ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ವತಿಯಿಂದ ಮಡಿಕೇರಿಯಲ್ಲಿ “ಕೊಡಗು ರಿಲೀಫ್ ಸೆಲ್” ಗೆ ಚಾಲನೆ

0
831

ಮಡಿಕೇರಿ: ತೀವ್ರ ಭೂಕುಸಿತದಿಂದಾಗಿ ಹಾನಿಗೊಳಗಾದ ಕೊಡಗು ಜಿಲ್ಲೆಯ ಪ್ರದೇಶಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಜ.ಅತರುಲ್ಲಾ ಶರೀಫ್‍ರವರು ಭೇಟಿ ನೀಡಿದರು. ಶರೀಫ್‍ರವರು ತೀವ್ರ ಹಾನಿಗೊಳಗಾದ ಮಕ್ಕಂದೂರು, ಉದಯಗಿರಿ, ಚಾಮುಂಡೇಶ್ವರಿ ನಗರ, ಇಂದಿರಾ ನಗರ, ತಂತಿ ಪಾಲ, ಮೇಘತ್ತಾಳು ಮುಂತಾದ ಪ್ರದೇಶಗಳನ್ನು ಸಂದರ್ಶಿಸಿದರು. ನಂತರ ರಾಜ್ಯಾಧ್ಯಕ್ಷರ ತಂಡವು ಆಝಾದ್ ನಗರದ ರಿಫಾಯಿ, ಮೈತ್ರಿ ಹಾಲ್ ಮುಂತಾದೆಡೆಗಳ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತ್ರರಿಗೆ ಸಾಂತ್ವನ ಹೇಳಿದರು. ಅವರು ಈ ಸಂದರ್ಭದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಸಮಾಜಸೇವಕ ಕೆ.ಎಸ್.ದೇವಯ್ಯನವರನ್ನು ಭೇಟಿಯಾಗಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಪರಿಸ್ಥಿತಿ ಬಗ್ಗೆ ವಿಚಾರವಿನಿಮಯ ನಡೆಸಿದರು. ತಂಡದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಎಮ್.ಹೆಚ್.ಮುಹಮ್ಮದ್ ಕುಂಞಿ, ವಲಯ ಸಂಚಾಲಕರುಗಳಾದ ಯು.ಅಬ್ದುಲ್ ಸಲಾಮ್, ಶಬೀರ್ ಮಲ್ಪೆ, ಸಮಾಜ ಸೇವಾ ವಿಭಾಗದ ಸಮೀರ್ ಉಳ್ಳಾಲ, ಪಿ.ಎಂ.ಉಮ್ಮರ್ ಮಡಿಕೇರಿ, ಜಿಲ್ಲಾ ಸಂಚಾಲಕ ಸಿ.ಹೆಚ್.ಅಫ್ಸರ್ ಇದ್ದರು.

ಮಡಿಕೇರಿ. ಆ.28: ಜಿಲ್ಲೆಯಲ್ಲಿ ಇತ್ತೀಚೆಗೆ ಉಂಟಾದ ತೀವ್ರ ಪ್ರಳಯ ಹಾಗೂ ಭೂಕುಸಿತದಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡವರ ಮತ್ತು ಸಂಕಷ್ಟಕ್ಕೀಡಾದವರ ನೆರವಿಗಾಗಿ ಮತ್ತು ಪರಿಹಾರ ಒದಗಿಸುವ ಸಲುವಾಗಿ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್.ಆರ್.ಎಸ್) ವತಿಯಿಂದ ಮಡಿಕೇರಿಯಲ್ಲಿ “ಕೊಡಗು ರಿಲೀಫ್ ಸೆಲ್” ಪ್ರಾರಂಭಿಸಲಾಯಿತು. ಕಾಲೇಜು ರಸ್ತೆಯ ಸಿ.ಪಿ.ಸಿ. ಲೇಔಟ್‍ನಲ್ಲಿರುವ ಕಾರುಣ್ಯ ಸದನದಲ್ಲಿ ಸೆಲ್ ಕಾರ್ಯ ನಿರ್ವಹಿಸಲಿದೆ. ಮಡಿಕೇರಿ ನಗರ ಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿ.ಎಸ್.ಟಿ ಸಹಾಯಕ ಆಯುಕ್ತ ರಮೇಶ್ ನರಸಯ್ಯ, ನಗರ ಸಭಾ ಸದಸ್ಯ ಪ್ರಕಾಶ್ ಆಚಾರ್ಯ, ಸಾಮಾಜಿಕ ಕಾರ್ಯಕರ್ತರುಗಳಾದ ಎಸ್.ಐ.ಮುನೀರ್ ಅಹಮ್ಮದ್, ಬಿ.ಎ.ಶಂಶುದ್ದೀನ್, ಎಂ.ಎ.ನಝೀರ್ ಅಹಮ್ಮದ್, ಜಿ.ಹೆಚ್.ಮುಹಮ್ಮದ್ ಹನೀಫ್ ಹಾಜರಿದ್ದರು. ಹೆಚ್.ಆರ್.ಎಸ್. ರಾಜ್ಯ ಮೇಲ್ವಿಚಾರಕ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಅಧ್ಯಕ್ಷರಾದ ಮೊಹಮ್ಮದ್ ಅತರುಲ್ಲಾ ಶರೀಫ್ ಅಧ್ಯಕ್ಷತೆ ವಹಿಸಿದ್ದರು.
ಪರಿಹಾರ ಮತ್ತು ನೆರವಿನ ಬಗ್ಗೆ ಹಾಗೂ ಧನ ಸಹಾಯ ನೀಡುವುದರ ಬಗ್ಗೆ ಮಾಹಿತಿಗಾಗಿ ಸಂಚಾಲಕರುಗಳ ಕೆಳಗಿನ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದೆಂದು ಕೋರಲಾಗಿದೆ: 9844777171 ಮತ್ತು 9844558896