ಅಲ್-ಜಝೀರಾ ಚಾನೆಲ್‌ನ ಪ್ರಸಾರಕ್ಕೆ ನಿ‍ಷೇಧ ಹೇರಿದ ಇಸ್ರೇಲ್‌ನ ನೆತನ್ಯಾಹು ಸರ್ಕಾರ

0
146

ಸನ್ಮಾರ್ಗ ವಾರ್ತೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನೇತೃತ್ವದ ಸಚಿವ ಸಂಪುಟವು ಪ್ಯಾಲೆಸ್ತೀನ್ ಜನರ ಪರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಲ್-ಜಝೀರಾ ಚಾನೆಲ್‌ನ ಪ್ರಸಾರಕ್ಕೆ ಇಸ್ರೇಲ್‌ನಲ್ಲಿ ನಿಷೇಧ ಹೇರಲು ಸರ್ವಾನುಮತದಿಂದ ಮತ ಹಾಕಿರುವುದಾಗಿ ವರದಿಯಾಗಿದೆ.

ಅಕ್ಟೋಬರ್ 7, 2023ರಂದು ಹಮಾಸ್ ವಿರುದ್ಧ ಇಸ್ರೇಲ್‌ ಯುದ್ಧ ಘೋಷಿಸಿದ ಬಳಿಕ ಅಲ್‌ ಜಝೀರಾ ಮಾಧ್ಯಮ ಮತ್ತು ಇಸ್ರೇಲ್ ನಡುವಿನ ಸಂಬಂಧ ಮತ್ತಷ್ಟು ಹದೆಗೆಡಲು ಪ್ರಾರಂಭಿಸಿತ್ತು.

ಇಸ್ರೇಲ್ ಗಾಝಾ ನೆಲದಲ್ಲಿ ನಡೆಸುತ್ತಿರುವ ಹತ್ಯಾಕಾಂಡವನ್ನು ಯಾವುದೇ ಭೀತಿಯಿಲ್ಲದೆ ಚಿತ್ರೀಕರಿಸಿ ಜಗತ್ತಿಗೆ ಅಲ್‌ ಜಝೀರಾ ಪ್ರಸಾರ ಮಾಡಿದೆ. ಗಾಝಾ ಯುದ್ಧ ಭೀಕರತೆಯ ಬಗ್ಗೆ ಬೇರೆ ಯಾವುದೇ ಮಾಧ್ಯಮಗಳಿಗಿಂತ ಹೆಚ್ಚಾಗಿ ನೆಲದ ವಾಸ್ತವತೆಯನ್ನು ಅಲ್‌-ಜಝೀರಾ ವರದಿ ಮಾಡಿದೆ.

ಇದನ್ನು ಸಹಿಸದ ಇಸ್ರೇಲ್, ಯುದ್ಧದ ಸಮಯದಲ್ಲಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಪರಿಗಣಿಸಿ, ಇಸ್ರೇಲ್‌ ಸಂಸತ್ತು ಭಾನುವಾರ ಸರ್ವಾನುಮತದ ಮೂಲಕ ಪ್ರಸಾರಕ್ಕೆ ತಡೆ ನೀಡುವುದನ್ನು ಅಂಗೀಕರಿಸಿದೆ ಎಂದು ಅಲ್-ಜಝೀರಾ ವರದಿ ಮಾಡಿದೆ.

ಅಲ್ಲದೇ, ಈ ಬಗ್ಗೆ ಖುದ್ದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ತನ್ನ ಸರ್ಕಾರದ ನಿರ್ಧಾರವನ್ನು ಟ್ವಿಟ್ಟರ್‌ನಲ್ಲಿ ಘೋಷಿಸಿದ್ದಾರೆ. “ಪ್ರಚೋದನೆಯ ಚಾನೆಲ್ ಆಗಿರುವ ಅಲ್ ಜಝೀರಾವನ್ನು ಇಸ್ರೇಲ್‌ನಲ್ಲಿ ಮುಚ್ಚಲಾಗುವುದು” ಎಂದು ಹೀಬ್ರೂ ಭಾಷೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಆದರೆ ಚಾನೆಲ್‌ ಮೇಲಿನ ನಿಷೇಧವು ಯಾವಾಗಿನಿಂದ ಜಾರಿಗೆ ಬರುತ್ತದೆ, ಶಾಶ್ವತವೇ ಅಥವಾ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ ಎಂದು ಕತಾರ್ ಮೂಲದ ಅಲ್-ಜಝೀರಾ ತಿಳಿಸಿದೆ.

ಅಲ್-ಜಝೀರಾ ವಿರುದ್ಧದ ಇಸ್ರೇಲ್‌ನ ಈ ನಿರ್ಧಾರವು ಚಾನೆಲ್ ಮೇಲಿರುವ ದೀರ್ಘಕಾಲದ ದ್ವೇಷವನ್ನು ಸೂಚಿಸುತ್ತಿದೆ. ಗಾಝಾದಲ್ಲಿ ಯುದ್ಧವನ್ನು ನಿಲ್ಲಿಸುವ ಮಧ್ಯಸ್ಥಿಕೆ ಪ್ರಯತ್ನಗಳಲ್ಲಿ ಕತಾರ್‌ ಪ್ರಮುಖ ಪಾತ್ರ ವಹಿಸುತ್ತಿರುವ ಸಮಯದಲ್ಲೇ, ಕತಾರ್‌ನ ಸಂಸ್ಥೆಗೆ ನಿಷೇಧ ಹೇರಿರುವುದು ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ.

ಅಲ್ ಜಝೀರಾ ಸಂಸ್ಥೆಯು ಹಮಾಸ್‌ನೊಂದಿಗೆ ಸಹಕರಿಸುತ್ತಿದೆ ಎಂದು ಇಸ್ರೇಲ್ ಪದೇ ಪದೇ ಆರೋಪಿಸುತ್ತಲೇ ಇದ್ದರೂ, ಕತಾರ್ ಮೂಲದ ನೆಟ್‌ವರ್ಕ್ ಸಂಸ್ಥೆ, ಪದೇ ಪದೇ ಎಲ್ಲ ಆರೋಪಗಳನ್ನು ನೇರವಾಗಿ ತಿರಸ್ಕರಿಸಿದೆ.

ಯುದ್ಧ ಪೀಡಿತ ಗಾಝಾದಲ್ಲಿ ಕೆಲವೇ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರತಿನಿಧಿಗಳು ಇನ್ನೂ ಕೂಡ ಅಲ್ಲೇ ಉಳಿದುಕೊಂಡು ವರದಿ ಮಾಡುತ್ತಿದ್ದಾರೆ. ಅದರಲ್ಲಿ ಅಲ್ ಜಝೀರಾ ಕೂಡ ಒಂದಾಗಿದೆ. ವೈಮಾನಿಕ ದಾಳಿ ಮತ್ತು ಕಿಕ್ಕಿರಿದ ಆಸ್ಪತ್ರೆಗಳ ರಕ್ತಸಿಕ್ತ ದೃಶ್ಯಗಳನ್ನು ಪ್ರಸಾರ ಮಾಡಿದ್ದ ಅಲ್‌ ಜಝೀರಾ ಇಸ್ರೇಲ್ ವಿರುದ್ಧ ಹತ್ಯಾಕಾಂಡದ ಆರೋಪವನ್ನು ಮಾಡಿತ್ತು.

ಕಳೆದ ಡಿಸೆಂಬರ್‌ನಲ್ಲಿ ದಕ್ಷಿಣ ಗಾಝಾದಲ್ಲಿ ವರದಿ ಮಾಡುತ್ತಿದ್ದ ಅಲ್ ಜಝೀರಾ ಕ್ಯಾಮೆರಾಮನ್‌ ಹತ್ಯೆ ನಡೆದಿದೆ. ಅದೇ  ದಾಳಿಯಲ್ಲಿ ಗಾಝಾದಲ್ಲಿ ಚಾನೆಲ್‌ನ ಬ್ಯೂರೋ ಮುಖ್ಯಸ್ಥ ವೇಲ್ ದಹದೌಹ್ ಗಾಯಗೊಂಡಿದ್ದರು.

ಜನವರಿಯಲ್ಲಿ ದಹದೌಹ್‌ ಅವರ ಪುತ್ರನನ್ನು ಕೊಂದಿದ್ದಕ್ಕಾಗಿ ಕತಾರ್ ನೆಟ್ವರ್ಕ್ ಇಸ್ರೇಲ್‌ ಅನ್ನು ದೂಷಿಸಿತ್ತು. ಹಮ್ಜಾ ದಹದೌಹ್ ಅಲ್ ಜಝೀರಾದಲ್ಲಿ ಕೆಲಸ ಮಾಡುತ್ತಿದ್ದಾಗ ಇಸ್ರೇಲ್‌ ದಾಳಿಗೆ ಬಲಿಯಾಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ವೇಲ್ ದಹದೌಹ್ ಅವರ ಪತ್ನಿ, ಮಗಳು ಮತ್ತು ಇನ್ನೊಬ್ಬ ಮಗ ಮತ್ತು ಮೊಮ್ಮಗ ಕೊಲ್ಲಲ್ಪಟ್ಟಿದ್ದರು.

LEAVE A REPLY

Please enter your comment!
Please enter your name here