ನಾಲ್ವರು ಸಚಿವರು ಕ್ವಾರಂಟೈನ್ ಗೆ: ಕೊರೋನಾ ಪಾಸಿಟಿವ್ ಪತ್ರಕರ್ತನ ಸಂಪರ್ಕಕ್ಕೆ ಬಂದಿರುವ ಹಿನ್ನೆಲೆ

0
3071

ಸನ್ಮಾರ್ಗ ವಾರ್ತೆ

ಬೆಂಗಳೂರು ಏಪ್ರಿಲ್ 30- ಕನ್ನಡ ಸುದ್ದಿವಾಹಿನಿಯೊಂದರ ಪತ್ರಕರ್ತನಿಗೆ ಕೊರೋನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಂಪರ್ಕಕ್ಕೆ ಬಂದಿದ್ದ ನಾಲ್ವರು ಸಚಿವರನ್ನು ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ಗೆ ಶಿಫಾರಸು ಮಾಡಲಾಗಿದೆ.

ಉಪಮುಖ್ಯಮಂತ್ರಿ ಸಿಎಂ ಅಶ್ವತ್ಥನಾರಾಯಣ, ಪ್ರವಾಸೋದ್ಯಮ ಸಚಿವ ಸಿಟಿ ರವಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ರಿಗೆ ಕ್ವಾರಂಟೈನ್ ನಲ್ಲಿ ಇರಬೇಕಾದ ಅಗತ್ಯ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಸಚಿವರು ಟ್ವೀಟ್ ಮಾಡಿ ತಮ್ಮ ಕ್ವಾರಂಟೈನ್ ಅನ್ನು ದೃಢಪಡಿಸಿದ್ದಾರೆ.

ಅಶ್ವತ್ಥನಾರಾಯಣ ಅವರು ಟ್ವೀಟ್ ಮಾಡಿದ್ದು, ಕೊರೋನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರಬಹುದು ಎಂಬ ಮಾಹಿತಿ ಪಡೆದಿದ್ದು ನಾನು ಕ್ವಾರಂಟೈನ್ ಆಗಿರುತ್ತೇನೆ. ನನ್ನ ಟೆಸ್ಟ್ ನೆಗೆಟಿವ್ ಆಗಿದ್ದು ಜಾಗರೂಕತೆ ಗಾಗಿ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಡಾ. ಸುಧಾಕರ್ ಅವರು ಕೂಡ ಟ್ವೀಟ್ ಮಾಡಿದ್ದು ಕೊರೋನಾ ಪಾಸಿಟಿವ್ ಬಂದಿರುವ ಟಿವಿ ಪತ್ರಕರ್ತರ ಜೊತೆ ನಾನು ಕೂಡ ಸಂಪರ್ಕಕ್ಕೆ ಬಂದಿರುವ ವಿಷಯ ಗೊತ್ತಾದ ಹಿನ್ನೆಲೆಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದೇನೆ. ಫಲಿತಾಂಶ ನೆಗೆಟಿವ್ ಬಂದಿದೆ. ಹಾಗಿದ್ದರೂ ಮುನ್ನೆಚ್ಚರಿಕೆಯಾಗಿ ಏಳು ದಿನ ನನ್ನ ಮನೆಯಲ್ಲಿ ಕ್ವಾರಂಟೈನ್ ನಲ್ಲಿರಲು ನಿರ್ಧರಿಸಿದ್ದೇನೆ. ಅಲ್ಲಿಂದಲೇ ಕರ್ತವ್ಯವನ್ನು ನಿಭಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಸಿಟಿ ರವಿ ಕೂಡ ಟ್ವೀಟ್ ಮಾಡಿದ್ದು, ತಮ್ಮ ಕ್ವಾರಂಟೈನ್ ಅನ್ನು ದೃಢಪಡಿಸಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಗುರುವಾರ ಹೊಸದಾಗಿ 22 ಕೋರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 557ಕ್ಕೆ ಏರಿದೆ. ಬೆಳಗಾವಿಯಲ್ಲಿ 14, ವಿಜಯಪುರದಲ್ಲಿ 2, ಬೆಂಗಳೂರು ನಗರದಲ್ಲಿ 3, ದಕ್ಷಿಣಕನ್ನಡದಲ್ಲಿ ಒಂದು, ತುಮಕೂರು ಮತ್ತು ದಾವಣಗೆರೆಯಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಒಟ್ಟು 223 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.