ಪ್ರಶ್ನೆಗಳಿಂದ ವಿಚಲಿತರಾಗಿ ಪತ್ರಕರ್ತೆಯ ಕೆನ್ನೆ ಸವರಿ ವಿವಾದಕ್ಕಿಡಾದ ರಾಜ್ಯಪಾಲ

0
1380

: ಸಲೀಮ್ ಬೋಳಂಗಡಿ

ದೆಹಲಿ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನೆ ಕೇಳುತ್ತಿದ್ದ ಪತ್ರಕರ್ತೆಯ ಕೆನ್ನೆ ಸವರಿದ ತಮಿಳುನಾಡು ರಾಜ್ಯಪಾಲ ಬನ್‍ವಾರಿಲಾಲ್ ಪುರೋಹಿತ್ ಮತ್ತೆ ವಿವಾದವೊಂದಕ್ಕೆ ನಾಂದಿಯಾಗಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಕ್ಕಾಗಿ  ವಿಶ್ವವಿದ್ಯಾಲಯಗಳ ಪ್ರತಿಷ್ಟಿತರಿಗೆ ಒಗ್ಗಿಕೊಳ್ಳುವಂತೆ ವಿದ್ಯಾರ್ಥಿನಿಯರನ್ನು ಪ್ರೇರೇಪಿಸಿದ ಮಹಿಳಾ ಪ್ರೊಫೆಸರ್ ಓರ್ವರೊಂದಿಗೆ ರಾಜ್ಯಪಾಲರಿಗೆ ನಿಕಟ ಸಂಪರ್ಕವಿದೆಯೆಂಬ ಆರೋಪವನ್ನು ನಿರಾಕರಿಸಲು ಕರೆದ ಪತ್ರಿಕಾಗೋಷ್ಟಿಯಲ್ಲಿ ರಾಜ್ಯಪಾಲರು ಈ ವಿವಾದಾತ್ಮಕ ವರ್ತನೆ ತೋರಿದ್ದಾರೆ.
78 ರ ಈ ವೃದ್ದ ರಾಜ್ಯಪಾಲರು ಪತ್ರಿಕಾಗೋಷ್ಟಿ ಮುಗಿಸಿ ಎದ್ದೇಳುವಾಗ “ದ ವೀಕ್” ನ ಪತ್ರಕರ್ತೆ ಲಕ್ಷ್ಮಿ ಸುಬ್ರಹ್ಮಣ್ಯಮ್ ಕೇಳಿದ ಪ್ರಶ್ನೆಗೆ ಉತ್ತರಿಸದೆ ಈ ವರ್ತನೆ ತೋರಿದರು.  ಲಕ್ಷ್ಮಿಯವರು ನಂತರ ಮಾಡಿದ ಟ್ಡೀಟ್‍ನಲ್ಲಿ ” ಪತ್ರಿಕಾ ಗೋಷ್ಠಿಯಲ್ಲಿ ನಾನು ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅವರ ವಿರುದ್ಧ ಇರುವ ಲೈಂಗಿಕ ಆರೋಪಗಳ ಕುರಿತು ಪ್ರಶ್ನಿಸುತ್ತಿರುವಾಗ ಉತ್ತರಿಸದೆ ಕೆನ್ನೆ ಸವರಿ ಹೋದರು. ಮಹಿಳೆಯರ ಅನುಮತಿಯಿಲ್ಲದೆ ಅವರ  ದೇಹದ ಮೇಲೆ ಅಪರಿಚಿತನಾದ ಓರ್ವನು ಸ್ಪರ್ಷಿಸಬಾರದು. ನಾನು ಹಲವು ಬಾರಿ ಮುಖ ತೊಳೆದೆ. ಈಗಲೂ ಅದರ ಆಘಾತದಿಂದ ಮುಕ್ತಳಾಗಿಲ್ಲ. ತಂದೆಯಂತೆ  ನಾನು ಅವಳನ್ನು ಸ್ಪರ್ಷಿಸಿದೆ ಎಂದು ಅವರು ಸಮರ್ಥಿಸಬಹುದು. ಆದರೆ ನನಗಂತೂ ಅವರ  ಈ ವರ್ತನೆ ಅಸಹ್ಯವೆನಿಸಿದೆ  ಎಂದೂ ಹೇಳಿದರು.
ಮಹಾರಾಷ್ಟ್ರದ ವಿದರ್ಭದ ಹಿರಿಯ ರಾಜಕಾರಣಿಯಾಗಿರುವ ಬನ್ವಾರಿಲಾಲ್, ಮೂರು ಬಾರಿ ಸಂಸದರಾಗಿದ್ದರು. 1991ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದುಕೊಂಡು ಬಾಬರಿ ಮಸೀದಿ ದ್ವಂಸಕ್ಕೆ ಕರಸೇವಕರೊಂದಿಗೆ ತೆರಳಿದ್ದರು. ಬಳಿಕ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಳಿಕ ಮತ್ತೆ ಬಿಜೆಪಿ ಸೇರಿ 1996ರಲ್ಲಿ ಸಂಸದರಾದರು. 1999ರಲ್ಲಿ ಮತ್ತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.  ಅಲ್ಲಿ ಸ್ಪರ್ಧಿಸಿ ಸೋಲುಂಡರು. ಮತ್ತೆ ವಿದರ್ಭ ಪಕ್ಷವನ್ನು ಸ್ಥಾಪಿಸಿ ನಾಗ್ಪುರದಲ್ಲಿ ಸ್ಪರ್ಧಿಸಿದರು. ಬಳಿಕ 2009ರಲ್ಲಿ  ಬಿಜೆಪಿ ಪರ ಸ್ಪರ್ಧಿಸಿ ಸೋಲುಂಡಿದ್ದರು. ಇಂತಹ ಇತಿಹಾಸವಿರುವ ರಾಜ್ಯಪಾಲರೊಂದಿಗೆ ತೀವ್ರ ಒಡನಾಟ ಇರುವುದಾಗಿ ಹೇಳಲಾಗಿರುವ ವಿ.ವಿ. ಯ ಫ್ರೊಫೆಸರ್ ನಿರ್ಮಲಾ ದೇವಿಯವರ ಫೊನ್ ಸಂಭಾಷಣೆಯು ರಾಜಭವನವನ್ನೇ ಅಲುಗಾಡಿಸಿತ್ತು. ಈ ಆರೋಪವನ್ನು ತಳ್ಳಿಹಾಕಿದ್ದ ರಾಜ್ಯಪಾಲರು ಈ ಆರೋಪ ಆಧಾರರಹಿತವಾದವುಗಳು.  ನಾನು ಅವರನ್ನು ನೋಡಿಯೇ ಇಲ್ಲವೆಂದು ಹೇಳಿದ್ದರು. ಅಲ್ಲದೆ, ನನ್ನನ್ನು ನೋಡಿದಾಗಲೇ ನಾನು ಅಂಥಹವನಲ್ಲವೆಂದು ನಿಮಗೆ ತೋಚುತ್ತಿಲ್ಲವೇ ಎಂದು ಮಾದ್ಯಮದವರನ್ನು ಪ್ರಶ್ನಿಸಿದ್ದರು.
ಈ ಪ್ರಕರಣದ ಕುರಿತು ಸ್ಥಳೀಯ ಪೋಲೀಸರು ಸಮರ್ಪಕವಾಗಿ ತನಿಖೆ ನಡೆಸುತ್ತಿರುವಾಗಲೇ ತನಿಖೆಯನ್ನು ಕ್ರೈಂ ಬ್ರಾಂಚ್‍ಗೆ ಡಿಜಿಪಿ ರಾಜೇಂದ್ರನ್ ಹಸ್ತಾಂತರಿಸಿದ್ದೂ ಅನುಮಾನಾಸ್ಪದವಾಗಿದೆ. ರಾಜ್ಯಪಾಲರ ಹೆಸರು ಈ ಪ್ರಕರಣದಲ್ಲಿ ಕೇಳಿ ಬರುತ್ತಿದ್ದಂತೆ ಕೂಡಲೇ ಇದನ್ನು ಸಿಬಿಐ ತನಿಖೆಗೆ ಏಕೆ ಒಪ್ಪಿಸಲಿಲ್ಲವೆಂಬ ಪತ್ರಕರ್ತರ ಪ್ರಶ್ನೆಗೆ ತಾನು ನೇಮಕಗೊಳಿಸಿದ ಏಕ ಸದಸ್ಯ ತನಿಖೆಯ  ವರದಿ ಬಂದ ಬಳಿಕ ತೀರ್ಮಾನಿಸುವುದಾಗಿ ಬನ್ವಾರಿಲಾಲ್ ಉತ್ತರಿಸಿದ್ದರು. ವಿಧುನಗರ್ ಜಿಲ್ಲೆಯ ಅರುಪ್ಪುಕೋಟೆ ದೇವಾಂಗ್ ಆರ್ಟ್ಸ್ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರ ದೂರಿನಂತೆ ಮದುರೈ ಕಾಮರಾಜ್ ವಿ.ವಿಯ ಉಪಕುಲಪತಿ ನೇಮಿಸಿದ ಐವರ ತನಿಖಾ ಸಮಿತಿಯನ್ನು ಕುಲಪತಿಗಳಾದ ರಾಜ್ಯಪಾಲರು ವಿಸರ್ಜಿಸಿ ಏಕ ಸದಸ್ಯನನ್ನು (ಐಎಎಸ್ ಅಧಿಕಾರಿ ವಿ, ಸಂತಾನಮ್) ತನಿಖೆಗೆ ನೇಮಿಸಿದ್ದರು. ಇದು ಹಲವು ಸಂಶಯಗಳಿಗೆ ಕಾರಣವಾಗಿತ್ತು. ತನಿಖೆಯನ್ನು ಬುಡಮೇಲುಗೊಳಿಸುವ ಹುನ್ನಾರ ಇದು ಎಂದು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದ್ದನ್ನೂ ಇಲ್ಲಿ ಸ್ಮರಿಸಬಹುದು.