ದೆಹಲಿ: ರೈತರೊಂದಿಗೆ ಪ್ರತಿಭಟನಾನಿರತ 25ರ ಹರೆಯದ ಯುವತಿ ಕೋವಿಡ್‌ ನಿಂದ ಮೃತ್ಯು

0
388

ಸನ್ಮಾರ್ಗ ವಾರ್ತೆ

ದೆಹಲಿ: ನೂರಾರು ಮಂದಿ ರೈತರೊಂದಿಗೆ ದೆಹಲಿಯ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 25 ರ ಹರೆಯದ ಮಮತಾ ಎಂಬ ಯುವತಿಯು ಕೋರೋನಾ ಬಾಧಿಸಿದ ಹಿನ್ನೆಲೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.

ಪಶ್ಚಿಮಬಂಗಾಳ ನಿವಾಸಿಯಾದ ಈಕೆಗೆ ಎಪ್ರಿಲ್ 26 ರಂದು ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಇತ್ತೀಚಿಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ವೇಳೆ ಇವರು ಬಿಜೆಪಿ ವಿರುದ್ಧ ಪ್ರಚಾರ ಕೂಡ ನಡೆಸಿದ್ದರು.

ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಹರಿಯಾಣದ ಜಿ. ಎಚ್ . ಬಹದ್ದೂರ್ ಗಢ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಅಲ್ಲಿ ಪ್ರವೇಶ ಸಿಗಲಿಲ್ಲ. ಬಳಿಕ ರೋಹ್ಟಕ್ ನ ಪಿಜಿ ಐಎಂಎಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿಯೂ ಕೊರೋನಾ ರೋಗಿಗಳು ತುಂಬಿರುವುದರಿಂದ ಪ್ರವೇಶ ಸಿಗಲಿಲ್ಲ. ಬಳಿಕ ಬಹದ್ದೂರ್ ಗಡಿನ ಶಿವಮ್ ಆಸ್ಪತ್ರೆಗೆ
ದಾಖಲು ಮಾಡಲಾಗಿತ್ತು. ಆದರೆ ಈ ನಡುವೆ ಅವರು ಕಾಯಿಲೆ ಉಲ್ಬಣಿಸಿ ಮೃತಪಟ್ಟಿದ್ದಾರೆ.

ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನಿನ ವಿರುದ್ಧ ಕಳೆದ ಆರು ತಿಂಗಳಿನಿಂದ ದೆಹಲಿಯ ಸಿಂಘು, ಟಿಕ್ರಿ, ಘಾಜಿಪುರ್ ಗಡಿಗಳಲ್ಲಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.