್ಯಕ್ಷರು) ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.