ಯೋಧರ ಮರಣಕ್ಕೆ ಶೋಕಾಚರಣೆಯನ್ನು ಘೋಷಿಸದೇ ಕಾರ್ಯಕ್ರಮಗಳನ್ನು ಉದ್ಘಾಟಿಸುವ ಪ್ರಧಾನಿಯ ಕುರಿತು ಏನೆನ್ನಬೇಕು! -ಮಮತಾ ಬ್ಯಾನರ್ಜಿ

0
2113

ಕೊಲ್ಕತಾ,ಫೆ. 16: 40 ಸಿಆರ್‌ಪಿಎಫ್  ಜವಾನರು ಪುಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ವೀರಮೃತ್ಯುವನ್ನಪ್ಪಲು ಗುಪ್ತಚರ ವಿಭಾಗದ ವೈಫಲ್ಯ ಕಾರಣವಾಗಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ವೀರ ಮರಣಹೊಂದಿದ ಸೈನಿಕರ ಗೌರವಾರ್ಥ ದೇಶದಲ್ಲಿ ಮೂರು ದಿವಸದ ಶೋಕಾಚಾರಣೆ ನಡೆಸಬೇಕೆಂದು ಮಮತಾ ಬ್ಯಾನರ್ಜಿ ಆಗ್ರಹಿಸಿದರು.

ಯಾಕೆ ಕೇಂದ್ರ ಸರಕಾರ ದೇಶದಲ್ಲಿ ಶೋಕಾಚರಣೆ ಘೋಷಿಸಿಲ್ಲ. ರಾಜಕಾರಣಿಗಳು ಸತ್ತರೆ ಶೋಕಾಚರಣೆ ನಡೆಸುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು. ರಾಷ್ಟ್ರೀಯ ಗೌರವದ ಭಾಗವಾಗಿ ಕನಿಷ್ಠ ಜೀವ ತ್ಯಾಗ ಮಾಡಿದ ಸೈನಿಕರಿಗೆ ಕನಿಷ್ಠ 72 ಗಂಟೆ ಶೋಕಾಚಾರಣೆ ನಡೆಸಬೇಕಿದೆ. ಸರಕಾರ ಮತ್ತು ರಾಜಕೀಯ ಪಾರ್ಟಿಗಳು ಪೂರ್ವನಿಗದಿಗೊಳಿಸಿದ ಕಾರ್ಯಕ್ರಮಗಳನ್ನು ರದ್ದುಪಡಿಸಬೇಕು. ಆದರೆ ಪ್ರಧಾನಿಯವರು ಕಳೆದ ದಿವಸ ಒಂದು ಯೋಜನೆ ಉದ್ಘಾಟಿಸಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಕೆಲಸ ಏನು ಎಂದು ಮಮತಾ ಪ್ರಶ್ನಿಸಿದ್ದಾರೆ. ವಾಸ್ತವ್ಯದಲ್ಲಿ ಅಲ್ಲಿ ಏನು ನಡೆದಿದೆ ಎಂದು ನಮಗೂ ತಿಳಿಯಬೇಕಾಗಿದೆ. ಹೇಗೆ ಇಷ್ಟು ಹೆಚ್ಚು ಮಂದಿ ಹತ್ಯೆಯಾಗಲು ಸಾಧ್ಯವಾಯಿತು. ಭಯೋತ್ಪಾದಕರು ಬರುವ ಕುರಿತು ಯಾವುದೇ ವಿವರಗಳು ಸಿಗದೆ ಹೋಗಿದ್ದು ಹೇಗೆ? ಇತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತದೆ. ಇದು ತನ್ನ ಪ್ರಶ್ನೆಯಲ್ಲ ಜನರ ಪ್ರಶ್ನೆ ಎಂದು ಮಮತಾ ಹೇಳಿದರು.

ವಾಸ್ತವದಲ್ಲಿ ಇದೊಂದು ಗುಪ್ತಚರ ವಿಭಾಗದ ವೈಫಲ್ಯವಾಗಿದೆ. ತನ್ನ ಪರಿಚಿತರಾದ ಹಲವಾರು ಸೈನಿಕರೊಂದಿಗೆ ಮಾತಾಡಿದೆ. ಅವರೆಲ್ಲರೂ ಗುಪ್ತಚಾರ ವಿಭಾಗದ ವೈಫಲ್ಯ ಎಂದು ಹೇಳುತ್ತಿದ್ದಾರೆ. ಯಾಕೆ ಇಷ್ಟೆಲ್ಲ ವಾಹನಗಳು ಒಟ್ಟಿಗೆ ಸಂಚರಿಸಿದವು ಎಂದು ಮಮತಾ ಪ್ರಶ್ನಿಸಿದರು.ಸೈನಿಕರ ವಿರುದ್ಧ ದಾಳಿ ನಡೆಸಿದ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ಅದರ ಹಿಂದೆ ಕೆಲಸ ಮಾಡಿದವರನ್ನು ಪತ್ತೆಹಚ್ಚಬೇಕು. ಇತರ ಸೈನಿಕರ ಆತ್ಮವಿಶ್ವಾಸ ಹೆಚ್ಚಲು ಕಠಿಣ ಕ್ರಮ ಜರಗಿಸುವುದು ಅನಿವಾರ್ಯವೆಂದು ಮಮತಾ ಹೇಳಿದರು.