ಉಕ್ರೇನ್-ಪೋಲ್ಯಾಂಡ್ ಗಡಿಯತ್ತ ನಡೆದುಕೊಂಡೇ ಸಾಗುತ್ತಿರುವ 40 ಭಾರತೀಯ ವಿದ್ಯಾರ್ಥಿಗಳು

0
314

ಸನ್ಮಾರ್ಗ ವಾರ್ತೆ

ಕೈವ್ : ರಷ್ಯಾದಿಂದ ದಾಳಿಗೊಳಗಾಗಿ ಯುದ್ಧಪೀಡಿತವಾಗಿರುವ ಉಕ್ರೈನ್ ನಲ್ಲಿ ಬಾಕಿಯಾದ ವಿದ್ಯಾರ್ಥಿಗಳ ಪೈಕಿ ಕರ್ನಾಟಕದ 91 ವಿದ್ಯಾರ್ಥಿಗಳು ಇದ್ದಾರೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಇಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹೆಚ್ಚಿನವರು ಬೆಂಗಳೂರಿನವರಾಗಿದ್ದಾರೆ.

ಸುಮಾರು 20,000 ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರು ಉಕ್ರೇನ್‌ನಲ್ಲಿರುವ ಬಗ್ಗೆ ಮಾಹಿತಿ ಇದ್ದು, ರಾಜಧಾನಿ ಕೈವ್ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ಬಾಕಿಯಾಗಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈವರೆಗೆ ಕರ್ನಾಟಕದ ಒಟ್ಟು 91 ವಿದ್ಯಾರ್ಥಿಗಳು ಬಾಕಿಯಾಗಿರುವ ಬಗ್ಗೆ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬಿಡುಗಡೆ ಮಾಡಿರುವ ಪಟ್ಟಿಯ ಪೈಕಿ 28 ಮಂದಿ ಬೆಂಗಳೂರಿನವರು, 10 ಮೈಸೂರು, ಬಳ್ಳಾರಿ ಮತ್ತು ಹಾಸನದಿಂದ ತಲಾ 5, ಬಾಗಲಕೋಟೆ ಮತ್ತು ಚಾಮರಾಜನಗರದಿಂದ ತಲಾ 4, ಚಿಕ್ಕಬಳ್ಳಾಪುರ, ಚಿಕ್ಕಮಂಗಳೂರು, ದಕ್ಷಿಣ ಕನ್ನಡ, ಹಾವೇರಿ, ಕೊಡಗಿನಿಂದ ತಲಾ 3 ವಿದ್ಯಾರ್ಥಿಗಳು ಇರುವುದಾಗಿ ತಿಳಿಸಿದೆ. ಮತ್ತು ರಾಯಚೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಡ್ಯ, ಉಡುಪಿ ಮತ್ತು ವಿಜಯಪುರದಿಂದ ತಲಾ 2 ಮತ್ತು ಕೋಲಾರ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ತಲಾ ಒಬ್ಬರು ಇದ್ದು, ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಕುಟುಂಬದ ಸದಸ್ಯರು ಸಂಪರ್ಕವಿರುವುದಾಗಿ ವರದಿಯಾಗಿದೆ.

ಈ ಮಧ್ಯೆ ಸರಕಾರವು ಇದೇ ವಿಚಾರವಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ.ಮನೋಜ್ ರಂಜನ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ. ಅಲ್ಲದೇ, ಕರ್ನಾಟಕ ಸರ್ಕಾರವು ಉಕ್ರೇನ್‌ನಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಮತ್ತು ಸುಗಮವಾಗಿ ಮನೆಗೆ ಮರಳಲು ಅನುಕೂಲವಾಗುವಂತೆ ಉಚಿತ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಿದ್ದು, ಆತಂಕಕ್ಕೊಳಗಾದ ನಾಗರಿಕರು ಅಧಿಕಾರಿಗಳನ್ನು ಈ ಸಂಖ್ಯೆಯ ಮೂಲಕ 080-22340676 ಗೆ ಸಂಪರ್ಕಿಸಬಹುದು ಎಂದು ತಿಳಿಸಿದೆ.

ಈ ಮಧ್ಯೆ ಉಕ್ರೇನ್ ನ ಎಲ್ವಿವ್‌ ಡೇನ್‌ಲೋ ಹ್ಯಾಲಿಟ್‌ಸ್ಕಿ ವೈದ್ಯಕೀಯ ವಿಶ್ವವಿದ್ಯಾಲಯದ ಸುಮಾರು 40 ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಗುಂಪು ಉಕ್ರೇನ್-ಪೋಲ್ಯಾಂಡ್ ಗಡಿಯತ್ತ ನಡೆದುಕೊಂಡೇ ಸಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ. ಅವರನ್ನು ಕಾಲೇಜು ಬಸ್‌ನ ಮೂಲಕ ಗಡಿ ಕೇಂದ್ರದಿಂದ 8 ಕಿ.ಮೀ. ದೂರದವರೆಗೆ ಕರೆದುಕೊಂಡು ಬರಲಾಗಿರುವ ಮಾಹಿತಿಯನ್ನು ಗುಂಪಿನಲ್ಲಿರುವ ಭಾರತೀಯ ವಿದ್ಯಾರ್ಥಿಯೋರ್ವ ತಮಗೆ ಕಳುಹಿಸಿದ್ದಾಗಿ ಎಎನ್ ಐ ತಿಳಿಸಿದೆ.