ನಿಮ್ಮ ಕೆಲಸವನ್ನು ಇನ್ನಷ್ಟು ಚೆನ್ನಾಗಿ ನಿಭಾಯಿಸಿ: ಮಾಧ್ಯಮಕ್ಕೆ ಅಂಕುಶ ಹಾಕಲು ಬಯಸಿದ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತಾಕೀತು

0
360

ಸನ್ಮಾರ್ಗ ವಾರ್ತೆ

ನವದೆಹಲಿ: ನ್ಯಾಯಾಲಯದ ಕಲಾಪವನ್ನು ವರದಿ ಮಾಡುವುದರಿಂದ ಮಾಧ್ಯಮಗಳನ್ನು ನಿಯಂತ್ರಿಸಬೇಕು ಎಂದು ಕೋರಿ ಚುನಾವಣಾ ಆಯೋಗ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಮಾಧ್ಯಮಗಳ ವಿರುದ್ಧ
ದೂರು ನೀಡುವುದಕ್ಕಿಂತ ನಿಮ್ಮ ಕೆಲಸವನ್ನು ಇನ್ನಷ್ಟು ಚೆನ್ನಾಗಿ ನಿಭಾಯಿಸಿಕೊಳ್ಳಿ ಎಂದು ಅದು ಕಿವಿಮಾತು ಹೇಳಿದೆ.

ಮಾಧ್ಯಮಗಳು ಅಭಿಪ್ರಾಯ ಸ್ವಾತಂತ್ರ್ಯದ ಅವಿಭಾಜ್ಯ ಅಂಗಗಳಾಗಿವೆ ಎಂದು ಹೇಳಿರುವ ಸುಪ್ರೀಂಕೋರ್ಟ್,
ಚುನಾವಣಾ ಆಯೋಗದ ಅರ್ಜಿಯನ್ನು ತಳ್ಳಿ ಹಾಕಿದೆ.

ಕೊರೋನಾ ಹೆಚ್ಚಳಕ್ಕಾಗಿ ಚುನಾವಣಾ ಆಯೋಗದ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸುವೆ ಎಂದು ಮದ್ರಾಸ್ ಹೈಕೋರ್ಟ್ ಬೆದರಿಸಿದ್ದನ್ನು ಮಾಧ್ಯಮಗಳು ವರದಿ ಮಾಡಿರುವುದರ ವಿರುದ್ಧ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ನ ಬಾಗಿಲು ಬಡಿದಿತ್ತು.

ಇದೇ ವೇಳೆ ಕೊಲೆ ಮೊಕದ್ದಮೆ ದಾಖಲಿಸುವೆ ಎಂಬ ಮದ್ರಾಸ್ ಹೈಕೋರ್ಟಿನ ಪರಾಮರ್ಶೆಯು ಅತಿ ಕಠಿಣ ಮತ್ತು ಅನುಚಿತ ಉಪಮೆ ಯಾಗಿದೆ ಮತ್ತು ನ್ಯಾಯಾಂಗಕ್ಕೆ ಸಹನೆಯ ಅಗತ್ಯವಿದೆ ಎಂದು ಜಸ್ಟೀಸ್ ಡಿ.ವೈ. ಚಂದ್ರಚೂಡ್ ಅಧ್ಯಕ್ಷರಾಗಿರುವ ಬೆಂಚ್ ಅಭಿಪ್ರಾಯಪಟ್ಟಿದೆ.

ನ್ಯಾಯಾಂಗದ ಭಾಷೆ ಬಹಳ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.