ಹಿಂದೂಗಳ ಸೋಲು, ಮುಸ್ಲಿಮರ ಗೆಲುವು ಆಜ್ ತಕ್ ಚಾನೆಲ್ ಆಂಕರ್ ನ ಟ್ವೀಟ್ ವಿವಾದ

0
3120

ಉತ್ತರಪ್ರದೇಶದ ಎರಡು ಲೋಕಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗಾದ ಸೋಲನ್ನು ಹಿಂದೂಗಳ ಸೋಲು ಮತ್ತು ಮುಸ್ಲಿಮರ ಗೆಲುವು ಎಂದು ಆಜ್ ತಕ್ ಹಿಂದಿ ನ್ಯೂಸ್ ಚಾನೆಲ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಆಂಕರ್ ಶ್ವೇತ ಸಿಂಗ್ ಅವರು ವ್ಯಾಖ್ಯಾನಿಸಿದ್ದಾರೆ. ನಿಜವಾಗಿ ಸುದ್ದಿ ಮನೆಯೊಳಗಿನ ಮನಸುಗಳನ್ನು ತೆರೆದಿಟ್ಟ ಟ್ವೀಟ್ ಇದು. ಕೋಮುವಾದಿಗಳು ಮಾಧ್ಯಮ ಕ್ಷೇತ್ರದಲ್ಲಿ ಹೇಗೆ ಕಾರ್ಯಾಚರಿಸುತ್ತಿದ್ದಾರೆ ಮತ್ತು ಸಂದರ್ಭಾನುಸಾರ ಹೇಗೆ ವಾಸ್ತವವನ್ನು ತಿರುಚಿ ದ್ವೇಷವನ್ನು ಹರಡುತ್ತಾರೆ ಅನ್ನುವುದಕ್ಕೆ ಇದೊಂದು ನಿದರ್ಶನ ಅಷ್ಟೇ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳು ಗೋರಕ್ ಪುರ್ ಮತ್ತು ಪೂಲ್ಪುರ್. ಇಲ್ಲಿ ಬಿಜೆಪಿ ಸೋತಿದೆಯೇ ಹೊರತು ಗೆದ್ದಿರುವ ಅಭ್ಯರ್ಥಿಗಳು ಮುಸ್ಲಿಮರಲ್ಲ. ಸಮಾಜವಾದಿ ಪಕ್ಷದ ಪ್ರವೀಣ್ ಕುಮಾರ್ ನಿಶಾದ್ ಮತ್ತು ನಾಗೇಂದ್ರ ಪ್ರತಾಪ್ ಎಂಬ ಹಿಂದೂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹೀಗಿರುವಾಗ ಮುಸ್ಲಿಮರ ಗೆಲುವು ಎಂಬ ಟ್ವೀಟ್ ನ ಅರ್ಥ ಏನು? ಇದು ಹೇಗೆ ಮುಸ್ಲಿಮರ ಗೆಲುವು ಆಗುತ್ತದೆ? ಇನ್ನು, ಮುಸ್ಲಿಮರೇ ಗೆದ್ದರೂ ಏನು ಸಮಸ್ಯೆ? ಅವರು ಸ್ಪರ್ಧಿಸಬಾರದೇ? ಗೆಲ್ಲಬಾರದೇ? ಅವರು ಗೆದ್ದರೆ ಹಿಂದೂಗಳ ಸೋಲಾಗುತ್ತದೆಯೇ? ಬಿಜೆಪಿಯೊಂದೇ ಹಿಂದೂಗಳದ್ದು ಉಳಿದಿದ್ದೆಲ್ಲವೂ ಮುಸ್ಲಿಮರದು ಎಂಬ ಸಂದೇಶವನ್ನು ಓರ್ವ ಪತ್ರಕರ್ತೆ ಕೊಡುತ್ತಾರೆಂದರೆ ಅವರ ನ್ಯೂಸ್ ಚಾನೆಲ್ ನ ಕಾಯಿಲೆ ಯಾವ ಬಗೆಯದು?

ಏ. ಕೆ. ಕುಕ್ಕಿಲ