ಸಂಸತ್ ಅಧಿವೇಶನ: ಕರಗಿಹೋದ 23 ದಿನಗಳು ಯಾರದು?

0
1148

: ಸಲೀಮ್ ಬೋಳಂಗಡಿ

ಯಾವುದೇ ಮಹತ್ವದ ನಿರ್ಧಾರ ತಾಳಲಾರದೆ ಕೋಲಾಹಲ ಮಾತ್ರ ಸೃಷ್ಟಿಸಿ 23 ದಿನಗಳ ಸುದೀರ್ಘವಾದ ಸಂಸತ್ತಿನ ಬಜೆಟ್ ಅಧಿವೇಶನ ಕೊನೆಗೊಂಡಿತು. ಸಂಬಳ ಬೇಡವೆಂದ ಆಡಳಿತ ಪಕ್ಷದ ಹೃದಯ ವೈಶಾಲ್ಯತೆಯೂ ನಡೆಯಿತು. ಬಜೆಟ್ ಅಧಿವೇಶನದ ಕೊನೆಯ ದಿನದಂದು ಕೂಡಾ ಗದ್ದಲದಲ್ಲಿ ಮುಳುಗಿ ಎರಡನೆಯ ಹಂತದ ಕಲಾಪವು ಮುಗಿದು ಅನಿರ್ಧಿಷ್ಟಾವಧಿಯವರೆಗೆ ಲೋಕಸಭೆಯ ಅಧಿವೇಶನವು ಮುಂದೂಡಲ್ಪಟ್ಟಿತು. ತೀವ್ರ ಗದ್ದಲದ ಕಾರಣ ರಾಜ್ಯ ಸಭೆ ಕೂಡಾ ಅನಿರ್ಧಿಷ್ಟಾವಧಿಯ ತನಕ ಮುಂದೂಡಿರುವುದಾಗಿ ರಾಜ್ಯ ಸಭೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಘೋಷಿಸಿದರು.
23 ದಿನಗಳ ಕಾಲ ನಡೆದ ಈ ಅಧಿವೇಶನದಲ್ಲಿ ಯಾವುದೇ ಕಾರ್ಯ ಯೋಜನೆಗಳು ಘೋಷಣೆಯಾಗಲಿಲ್ಲ. ಅನೇಕ ರೀತಿಯ ಗದ್ದಲಗಳಿಗೆ ಈ ಅಧಿವೇಶನ ಸಾಕ್ಷಿಯಾಯಿತು. ಲೋಕಸಭಾ ಅಧಿವೇಶನಕ್ಕೆ ತಡೆಯುಂಟು ಮಾಡಿದ ಕಾಂಗ್ರೆಸ್‍ನ ಆಟವನ್ನು ಬಯಲು ಮಾಡಲು ಇದೇ ಹನ್ನೆರಡರಂದು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಚಿವ ಅನಂತಕುಮಾರ್ ಹೇಳಿದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡದ್ದರ ಕುರಿತಾದ ಆಂಧ್ರ ಸಂಸದರ ಪ್ರತಿಭಟನೆಯು ಈ ಭಾರಿಯ ಅಧಿವೇಶನವನ್ನು ನುಂಗಿ ಹಾಕಿತು. ವೈ.ಎಸ.ಆರ್ ಕಾಂಗ್ರೆಸ್‍ನ ಐದು ಸಂಸದರು ರಾಜಿನಾಮೆ ಸಲ್ಲಿಸಿದರು. ಕಾವೇರಿ ನದಿ ವಿವಾದದ ಕುರಿತಾಗಿ ಅಣ್ಣಾ ಡಿ.ಎಂ.ಕೆ ಯ ಸಂಸದರು ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಕಾವೇರಿ ಪರಿಶೀಲನಾ ಮಂಡಳಿ ರಚಿಸುವುದರ ವಿರುದ್ದ ಕರ್ನಾಟಕದ ಸಂಸದರೂ ರಂಗಕ್ಕಿಳಿದರು. ತೆಲುಗು ದೇಶಂ ಪಕ್ಷದ ಪ್ರತಿನಿಧಿಗಳು ಕೂಡಾ ಸ೦ಸತ್ತಿನ ಹೊರಗೆ ಪ್ರತಿಭಟನೆಯಲ್ಲಿ ನಿರತರಾದರು. ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಪಂಜಾಬ್ ಸಂಸದರೂ ರ೦ಗಕ್ಕಿಳಿದರು.

ಹೀಗೇ ಲೋಕಸಭೆಯ ಅಮೂಲ್ಯವಾದ 23 ದಿನಗಳು ಗದ್ದಲಗಳಲ್ಲಿ ಕಳೆದವು. ಇದಕ್ಕಾಗಿ ದೇಶದ ಖಜಾನೆಯಿಂದ ಕೋಟ್ಯಂತರ ರೂಪಾಯಿ ವ್ಯಯವಾಯಿತು. ಯಾವುದೇ ಒಂದೇ ಒಂದು ಸಮಸ್ಯೆಯನ್ನೂ ಬಗೆಹರಿಸಲಾಗದ ಹತಾಶ ಸ್ಥಿತಿಯಲ್ಲಿ ಕೇಂದ್ರ ಸರಕಾರ ವ್ಯರ್ಥವಾಗಿ ಕಾಲಹರಣಮಾಡಿತು. ಜನರು ಇವರನ್ನು ಲೋಕಸಭೆಗೆ ಆರಿಸಿದ್ದು ಕಾಲಹರಣ ಮಾಡಲೋ ಅಥವಾ ಜನರ ಸಮಸ್ಯೆಗಳನ್ನು ಪರಿಹರಿಸಲೋ ಒಂದೂ ಅರ್ಥವಾಗುತ್ತಿಲ್ಲ. ಆಗಾಗ ತಮ್ಮ ವೇತನವನ್ನ ಏರಿಸಿಕೊಳ್ಳುತ್ತಾ ಇರುವ ಸಂಸದರು ವೇತನ ಪಡೆದು ತಮ್ಮಿಂದ ಅದಕ್ಕೆ ನ್ಯಾಯ ಒದಗಿಸಲು ಸಾದ್ಯವಿಲ್ಲವೆಂದಾದರೆ ರಾಜಿನಾಮೆ ಕೊಟ್ಟು ತೆರಳುವುದು ಲೇಸು ಅಲ್ಲವೇ?