ಮಲತಂದೆಯ ಕ್ರೂರ ಹಿಂಸೆಗೊಳಗಾದ ಏಳು ವರ್ಷ ಬಾಲಕ ಮೃತ್ಯು ವಶ

0
1257

ಕೊಲಂಚೇರಿ,ಎ.6: ಕೇರಳದ ತೊಡುಪುಯದಲ್ಲಿ ತಾಯಿಯ ಗೆಳೆಯನಿಂದ ಕ್ರೂರ ಹಲ್ಲೆಗೊಳಗಾಗಿ ಕೊಲಂಚೇರಿ ಮೆಡಿಕಲ್ ಕಾಲೇಜಿನ ನ್ಯೂರೊ ತೀವ್ರನಿಗಾ ವಿಭಾಗಕ್ಕೆ ದಾಖಲಾಗಿದ್ದ ಏಳು ವರ್ಷದ ಬಾಲಕ ಕೊನೆಯುಸಿರೆಳೆದನು. ಶನಿವಾರ 11:35ಕ್ಕೆ ಸಾವು ಸಂಭವಿಸಿದ್ದು ಹಲ್ಲೆಗೊಳಗಾದ ಬಳಿಕ ಕೋಮಕ್ಕೆ ಜಾರಿದ್ದ ಮಗುವನ್ನು ಹತ್ತು ದಿವಸಗಳ ಕಾಲ ವೆಂಟಿಲೇಟರ್‍ನಲ್ಲಿರಿಸಲಾಗಿತ್ತು. ಶುಕ್ರವಾರ ಮಗುವಿನ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ದ್ರವರೂಪದ ಆಹಾರವನ್ನು ನೀಡಲಾಗುತ್ತಿತ್ತು. ರಾತ್ರೆಯಾದೊಡನೆ ಹೃದಯದ ಚಟುವಟಿಕೆಗಳು ಕೂಡ ಮಂದಗತಿಗಿಳಿದಿತ್ತು. ರಕ್ತದೊತ್ತಡ ಕುಸಿತವಾಯಿತು. ಶುಕ್ರವಾರ ಮಧ್ಯಾಹ್ನ ಮೆಡಿಕಲ್ ಕಾಲೇಜಿನ ಡಾ. ಟಿನು ರವಿ ಎಬ್ರಾಹಾಂ, ಡಾ. ಹಾರಿಸ್, ಡಾ. ಜಯಪ್ರಕಾಶ್ ಆಸ್ಪತ್ರೆಯಲ್ಲಿ ಮಗುವಿನ ಆರೋಗ್ಯ ಮತ್ತು ಪ್ರಗತಿಯನ್ನು ಪರಶೀಲಿಸಿದ್ದರು. ಔಷಧ ಮತ್ತು ಆಹಾರದೊಂದಿಗೆ ಮಗು ಪ್ರತಿಕ್ರಿಯಿಸಿಲ್ಲ. ರಕ್ತದೊತ್ತಡ ಹೆಚ್ಚುಕಮ್ಮಿಯಾಗತ್ತಿದೆ ಎಂದು ಆರೋಗ್ಯ ತಪಾಸಣೆಯ ಬಳಿಕ ಮಗುವಿನ ಅಜ್ಜ ಮತ್ತು ಮಾವನಿಗೆ ವೈದ್ಯರು ತಿಳಿಸಿದ್ದರು.