ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ; ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಠರಾವು ಮಂಡನೆ

0
769

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಇದರ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ಮಂಗಳೂರಿನಲ್ಲಿ ಫೆ. 23, 24 ರಂದು ನೆರವೇರಿತು‌. ಸಭೆಯಲ್ಲಿ ಠರಾವುಗಳನ್ನು ಮಂಡಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ.

1. ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರಿಂದ ಸಿ.ಆರ್.ಪಿ.ಎಫ್.ನ ಸೈನಿಕರನ್ನು ಹುತಾತ್ಮರನ್ನಾಗಿಸಿ, ದೇಶ ಮತ್ತು ಅವರ ಕುಟುಂಬಕ್ಕೆ ಅಪಾರ ನಷ್ಟ ಉಂಟು ಮಾಡಿದ ಘಟನೆಯನ್ನು ವೆಲ್ಫೇರ್ ಪಾರ್ಟಿಯು ತೀವ್ರವಾಗಿ ಖಂಡಿಸುತ್ತದೆ.

2. ಕೇಂದ್ರ ಸರಕಾರವು, ಆರ್ಥಿಕ ಹಿಂದುಳಿದವರಿಗೆ ಶೇಕಡಾ 10 ಮೀಸಲಾತಿ ನೀಡುವ ನಿರ್ಣಯವು ಅಸಂವಿಧಾನಿಕವಾಗಿದ್ದು, ಕೇಂದ್ರ ಸರಕಾರವು, ಭವಿಷ್ಯದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಮೀಸಲಾತಿ ವ್ಯವಸ್ಥೆಯನ್ನು ಸಂಪೂರ್ಣ ಅಳಿಸಿ ಹಾಕುವ ಕಾನೂನು ಆಗಿರುತ್ತದೆ ಎಂದು ಪಕ್ಷವು ಈ ನಿರ್ಣಯವನ್ನು ವಿರೋಧಿಸುತ್ತದೆ.

3. ಅರಣ್ಯದಲ್ಲಿರುವ ಆದಿವಾಸಿಗಳನ್ನು ನಿರ್ವಸಿತರನ್ನಾಗಿಸಿ, ಕಾರ್ಪೊರೇಟ್ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವಂತಾಗಿದ್ದು, ಆದಿವಾಸಿಗಳ ಅರಣ್ಯ ಬದುಕು ಅವರ ಸಂವಿಧಾನಿಕ ಹಕ್ಕು ಆಗಿದ್ದು, ಈ ಕಾನೂನಿನಿಂದ ಆದಿವಾಸಿಗಳ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಅಳಿಸಿ ಹಾಕುವಂತಾಗಿದ್ದು ಈ ಕಾನೂನನ್ನು ಸುಪ್ರೀಮ್ ಕೋರ್ಟ್ ಪುನರ್ ಪರಿಶೀಲಿಸಬೇಕೆಂದು ಪಕ್ಷವು ಬಯಸುತ್ತದೆ.

4. ಅಧಿಕಾರ ದಾಹಕ್ಕಾಗಿ ವಾಮ ಮಾರ್ಗಗಳ ಮೂಲಕ ಆಡಳಿತ ನಡೆಸುತ್ತಿರುವ ಪಕ್ಷದ ಶಾಸಕರನ್ನು ಖರೀದಿಸುವುದು, ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ಕುದುರೆ ವ್ಯಾಪಾರದ ಕೆಲಸವು ಅಕ್ಷಮ್ಯವಾಗಿರುತ್ತದೆ. ಖರೀದಿಸಲ್ಪಡುವುದು, ಮಾರಲ್ಪಡುವುದು ರಾಜಕೀಯ ಮೌಲ್ಯದ ಕೊಲೆಯಾಗಿರುತ್ತದೆ ಎಂದು ಪಕ್ಷವು ಘೋಷಿಸುತ್ತದೆ.

5. ರಾಜ್ಯದ ಅಭಿವೃದ್ಧಿಯನ್ನು ತೀರಾ ಹಿಂದುಳಿದಿರುವ ಹೈದರಾಬಾದ್-ಕರ್ನಾಟಕಕ್ಕೆ ರಾಜ್ಯ ಸರಕಾರವು ಮಂಡಿಸಿರುವ ಬಜೆಟ್‍ನಲ್ಲಿ ಅನುದಾನ ಕಡಿತಗೊಳಿಸಿರುವುದು ಹಾಗೂ ಅಲ್ಪಸಂಖ್ಯಾತ ಇಲಾಖೆಯ ಅನುದಾನವನ್ನು ಕಡಿತಗೊಳಿಸಿರುವುದನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ.

6. ರೈತರಿಗೆ ಸಂಪೂರ್ಣ ಸಾಲ ಮನ್ನಾ ಮಾಡುವ ಘೋಷಣೆಯನ್ನು ವೆಲ್ಫೇರ್ ಪಾರ್ಟಿ ಸ್ವಾಗತಿಸುತ್ತದೆ. ಅದರೊಂದಿಗೆ ಆಧುನಿಕ ರೀತಿಯ ಕೃಷಿ ಪದ್ಧತಿಗೆ ಹುರಿದುಂಬಿಸುವ ಕೆಲಸ ಮಾಡಬೇಕು. ಹಾಗೂ ನದಿಗಳನ್ನು ಜೋಡಿಸುವ ಕೆಲಸಕ್ಕೂ ಕೈ ಜೋಡಿಸಬೇಕು. ಹಾಗೆಯೇ ಆಕರ್ಷಣೀಯ ಸ್ಥಳಗಳಿಗೆ ಕರ್ನಾಟಕದಲ್ಲಿ ಯಾವುದೇ ಕೊರತೆಯಿರುವುದಿಲ್ಲ. ಅಂತಹ ಸ್ಥಳಗಳನ್ನು ಗುರುತಿಸಿ ಪ್ರವಾಸೋದ್ಯಮದ ಮೂಲಕ ಆದಾಯ ಕ್ರೋಡೀಕರಿಸಿ, ಅಭಿವೃದ್ಧಿಗಾಗಿ ಬಳಸಬಹುದು ಎಂಬ ಸಲಹೆಯನ್ನು ಪಕ್ಷವು ನೀಡುತ್ತದೆ.

7. ರಾಜ್ಯವ್ಯಾಪಿ ಮರಳು ನೀತಿರೂಪಿಸಿ ಮರಳು ಮಾಫಿಯಾ ತಡೆಗಟ್ಟಿ ಸಾಮಾನ್ಯ ಜನತೆಗೆ ಅತ್ಯಂತ ಕೈಗೆಟುಕುವಂತಹ ಕಡಿಮೆ ರಿಯಾಯಿತಿ ಮೊತ್ತ ವಿಧಿಸಬೇಕೆಂದು ಒತ್ತಾಯಿಸುತ್ತದೆ.

8. ಕುಟುಂಬದ ವ್ಯವಸ್ಥೆಯನ್ನು ಬುಡಮೇಲುಗೊಳಿಸಿ, ಮಾನವನನ್ನು ದಾನವನನ್ನಾಗಿಸುವ ಶರಾಬು ವ್ಯವಹಾರ, ವ್ಯಾಪಾರವನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ನಿಷೇಧಗೊಳಿಸಬೇಕೆಂದು ಪಕ್ಷವು ಸರಕಾರವನ್ನು ಆಗ್ರಹಿಸುತ್ತದೆ. ಯುವ ಸಮುದಾಯವನ್ನು ಬಲಿ ಪಡೆಯುತ್ತಿರುವ ರಾಜ್ಯವ್ಯಾಪೀ ಹಳ್ಳಿ ನಗರಗಳಲ್ಲಿ ಹಬ್ಬಿರುವ ಡ್ರಗ್ ಮಾಫಿಯಾ ತಡೆಗಟ್ಟಲು ಪೋಲಿಸ್ ಇಲಾಖೆ ವಿಫಲವಾಗಿದೆ. ಡ್ರಗ್ ಮಾಫಿಯಾದ ವಿರುದ್ಧ ಕಠಿಣ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳಬೇಕು ಎಂದು ವೆಲ್ಫೇರ್ ಪಾರ್ಟಿ ಒತ್ತಾಯಿಸುತ್ತದೆ.

ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹೆರ್ ಹುಸೇನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಎ, ರಾಜ್ಯ ಉಪಾಧ್ಯಕ್ಷರುಗಳಾದ ಶ್ರೀಕಾಂತ್ ಸಾಲಿಯಾನ್, ತಾಜುದ್ದೀನ್ ಇಳಕಲ್ ಮುಂತಾದವರು ಉಪಸ್ಥಿತರಿದ್ದರು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಹಬೀಬುಲ್ಲಾಹ್ ಖಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.