ಬಿಜೆಪಿಯಿಂದ ಮುಸ್ಲಿಮರ ಅವಹೇಳನಾಕಾರಿ ಕಾರ್ಟೂನ್ ವಿಡಿಯೋ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್‌

0
273

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲು ಕೆಲವೇ ದಿನಗಳು ಇರುವಾಗ ಕರ್ನಾಟಕ ಬಿಜೆಪಿ, ಮುಸ್ಲಿಮರು, ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿ ಮಾಡಿ ಆ್ಯನಿಮೇಟೆಡ್‌ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಈ ವಿಡಿಯೊ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಮೇ 4ರಂದು ಬಿಜೆಪಿ ರಾಜ್ಯ ಘಟಕ ಪೋಸ್ಟ್ ಮಾಡಿದ ವಿಡಿಯೊ ಸಂಬಂಧ ಕರ್ನಾಟಕ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

17 ಸಕೆಂಡ್‌ಗಳ “ಎಚ್ಚರ..ಎಚ್ಚರ..ಎಚ್ಚರ..!” ಎಂಬ ಶೀರ್ಷಿಕೆಯ ಈ ಆ್ಯನಿಮೇಟೆಡ್‌ ವಿಡಿಯೊದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಂಗ್ಯ ಚಿತ್ರಗಳಿವೆ. ಈ ಇಬ್ಬರು ಮುಖಂಡರ ಜತೆಗೆ ಗೂಡಿನಲ್ಲಿ ಮುಸ್ಲಿಂ ಎಂದು ಬರೆದ ಒಂದು ಮೊಟ್ಟೆ ಇಡಲಾಗಿದೆ. ಇದರ ಪಕ್ಕ ಎಸ್ಸಿ, ಎಸ್ಟಿ ಮತ್ತು ಓಬಿಸಿ ಎಂದು ಬರೆದ ಮೂರು ಮೊಟ್ಟೆಗಳಿವೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪೋಸ್ಟ್ ಮಾಡಲ್ಪಟ್ಟ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಬಿಜೆಪಿ ವಿಡಿಯೊ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ಈ ದೂರು ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ವಾ, ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಮುಖ್ಯಸ್ಥ ಮಾಳವಿಯಾ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದೂರು ನೀಡಲಾಗಿದೆ.

LEAVE A REPLY

Please enter your comment!
Please enter your name here