ಮುಸ್ಲಿಮ್ ಸಮುದಾಯದ ಅಭ್ಯರ್ಥಿ: ನಮ್ಮ ನಿಲುವು ಏನೆಂದರೆ..

0
937

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಅತ್ಹರುಲ್ಲಾ ಶರೀಫ್ ಅವರ ಜೊತೆ ಮಾತುಕತೆ

? ಈ ಬಾರಿಯ ಚುನಾವಣೆ ಯಾಕೆ ನಿರ್ಣಾಯಕ ಎಂದು ಹೇಳುವಿರಾ?
√ ಸ್ವತಂತ್ರ ಭಾರತವು ಇತಿಹಾಸದ ಅತ್ಯಂತ ಸಂಕೀರ್ಣ ತಿರುವಿನಲ್ಲಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗಳ ಮೇಲೆ ಫ್ಯಾಸಿಸ್ಟ್ ಮತ್ತು ಕೋಮುವಾದದ ಅಪಾಯವು ರಾರಾಜಿಸುತ್ತಿದೆ. ಒಂದೆಡೆ ಸಮೃದ್ಧ ಮತ್ತು ಸುಖ ಜೀವನಕ್ಕಾಗಿ ಹಾತೊರೆಯುವ ಸಮಾಜವಿದ್ದರೆ ಇನ್ನೊಂದೆಡೆ ದ್ವೇಷ, ಅನ್ಯಾಯ ಮತ್ತು ಹಿಂಸೆ ದೌರ್ಜನ್ಯಗಳಲ್ಲಿ ಹಠ ತೊಡುತ್ತಿರುವ ಶಕ್ತಿಗಳಿವೆ. ಈ ಎರಡರ ಮಧ್ಯೆ ಸಂಘರ್ಷವಿದೆ. ಆದ್ದರಿಂದ ಈ ಚುನಾವಣೆಯು ಬಹಳ ಪ್ರಧಾನ ಮತ್ತು ನಿರ್ಣಾಯಕವೆಂದು ಹೇಳಬಹುದು.

? ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಗಳ ನಡುವೆ ನೇರ ಸ್ಪರ್ಧೆಯಿದೆ. ಇದಲ್ಲದೇ ಮೂರನೇ ಪಕ್ಷಕ್ಕೆ ಮತ ಚಲಾಯಿಸುವ ಬಗ್ಗೆ ನಿಮ್ಮ ನಿಲುವೇನು?
√ ಕರ್ನಾಟಕದಲ್ಲಿ ರಾಜಕೀಯ ಧ್ರುವೀಕರಣ ಬಹಳ ಸ್ಪಷ್ಟವಾಗಿದೆ. ಕೋಮುವಾದಿ ಪಕ್ಷದ ವಿರುದ್ಧ ಎರಡು ದೊಡ್ಡ ಸೆಕ್ಯುಲರ್ ಪಕ್ಷಗಳ ಮಧ್ಯೆ ಮೈತ್ರಿಯುಂಟಾಗಿದೆ. ಇನ್ನು ಪ್ರಸ್ತಾಪನೀಯ ಮೂರನೇ ಪಕ್ಷವೊಂದಿದ್ದರೆ ಈ ಎರಡು ಪಕ್ಷಗಳ ಪೈಕಿ ಒಂದಕ್ಕೆ ಸಾಥ್ ಕೊಡಬೇಕಾಗಿತ್ತು. ಅಂದರೆ ಯಾವುದಾದರೂ ಸೆಕ್ಯುಲರ್ ಪಕ್ಷವೊಂದಿದ್ದರೆ ಕಾಂಗ್ರೆಸ್-ಜೆಡಿಎಸ್‍ನೊಂದಿಗೆ ಸೇರಿಕೊಳ್ಳುತ್ತಿತ್ತು. ಅಥವಾ ಶಿವಸೇನೆ ಯಂತಹ ಕೋಮುವಾದಿ ಪಕ್ಷವಿದ್ದಿದ್ದರೆ ಬಿಜೆಪಿಯೊಂದಿಗೆ ಸೇರಿಕೊಳ್ಳುತ್ತಿತ್ತು. ಪ್ರತ್ಯೇಕವಾದ ಮೂರನೇ ಪಕ್ಷಕ್ಕೆ ಇಲ್ಲಿ ಪ್ರಸಕ್ತತೆ ಇಲ್ಲ.

? ಮೋದಿಯವರನ್ನು ಸೋಲಿಸುವುದ ಕ್ಕಾಗಿ ಮತ ಚಲಾಯಿಸಿ, ಅಭ್ಯರ್ಥಿಯನ್ನು ನೋಡಬೇಡಿ ಎಂಬ ಕೂಗು ದೊಡ್ಡ ಮಟ್ಟದಲ್ಲಿದೆ. ಏನೆನ್ನುತ್ತೀರಿ?
√ ಇದು ಕೇವಲ ಒಬ್ಬ ವ್ಯಕ್ತಿಯನ್ನು ಸರಿಸುವ ವಿಷಯವಲ್ಲ. ಅದು ಕಳೆದ ಐದು ವರ್ಷಗಳಲ್ಲಿ ಜನರನ್ನು ನರಕ ಸದೃಶಗೊಳಿಸಿದ ಒಂದು ಸಿದ್ಧಾಂತ, ಒಂದು ವಿಚಾರ ಮತ್ತು ಒಂದು ತಪ್ಪಾದ ವ್ಯವಸ್ಥೆಯನ್ನು ಸರಿಸುವ ವಿಷಯವಾಗಿದೆ. ನಿರ್ಲಜ್ಜೆಯೊಂ ದಿಗೆ ಇತಿಹಾಸವನ್ನು ತಿರುಚಲಾಯಿತು. ಪ್ರಜಾಸತ್ತಾತ್ಮಕ ಸಂಸ್ಥೆಗಳ ಕತ್ತು ಹಿಚುಕಲಾಯಿತು. ಇದರಿಂದ ಸರ್ವೋಚ್ಚ ನ್ಯಾಯಾಲಯದ ಜಡ್ಜ್‍ಗಳು ಕೂಡಾ ಪ್ರತಿಭಟಿಸಿದರು. ಇಂತಹ ಒಂದು ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಅದರ ವಿರುದ್ಧ ಯಾವ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಅವರು ಎಂತಹವರೇ ಆಗಿರಲಿ, ಅವರು ಪ್ರತಿ ನಿಧಿಸುತ್ತಿರುವ ಪಕ್ಷಗಳ ಧೋರಣೆ ಮತ್ತು ಕಳೆದ ದಾಖಲೆಗಳು ಮಹತ್ವಪೂರ್ಣವಾಗಿವೆ.

? ಕೇವಲ ಓರ್ವ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಮುಸ್ಲಿಮರನ್ನು ಕಡೆಗಣಿಸಿದೆ ಎಂಬ ಆರೋಪ ಇದೆ. ಈ ಸಂದರ್ಭದಲ್ಲಿ ಇಂಥ ಲೆಕ್ಕಾಚಾರ ಎಷ್ಟು ಸರಿ?
√ ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ ಓರ್ವ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಜೆಡಿಎಸ್ ಅದನ್ನೂ ಕೊಡಲಿಲ್ಲ. ಮುಸಲ್ಮಾನರಿಗೆ ಟಿಕೆಟ್ ಕೊಟ್ಟರೂ ಅವರು ಗೆಲ್ಲುವ ಸಾಮಥ್ರ್ಯ ಹೊಂದಿಲ್ಲವೆಂದು ಬಿಂಬಿಸಲಾಗುತ್ತಿದೆ. ಈಗ ಈ ವಿಷಯದಲ್ಲಿ ತಾಳ್ಮೆ ವಹಿಸಿ ಚುನಾವಣೆಯ ನಂತರ ಈ ವಿಷಯದಲ್ಲಿ ಮಾತನಾಡೋಣ. ಮಾತ್ರವಲ್ಲ, ಮಾತುಕತೆ ನಡೆಸೋಣ.

? ಕಾಂಗ್ರೆಸ್ ಪಕ್ಷದೊಂದಿಗೆ ಮುಸ್ಲಿಮ್ ಕಡೆಗಣನೆಯ ಬಗ್ಗೆ ಮಾತಾಡಿದ್ದೀರಾ?
√ ಕಾಂಗ್ರೆಸ್‍ನ ನಾಯಕರೊಡನೆ ಮುಸ್ಲಿಮ್ ಮುತ್ತಹಿದ ಮಹಾಝ್‌ನ ನಾಯಕರು ಮಾತುಕತೆ ನಡೆಸಿದರು. ಆದರೆ ಪ್ರಯೋಜನವಾಗಲಿಲ್ಲ. ಇದಕ್ಕೆ ಸಮುದಾಯದ ಒಗ್ಗಟ್ಟಿನ ಕೊರತೆ ಕಾರಣ ಎನ್ನಬಹುದು.

? ಈ ಚುನಾವಣೆಯಲ್ಲಿ ಜಮಾಅತ್‍ನ ನಿಲುವು?
√ ಈ ಚುನಾವಣೆಯಲ್ಲಿ ಜಮಾಅತ್‍ನ ನಿಲುವು ಸಮುದಾಯದ ಒಟ್ಟು ನಿಲುವಿನೊಂದಿಗಿದೆ. ಕರ್ನಾಟಕ ಮುಸ್ಲಿಮ್ ಮುತ್ತಹಿದ ಮಹಾಝ್‌ನಲ್ಲಿ ಜಮಾಅತ್ ಕೂಡಾ ಇದೆ. ಆದ್ದರಿಂದ ಮಹಾಝ್‌ನ ನಿಲುವು ಜಮಾಅತ್‍ನ ನಿಲುವಾಗಿದೆ. ತಾತ್ವಿಕವಾಗಿ, ದೇಶದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಸೆಕ್ಯುಲರ್ ಸ್ವಭಾವವನ್ನು ಉಳಿಸುವುದಕ್ಕಾಗಿ ಸೆಕ್ಯುಲರ್ ಪಕ್ಷಗಳನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ.