ಮನಾಮ,ಮಾ.25: ತನ್ನ ವಿವಾಹ ನಿಶ್ಚಿತಾರ್ಥಕ್ಕಾಗಿ ಮರುದಿನ ಊರಿಗೆ ತೆರಳಲಿದ್ದ ಯುವಕ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟ ಘಟನೆಯು ಬಹ್ರೈನ್ನಲ್ಲಿ ನಡೆದಿದೆ. ಪಾಂಡಿಚೇರಿಯ ಮಾಹೆ ಜಿಲ್ಲಾ ನಿವಾಸಿಯಾದ ಯುವಕ ಬಹ್ರೈನ್ನಲ್ಲಿ ರವಿವಾರ ಬೆಳಗ್ಗೆ 2:15ರ ಸುಮಾರು ಮಲಗಿದ ಸ್ಥಿತಿಯಲ್ಲಿಯೇ ನಿಶ್ಚಲನಾದುದನ್ನು ಗಮನಿಸಿದ ಗೆಳೆಯರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯದಿದ್ದರು. ಮೃತ ನವಾಫ್ ಮುಸಾವ(27)ಮಾಹೆ ಪೆರಿಂಗಾಡ್ ಎಂಬಲ್ಲಿನ ನಿವಾಸಿಯಾಗಿದ್ದನೆಂದು ಗುರುತಿಸಲಾಗಿದೆ. ನಿದ್ರಿಸುತ್ತಿದ್ದ ವೇಳೆ ಸಾವು ಸಂಭವಿಸಿರಬಹುದು ಎಂದು ಪ್ರಾಥಮಿಕ ಅಂಶಗಳು ತಿಳಿಸಿವೆ. ನವಾಫ್ರ ಗೆಳೆಯರು ಪೊಲೀಸರಿಗೆ ತಿಳಿಸಿದ್ದು, ನಂತರ ಪೊಲೀಸಧಿಕಾರಿಗಳು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಜರಗಿಸಿದರು. ಮೃತದೇಹವನ್ನು ಊರಿಗೆ ಕೊಂಡು ಹೋಗಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರು ತಿಳಿಸಿದ್ದಾರೆ.












