ಹೊಸದಿಲ್ಲಿ,ಎ.3: ಲೋಕಸಭಾ ಚುನಾವಣೆಗೆ ಕೆಲವು ದಿವಸ ಉಳಿದಿರುವಾಗ ಲಾಂಚ್ ಆಗಿರುವ ಬಿಜೆಪಿಯ ನಮೊ ಟಿವಿ ಚ್ಯಾನೆಲ್ ವಿವಾದದ ಸುಳಿಯಲ್ಲಿ ಸಿಲುಕಿದೆ. ಚುನವಣಾ ಆಯೋಗ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ಪತ್ರ ಬರೆದು ಹಠಾತ್ತಾಗಿ ಟಿವಿಯನ್ನು ಯಾಕೆ ಲಾಂಚ್ ಮಾಡಲಾಗಿದೆ ಎಂದು ವರದಿ ಕೇಳಿದೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿಪಾರ್ಟಿ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕೇಂದ್ರಿಕರಿಸಿ ನಮೊ ಟಿವಿ ಲಾಂಚ್ ಮಾಡಿದ್ದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.
ಆಯೋಗ ದೂರದರ್ಶನಕ್ಕೂ ಪತ್ರ ಬರೆದು ವಿವರ ಕೇಳಿದೆ. ರಾಷ್ಟ್ರೀಯ ಚ್ಯಾನೆಲ್ ಆಗಿರುವ ದೂರದರ್ಶನ ಮಾರ್ಚ್ 31ರಂದು ಪ್ರಧಾನಿ ನರೇಂದ್ರ ಮೋದಿಯ ಚೌಕಿದಾರ್ ಅಭಿಯಾನವನ್ನು ಒಂದು ಗಂಟೆಕಾಲ ಪ್ರಸಾರ ಹೇಗೆ ಮಾಡಿತು ಎಂದು ಚುನಾವಣಾ ಆಯೋಗ ಪ್ರಶ್ನಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಬಳಿಕ ಯಾವುದೇ ರಾಜಕೀಯ ಪಾರ್ಟಿಗೆ ಇಂತಹ ಅಧಿಕಾರಗಳಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ಚುನಾವಣಾ ಆಯೋಗಕ್ಕೆ ದೂರಿನಲ್ಲಿ ತಿಳಿಸಿದೆ. ಇದೇ ವೇಳೆ ವಾರ್ತಾ ಪ್ರಸಾರ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ನಮೊ ಟಿವಿ ಲೈಸೆನ್ಸ್ ಪಡೆದುಕೊಂಡಿರುವ ಚ್ಯಾನೆಲ್ ಅಲ್ಲ , ಬದಲಾಗಿ ಜಾಹಿರಾತು ವೇದಿಕೆಯಾಗಿದೆ ಎಂದು ತಿಳಿಸಿದ್ದಾರೆ. ನಮೊ ಟಿವಿಯ ಎಲ್ಲ ವ್ಯವಹಾರಗಳ ಖರ್ಚುವೆಚ್ಚವನ್ನು ಪಾರ್ಟಿಯು ಭರಿಸುತ್ತಿದೆ. ಈ ವಿಚಾರವನ್ನು ಚುನಾವಣಾ ಆಯೋಗಕ್ಕೆ ಬಿಜೆಪಿ ಕಳುಹಿಸಿದ ವಾರ್ಷಿಕ ಆಡಿಟ್ನಲ್ಲಿ ಕೂಡ ವಿವರಿಸಲಾಗಿದೆ.












